ಬೆಂಗಳೂರು: ಶ್ರೀಘ್ರದಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ದಿನಾಂಕ ಘೋಷಣೆಯಾಗಲಿದ್ದು, ಬಿಜೆಪಿಯು ವಿಜಯಸಂಕಲ್ಪ ಯಾತ್ರೆ (Vijaya Sankalp Yatra) ಮೂಲಕ ರಾಜ್ಯ ಪರ್ಯಟಣೆ ನಡೆಸುತ್ತಿದೆ. ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆ ಅಂತ ಹೇಳಿಕೊಂಡು ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದು, ಮಾರ್ಚ್ 24 ಮತ್ತು 26ರಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ವೇಳೆ ವಿಧಾನಸೌಧದಲ್ಲಿ ಬಸವೇಶ್ವರರ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಈ ಬಗ್ಗೆ ಟೀಕಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಬಸವಣ್ಣನ ವಿಚಾರಧಾರೆಗೆ ವಿರುದ್ಧವಾಗಿರುವವರು ಪ್ರತಿಮೆ ಲೋಕಾರ್ಪಣೆ ಮಾಡಿದರೆ ಯಾವ ಸಂದೇಶ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಕರ್ನಾಟಕದ ಹಿತವನ್ನು ಯಾವಾಗ ಕಾಪಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಪ್ರಶ್ನಿಸಿದ ಸಿದ್ದರಾಮಯ್ಯ, ಜಗಜ್ಯೋತಿ ಬಸವೇಶ್ವರರು ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದರು. ಬಿಜೆಪಿಯವರು ಬಸವಣ್ಣನ ವಿಚಾರಧಾರೆಗೆ ವಿರುದ್ಧವಾಗಿದ್ದಾರೆ. ಇಂತಹವರು ಬಸವಣ್ಣನ ಪ್ರತಿಮೆ ಉದ್ಘಾಟನೆ ಮಾಡಿದರೆ ಯಾವ ಸಂದೇಶ ಹೋಗುತ್ತದೆ? ಚುನಾವಣೆ ಸಮೀಪದಲ್ಲಿ ರಾಜಕೀಯದ ಕಾರಣಕ್ಕಾಗಿ ಶಾ ಅವರು ಬರುತ್ತಿದ್ದಾರೆ. ಮತಗಳಿಗಾಗಿ, ಅಧಿಕಾರಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಆದರೆ ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಕ್ಷೇತ್ರ ಅಂತಿಮವಾಗಿಲ್ಲ. ಪುತ್ರ ಯತೀಂದ್ರ ಕ್ಷೇತ್ರ ವರುಣಾದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಅದಾಗ್ಯೂ, ಕೋಲಾರ ಸೇರಿದಂತೆ 20 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಆಹ್ವಾನ ನೀಡುತ್ತಿದ್ದಾರೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.
ಇದನ್ನೂ ಓದಿ: ಮಾರ್ಚ್ 24, 26 ಅಮಿತ್ ಶಾ ರಾಜ್ಯ ಪ್ರವಾಸ: ಮೂರು ಪ್ರತಿಮೆಗಳ ಲೋಕಾರ್ಪಣೆ
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂದು ಒತ್ತಡ ವಿಚಾರವಾಗಿ ಮಾತನಾಡಿದ ಅವರು, ಕೋಲಾರ ಕ್ಷೇತ್ರದ ಜನರು ಪ್ರೀತಿಯಿಂದ ನನ್ನನ್ನು ಕರೆಯುತ್ತಿದ್ದಾರೆ. ಕೋಲಾರ ಸೇರಿದಂತೆ 20 ಕ್ಷೇತ್ರಗಳಿಂದ ಸ್ಪರ್ಧೆಗೆ ಕರೆಯುತ್ತಿದ್ದಾರೆ. ಸಿದ್ದರಾಮಯ್ಯ ವಲಸೆ ಅಂತಾರೆ, ಹಾಗಾದರೆ ನನಗೆ 20 ಕಡೆಗಳಿಂದ ಯಾಕೆ ಕರೆಯುತ್ತಾರೆ? ಸ್ಪರ್ಧೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನನಗೆ ಏನನ್ನೂ ಹೇಳಿಲ್ಲ. ಆದರೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗೆ ಬಿಜೆಪಿ ನಾಯಕರಿಂದ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೋಲಿನ ಭೀತಿಯಿಂದ ಟೀಕೆ ಮಾಡುತ್ತಿದ್ದಾರೆ ಎಂದರು.
ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ವರಿಷ್ಠರು ಸಲಹೆ ನೀಡಿದ್ದಾಗಿ ಈ ಹಿಂದೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದರು. ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರಕ್ಕೆ ಬಂದರೆ ನಾನು ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದೂ ಹೇಳಿದ್ದರು. ಆದರೆ ಕೋಲಾರ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು ಎಂದು ಅಭಿಮಾನಿ ಪಟ್ಟು ಹಿಡಿದಿದ್ದಾರೆ, ಕೋಲಾರದಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Tue, 21 March 23