ಆಚಾರ್ಯ ಚಾಣಕ್ಯರು ಜೀವನಕ್ಕೆ ಅಗತ್ಯವಾದ ನೀತಿಪಾಠಗಳನ್ನು ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಅವು ಈ ಕಾಲಕ್ಕೂ ಪ್ರಸ್ತುತವಾದವುಗಳು. ಕಾರಣ, ವ್ಯಕ್ತಿಗಳ ನಡೆನುಡಿಗೆ ಬಂದಾಗ ಮನುಷ್ಯ ಸ್ವಭಾವ ಸಹಜವಾದದ್ದು, ಅದು ಕಾಲದಿಂದ ಕಾಲಕ್ಕೆ ಬದಲಾಗುವದು ಕಡಿಮೆ. ಹೀಗಾಗಿಯೇ ಅಂದಿನ ನೀತಿಪಾಠಗಳು ಇಂದಿಗೂ ಪ್ರಸ್ತುತ. ಚಾಣಕ್ಯ ನೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಮಾಡಬೇಕಾದ ನಾಲ್ಕು ಕಾರ್ಯಗಳನ್ನು ತಿಳಿಸಲಾಗಿದೆ. ಇದನ್ನು ಕಾರ್ಯಗತಗೊಳಿಸಿದವರ ವ್ಯಕ್ತಿತ್ವ ಶ್ರೇಷ್ಠವಾಗುತ್ತದೆ ಎನ್ನುತ್ತಾನೆ ಚಾಣಕ್ಯ. ಅಲ್ಲದೇ ಇದು ಕುಟುಂಬಕ್ಕೂ ಶ್ರೇಯಸ್ಕರವಂತೆ.
ಆಚಾರ್ಯ ಚಾಣಕ್ಯ ಹೇಳುವಂತೆ ಮೊದಲು ಅಗತ್ಯವಿರುವವರಿಗೆ ಆಹಾರವನ್ನು ನೀಡಿ. ನಂತರ ಏನು ಉಳಿಯುತ್ತದೆಯೋ ಅದು ನಿಮ್ಮ ಆಹಾರ. ಅಂತಹ ಆಹಾರವು ಕುಟುಂಬದಲ್ಲಿ ಸಮೃದ್ಧಿಯನ್ನು ತರುತ್ತದೆ ಮತ್ತು ಮನಸ್ಸನ್ನು ಶುದ್ಧ ಮತ್ತು ಧನಾತ್ಮಕವಾಗಿಸುತ್ತದೆ.
ಸಂಬಂಧಕ್ಕೆ ತಕ್ಕಂತೆ ಪ್ರೀತಿಯ ಸ್ವರೂಪ ಬದಲಾಗುತ್ತದೆ. ಪ್ರೀತಿಯಲ್ಲಿ ಯಾರಿಂದಲೂ ಏನನ್ನೂ ನಿರೀಕ್ಷಿಸಬಾರದು. ಪ್ರೀತಿ ಯಾವಾಗಲೂ ನಿಸ್ವಾರ್ಥವಾಗಿರಬೇಕು. ಆಗ ಮಾತ್ರ ಅದು ಶುದ್ಧ ಪ್ರೀತಿ ಎಂದು ಕರೆಯಲ್ಪಡುತ್ತದೆ. ಈ ನಿಸ್ವಾರ್ಥ ಪ್ರೀತಿಯ ವ್ಯಾಖ್ಯಾನವನ್ನು ಶ್ರೀಕೃಷ್ಣನು ಜಗತ್ತಿಗೆ ವಿವರಿಸಿದ್ದಾನೆ. ಅದರಂತೆ ಚಾಣಕ್ಯರೂ ಹೇಳಿದ್ದು, ಪ್ರೀತಿ ನಿಸ್ವಾರ್ಥವಾಗಿರಬೇಕು. ಅದು ಕುಟುಂಬದಲ್ಲಿನ ಸಂಬಂಧವನ್ನು ಚೆನ್ನಾಗಿಡುತ್ತದೆ.
ಕೇವಲ ಕೆಲವು ಗ್ರಂಥಗಳು ಮತ್ತು ಪುರಾಣಗಳನ್ನು ಓದುವುದರಿಂದ ಮತ್ತು ಅವುಗಳನ್ನು ಕಂಠಪಾಠ ಮಾಡುವುದರಿಂದ ನೀವು ಬುದ್ಧಿವಂತರಾಗುವುದಿಲ್ಲ. ಒಬ್ಬ ನಿಜವಾದ ಬುದ್ಧಿವಂತ ವ್ಯಕ್ತಿ ಆ ವಿಷಯಗಳನ್ನು ತನ್ನ ಜೀವನದಲ್ಲಿ ಅನುಷ್ಠಾನಗೊಳಿಸುತ್ತಾನೆ. ಯಾರ ಜ್ಞಾನವು ಪಾಪ ಕರ್ಮಗಳಲ್ಲಿ ಪಾಲ್ಗೊಳ್ಳದಂತೆ ತಡೆಯುತ್ತದೆಯೋ, ಆ ವ್ಯಕ್ತಿ ನಿಜವಾಗಿಯೂ ಬುದ್ಧಿವಂತ ಎನ್ನುತ್ತಾನೆ ಚಾಣಕ್ಯ.
ಆಚಾರ್ಯ ಚಾಣಕ್ಯರು ನಿಸ್ವಾರ್ಥದಿಂದ ನೀಡುವ ಮತ್ತು ರಹಸ್ಯವಾಗಿ ನೀಡುವ ದಾನವೇ ಅತ್ಯುತ್ತಮ ದಾನ ಎಂದು ಹೇಳಿದ್ದಾರೆ. ನೀವು ಕೂಡ ದಾನದ ಮೂಲಕ ಖ್ಯಾತಿಯನ್ನು, ಗೌರವವನ್ನು ನಿರೀಕ್ಷಿಸಿದರೆ ಅದು ವ್ಯರ್ಥವಾಗುತ್ತದೆ. ನಿಸ್ವಾರ್ಥ ಮನಸ್ಸಿನಿಂದ ದಾನ ಮಾಡುವುದನ್ನು ಚಾಣಕ್ಯರು ಹೇಳುತ್ತಾರೆ.