ಚಿಕ್ಕಬಳ್ಳಾಪುರ, ಆಗಸ್ಟ್ 29: ನನಗೆ ಸೋಲಾಗಿದ್ದು ಒಳ್ಳೆಯದೇ ಅನ್ನಿಸುತ್ತದೆ. ಈ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ನಾನು ತುಂಬಾ ಕೆಲಸ ಮಾಡುತ್ತಿದೆ. ಜನ ಅಭಿವೃದ್ಧಿಗೆ ಮತ ಹಾಕಿಲ್ಲ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ (Dr.K.Sudhakar) ಬೇಸರ ವ್ಯಕ್ತಪಡಿಸಿದರು. ರಾಜಕೀಯದಲ್ಲಿ ಇರೋವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ. ಒಂದು ಸೋಲಿನಿಂದ ಯಾರು ದೃತಿಗೇಡಬೇಡಿ. ಸೋಲು ಜೀವನದಲ್ಲಿ ಬಹು ದೊಡ್ಡ ಪಾಠ ಕಲಿಸಿದೆ ಎಂದರು.
ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಮಾಡಿದರೂ ನಾವು ಹೆದರುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಆರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಿರುದ್ಧ ಒಂದಲ್ಲ, ನಾಲ್ಕು ವಿಚಾರಣೆಗಳನ್ನು ಮಾಡಿದರೂ ಹೆದರಿಕೆ ಇಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವ್ಯಾರೂ ತಪ್ಪು ಮಾಡಿಲ್ಲ ಎಂದು ವಿಶ್ವಾಸದಿಂದ ಹೇಳುತ್ತೇನೆ. ಕೋವಿಡ್ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂಜಾನೆ ಐದೂವರೆಗೆ ಕರೆ ಮಾಡಿ ಸಭೆಗೆ ಕರೆಯುತ್ತಿದ್ದರು. ಆಗ ಕಾಂಗ್ರೆಸ್ ನಾಯಕರು ಹೆಲ್ಮೆಟ್, ಮಾಸ್ಕ್ ಧರಿಸಿಕೊಂಡು, ಮನೆಗೆ ಪ್ರವೇಶವಿಲ್ಲ ಎಂಬ ಬೋರ್ಡು ಹಾಕಿಕೊಂಡು ಕುಳಿತಿದ್ದರು. ಆದರೆ ನಾವೆಲ್ಲರೂ ಆಸ್ಪತ್ರೆಗೆ ತೆರಳಿ, ರೋಗಿಗಳ ಬಳಿ ತೆರಳಿ ಪರಿಶೀಲನೆ ನಡೆಸಿ ರಾಜ್ಯದ ಜನರ ರಕ್ಷಣೆ ಮಾಡಿದ್ದೇವೆ ಎಂದರು.
ನಮ್ಮ ಸರ್ಕಾರ ಇದ್ದಾಗ ಯಾವುದೇ ತಪ್ಪು ಮಾಡಿಲ್ಲ. ಈಗಿನ ಸರ್ಕಾರದಲ್ಲಿ ಅನುದಾನವಿಲ್ಲದೆ ಕೆಲಸಗಳೇ ನಡೆಯುತ್ತಿಲ್ಲ. ಕೆಲಸವಿಲ್ಲದ ಕಾಂಗ್ರೆಸ್ ನಾಯಕರು ವಿಚಾರಣೆಗಾಗಿ ಸಮಿತಿ ರಚಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸತ್ಯ ಹರಿಶ್ಚಂದ್ರರೇ ಆಗಿದ್ದರೆ 2013 ರಿಂದ ಈವರೆಗೆ ತನಿಖೆ ಮಾಡಲಿ. ಆಗ ಕಾಂಗ್ರೆಸ್‌ನವರು ಕೂಡ ನ್ಯಾಯಬದ್ಧವಾಗಿ ಇದ್ದಾರೆ ಎಂದು ಜನರು ಒಪ್ಪಿಕೊಳ್ಳುತ್ತಾರೆ ಎಂದರು.
2013 ರ ಅವಧಿಯಲ್ಲಿ ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದನ್ನು ತನಿಖೆ ಮಾಡಿಸಲು ಎದೆಗಾರಿಕೆ ಇಲ್ಲ. ಸರ್ಕಾರ ಎಷ್ಟೇ ವಿಚಾರಣಾ ಸಮಿತಿ ರಚಿಸಿದರೂ ಅದನ್ನು ಎದುರಿಸುವ ತಾಕತ್ತು ಹಾಗೂ ಮನೋಸ್ಥೈರ್ಯ ನಮಗೆ ಇದೆ. ಕಳ್ಳರೇ ಸಾಚಾಗಳಂತೆ ಓಡಾಡುತ್ತಿರುವಾಗ, ಸಾಚಾಗಳಾದ ನಾವ್ಯಾಕೆ ಹೆದರಬೇಕು? ಎಂದು ಪ್ರಶ್ನಿಸಿದರು.
ನಾವು ಜನರ ಬಳಿ ಹೋಗಿ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ಆದಷ್ಟು ಬೇಗ ಈ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡೋಣ ಎಂದು ಡಾ.ಕೆ.ಸುಧಾಕರ್ ಹೇಳಿದರು.
ಇದನ್ನೂ ಓದಿ: ಒತ್ತಡ ಮತ್ತು ಬೆದರಿಕೆಗಳಿಗೆ ಮಣಿಯಲ್ಲ, ಯಾವುದೇ ಏಜೆನ್ಸಿಯ ತನಿಖೆ ಎದುರಿಸಲು ಸಿದ್ಧ: ಡಾ ಕೆ ಸುಧಾಕರ್, ಮಾಜಿ ಸಚಿವ
ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲು ಹೊರಟರೆ ಅದನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಮುಂದಾಗಿದ್ದರು. ಗುತ್ತಿಗೆದಾರರಿಗೂ ಬಿಲ್ ಪಾವತಿಸಿಲ್ಲ. ಸ್ವಾತಂತ್ರ್ಯ ಬಂದ ನಂತರ ಕರ್ನಾಟಕ ಎಂದೂ ನೋಡದಂತಹ ಕೆಟ್ಟ ಸರ್ಕಾರ ಈಗ ಇದೆ ಎಂದರು.
ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದಾಗ ಆಗಿನ ಸಿಎಂ ಬಿ.ಎಸ್.ಯಡಿಯೂರಪ್ಪನವರು 4 ಸಾವಿರ ರೂ. ಸೇರಿಸಿ ಕೊಡಲು ಆರಂಭಿಸಿದರು. ಆದರೆ ರೈತರ ಉದ್ಧಾರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಮೊದಲಿಗೆ 4 ಸಾವಿರ ರೂ. ಕಿತ್ತುಕೊಂಡಿದೆ ಎಂದು ದೂರಿದರು.
ಕರ್ನಾಟಕವು ಕಲ್ಯಾಣ ರಾಜ್ಯ ಎಂಬ ಹೆಸರು ಪಡೆದಿದೆ. ಆದರೆ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಸರ್ಕಾರ ಇದನ್ನು ದಿವಾಳಿ ರಾಜ್ಯ ಮಾಡುತ್ತಿದೆ. ಗುತ್ತಿಗೆದಾರರಿಗೆ ಕೆಲಸವೇ ಇಲ್ಲ. ಜೊತೆಗೆ ಸರ್ಕಾರದಲ್ಲಿರುವವರು ಹಳೆ ಬಿಲ್‌ಗಳಿಗೆ ಪಾವತಿಸದೆ ಪರ್ಸೆಂಟೇಜ್ ಕೇಳುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಸರ್ಕಾರ ಕೊಡುತ್ತೇವೆ ಎಂದು ಹೇಳಿ, ಮೊದಲ ದಿನದಿಂದ ಭ್ರಷ್ಟಾಚಾರಯುಕ್ತ ಸರ್ಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದಲ್ಲಿ ಪ್ರತಿ ಹುದ್ದೆ ಸೇಲ್ ಆಗುತ್ತಿದ್ದು, ಎಲ್ಲಕ್ಕೂ ಬೆಲೆ ನಿಗದಿಯಾಗಿದೆ. ಪ್ರತಿ ಅಧಿಕಾರಿ ದುಡ್ಡು ಕೊಟ್ಟು ವರ್ಗಾವಣೆ ಮಾಡಿಕೊಳ್ಳಬೇಕು. ನನ್ನ ಆಡಳಿತದ ಅವಧಿಯಲ್ಲಿ ಒಬ್ಬೇ ಒಬ್ಬ ಅಧಿಕಾರಿಯಿಂದ ಪೋಸ್ಟಿಂಗ್‌ಗೆ ನಯಾ ಪೈಸೆ ಹಣ ಪಡೆದಿರಲಿಲ್ಲ. ಸ್ವಚ್ಛ ಆಡಳಿತ ಎಂದಿರುವ ಕಾಂಗ್ರೆಸ್ ನಾಯಕರು ಇಡೀ ಆಡಳಿತವನ್ನೇ ಗುಡಿಸುತ್ತಿದ್ದಾರೆ. 135 ಶಾಸಕರು ಗೆದ್ದಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯುವ ಯತ್ನ ನಡೆದಿದೆ. ಇನ್ನೂ ಐದು ವರ್ಷ ಆಡಳಿತ ಇದೆ ಎಂಬ ಗ್ಯಾರಂಟಿಯೇ ಇಲ್ಲವೇ? ಎಂದು ಸುಧಾಕರ್ ಪ್ರಶ್ನಿಸಿದರು.
ಸರ್ಕಾರ ಯಾರಪ್ಪಂದೂ ಅಲ್ಲ. ಇದು ರಾಜ್ಯದ ಜನರ ಸರ್ಕಾರ. ತೆರಿಗೆ ಹಣ ಆರೂವರೆ ಕೋಟಿ ಜನರದ್ದು. ಯಾವುದೇ ಪಂಚಾಯಿತಿಗೆ ಅನುದಾನವನ್ನು ಖೋತಾ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ಗ್ಯಾರಂಟಿ ಗಿಮಿಕ್ ಮಾಡಿ 2 ಸಾವಿರ ರೂಪಾಯಿಗೆ ರಾಜ್ಯವನ್ನು ಮಾರಾಟ ಮಾಡುವ ಸ್ಥಿತಿ ಬಂದಿದೆ. ಕಾಂಗ್ರೆಸ್ ಸರ್ಕಾರ ಈಗಲೇ 85 ಸಾವಿರ ಕೋಟಿ ರೂ. ಸಾಲ ಮಾಡಿದ್ದು, ಇನ್ನು ಐದು ವರ್ಷದಲ್ಲಿ 5 ಲಕ್ಷ ಕೋಟಿ ರೂ. ಸಾಲ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೇರೆ ಪಕ್ಷಕ್ಕೆ ಹೋಗುವ ಜಾಯಮಾನ ನನ್ನದಲ್ಲ. ರಾಜಕಾರಣದಲ್ಲಿರಬೇಕೆಂದರೆ ಬಿಜೆಪಿಯಲ್ಲೇ ಇರುತ್ತೇನೆ. ಇದೇ ಪಕ್ಷವನ್ನು ದಕ್ಷಿಣ ಕರ್ನಾಟಕದಲ್ಲಿ ಕಟ್ಟುವ ಕೆಲಸ ಮಾಡುತ್ತೇನೆ. ಈಗಿನ ಮುಖ್ಯಮಂತ್ರಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಸೋತಿದ್ದಾರೆ. ಸೋಲು ಉತ್ತಮ ಪಾಠವನ್ನು ಕಲಿಸುತ್ತದೆ. ಗೆಲ್ಲುವ ವಿಶ್ವಾಸವನ್ನಿಕೊಟ್ಟುಕೊಂಡು ಮತ್ತೆ ಗೆಲ್ಲೋಣ ಎಂದರು.
ಮಹಾತ್ಮ ಗಾಂಧೀಜಿಯವರು ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ. ಸ್ವಚ್ಛ ಭಾರತ ಯೋಜನೆ ಜಾರಿಯಾದಾಗ ಅನೇಕರು ನಗೆಯಾಡಿದ್ದರು. ಈ ಯೋಜನೆಯಡಿ 11 ಕೋಟಿ ಶೌಚಾಲಯ ನಿರ್ಮಿಸಿದ್ದು, ಮಹಿಳೆಯರ ಸ್ವಾಭಿಮಾನ ಹಾಗೂ ಗೌರವದ ರಕ್ಷಣೆಯಾಗಿದೆ ಎಂದರು.
ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೂಲಕ ಒಂದು ಕುಟುಂಬಕ್ಕೆ ಸರಾಸರಿ 3 ಸಾವಿರ ರೂ. ನೀಡುತ್ತಿದೆ. ಆದರೆ ಗುತ್ತಿಗೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವುದರಿಂದ ಬಡ ಜನರಿಗೆ ಕೆಲಸವೇ ಇಲ್ಲವಾಗಿದೆ. ಒಂದು ಕಡೆಯಿಂದ ಗ್ಯಾರಂಟಿ ನೀಡಿ, ಮತ್ತೊಂದು ಕಡೆ ಕುಟುಂಬದ ಆದಾಯ ಕಿತ್ತುಕೊಳ್ಳಲಾಗಿದೆ ಎಂದು ದೂರಿದರು.
ಚಿಕ್ಕಬಳ್ಳಾಪುರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಡಾ.ಕೆ.ಸುಧಾಕರ್ ಅವರಿಂದ ಬಿಜೆಪಿಗೆ ಶಕ್ತಿ ಬಂದಿದೆ. ಈ ಭಾಗದಲ್ಲಿ ಬಿಜೆಪಿಯ ಸಂಘಟನೆ ಹೆಚ್ಚಾಗಿದೆ ಎಂದು ಶ್ಲಾಘಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Tue, 29 August 23