ಬೆಂಗಳೂರು, ಜ.05: 16ನೇ ಹಣಕಾಸು ಆಯೋಗ ರಚಿಸಲು ಕೇಂದ್ರ ಅಧಿಸೂಚನೆ ಹೊರಡಿಸಿದೆ. ಈ ಹಿನ್ನಲೆ ಹಣಕಾಸು ಆಯೋಗದ ಮುಂದೆ ಏನು ವಾದ ಮಂಡಿಸಬೇಕೆಂದು ಚರ್ಚೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ(Krishna Byre Gowda) ಹೇಳಿದ್ದಾರೆ. ವಿಧಾನಸೌಧದಲ್ಲಿ ಸಂಪುಟ ಸಭೆ(Cabinet Meeting) ನಂತರ ಮಾತನಾಡಿದ ಅವರು ‘ರಾಜ್ಯದ ಪರ ಸಮರ್ಥ ವಾದ ಮಂಡನೆಗೆ ಸಲಹಾ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ. 4 ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆ. ಆದರೆ, ಅದರಲ್ಲಿ ರಾಜ್ಯಕ್ಕೆ 60-70 ಸಾವಿರ ಕೋಟಿ ಮಾತ್ರ ಬರುತ್ತಿದೆ. ಒಂದು ವರ್ಷಕ್ಕೆ 14 ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಪಾಲು ಕುಂಟಿತ ಆಗಿದ್ದು, 5 ವರ್ಷದಲ್ಲಿ 62 ಸಾವಿರ ಕೋಟಿ ನಷ್ಟ ಉಂಟಾಗುತ್ತದೆ ಎಂದರು.
ಕರ್ನಾಟಕದಿಂದ ಐಟಿ-ಬಿಟಿ ಸರ್ವಿಸ್ನಿಂದಲೇ ಬರೊಬ್ಬರಿ 3.5 ಲಕ್ಷ ಕೋಟಿ ಡಾಲರ್ ವರಮಾನ ರಫ್ತಾಗುತ್ತಿದೆ. ಆದರೆ, ಈ ದೊಡ್ಡ ಪಾಲಿನಲ್ಲಿ ಸರ್ಕಾರಕ್ಕೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂಬುದು ನಮ್ಮ ವಾದ. 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ತೆರಿಗೆಯಲ್ಲಿ ಶೇ.4.71ರಷ್ಟು ಕೊಡುತ್ತಿದ್ರು, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇಕಡಾ 3.4ಕ್ಕೆ ಇಳಿಕೆಯಾಗಿದೆ. ಅಂದರೆ, 100 ರೂ.ನಲ್ಲಿ 12 ರೂ. ನಷ್ಟು ಮಾತ್ರ ನಮ್ಮ ರಾಜ್ಯಕ್ಕೆ ವಾಪಸ್ ಬರುತ್ತಿದೆ ಎಂದು ಹೇಳಿದರು.
15 ನೇ ಹಣಕಾಸು ಆಯೋಗದ ಶಿಫಾರಸು
ಪ್ರತಿ ವರ್ಷ 30% ಪ್ರತಿಶತ ರಾಜ್ಯಕ್ಕೆ ಬರಬೇಕಾದ ಪಾಲು ಕಡಿತ ಆಗುತ್ತಿದೆ. ತೆರಿಗೆ ಎನ್ನುವ ಬದಲು ಸೆಸ್, ಕರ ಎಂದು ಹೆಸರು ಬದಲಾಯಿಸಿ ಸಂಗ್ರಹ ಮಾಡಲಾಗುತ್ತಿದೆ. ಹಾಲಿ ಬಿಜೆಪಿ ಸರ್ಕಾರ ಬರುವ ಮೊದಲು ಸೆಸ್ ರ್ಚಾರ್ಜ್ 8 ರಿಂದ 9 ಪ್ರತಿಶತ ಇರುತ್ತಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ 23% ಸೆಸ್ ರ್ಚಾರ್ಜ್ ಆಗಿದೆ. 5 ರಿಂದ 6 ಲಕ್ಷ ಕೋಟಿ ಸೆಸ್ ರ್ಚಾರ್ಜ್ ಮೂಲಕ ಕೇಂದ್ರ ಆದಾಯ ಮಾಡುತ್ತಿದೆ. ಇದರಿಂದ ರಾಜ್ಯಕ್ಕೆ ನಮಗೆ ಸಿಗುವ ಪ್ರಮಾಣ ಕಡಿಮೆ ಆಗುತ್ತಿದೆ. ಜನರಿಗೆ ಇದರಿಂದೇನೂ ಹೊರೆ ಕಡಿಮೆ ಆಗುತ್ತಿಲ್ಲ. ಕರ್ನಾಟಕ ಒಂದು ರಾಜ್ಯಕ್ಕೆ 8200 ಕೋಟಿ ರೂ. ಸೆಸ್ನಿಂದಲೇ ನಷ್ಟ ಆಗುತ್ತಿದ್ದು, ತೆರಿಗೆಯನ್ನು ಕರವಾಗಿ ಪರಿವರ್ತನೆ ಮಾಡಿ ರಾಜ್ಯದ ಆದಾಯ ಖೋತಾ ಮಾಡಲಾಗಿದೆ ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.
ಇನ್ನು ರಚನೆ ಮಾಡುವ ಸಲಹಾ ಸಮಿತಿಯಲ್ಲಿ ಹಣಕಾಸು ತಜ್ಞರಾದ ಗೋವಿಂದ ರಾವ್, ಶ್ರೀನಿವಾಸ್ ಮೂರ್ತಿ ಮತ್ತು ನರೇಂದ್ರ ಪಾಣಿ ಸೇರಿ ತಜ್ಞರ ಸಲಹಾ ಸಮಿತಿ ಮಾಡುತ್ತೇವೆ. ಹಣಕಾಸು ಆಯೋಗದ ಮುಂದೆ ಏನು ವಾದ ಮಾಡಬೇಕು ಎಂಬ ಬಗ್ಗೆ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ ಎಂದರು.
ಸಂಪುಟ ಸಭೆ ನಂತರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ ‘ ಸಂಪುಟ ಸಭೆಯಲ್ಲಿ 14ನೇ ಹಣಕಾಸು ಆಯೋಗ ಹಾಗೂ 15ನೇ ಹಣಕಾಸು ಆಯೋಗದಿಂದ ಬಿಡುಗಡೆ ಆಗಬೇಕಿದ್ದ ಅನುದಾನದ ಬಗ್ಗೆ ಚರ್ಚೆಯಾಗಿದೆ. ನೈತಿಕ ಹಕ್ಕು ಪ್ರಕಾರ ಕರ್ನಾಟಕಕ್ಕೆ ಸಿಗಬೇಕಾಗಿದ್ದ ಆರ್ಥಿಕ ಸಹಾಯ ಸಿಗುತ್ತಿಲ್ಲ. 14 ಮತ್ತು 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆರ್ಥಿಕ ಆಘಾತವಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Fri, 5 January 24