ಮಲ್ಲಿಕಾರ್ಜುನ ಖರ್ಗೆ ಅಧಿಕಾರದ ರಿಮೋಟ್ ಪರಿವಾರದ ಕೈಯಲ್ಲಿ; ಪ್ರಧಾನಿ ಮೋದಿ ವಾಗ್ದಾಳಿ
ಕಾಂಗ್ರೆಸ್ನಲ್ಲಿ ಒಂದು ಪರಿವಾರದ ವಿರುದ್ಧ ಹೋದರೆ ಅಪಮಾನ ಮಾಡುತ್ತಾರೆ. ಆ ಪಕ್ಷದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ಗೆ ಕಾಂಗ್ರೆಸ್ ಅಪಮಾನ ಮಾಡಿತ್ತು. ಈಗ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಳಗಾವಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ. ಆದರೆ, ಕರ್ನಾಟಕದವರನ್ನು ಅಪಮಾನಿಸುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿಬಿಟ್ಟಿದೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಅಧಿಕಾರವನ್ನು ಬೇಕಾದಂತೆ ನಡೆಸುವ ರಿಮೋಟ್ ಪರಿವಾರದ ಕೈಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವ್ಯಂಗ್ಯವಾಡಿದರು. ಇಲ್ಲಿನ ಮಾಲಿನಿ ಸಿಟಿ ಮೈದಾನದಲ್ಲಿ ಸೋಮವಾರ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ವಂಶಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಹಲವು ರಾಜ್ಯಗಳಲ್ಲಿ ಪರಿವಾರವಾದ (ವಂಶಾಡಳಿತ) ಇದೆ. ಕರ್ನಾಟಕದಲ್ಲಿಯೂ ಇದೆ. ಅದನ್ನು ನಿರ್ಮೂಲನೆ ಮಾಡಬೇಕಿದೆ ಎಂದು ಮೋದಿ ಕರೆ ನೀಡಿದರು.
ಕಾಂಗ್ರೆಸ್ನಲ್ಲಿ ಒಂದು ಪರಿವಾರದ ವಿರುದ್ಧ ಹೋದರೆ ಅಪಮಾನ ಮಾಡುತ್ತಾರೆ. ಆ ಪಕ್ಷದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ಗೆ ಕಾಂಗ್ರೆಸ್ ಅಪಮಾನ ಮಾಡಿತ್ತು. ಈಗ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ಆ ಪಕ್ಷದಲ್ಲಿ ಅಧ್ಯಕ್ಷರಿಗೇ ಗೌರವ ಇಲ್ಲ. ಇದೇ ಭೂಮಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಗೌರವಿಸುತ್ತೇನೆ ಎಂದು ಮೋದಿ ಹೇಳಿದರು.
ಖರ್ಗೆ ಸ್ಥಿತಿ ನೋಡಿ ಬೇಸರವಾಯ್ತೆಂದ ಮೋದಿ
ನನಗೆ ಕೆಲ ದಿನಗಳ ಹಿಂದೆ ಖರ್ಗೆ ಅವರ ಪರಿಸ್ಥಿತಿ ನೋಡಿ ಬೇಸರವಾಯಿತು. ಛತ್ತೀಸ್‌ಗಢದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಖರ್ಗೆಗೆ ಅಪಮಾನ ಮಾಡಲಾಯಿತು. ಕಾಂಗ್ರೆಸ್ ಅಧಿವೇಶನ ವೇಳೆ ಬಿಸಿಲು ಇತ್ತು. ಅಲ್ಲಿ ಖರ್ಗೆಗೆ ಕೊಡೆ ಹಿಡಿಯುವ ಬದಲು ಬೇರೆಯವರಿಗೆ ಕೊಡೆ ಹಿಡಿಯಲಾಗಿತ್ತು. ಎಐಸಿಸಿ ಅಧ್ಯಕ್ಷರಿಗೇ ಸೂಕ್ತ ನೆರಳಿನ ವ್ಯವಸ್ಥೆ ಮಾಡಿರಲಿಲ್ಲ. ಆದರೆ, ಬೇರೊಬ್ಬ ನಾಯಕರಿಗೆ ಕೊಡೆ ಹಿಡಿಯಲಾಗಿತ್ತು. ಇದು ಅಧ್ಯಕ್ಷರಿಗೆ ಕಾಂಗ್ರೆಸ್ ನೀಡುವ ಗೌರವ. ಮಲ್ಲಿಕಾರ್ಜುನ ಖರ್ಗೆ ಹೆಸರಿಗೆ ಮಾತ್ರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅಧಿಕಾರದ ರಿಮೋಟ್ ಪರಿವಾರದ ಕೈಯಲ್ಲಿದೆ. ಇದನ್ನು ಮುಕ್ತ ಮಾಡಬೇಕಾಗಿರುವುದು ನಮ್ಮ ಗುರಿ ಎಂದು ಮೋದಿ ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡುಗಡೆಯಾದ ಹಣ ಫಲಾನುಭವಿಗೆ ತಲುಪುತ್ತಿರಲಿಲ್ಲ; ಮೋದಿ ವಾಗ್ದಾಳಿ
ನನ್ನ ಸಾವಿಗೆ ಕಾಯುತ್ತಿದ್ದಾರೆ; ಮೋದಿ
ಕಾಂಗ್ರೆಸ್ ಪಕ್ಷದ ನಾಯಕರಿಗೆ ಎಷ್ಟು ನಿರಾಶೆ ಆಗಿದೆ ಅಂದರೆ, ಮೋದಿ ಬದುಕಿರುವವರೆಗೆ ಏನೂ ಮಾಡಲು ಆಗಲ್ಲವೆಂದು ಗೊತ್ತಾಗಿದೆ. ಮೋದಿ ಸಾಯಲಿ, ಮೋದಿ ಸಾಯಲಿ ಎಂದು ಬಯಸುತ್ತಿದ್ದಾರೆ. ನನಗೆ ಗುಂಡಿ ತೋಡುವುದರಲ್ಲಿ ಕೆಲವರು ವ್ಯಸ್ತರಾಗಿದ್ದಾರೆ. ಕೆಲವರು, ‘ನಿಮ್ಮ ಶವ ಹೂಳಲು ಗುಂಡಿ ತೆಗೆಯುತ್ತಿದ್ದೇವೆ’ ಅಂತಿದ್ದಾರೆ. ಆದರೆ ದೇಶ ಜನ ಹೇಳುತ್ತಿದ್ದಾರೆ ನಿಮ್ಮ ಕಮಲ ಅರಳುತ್ತಿದೆ ಎಂಬುದಾಗಿ. ಸತ್ಯದ ಹಾದಿಯಲ್ಲಿ ಕೆಲಸ ಮಾಡಿದಾಗ ಯಾವುದೇ ತೊಂದರೆ ಆಗಲ್ಲ. ನೀವು ನೀಡಿದ ಪ್ರೀತಿ ವಿಶ್ವಾಸವನ್ನು ಬಡ್ಡಿ ಸಮೇತ ಹಿಂದಿರುಗಿಸುವೆ. ಅಭಿವೃದ್ಧಿ ಮಾಡಿ ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ ಎಂದು ಮೋದಿ ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ