ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವಂತಹ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಮೂಲಕ ಕಾಂಡೋಮ್ ವಿತರಣೆಯಲ್ಲಿ 463 ಕೋಟಿ ರೂಪಾಯಿಗಳ ಹಗರಣ (Scam in condom distribution) ನಡೆದಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ (N.R.Ramesh) ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿದರು. ದೊಡ್ಡದೊಡ್ಡ ಕಾಮಗಾರಿಗಳಲ್ಲಿ ಭಾರೀ ಹಗರಣಗಳು ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ನಡೆದಿರುವುದು ಸಾಮಾನ್ಯವಾಗಿದೆ. ಕಾಂಡೋಮ್ ಹಗರಣ ಸಂಬಂಧ ಎನ್ಸಿಬಿ, ಲೋಕಾಯುಕ್ತ, ಸಿಬಿಐ ಮತ್ತು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಪ್ರಕರಣ ಈಗಾಗಲೇ ದಾಖಲಾಗಿದೆ ಎಂದರು.
ಸ್ವಾತಂತ್ರ್ಯ ನಂತರದ ಭಾರತದ 75 ವರ್ಷಗಳ ಇತಿಹಾಸದಲ್ಲಿ ಕರ್ನಾಟಕ ರಾಜ್ಯದ ಯಾವ ಒಂದು ಸರ್ಕಾರವೂ ಮಾಡದಿರುವಂತಹ ಸಣ್ಣಸಣ್ಣ ವಿಚಾರಗಳಲ್ಲೂ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ. ಈಗಾಗಲೇ ಹಾಸಿಗೆ ದಿಂಬು ಪ್ರಕರಣ, ಇಂದಿರಾ ಕ್ಯಾಂಟಿನ್ ಗ್ರಾಹಕರ ಸಂಖ್ಯೆಯಲ್ಲಿ ಮಾಡಿರುವಂತಹ ಬೃಹತ್ ಹಗರಣ, ಅದೆಲ್ಲದಕ್ಕಿಂತಲೂ ಅಸಹ್ಯವಾಗಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವಂತಹ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಮೂಲಕ ಕಾಂಡೋಮ್ ವಿತರಣೆಯಲ್ಲಿ 463 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ದಾಖಲೆ ಸಹಿತ ಆರೋಪ ಮಾಡಿದರು.
2013ರಿಂದ 2018ರವರೆಗಿನ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದಂತಹ ಸಿದ್ದರಾಮಯ್ಯ ಅವರ ಅಧಿಕೃತ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮಾತ್ರ ನಡೆದಿರುವಂತಹ 200 ಕೋಟಿ ರೂಪಾಯಿ ಮೊತ್ತದ ಬೃಹತ್ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಅಲ್ಲದೆ, ಪ್ರತಿ ವರ್ಷ ಬರುವ ಎಲ್ಲಾ ರಜೆಗಳು ಒಳಗೊಂಡಂತೆ 5 ವರ್ಷಗಳಲ್ಲಿ ಸಿಎಂ ಕಚೇರಿಗೆ ಬರುವ ಅತಿಥಿಗಳ ಉಪಚಾರಕ್ಕಾಗಿ 200 ಕೋಟಿಗೂ ಅಧಿಕ ಮೊತ್ತದ ಲೂಟಿ ಮಾಡಲಾಗಿದೆ ಎಂದು ರಮೇಶ್ ಆರೋಪಿಸಿದರು.
ಇದನ್ನೂ ಓದಿ: Bengaluru-Mysuru Expressway: ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು: ಸಿದ್ದರಾಮಯ್ಯ
ವರ್ಷಕ್ಕೆ 52 ಭಾನುವಾರ, 12 2ನೇ ಶನಿವಾರಗಳು, 23-24 ರಾಜ್ಯ ಮತ್ತು ಕೇಂದ್ರ ಸರ್ಕಾರದ ರಜಾ ದಿನಗಳ ಬರುತ್ತವೆ. ಐದು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಮತ್ತು ಅವರ ಕಚೇರಿಯ ಅಧಿಕಾರಿಗಳು ವರ್ಷಕ್ಕೆ 82 ರಜಾ ದಿನಗಳಂತೆ 5 ವರ್ಷದಲ್ಲಿ 410 ರಜಾ ದಿನಗಳು ಒಳಗೊಂಡಂತೆ 1825 ದಿನಗಳೂ ಸಭೆ ಮಾಡಿ ಅತಿಥಿ ಗಣ್ಯರಿಗೆ ಉಪಚಾರ, ಕಾಫಿ ಟೀ, ಬಿಸ್ಕತ್ತು, ಸ್ನಾಕ್ಸ್ ಪೂರೈಕೆ ಮಾಡಿದ್ದಾರೆ ಅಂತ ಭಾವಿಸಿದರು ಕೂಡ ಒಂದು ದಿನಕ್ಕೆ 11 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ. ಆದರೆ ಈ 410 ಅಧಿಕೃತ ರಜಾ ದಿನಗಳನ್ನು ನಾವು ಪರಿಗಣಿಸಿ ಲೆಕ್ಕ ಹಾಕುವುದಾದರೆ ಪ್ರತಿದಿನ 14 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಎನ್.ಆರ್.ರಮೇಶ್ ಅವರು ಕಾಂಡೋಮ್ ಹಗರಣದ ಬಗ್ಗೆ ಇದೇ ಮೊದಲ ಬಾರಿ ಆರೋಪಿಸಿದ್ದಲ್ಲ. ಸಿದ್ದರಾಮಯ್ಯ ಅವರ ಸರ್ಕಾರದ ಪೂರ್ಣಾವಧಿಯಲ್ಲಿ ಯುಟಿ ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗ 2016ರಲ್ಲಿ ರಮೇಶ್ ಅವರು ಈ ಆರೋಪವನ್ನು ಮಾಡಿದ್ದರು. ಕಾಂಡೋಮ್ ವಿತರಣೆಗಾಗಿ ಮೀಸಲಿಟ್ಟ ಹಣದಲ್ಲಿ 500 ಕೋಟಿ ರೂಪಾಯಿಗಳು ದುರುಪಯೋಗವಾಗಿದೆ ಎಂದು ದಾಖಲೆ ಸಹಿತ ಆರೋಪಿಸಿದ್ದರು. ಏಡ್ಸ್ ನಿಯಂತ್ರಣ ಸೊಸೈಟಿಯ ಅಧ್ಯಕ್ಷ ಸಿಎಂ ಹಾಗೂ ಉಪಾಧ್ಯಕ್ಷ ಆರೋಗ್ಯ ಸಚಿವರಾಗಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 pm, Mon, 6 March 23