ಪಕ್ಷ ವಿರೋಧಿ ಚಟುವಟಿಕೆ; ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ 6 ವರ್ಷಗಳ ಅವಧಿಗೆ ಬಿಜೆಪಿಯಿಂದ ಉಚ್ಛಾಟನೆ

|

Updated on: Apr 19, 2023 | 6:37 PM

ಲಂಚ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಆರು ವರ್ಷಗಳ ಅವಧಿಗೆ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ; ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ 6 ವರ್ಷಗಳ ಅವಧಿಗೆ ಬಿಜೆಪಿಯಿಂದ ಉಚ್ಛಾಟನೆ
ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ
Follow us on

ದಾವಣಗೆರೆ: ಲಂಚ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ (Madal Mallikarjun) ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಆರು ವರ್ಷಗಳ ಅವಧಿಗೆ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಈ ವಿಚಾರವಾಗಿ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಣಗವಾಡಿ ವೀರೇಶ್ ಮಾಹಿತಿ ನೀಡಿದ್ದಾರೆ. ಮಾಡಾಳ್ ಮಲ್ಲಿಕಾರ್ಜುನ ಈಗಾಗಲೇ ಸ್ವಾಭಿಮಾನಿ ಹೆಸರಿನಲ್ಲಿ ಸಭೆ‌ ನಡೆಸಿದ್ದು ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಪರಿಗಣಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ಶಿಸ್ತು ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದು ವೀರೇಶ್ ಮಾಹಿತಿ ನೀಡಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಏಪ್ರಿಲ್ 16ರಂದು ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿ ನಡೆದ ಅಭಿಮಾನಿಗಳ ಸ್ವಾಭಿಮಾನದ ಸಂಕಲ್ಪ ಸಭೆಯಲ್ಲಿ ಮಲ್ಲಿಕಾರ್ಜುನ ತೀರ್ಮಾನಿಸಿದ್ದರು. ಬಳಿಕ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದೆ. ನಮ್ಮ ಕೆಲ ಬೆಂಬಲಿಗರು ಆತ್ಮಹತ್ಯೆಗೆ ಯತ್ನಿಸಿದ್ದರು. ಅಭಿಮಾನಿಗಳ ಒತ್ತಡ ಹೆಚ್ಚಾಗಿದೆ‌. ಕೆಲವರು ವಿಷ ಕುಡಿಯಲು ಹೋಗಿದ್ದರು. ಇದೇ ಕಾರಣಕ್ಕೆ ನಾನು ಸ್ಪರ್ಧೆಗೆ ಮುಂದಾಗಿದ್ದೇನೆ. ಜಾಮೀನನ ಮೇಲೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಿಡುಗಡೆಯಾದ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದರು.

ಇದನ್ನೂ ಓದಿ: ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಚನ್ನಗಿರಿ ಕಣಕ್ಕೆ: ಬೆಂಬಲಿಗರ ಸಭೆಯಲ್ಲಿ ತೀರ್ಮಾನ

ಏಪ್ರಿಲ್ 15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಮಾಡಾಳ್ ವಿರೂಪಾಕ್ಷಪ್ಪ ಬಿಡುಗಡೆಯಾಗಿದ್ದರು. ಬಳಿಕ ಪ್ರತಿಕ್ರಿಯೆ ನೀಡಿದ್ದ ಮಾಡಾಳ್ ವಿರೂಪಾಕ್ಷಪ್ಪ, ಭಾರತದ ನ್ಯಾಯಾಂಗದ ಬಗ್ಗೆ ನನಗೆ ವಿಶ್ವಾಸದೆ. ಈ ಆರೋಪದಿಂದ ನಾನು ಮುಕ್ತನಾಗುತ್ತೇನೆ. ನಾಲ್ಕು ಗೋಡೆಗಳ ಮಧ್ಯೆ ನಾನಿದ್ದೆ. ಯಾವುದೇ ಟಿವಿ ಮಾಧ್ಯಮಗಳು ಅಲ್ಲಿಲ್ಲ. ಮನೆಗೆ ಹೋದ ಮೇಲೆ ಮಾಧ್ಯಮಗಳನ್ನು ನೋಡಿದ ಮೇಲೆ ರಾಜಕೀಯ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಈಗ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿಲ್ಲ. ಹೊರಗಡೆ ಏನು ನಡೆದಿದೆ ಎಂಬುದರ ಅರಿವಿಲ್ಲ. ಮನೆಗೆ ಹೋಗಿ ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದರು.

ಮತ್ತಷ್ಟು ಕರ್ನಾಟಕ ವಿಧಾನಸಭೆ ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ