
ಹೀಗೆ ಮುಗಿಲೇತ್ತರಕ್ಕೆ ಬೆಳೆದು ನಿಂತ ಬೆಟ್ಟ. ಬೆಟ್ಟಕ್ಕೆ ಮುತ್ತಿಕ್ಕುವ ಬೆಳ್ಳಿ ಮೋಡಗಳ ಚುಂಬನ. ಒಂದೆಡೆ ತಂಗಾಳಿಯೊಂದಿಗೆ ತೇಲಿ ಬರುವ ಬೆಳ್ಳಿ ಮೋಡಗಳ ಚೆಲ್ಲಾಟ, ಇಂತಹ ರಮಣೀಯ ಪ್ರಕೃತಿ ಸೊಬಗು ಕಾಣುತ್ತಿರುವುದು ರಾಜಧಾನಿ ಬೆಂಗಳೂರಿನಿಂದ ಕೆಲವೇ ದೂರದಲ್ಲಿರುವ ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಬೆಟ್ಟದ ಮೇಲೆ.

ನಂದಿ ಬೆಟ್ಟದ ಕೆಳಗೆ ರಣ ಬಿಸಿಲು ಬೆಟ್ಟದ ಮೇಲೆ ಕೂಲ್ ಕೂಲ್ ಹವಾ. ಬೇಸಿಗೆಯ ರಣ ಬಿಸಿಲಿನಿಂದ ಬಚಾವ್ ಆಗಲು ರಾಜಧಾನಿ ಬೆಂಗಳೂರಿನ ಜನ ಈಗ ನಂದಿಗಿರಿಧಾಮದತ್ತ ಮುಖ ಮಾಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ರಣ ಬಿಸಿಲು ಒಂದೆಡೆಯಾದ್ರೆ, ಮತ್ತೊಂದೆಡೆ ವಾಹನಗಳ ಕರ್ಕಶ ಶಬ್ದ, ಹೊಗೆ, ತಾಪಮಾನ ಹೆಚ್ಚಳದಿಂದ ಮನೆಯಲ್ಲಿ ಇರಲು ಆಗುತ್ತಿಲ್ಲ. ಇದರಿಂದ ಕೆಲಕಾಲ ಪ್ರಕೃತಿ ಸೌಂದರ್ಯದ ಮದ್ಯೆ ತಂಪಾದ ಹವಾಗುಣದಲ್ಲಿ ಸುತ್ತಾಡಲು ಜನ ಸಂತಸ ಪಡುತ್ತಿದ್ದಾರೆ.

ಇನ್ನು ಗಿರಿಧಾಮದಲ್ಲಿ ಎತ್ತ ನೋಡಿದರೂ ಅರಳಿ ನಿಂತಿರುವ ಗಿಡ ಮರ ಬಳ್ಳಿ ಹೂಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.

ಈ ಭಾರಿ ಬೆಸಿಗೆ ಬಂದಿದ್ದೆ ತಡ, ಎಲ್ಲಿ ನೋಡಿದರೂ ಬಿಸಿಲಿನ ಅವಾಂತರಗಳದ್ದೆ ಚರ್ಚೆಯಾಗಿದೆ. ಇದರಿಂದ ಜನರು ಕೂಲ್ ಆಗಿರುವ ಪ್ರಕೃತಿ ಮಡಿಲಲ್ಲಿ ಕಾಲ ಕಳೆಯಲು ಇಷ್ಟಪಡುತ್ತಿದ್ದಾರೆ.

ಮನೆಯಲ್ಲಿ ಸೆಕೆ, ಹೊರಗಡೆ ಧಗೆಯಿಂದ ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂದು ಅರ್ಥವಾಗದ ಜನ ನಂದಿಗಿರಿಧಾಮದತ್ತ ಮುಖ ಮಾಡಿ, ಬಿಸಿಲಿನಿಂದ ಪರಾಗುತ್ತಿದ್ದಾರೆ.