ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಅದೇ ನಮ್ಮ ಗುರಿ: ಜಿಟಿ ದೇವೇಗೌಡ

| Updated By: Rakesh Nayak Manchi

Updated on: Sep 15, 2023 | 12:57 PM

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ನಡುವೆ ಮೈತ್ರಿ ಮಾತಕತೆ ನಡೆಯುತ್ತಿದೆ. ಈ ನಡುವೆ ಮೈತ್ರಿ ಬಗ್ಗೆ ಮತ್ತೊಂದು ಅಪ್​ಡೇಟ್ ನೀಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ನರೇಂದ್ರ ಮೋದಿ, ಅಮಿಶ್ ಶಾ, ಜೆಪಿ ನಡ್ಡಾ ಜೊತೆ ಹೆಚ್​ಡಿ ದೇವೇಗೌಡ ಅವರು ಮಾತಾಡಿದ್ದಾರೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಅದೇ ನಮ್ಮ ಗುರಿ ಎಂದರು.

ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಅದೇ ನಮ್ಮ ಗುರಿ: ಜಿಟಿ ದೇವೇಗೌಡ
ಜಿಟಿ ದೇವೇಗೌಡ
Follow us on

ಬೆಂಗಳೂರು, ಸೆ.15: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿ (BJP JDS Alliance) ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿಶ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಮಾಜಿ ಪ್ರಧಾನಿ ಹೆಚ್.​ಡಿ.ದೇವೇಗೌಡ ಅವರು ಮಾತಾಡಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (G.T.Devegowda) ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೆಚ್​ಡಿ ದೇವೇಗೌಡರು ಹೇಳಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್​, ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ನಾನು ಅಥವಾ ಪ್ರತಾಪ್ ಸಿಂಹ ಸಂಸದನಾಗಬೇಕು ಅಂತೇನಿಲ್ಲ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಅದೇ ನಮ್ಮ ಗುರಿಯಾಗಿದೆ ಎಂದರು.

ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ: ಜಿಟಿ ದೇವೇಗೌಡ

ದೇವೇಗೌಡರ ಬಗ್ಗೆ‌ ನರೇಂದ್ರ ಮೋದಿ ನಂಬಿಕೆ ಇಟ್ಟಿದ್ದಾರೆ. ದೇವೇಗೌಡರಿಗೆ ಅಗೌರವ ತರುವ ಕೆಲಸ ಮಾಡಿಲ್ಲ. ದೇವೇಗೌಡರು ಸಣ್ಣ ಕಾರ್ಯಕರ್ತರನ್ನು ಬಿಟ್ಟು ಕೊಡಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಯಾರೂ ಭಯ ಬೀಳುವುದು, ಆತಂಕ ಪಡುವುದು ಬೇಡ ಎಂದು ಜಿಟಿ ದೇವೇಗೌಡ ಹೇಳಿದರು.

ದೇವೇಗೌಡರು ಮೋದಿ ಜೊತೆ ಮಾತಾಡಿದ್ದಾರೆ ಎಂದ‌ ಕೊಡಲೇ ಎಲ್ಲಾ ಗೋಡೆ ಬಿದ್ದು ಹೋಯ್ತು. ದೇವೇಗೌಡರಿಗೆ ಇಡೀ ದೇಶ ಗೌರವ ನೀಡುತ್ತದೆ ಎಂದ ಜಿಟಿ ದೇವೇಗೌಡ, ಕಾಂಗ್ರೆಸ್ ಮುಕ್ತ ಮಾಡಬೇಕು ಅಂತ ಮೋದಿ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಗ್ಯಾರಂಟಿಗಳಿಂದ ಎಂದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ. ಮೋದಿಯನ್ನು ಸೋಲಿಸಲು ಆಗಲ್ಲ. ದೇವೇಗೌಡರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.

ಇದನ್ನೂ ಓದಿ: ಬಿಜೆಪಿಯೊಂದಿಗೆ ಮೈತ್ರಿ ಆಗೋದು ನಿಶ್ಚಿತ, ದೆಹಲಿಗೆ ಹೋಗಿ ಆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಿದ್ದೇನೆ: ಹೆಚ್ ಡಿ ಕುಮಾರಸ್ವಾಮಿ

11 ತಿಂಗಳು ದೇವರಾಜು ಅರಸು ಅವರಿಗೆ ಯಾವ ರೀತಿ ನಡೆಸಿಕೊಂಡಿದ್ದೀರಿ? ಸಿದ್ದರಾಮಯ್ಯ ಅವರಿಗೆ ದೇವರಾಜು ಅರಸು ಪರಿಸ್ಥಿತಿ ಬರುವುದು ಬೇಡ. ದೇವರಾಜ್ ಅರಸು ಕುಟುಂಬಕ್ಕೆ ಒಂದು ಎಂಎಲ್​ಸಿ ಸ್ಥಾನ ಕೊಟ್ಟಿಲ್ಲ. ಬಿಕೆ ಹರಿಪ್ರಸಾದ್ ಅದನ್ನು ಹೇಳಿದ್ದಾರೆ. ಇಷ್ಟಕ್ಕೆ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ನೋಟಿಸ್ ನೀಡಿದೆ ಎಂದರು.

ದೇವೇಗೌಡರು ಯಾರನ್ನೂ ಬಿಟ್ಟು ಕೊಡಲ್ಲ. ಕಾಂಗ್ರೆಸ್ ಆಮಿಷಕ್ಕೆ ಯಾರಾದರು ಬಲಿಯಾದರೆ ಜೆಡಿಎಸ್ ಹೊಣೆ ಅಲ್ಲ. ಬಿಜೆಪಿಯಿಂದ ಹೋಗುತ್ತಾರೆ ಅಂದರು, ಹೋಗಿದ್ದಾರಾ? ಜೆಡಿಎಸ್-ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ ಎಂದರು.

ಐದು ಗ್ಯಾರಂಟಿಯಲ್ಲಿ ಮುಳುಗಿದ ಕಾಂಗ್ರೆಸ್ ಸರ್ಕಾರ

ಸರ್ಕಾರ ನೂರು ದಿನಗಳ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಆದರೆ ಬರಗಾಲ ಎದುರಿಸುತ್ತಿದ್ದರೂ ರೈತರ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಐದು ಗ್ಯಾರಂಟಿಯಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿದೆ.ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಜಿಟಿ ದೇವೇಗೌಡರು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರೇ ಅಧಿಕಾರಿಗಳನ್ನು ಹುಟ್ಟು ಹಾಕುತ್ತೀರಾ? ಬಿಜೆಪಿ, ಜೆಡಿಎಸ್ ಸರ್ಕಾರ ಇದ್ದಾಗಲೂ ಅಧಿಕಾರಿಗಳು ಇರಲಿಲ್ವಾ? ಕೃಷಿ ಇಲಾಖೆ ಏನಾಗಿದೆ? ರೈತರಿಗೆ ಬೇಕಾಗಿರುವ ಉಪಕರಣ ಕೊಟ್ಟಿದ್ದೀರಾ? ಉತ್ತರ ಕರ್ನಾಟಕದಲ್ಲಿ ಬಿತ್ತನೆ ಬೀಜ ಕೊಟ್ಟಿಲ್ಲ. ಬೆಳೆ ಬೆಳೆಯಲು ಗೊಬ್ಬರ ನೀಡಬೇಕು, ಅದೆಲ್ಲಾ ಗಮನ ಸರ್ಕಾರಕ್ಕೆ ಇಲ್ಲ ಎಂದು ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರ ನಾಲ್ಕು, ರಾಜ್ಯ ಸರ್ಕಾರ ಆರು ಸಾವಿರ ರೂಪಾಯಿ ಕೊಡುತ್ತಿತ್ತು. ರೈತರ ಬಾಯಿಗೆ ಮಣ್ಣು ಹಾಕುತ್ತೀರಾ? ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಜೊತೆ ಸಂಬಂಧ ಬೆಳೆಸಿಕೊಂಡು ಕಾವೇರಿ ನೀರು ಬಿಟ್ಟಿದ್ದಾರೆ. ಪ್ರಧಾನಿ ಮೋದಿ, ಜಲ ಸಂಪನ್ಮೂಲಗಳ ಸಚಿವರನ್ನು ಭೇಟಿ ಮಾಡಿದ್ದೀರಾ? ಕೇವಲ ಅವರು ಬನ್ನಿ, ಇವರು ಬನ್ನಿ ಅಂತ ಆಪರೇಷನ್ ಹಸ್ತ ಮಾಡುತ್ತಾ ಕುಳಿತುಕೊಂಡಿದ್ದೀರಿ ಎಂದು ಕಾಂಗ್ರೆಸೆ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಬಳಿ ರಾಜ್ಯದ ಸಚಿವರ ನಿಯೋಗ, ಸಿಎಂ ಸಿದ್ದರಾಮಯ್ಯ ಅವರು ಹೋಗಬೇಕಾಗಿತ್ತು. ತುಂಗಭದ್ರಾದಲ್ಲಿ ತೆಲಂಗಾಣ, ಆಂಧ್ರಪ್ರದೇಶಕ್ಕೆ ನೀರು ಹೋಗಲ್ವಾ? ಅಲ್ಲಿ ಸಂಕಷ್ಟ ಸೂತ್ರ ಪಾಲಿಸುತ್ತಿಲ್ವಾ? ಇಲ್ಲಿ‌ ಯಾಕೆ ಸಮಸ್ಯೆ ಆಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.

ಬರಗಾಲ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿಲ್ಲ. ಎನ್​ಡಿಆರ್​ಎಫ್​ನಿಂದ ಹಣ ಬರುತ್ತಿಲ್ಲ. ಸರ್ಕಾರ ಬಂದ ಮೇಲೆ ಬಿಬಿಎಂಪಿ ಏನಾಗಿದೆ? ಸರ್ಕಾರದ ಆರನೇ ಗ್ಯಾರಂಟಿ ರೈತರ ಆತ್ಮಹತ್ಯೆ ಎಂದರು.

ಕೆಂಪಣ್ಣ ಎಲ್ಲಿ ಇದ್ದೀರಾ?

ಬಿಜೆಪಿ ವಿರುದ್ಧ ದಿನನಿತ್ಯ ಸುದ್ದಿಗೋಷ್ಠಿ ಮಾಡುತ್ತಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎಲ್ಲಿ ಇದ್ದೀರಾ? ಎಂದು ಪ್ರಶ್ನಿಸಿದ ಜಿಟಿ ದೇವೇಗೌಡ, ಜೆಡಿಎಸ್ ಬದುಕಿದೆ, ಹೋರಾಟ ಮಾಡುತ್ತೇವೆ. ರೈತರ ಪರ ನಾವು ಹೋರಾಟ ಮಾಡುತ್ತೇವೆ. 26 ರಂದು ಕಲಬುರಗಿಯಿಂದ ಕೋರ್ ಕಮಿಟಿ ಪ್ರವಾಸ ಆರಂಭ ಆಗುತ್ತದೆ. ಜೇವರ್ಗಿಯಲ್ಲಿ ಪಂಚಾಯತ್ ಅಧ್ಯಕ್ಷರ ಸಭೆ ಇದೆ. 27 ಕ್ಕೆ ಹೊಸಪೇಟೆಗೆ ಹೋಗುತ್ತಿದ್ದೇವೆ ಎಂದರು.

ರಾಮಕೃಷ್ಣ ಸಿಎಂ ಆಗಿದ್ದಾಗ ಸಿದ್ದರಾಮಯ್ಯಗೆ ಕಾವಲು ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟರು. ಆಗ ಬಿಜೆಪಿ 18 ಶಾಸಕರು ಬೆಂಬಲ ನೀಡಿದ್ದರು. ನನ್ನ ಹೆಣನೂ ಹೋಗಲ್ಲ ಅಂತಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಜಿಟಿ ದೇವೇಗೌಡ ವಾಗ್ದಾಳಿ ನಡೆಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ