ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಲು ಅವರ ಪಕ್ಷದಲ್ಲೇ ತಂಡ ಸಿದ್ಧವಾಗಿದೆ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದಷ್ಟು ನೋವು ಅನುಭವಿಸಿದವರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಪ್ರಯತ್ನಿಸಬಹುದು. ರಾಷ್ಟ್ರೀಯ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗೆ ಕ್ಷೇತ್ರ ಸಿಗುತ್ತಿಲ್ಲ ಅಂದರೆ ಏನರ್ಥ? ಅವರಿಗೆ ಇಂಥ ಸ್ಥಿತಿ ಬರಬಾರದಿತ್ತು. ಈ ರೀತಿ ಗೊಂದಲ ಸೃಷ್ಟಿ ಮಾಡಿದ್ದು ಅವರ ಪಕ್ಷದವರೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಕ್ಷೇತ್ರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ಅವರ ಪಕ್ಷದಲ್ಲೇ ಅವರನ್ನು ರಾಜಕೀಯವಾಗಿ ಮುಗಿಸುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
ಮಾರ್ಚ್ 26ರಂದು ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ ಎಂದೂ ಕುಮಾರಸ್ವಾಮಿ ತಿಳಿಸಿದರು. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಜೆಡಿಎಸ್ ಏನೂ ಕಡಿಮೆ ಇಲ್ಲ, ಕಳಪಯೂ ಅಲ್ಲ. 123 ಸೀಟ್ ಗೆಲ್ಲುವ ಗುರಿ ಇಟ್ಟುಕೊಂಡು ಜನರ ಬಳಿ ಹೋಗ್ತಿದ್ದೇವೆ. 15ರಿಂದ 16 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಪಕ್ಷಕ್ಕೆ ಸಮಸ್ಯೆ ಇದೆ. ಅಂತಹ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಬರುತ್ತಾರೆ ನೋಡೋಣ. ರಾಷ್ಟ್ರೀಯ ಪಕ್ಷದಿಂದ ಕೆಲವರು ಜೆಡಿಎಸ್ ಪಕ್ಷಕ್ಕೆ ಬರಲಿದ್ದಾರೆ. ಇದುವರೆಗೂ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಘೋಷಣೆ ಆಗಿಲ್ಲ. ಹೀಗಾಗಿ 15 ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಯಾರಾದರೂ ಬರಬಹುದು ಎಂದು ಹೆಚ್ಡಿಕೆ ಮತ್ತೊಂದು ಬಾಂಬ್ ಸಿಡಿಸಿದರು.
ಇದನ್ನೂ ಓದಿ: Siddaramaiah: ಬಾದಾಮಿ, ಕೋಲಾರ, ವರುಣಾ ನನ್ನ ಆಯ್ಕೆ ಎಂದ ಸಿದ್ದರಾಮಯ್ಯ; ನಾಳೆಯೇ ಗೊಂದಲಕ್ಕೆ ತೆರೆ?
ಯುಗಾದಿ ಹಬ್ಬದ ಜೊತೆಗೆ ಚುನಾವಣೆ ಹಬ್ಬವೂ ಜೋರಾಗಿ ನಡೆಯುತ್ತಿದೆ. ಆ ಹಬ್ಬಕ್ಕೂ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಹೇಳಿದಂತೆ 26ರಂದು ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ ಇದೆ. ಅದಕ್ಕೆ ತಯಾರಿ ನಡೆದಿದೆ ಎಂದೂ ಹೆಚ್ಡಿಕೆ ತಿಳಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Wed, 22 March 23