
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್ ಸೆಪ್ಟೆಂಬರ್ ತಿಂಗಳಲ್ಲಿ 26 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ನಿರ್ಬಂಧಿಸಿದೆ. ಅಂದರೆ ಕೇವಲ 30 ದಿನಗಳಲ್ಲಿ ಅತಿ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್ಆ್ಯಪ್ ಹೇಳಿಕೊಂಡಿದೆ.

ಸೆಪ್ಟಂಬರ್ ತಿಂಗಳ ಅವಧಿಯಲ್ಲಿ 66 ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 26 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆಗಳು ಬ್ಯಾನ್ ಮಾಡಲಾಗಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.

ಆ ಪೈಕಿ ಶೇ. 95 ಕ್ಕಿಂತ ಹೆಚ್ಚು ಖಾತೆಗಳು ಸ್ಪ್ಯಾಮ್ ಸಂದೇಶಗಳನ್ನು ರವಾನಿಸುತ್ತಿತ್ತು. ಹೀಗಾಗಿ ಅಂತಹ ಖಾತೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ. ಈ ಹಿಂದೆ ಆಗಸ್ಟ್ ತಿಂಗಳಲ್ಲಿ ಕೂಡ ಭಾರತದಲ್ಲಿ 23 ಲಕ್ಷಕ್ಕೂ ಅಧಿಕತ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್ಆ್ಯಪ್ ಹೇಳಿತ್ತು. ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಅನುಸಾರವಾಗಿ ಕಂಪೆನಿಯು ಈ ಕ್ರಮಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಈ ವರದಿಯಲ್ಲಿ ಸ್ವೀಕರಿಸಿದ ದೂರುಗಳು ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ಅದರಂತೆ ಸೆಪ್ಟೆಂಬರ್ನಲ್ಲಿ ಗೂಗಲ್ ಹಾಗೂ ವಾಟ್ಸ್ಆ್ಯಪ್ ತೆಗೆದುಕೊಂಡಿರುವ ಬಗ್ಗೆ ತಿಳಿಸಲಾಗಿದೆ.

ಇತ್ತ ಟ್ವಿಟರ್ ಕೂಡ ಭಾರತದಲ್ಲಿ 54,000 ಕ್ಕೂ ಅಧಿಕ ಖಾತೆ ನಿಷೇಧಿಸಿದೆ. ಈ ಬಗ್ಗೆ ಟ್ವಿಟರ್ ಕಂಪನಿ ಮಾಹಿತಿ ನೀಡಿದ್ದು, ಆಗಸ್ಟ್ 26 ಮತ್ತು ಸೆಪ್ಟೆಂಬರ್ 25 ರ ನಡುವೆ ಭಾರತದಲ್ಲಿ ಒಟ್ಟು 54 ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ನಿಷೇಧ ಮಾಡಲಾಗಿದೆ ಎಂದು ಹೇಳಿದೆ.

ನಿಷೇಧ ಮಾಡಿದ ಖಾತೆಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದೆ ನಗ್ನ ಫೋಟೋಗಳನ್ನು ಹಂಚಿಕೊಳ್ಳುತ್ತಿತ್ತು ಎಂಬ ಕಾರಣ ನೀಡಿದೆ. ಐಟಿ ನಿಯಮ 2021ರ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.

ಐಟಿ ನಿಯಮಗಳು 2021 ರ ನಿಯಮ ಉಲ್ಲಂಘನೆ ಬಗ್ಗೆ ಮಾಸಿಕ ವರದಿಯಲ್ಲಿ ಭಾರತದಲ್ಲಿನ ಬಳಕೆದಾರರಿಂದ 157 ದೂರುಗಳನ್ನು ಟ್ವಿಟರ್ ಸ್ವೀಕರಿಸಿದೆ. 129 URL ಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಹೇಳಿದೆ.
Published On - 11:14 am, Wed, 2 November 22