ಹಿರಿಯ ಕಾಂಗ್ರೆಸ್ ನಾಯಕ, ಕೇರಳದ (Kerala) ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ (AK Antony) ಅವರ ಪುತ್ರ ಅನಿಲ್ ಆಂಟನಿ (Anil Antony) ಬಿಜೆಪಿ ಸೇರಿದ್ದಾರೆ. ಇಂದು ಸಂಜೆ 5.30ಕ್ಕೆ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಎಕೆ ಆಂಟನಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮತ್ತು ಕೇಂದ್ರ ಸಚಿವ ವಿ. ಮುರಳೀಧರನ್ ಅವರ ಉಪಸ್ಥಿತಿಯಲ್ಲಿ ದೆಹಲಿಯ ಬಿಜೆಪಿ ಆಸ್ಥಾನಕ್ಕೆ ಆಗಮಿಸಿದ ಅನಿಲ್ ಆಂಟನಿ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅನಿಲ್ ಆಂಟನಿಗೆ ಬಿಜೆಪಿಯ ಸದಸ್ಯತ್ವ ನೀಡಿದ್ದಾರೆ. ಇದಕ್ಕಿಂತ ಮೊದಲು ಅನಿಲ್, ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರು.
ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ (BBC Documentary) ವಿವಾದದ ಬಗ್ಗೆ ವಿಭಿನ್ನ ನಿಲುವು ತಳೆದಿದ್ದಕ್ಕಾಗಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಂದ ತೀವ್ರ ಟೀಕೆ ಎದುರಿಸಿದ್ದ ಅನಿಲ್ ಆಂಟನಿ ಅವರು ಪಕ್ಷದ ಎಲ್ಲಾ ಅಧಿಕೃತ ಸ್ಥಾನಗಳನ್ನು ತೊರೆದಿದ್ದರು. ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಸಂಚಾಲಕ ಮತ್ತು ಎಐಸಿಸಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ಸೆಲ್ ನಿರ್ವಾಹಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಬಿಬಿಸಿ ಸಾಕ್ಷ್ಯಚಿತ್ರ ವಿವಾದದ ಬಗ್ಗೆ ಕಾಂಗ್ರೆಸ್ ಅಧಿಕೃತ ನಿಲುವಿಗಿಂತ ಭಿನ್ನವಾದ ನಿಲುವನ್ನು ಅನಿಲ್ ಆಂಟನಿ ತೆಗೆದುಕೊಂಡಿದ್ದಾರೆ ಎಂದು ಯುವ ಕಾಂಗ್ರೆಸ್‌ನ ಒಂದು ವಿಭಾಗ ಟೀಕಿಸಿದೆ. ಭಾರತದ ಜನರು ಭಾರತೀಯ ಸಂಸ್ಥೆಗಳ ಮೇಲೆ ಬಿಬಿಸಿಯ ಅಭಿಪ್ರಾಯಗಳಿಗೆ ಆದ್ಯತೆ ನೀಡಿ ದೇಶವನ್ನು ದುರ್ಬಲಗೊಳಿಸುವುದು ಅಪಾಯಕಾರಿ ಎಂದು ಅನಿಲ್ ಹೇಳಿದ್ದು ವಿವಾದವಾಗಿತ್ತು.
Delhi | Anil Antony, Congress leader and son of former Defence minister AK Antony, joins BJP, in presence of Union ministers Piyush Goyal and V Muraleedharan pic.twitter.com/c39pybFbdt
— ANI (@ANI) April 6, 2023
ಅನಿಲ್ ಹಲವು ಬಾರಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಲೇ ಬಂದಿದ್ದರು. 2024ರ ಸಾರ್ವತ್ರಿಕ ಚುನಾವಣೆ ಕಾಂಗ್ರೆಸ್ ಅನ್ನು ಕಸದ ಬುಟ್ಟಿಗೆ ಹಾಕಲು ದೇಶದ ಜನತೆಗೆ ಉತ್ತಮ ಅವಕಾಶ ಎಂದು ಅನಿಲ್ ಹೇಳಿದ್ದರು. ಇದಾದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ವಾಹಿನಿಯ ಚರ್ಚೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿಕೆಯನ್ನು ಟೀಕಿಸಿದ ಅನಿಲ್ ಆಂಟನಿ ಸ್ಮೃತಿ ಅವರು ಸ್ವತಃ ಪ್ರತಿಭೆಯಿಂದ ಮೇಲೆದ್ದ ಮಹಿಳಾ ನಾಯಕಿ ಎಂದಿದ್ದರು.
ಕರ್ನಾಟಕದಲ್ಲಿ ಇತರ ಪಕ್ಷಗಳು ಪ್ರಚಾರ ನಡೆಸುತ್ತಿರುವಾಗ ಕಾಂಗ್ರೆಸ್ ನಾಯಕರು ಕೆಲವು ವ್ಯಕ್ತಿಗಳಿಗಾಗಿ ದೆಹಲಿಯಲ್ಲಿ ಉಳಿದುಕೊಂಡಿದ್ದಾರೆ ಎಂದು ಅನಿಲ್ ಆಂಟನಿ ಆರೋಪಿಸಿದ್ದರು.
ಧರ್ಮೋ ರಕ್ಷತಿ ರಕ್ಷಿತಃ ಎಂಬ ಭಗವದ್ಗೀತೆಯ ಸಾಲು ಹೇಳಿಕೊಂಡು ಹಿಂದಿಯಲ್ಲೇ ಅನಿಲ್ ಆಂಟನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇಂದು ಕಾಂಗ್ರೆಸ್ ಪಕ್ಷದವರ ಧರ್ಮ ಕೇವಲ ಒಂದು ಕುಟುಂಬಕ್ಕಾಗಿ ಕೆಲಸ ಮಾಡಬೇಕು ಎನ್ನುವುದು. ಆದರೆ ನನ್ನ ಧರ್ಮ ಏನೆಂದರೆ ದೇಶಕ್ಕಾಗಿ ಕೆಲಸ ಮಾಡಬೇಕು ಎನ್ನುವುದು.ನಮ್ಮ ಪ್ರಧಾನಿ ದೇಶವನ್ನು ಮುಂದಿನ 25 ವರ್ಷಗಳಲ್ಲಿ ಯಾವ ರೀತಿ ಕೊಂಡೊಯ್ಯಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರಲ್ಲಿ ದೇಶದ ಜನರ ಅಭಿವೃದ್ಧಿಗಾಗಿ ಇರುವ ಸ್ಪಷ್ಟವಾದ ಗುರಿ ಇದೆ. ಬಿಜೆಪಿ ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಅದರ ಸಮರ್ಪಕ ಅನುಷ್ಠಾನಕ್ಕೆ ಪ್ರಧಾನಿ ಮತ್ತು ಪಕ್ಷ ಬದ್ಧವಾಗಿದೆ. ಯುವಕರ ಪ್ರತಿನಿಧಿಯಾಗಿ ಪ್ರಧಾನಿಯವರ ಅಭಿಪ್ರಾಯದಂತೆ ಕೆಲಸ ಮಾಡುವುದು ಅಗತ್ಯ ಎಂದು ಅನಿಲ್ ಹೇಳಿದರು. ಬಿಜೆಪಿಯ 44 ನೇ ಸಂಸ್ಥಾಪನಾ ದಿನದಂದು, ದೇಶಕ್ಕಾಗಿ ಕೆಲಸ ಮಾಡುವ ಅವಕಾಶವನ್ನು ನೀಡಿದ ನಾಯಕತ್ವಕ್ಕೆ ಅನಿಲ್ ಧನ್ಯವಾದ ಹೇಳಿದರು. ನರೇಂದ್ರ ಮೋದಿಯವರ ಕನಸುಗಳಿಗೆ ಹೆಗಲಾಗಿ ನಿಲ್ಲುವುದಕ್ಕೆ ಒಂದು ಅವಕಾಶ ಸಿಕ್ಕಿದೆ ಎಂದು ಅನಿಲ್ ಹೇಳಿದ್ದಾರೆ.
ನಾನು ಕಾಂಗ್ರೆಸ್‌ಗೆ ಮೋಸ ಮಾಡಿಲ್ಲ. ಕಾಂಗ್ರೆಸ್ ನವರು ದೇಶಕ್ಕೆ ಮೋಸ ಮಾಡುತ್ತಿದ್ದಾರೆ. ಎಕೆ ಆಂಟನಿ ಎಲ್ಲ ಪಕ್ಷದವರೂ ಗೌರವಿಸುವ ವ್ಯಕ್ತಿ. ಹಾಗಾಗಿ ನನ್ನ ನಿರ್ಧಾರ ಅವರ ಯಶಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ರಾಜಕೀಯವು ಕುಟುಂಬ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ. ಎಲ್ಲರೂ ವಿಭಿನ್ನರು. ತಮ್ಮ ಕುಟುಂಬದ ಬಗ್ಗೆಯೂ ಮಾತನಾಡಿದ ಅವರು ನಾನು ಅತೀ ಹೆಚ್ಚು ಗೌರವಿಸುವ ವ್ಯಕ್ತಿ ಅಪ್ಪ. ಅವರ ಮೇಲೆ ಗೌರವ, ಪ್ರೀತಿ ಇದ್ದೇ ಇರುತ್ತದೆ. ಆದರೆ ರಾಜಕೀಯ ನಿಲುವುಗಳೇ ಬೇರೆ. ಇದು ಕೌಟುಂಬಿಕ ಸಂಬಂಧವೇ ಬೇರೆ ಎಂದು ಅನಿಲ್ ಹೇಳಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Thu, 6 April 23