ಗದಗ ಸೆ,30: ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿ ಮಾಡಿಕೊಂಡಿದ್ದು, ಇದರಿಂದ ಎರಡೂ ಪಕ್ಷದಲ್ಲೂ ಒಂದಿಷ್ಟು ಡ್ಯಾಮೇಜ್ ಆಗುತ್ತಿದೆ. ಇನ್ನು ವಿಧಾನಸಭೆ ಚುನಾವಣೆ ಸಮಯದಲ್ಲಿ ಹಲವು ಬಿಜೆಪಿ ನಾಯಕರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ. ಈ ಎರಡೂ ಕಾರಣದಿಂದ ಎರಡೂ ಪಕ್ಷದ ಹಲವು ನಾಯಕರು ಕಾಂಗ್ರೆಸ್ನತ್ತ (Congress) ಮುಖಮಾಡಿದ್ದಾರೆ. ಅದರಂತೆ ಇದೀಗ ಬಿಜೆಪಿ ಮಾಜಿ ಶಾಸಕ ಪಕ್ಷ ತೊರೆಯಲು ಸಿದ್ದರಾಗಿದ್ದು, ಕಾಂಗ್ರೆಸ್ನಲ್ಲಿ ಒಂದು ಕಾಲಿಟ್ಟಿದ್ದಾರೆ. ಹೌದು ಶಿರಹಟ್ಟಿಯಿಂದ ಎರಡು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ರಾಮಣ್ಣ ಲಮಾಣಿ (Ramanna Lamani) ಬಿಜೆಪಿಗೆ ಗುಡ್ಬೈ ಹೇಳಿ ಅ.10ರಂದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಶಿರಹಟ್ಟಿ ತಾಲೂಕಿನ ಕುಂದ್ರಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದೇನೆ. ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ಮತ್ತು ನಾನು ಕಾಂಗ್ರೆಸ್ಗೆ ಸೇರುತ್ತೇವೆ. ಇದೇ ವೇಳೆ ಬಿಜೆಪಿಯ ಹಲವು ಮಾಜಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಬಿಜೆಪಿಯಲ್ಲಿ ಎರಡು ಭಾರಿ ಶಾಸಕನಾಗಿ ಶಿರಹಟ್ಟಿ ಮುಂಡರಗಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮೂರನೇ ಬಾರಿಗೆ ಕೊನೆಯ ಹಂತವರೆಗೂ ಎಲ್ಲಾ ಕಡೆ ಕಾರ್ಯಕ್ರಮಕ್ಕೆ ಖರ್ಚುವೆಚ್ಚ ಮಾಡಿದ್ದೇನೆ. ಆದರೆ ಕೊನೆಯ ಹಂತದಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ಕೊಡಲ್ಲಿಲ್ಲ. ಆದರೂ ನಿಷ್ಠಾವಂತನಾಗಿ ಬಿಜೆಪಿಯಲ್ಲಿ ದುಡಿದ್ದೇನೆ. ಆದರೆ ಈಗೀನ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಬಿಜೆಪಿ ಕಾರ್ಯಕರ್ತರನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ ಎಂದು ಆರೋಪ ಮಾಡಿದರು.
ಇದನ್ನೂ ಓದಿ: ಸಿಎಂ ಸೀಟಿನಲ್ಲಿ ಕೂತರೂ ಸಿದ್ದಸುಳ್ಳುಗಳಿಗೆ ಕೊರತೆಯೇನೂ ಇಲ್ಲ: ಸಿದ್ದರಾಮಯ್ಯ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ನೀವು ರಾಮಣ್ಣ ಲಮಾಣಿ ಅಭಿಮಾನಿಗಳು ನಮ್ಮ ಹತ್ತಿರ ಬರಬೇಡಿ ಎಂದಿದ್ದಾರೆ. ನನ್ನ ಕಾರ್ಯಕರ್ತರು ನನ್ನ ಬಳಿ ಹೇಳಿಕೊಂಡಿದ್ದಾರೆ. ಇದರಿಂದ ಮನಸ್ಸಿಗೆ ಬೇಜಾರ ಆಗಿ ಜಗದೀಶ್ ಶೆಟ್ಟರ್ ಅವರ ಜೊತೆ ಮಾತುಕತೆ ಮಾಡಿದ್ದೇನೆ. ಡಿಸಿಎಂ ಡಿ.ಕೆ.ಶಿವಕುಮಾರನ್ನು ಭೇಟಿಯಾಗಿ ಬಂದಿದೇನೆ. ಅವರು ಹೇಳಿದ್ದಾರೆ ಅಕ್ಟೋಬರ್ 10ಕ್ಕೆ ಬಹಳಷ್ಟು ಮಾಜಿ ಶಾಸಕರು ಬರುತ್ತಿದ್ದಾರೆ. ಅಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಕೆಲ ದಿನಗಳ ಹಿಂದೆ ಜೆಡಿಎಸ್ನ ಮೂವರು ಮಾಜಿ ಶಾಸಕರು ಬೆಂಗಳೂರಿನಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚಾಗಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜಕೀಯದಲ್ಲಿ ಸಿದ್ಧಾಂತ ಮುಖ್ಯವಲ್ಲ ಎಂಬ ಸಂದೇಶ ರವಾನೆಯಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ