ಬರೋಬ್ಬರಿ 14 ಬಾರಿ ಅಂಬಾರಿ ಹೊತ್ತು ಎಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಬಲರಾಮ ಆನೆ ಅಂತಿಮ ಸಂಸ್ಕಾರ ನೆರವೇರಿದೆ.
ಮೈಸೂರಿನ ಹುಣಸೂರು ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಬಲರಾಮ ಆನೆಗೆ ವಿದಾಯ ಹೇಳಲಾಯ್ತು
ಅತ್ಯಂತ ಸೌಮ್ಯ ಸ್ವಭಾವಿಯಾಗಿದ್ದ ಬಲರಾಮ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ, ಸಾರ್ವಜನಿಕರ ಗಮನವನ್ನು ಸೆಳೆದಿತ್ತು. 1999ರಿಂದ 2011ರವರೆಗೆ ಸತತ 14 ಬಾರಿ ಚಿನ್ನದ ಅಂಬಾರಿಯನ್ನು ನಿರಾಯಾಸವಾಗಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಹೊತ್ತು, ಪ್ರೀತಿಗೆ ಪಾತ್ರವಾಗಿತ್ತು.
60 ವರ್ಷ ದಾಟಿದ ಹಿನ್ನೆಲೆಯಲ್ಲಿ 2012ರಿಂದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಯಾಗಿ ಐದಾರು ವರ್ಷ ಸಾಲಾನೆಯಾಗಿ ದಸರಾ ಮೆರವಣಿಗೆಯಲ್ಲಿ ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದಾಗಿ 2020ರಿಂದ ಬಲರಾಮ ಆನೆಯನ್ನು ದಸರಾ ಮಹೋತ್ಸದಿಂದ ದೂರ ಇಡಲಾಗಿತ್ತು.
ಕೊಡಗು ಜಿಲ್ಲೆ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ 1978ರಲ್ಲಿ ಸೆರೆ ಹಿಡಿಯಲಾದ ಬಲರಾಮನನ್ನು ಮತ್ತಿಗೋಡು ಆನೆ ಶಿಬಿರದಲ್ಲಿ ಪೋಷಿಸಲಾಗುತಿತ್ತು.
ಕಳೆದ ಐದಾರು ವರ್ಷದಿಂದ ಮತ್ತಿಗೂಡು ಆನೆ ಕ್ಯಾಂಪ್ ಸಮೀಪವಿರುವ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಕ್ಯಾಂಪ್‌ಗಳಲ್ಲಿ ಪಾಲನೆ ಮಾಡಲಾಗುತ್ತಿತ್ತು.
ಬಲರಾಮ ತನ್ನ ಕ್ಯಾಂಪ್ ನಲ್ಲಿದ್ದ ಚಿಕ್ಕ ಆನೆಗಳಿಗೂ ತರಬೇತಿದಾರನಾಗಿದ್ದ. ಅದರಲ್ಲೂ ಭೀಮ ಆನೆ ಸೇರಿದಂತೆ ಕೆಲ ಜ್ಯೂನಿಯರ್ ಆನೆಗಳಿಗೂ ಕೆಲವು ವಿಷಯಗಳ ಬಗ್ಗೆ ಹೇಳಿಕೊಡುವುದರಲ್ಲಿ ನಿಸ್ಸೀಮನಾಗಿದ್ದ.
ಬಲರಾಮ ಅತ್ಯಂತ ಶಕ್ತಿಶಾಲಿ ಆನೆ ಎಂದು ಪ್ರಖ್ಯಾತಿ ಗಳಿಸಿತ್ತು. ಅತ್ಯಂತ ಮೃದು ಸ್ವಭಾವಿಯಾಗಿ ಪರಿವರ್ತನೆಯಾದ ಬಲರಾಮ ಜೀವಿತಾವಧಿಯಲ್ಲಿ ಯಾರಿಗೂ ತೊಂದರೆ ಮಾಡಲಿಲ್ಲ. ದಸರಾ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಜನರು ಬಲರಾಮನೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ.
ಚಿಕ್ಕ ಆನೆಗಳನ್ನು ಪ್ರೀತಿಯಿಂದ ಕಾಣುತ್ತಿದ್ದ ಬಲರಾಮನ ನಿಧನ ಎಲ್ಲರಲ್ಲೂ ತೀವ್ರ ದುಃಖ ತಂದಿದ್ದು, ಇದೀಗ ಬಲರಾಮ ನೆನಪು ಮಾತ್ರ