ತುಮಕೂರು: ಬಿಜೆಪಿ ಶಾಸಕರ ಮನೆಯಲ್ಲಿ (ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರನ ಮನೆಯಲ್ಲಿ) ಕೋಟಿ ಕೋಟಿ ಹಣ ಪತ್ತೆಯಾಗಿದೆ. ಅಮಾಯಕರ ಮೇಲೆ ದಾಳಿ ಮಾಡುವ ಇಡಿ, ಐಟಿ ಈಗ ಎಲ್ಲಿ ಹೋಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಪ್ರಶ್ನಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹೆದರಿಸಿ, ಬೆದರಿಸಿ ಆಳುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಒಂದಾದರೂ ನೀರಾವರಿ ಯೋಜನೆ ಜಾರಿಗೆ ತಂದಿದ್ದಾರಾ? ಹೇಮಾವತಿ ನೀರು ಹರಿಸಿದ್ದು ಪ್ರಧಾನಿ ನರೇಂದ್ರ ಮೋದಿನಾ? ಎಂದು ಪ್ರಶ್ನಿಸಿದರು.
ಇನ್ನು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನಾಟಕಕ್ಕೆ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ಮೇಲಿಂದ ಮೇಲೆ ಬರುತ್ತಿದ್ದಾರೆ. ಪಕ್ಷಗಳ ಸಭೆಗಳನ್ನು ನಡೆಸಿ ಸಂಘಟನೆ ಬಗ್ಗೆ ಚರ್ಚಿಸುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತಿದ್ದಾರೆ. ಈ ಬಗ್ಗೆ ಟೀಕಿಸಿದ ಖರ್ಗೆ, ಪಂಚಾಯಿತಿ ಚುನಾವಣೆಗೂ ಮೋದಿ, ಜಿಲ್ಲಾ ಪಂಚಾಯಿತಿ ಎಲೆಕ್ಷನ್ಗೂ ಮೋದಿ. ವಿಧಾನಸಭೆ, ಲೋಕಸಭೆ ಚುನಾವಣೆಗೂ ಮೋದಿ. ಏನ್ ಮೋದಿ ಬಂದು ಇಲ್ಲಿ ಆಳುತ್ತಾನಾ? ನರೇಂದ್ರ ಮೋದಿ ಶೇಕಡಾ 51ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಶೇ. 60.3ರಷ್ಟು ಜನರು ಪ್ರಧಾನಿ ಮೋದಿ ವಿರುದ್ಧ ಇದ್ದಾರೆ ಎಂದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅಧಿಕಾರದ ರಿಮೋಟ್ ಪರಿವಾರದ ಕೈಯಲ್ಲಿ; ಪ್ರಧಾನಿ ಮೋದಿ ವಾಗ್ದಾಳಿ
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ, ದೇಶಾದ್ಯಂತ 30 ಲಕ್ಷ ಹುದ್ದೆಗಳು ಖಾಲಿ ಇವೆ, ಕರ್ನಾಟಕದಲ್ಲೇ 3ಲಕ್ಷಕ್ಕೂ ಅಧಿಕ ಹುದ್ದೆಗಳು ಇವೆ. ಮೊದಲು ಇವುಗಳನ್ನು ಭರ್ತಿಗೊಳಿಸಿ ಎಂದರು. ನಮ್ಮ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿ ವಿಜಯ ಯಾತ್ರೆ ಆಗಬೇಕು. ಆಗ ಮಾತ್ರ ರಾಜ್ಯದಲ್ಲಿ ಸುಖ, ಶಾಂತಿ, ಅಭಿವೃದ್ಧಿ ಕೆಲಸ ಆಗುತ್ತದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ಎಲ್ಲರೂ ಪಣ ತೊಡಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ನೀವೆಲ್ಲರೂ ಒಗ್ಗಟ್ಟಾಗಬೇಕು. ಪ್ರತಿ ಮನೆಮನೆಗೂ ಹೋಗಿ ಬಿಜೆಪಿ ದುರಾಡಳಿತ ಬಗ್ಗೆ ತಿಳಿಸಬೇಕು ಎಂದರು.
ನಮ್ಮ ಕಾಲದಲ್ಲಿ ಪೆಟ್ರೋಲ್ ಬೆಲೆ 50, 60 ಇದ್ದಾಗ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿ ಊರು ತುಂಬ ತಿರುಗಾಡುತ್ತಿದ್ದಾರೆ. ಆದರೆ ಇವರ ಕಾಲದಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ? ಬಿಜೆಪಿ ಸಮಾಜದ ಬಡ ಜನರಿಗೆ ಏಟು ನೀಡುತ್ತಿದೆ, ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತಿದ್ದಾರೆ. ಅವರಿಗೆ ರಾಜ್ಯ ಉದ್ದಾರ, ಕಲ್ಯಾಣ ಬೇಕಗಿಲ್ಲಾ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರನ್ನು ಸಮಾನವಾಗಿ ನೋಡುವ ಪಕ್ಷ ಕಾಂಗ್ರೆಸ್. ಬಿಜೆಪಿಯವರು ಯಾವ ರೀತಿ ಪ್ರಜಾಪ್ರಭುತ್ವ ನಡೆಸುತ್ತಿದ್ದಾರೆ ಮತ್ತು ಸಂವಿಧಾನವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಗಮನಿಸಬೇಕು ಎಂದು ಖರ್ಗೆ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನನ್ನ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಸರ್ಕಾರಿ ಕಾರು, ಸರ್ಕಾರಿ ವಿಮಾನ ಬಳಸಿಕೊಂಡು ನಮ್ಮನ್ನು ಟೀಕಿಸಿದ್ದಾರೆ. ರಾಜ್ಯ ಸರ್ಕಾರದ 40% ಕಮಿಷನ್ ಬಗ್ಗೆ ಮೋದಿ, ಶಾ ಏನು ಹೇಳುತ್ತಾರೆ? ನಿಮ್ಮ ಪಕ್ಷದ ಸರ್ಕಾರದಲ್ಲೇ ಭ್ರಷ್ಟಾಚಾರವಿದ್ದರೂ ನೋಡುತ್ತಿಲ್ಲ ಯಾಕೆ? ನೀವು 40% ಹೊಡೆಯಿರಿ, ಮಿಕ್ಕಿದ್ದು ಪಾರ್ಟಿಗೆ ಕಳಿಸಿ ಎಂದು ಹೇಳುತ್ತಾರೆ. ಅಲ್ಲಿಗೆ 100% ಸರಿಯಾಯ್ತು, ಇದು ಬಿಜೆಪಿ ಆಡಳಿತದಲ್ಲಿ ಮಾತ್ರ ಸಾಧ್ಯ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಇಂತಹ ಪ್ರಧಾನಿಮಂತ್ರಿ ನೋಡೇ ಇಲ್ಲ. ಎಲ್ಲೇ ಹೋದರೂ ಕಾಂಗ್ರೆಸ್ ನಾಯಕರನ್ನು ಬಯ್ಯುವುದೇ ಇವರ ಕೆಲಸ. ಕಾಂಗ್ರೆಸ್ ನಾಯಕರನ್ನು ಬಯ್ಯುವುದಕ್ಕಾಗಿ ಮೋದಿ ಪ್ರಧಾನಿ ಆಗಿರುವುದಾ? ಎಂದು ಪ್ರಶ್ನಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Sun, 5 March 23