Bengaluru-Mysuru Expressway: ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ಕಾಂಗ್ರೆಸ್​ ಸರ್ಕಾರಕ್ಕೆ ಸಲ್ಲಬೇಕು: ಸಿದ್ದರಾಮಯ್ಯ

| Updated By: Ganapathi Sharma

Updated on: Mar 06, 2023 | 9:10 PM

ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಕ್ರೆಡಿಟ್ ವಾರ್ ತಣ್ಣಗಾದ ಬೆನ್ನಲ್ಲೇ ಇದೀಗ ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ವಾರ್ ಆರಂಭಗೊಂಡಿದೆ. ದಶಪಥ ರಸ್ತೆ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರ ಹೇಳಿಕೆಗೆ ಪ್ರತಾಪ್ ಸಿಂಹ, ವಿಜಯೇಂದ್ರ ಹಾಗೂ ಸುಧಾಕರ್​ ಅವರು ತಿರುಗೇಟು ನೀಡಿದ್ದಾರೆ.

Bengaluru-Mysuru Expressway: ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ಕಾಂಗ್ರೆಸ್​ ಸರ್ಕಾರಕ್ಕೆ ಸಲ್ಲಬೇಕು: ಸಿದ್ದರಾಮಯ್ಯ
ಸಿದ್ದರಾಮಯ್ಯ ಮತ್ತು ಪ್ರತಾಪ್ ಸಿಂಹ
Follow us on

ಮೈಸೂರು: ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ (Belagavi Shivaji Statue) ಸ್ಥಾಪನೆ ಕ್ರೆಡಿಟ್ ವಾರ್ ನಡೆಸಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದೀಗ ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru Expressway) ವಿಚಾರದಲ್ಲಿ ಕ್ರೆಡಿಟ್ ವಾರ್ ಆರಂಭಗೊಂಡಿದೆ. ಮಾರ್ಚ್​ 12ರಂದು ಈ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆಗೊಳಿಸಲಿದ್ದಾರೆ. ಒಂದೊಮ್ಮೆ ಎಸ್​ಪಿಜಿ (SPG) ಅನುಮತಿ ಕೊಟ್ಟರೆ ಇದೇ ಹೈವೇಯಲ್ಲಿ ಮೋದಿ ರೋಡ್ ಶೋ (PM Modi Road Show) ಕೂಡ ನಡೆಯಲಿದೆ. ಆದರೆ ಇದಕ್ಕೂ ಮುನ್ನ ಕಾಂಗ್ರೆಸ್ (Congress) ಹೈವೇ ಪರಿಶೀಲಿಸಲು ಮುಂದಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾಹಿತಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇದರಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಸರ್ಕಾರದ ಯಾವ ಪಾತ್ರವೂ ಇಲ್ಲ. ಪ್ರತಾಪ್​​ ಸಿಂಹ ಕ್ಷೇತ್ರದ ವ್ಯಾಪ್ತಿಗೆ ಕೆಲವೇ ಕಲವು ಕಿ.ಮೀ ಮಾತ್ರ ಸೇರುತ್ತದೆ. ಆದರೂ ನಾನು ಮಾಡಿಸಿದ್ದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹೆಚ್​​.ಸಿ.ಮಹದೇವಪ್ಪಗೂ ಈ ರಸ್ತೆಯ ಎಲ್ಲಾ ಮಾಹಿತಿ ಗೊತ್ತಿದೆ. ಮಾ.9ರಂದು ಬೆಂಗಳೂರು-ಮೈಸೂರು ಹೈವೇ ಪರಿಶೀಲನೆ ಮಾಡುತ್ತೇವೆ ಎಂದರು.

ನಮ್ಮಿಂದ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣ

ದಶಪಥ ರಸ್ತೆಯ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ನಮ್ಮಿಂದ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣಗೊಂಡಿದೆ. ವಿನಾಕಾರಣ ಸಿದ್ದರಾಮಯ್ಯ ಈ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. 2 ತಿಂಗಳ ಕಾಯಿರಿ, ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಅಂತ್ಯವಾಗುತ್ತದೆ. ಅವರು ಚುನಾವಣೆಯಲ್ಲಿ ಸೋತು ಮನೆಗೆ ಹೋಗುತ್ತಾರೆ. ನಂತರ ಅವರು ಪ್ರವಾಸ ಮಾಡಲಿ. ಮಕ್ಕಳು, ಮೊಮ್ಮಕ್ಕಳ ಜತೆ ಬೆಂಗಳೂರು-ಮೈಸೂರು ಟ್ರಿಪ್ ಮಾಡಲಿ ಎಂದರು.

ಇದನ್ನೂ ಓದಿ: ಆಸ್ಪತ್ರೆಯಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಡಿಸ್ಚಾರ್ಜ್, ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ರೋಡ್​ ಶೋಗೆ ರೆಡಿ

ಸಿದ್ದರಾಮಯ್ಯ ಹೇಳಿಕೆಗೆ ವಿಜಯೇಂದ್ರ ತಿರುಗೇಟು

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ‘ಕೈ’ ಅವಧಿಯಲ್ಲಿ ಆಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇಂತಹ ಸುಳ್ಳು ಸಿದ್ದರಾಮಯ್ಯ ಬಾಯಲ್ಲಿ ಬರುತ್ತಿರುವುದು ಹೊಸದಲ್ಲ ಎಂದರು. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರಧಾನಿ ಮೋದಿ ಕೊಟ್ಟ ಅಕ್ಕಿ ಚೀಲದ ಮೇಲೆ ಫೋಟೋ ಹಾಕಿಸಿಕೊಂಡಿದ್ದರು. ಆ ಮೂಲಕ ನಾವೇ ಕೊಟ್ಟಿದ್ದು ಎಂದು ಸಿದ್ದರಾಮಯ್ಯ ಫೋಟೋ ಹಾಕಿಕೊಂಡು ರಾಜ್ಯದ ತುಂಬ ಪ್ರಚಾರ ಮಾಡುವ ಪ್ರಯತ್ನ ಮಾಡಿದ್ದರು. ಆಗ ಮತದಾರರು ಕಾಂಗ್ರೆಸ್ ಧಿಕ್ಕರಿಸಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಏನೇ ಅಭಿವೃದ್ಧಿಯಾಗಿದ್ದರೂ ಅವರೇ ಮಾಡಿದ್ದು: ಸುಧಾಕರ್ ವ್ಯಂಗ್ಯ

ಹೈವೇ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕು ಎಂದ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರು-ಮೈಸೂರು ಹೈವೇ ಕಾಮಗಾರಿ 9 ವರ್ಷಗಳಿಂದ ನಡೆಯುತ್ತಿದೆ. ಮೋದಿಯವರು ಯಾವಾಗಿನಿಂದ ಪ್ರಧಾನಿಯಾಗಿದ್ದಾರೆಂದು ಕಾಂಗ್ರೆಸ್​ನವರು ತಿಳಿದುಕೊಳ್ಳಲಿ ಎಂದರು. ಅಲ್ಲದೆ, ರಾಜ್ಯದಲ್ಲಿ ಏನೇ ಅಭಿವೃದ್ಧಿಯಾಗಿದ್ದರೂ ಅವರೇ ಮಾಡಿದ್ದು ಎಂದು ವ್ಯಂಗ್ಯವಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 pm, Mon, 6 March 23