ಸಚಿವರು ಕರೆ ಸ್ವೀಕರಿಸುತ್ತಿಲ್ಲ: ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ
ಸಚಿವರ ವಿರುದ್ಧ ಸ್ವಪಕ್ಷ ಕಾಂಗ್ರೆಸ್ ಶಾಸಕರು ಮತ್ತೆ ಅಸಮಾಧಾನ ಹೊರಹಾಕಲು ಆರಂಭಿಸಿದ್ದಾರೆ. ಶಾಸಕರೇ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಸಚಿವರ ಪಿಎಗಳು ಕೂಡ ಅದೇ ದಾರಿ ಹಿಡಿದಿದ್ದಾರೆ ಎಂದು ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಅವರು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆ, ಆಗಸ್ಟ್ 29: ಸಚಿವರ ವಿರುದ್ಧ ಸ್ವಪಕ್ಷ ಕಾಂಗ್ರೆಸ್ ಶಾಸಕರು ಮತ್ತೆ ಅಸಮಾಧಾನ ಹೊರಹಾಕಲು ಆರಂಭಿಸಿದ್ದಾರೆ. ಶಾಸಕರೇ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಸಚಿವರ ಪಿಎಗಳು ಕೂಡ ಅದೇ ದಾರಿ ಹಿಡಿದಿದ್ದಾರೆ ಎಂದು ದಾವಣಗೆರೆಯ (Davanagere) ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ (Basavaraj Shivaganga) ಅವರು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಕೆಲವು ಸಚಿವರು ಶಾಸಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಕೆಲವು ಶಾಸಕರು ಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದರು. ಇದು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಹೀಗಾಗಿ ಸಚಿವರು ಮತ್ತು ಶಾಸಕರ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಸಭೆ ನಡೆಸಿದ್ದರು. ಆದರೂ ಕೆಲುವ ಸಚಿವರು ಸುಧಾರಿಸಲ್ಲ ಎಂಬುದು ಶಿವಗಂಗಾ ಅವರ ಆರೋಪವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಶಿವಗಂಗಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಸಭೆ ಮಾಡಿದ್ದರೂ ಕೆಲವು ಸಚಿವರು ಸುಧಾರಿಸಿಲ್ಲ. ಶಾಸಕರು ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಸಚಿವರ ಪಿಎಗಳು ಕೂಡ ಅದೇ ದಾರಿ ಹಿಡಿದಿದ್ದಾರೆ. ಒಬ್ಬ ಸಚಿವರಿಗೆ 135 ಕ್ಷೇತ್ರದ ಶಾಸಕರ ಪೋನ್ ನಂಬರ್ ಸೇವ್ ಮಾಡಿಕೊಳ್ಳುವಷ್ಟು ಅವರ ಮೊಬೈಲ್ ನಲ್ಲಿ ಮೆಮೊರಿ ಇರೋದಿಲ್ವಾ? ಅಂತ ಪ್ರಶ್ನಿಸಿದರು.
ಇದನ್ನೂ ಓದಿ: ಶಾಸಕರ ಅಸಮಾಧಾನ ಶಮನಕ್ಕೆ ಅನುದಾನ ಬಿಡುಗಡೆ ಮಾಡಿದ ಸಿಎಂ; ಬಟ್ ಕಂಡಿಷನ್ಸ್ ಅಪ್ಲೈ
ಯಾವ ಸಚಿವರು ಹೀಗೆ ಮಾಡಬಾರದು ಎಂದು ಹೇಳುವ ಮೂಲಕ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ ಶಾಸಕ ಶಿವಗಂಗಾ, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಅಣ್ಣ. ಅವರ ಮೇಲೆ ಯಾವುದೇ ಬೇಸರ, ಮುನಿಸು ಇಲ್ಲ. ನಮ್ಮ ಉಸ್ತುವಾರಿ ಸಚಿವರು ಪೋನ್ ರಿಸೀವ್ ಮಾಡುತ್ತಾರೆ. ನಮ್ಮ ಸಚಿವರ ವಿರುದ್ಧ ದೂರು ಇಲ್ಲ, ಬೇರೆ ಸಚಿವರು ಹಾಗೇ ಮಾಡುತ್ತಾರೆ. ಇನ್ನು ಸ್ವಲ್ಪ ದಿನ ನೋಡುತ್ತೇನೆ, ಅಮೇಲೆ ನಿಮ್ಮ ಮುಂದೆ ಬರುತ್ತೇನೆ ಎಂದರು.
ಎಂಪಿ ರೇಣುಕಾಚಾರ್ಯ ಅವರು ಸಚಿವರನ್ನು ಭೇಟಿಯಾಗುತ್ತಿರುವುದು ಕೆಲವು ಕಾಂಗ್ರೆಸ್ ಶಾಸಕು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಗಂಗಾ, ರೇಣುಕಾಚಾರ್ಯ ಪ್ರಚಾರದ ರಾಜಕೀಯ ಮಾಡುತ್ತಾರೆ. ನಮ್ಮ ಸಚಿವರನ್ನು ಮಾತನಾಡಿಸಿಕೊಂಡು ಬರುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಕೆಲಸ ಇಲ್ಲ. ಅದ್ದರಿಂದ ಮನೆ ಕಾದು ಮಾತನಾಡಿಸಿಕೊಂಡು ಬರುತ್ತಾರೆ ಎಂದರು.
ಅಲ್ಲದೆ, ನಮಗೆ ಕ್ಷೇತ್ರದಲ್ಲಿ ಕೆಲಸವಿದ್ದು, ಕಾಯಲು ಸಮಯವಿಲ್ಲ. ರೇಣುಕಾಚಾರ್ಯ ಪ್ರಚಾರಕ್ಕಾಗಿ ನಮ್ಮ ನಾಯಕರನ್ನು ಭೇಟಿ ಮಾಡೋದು ಸರಿಯಲ್ಲ. ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದರೆ ನಾನೇ ಸ್ವಾಗತ ಮಾಡುತ್ತೇನೆ. ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತ ಮಾಡುತ್ತೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ