ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ (BJP) ಹೀನಾಯ ಸೋಲಿನ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಪರಾಮರ್ಶೆಗಳು ನಡೆಯುತ್ತಿವೆ. ಸೋಲಿಗೆ ಪಕ್ಷದ ಕೆಲವು ಹಿರಿಯ ನಾಯಕರೇ ಕಾರಣ ಎಂಬ ಆರೋಪಗಳೂ ಈಗಾಗಲೇ ಹಲವು ಕಡೆ ಕೇಳಿಬಂದಿದೆ. ಹಲವೆಡೆ ಕಾರ್ಯಕರ್ತರು ಹಾಗೂ ನಾಯಕರ ಮಧ್ಯೆ ಜಟಾಪಟಿಯೂ ನಡೆದಿದೆ. ಈ ಮಧ್ಯೆ, ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಬೇಕೆಂದಾದರೆ ನೀವೆಲ್ಲ ಯಾಕೆ ಬೇಕು ಎಂದು ಬಿಜೆಪಿ ಮುಖಂಡ ಮಾಲಿಕಯ್ಯ ಗುತ್ತೇದಾರ್ (Malikayya Guttedar) ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲೇ ಗುತ್ತೇದಾರ್ ಅವರು ಆಕ್ರೋಶ ಹೊರಹಾಕಿದ್ದಾರೆ.
ರಾಯಚೂರಿನಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿದ್ದು, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ಇದೇ ವೇಳೆ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಗುತ್ತೇದಾರ್, ನಮ್ಮ ಸರ್ಕಾರಕ್ಕೆ ಜಂಭ ಬಂದಿತ್ತು. ನಮ್ಮ ಸರ್ಕಾರ ಆಕಾಶದಲ್ಲಿತ್ತು ಎಂದು ಟೀಕಿಸಿದ್ದಾರೆ.
ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ತಲುಪಿಸಬೇಕಿತ್ತು. ಚುನಾವಣೆಯಲ್ಲಿ ಎಲ್ಲಾ ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನ ಹೇಳುತ್ತಿದ್ದರು. ಏನಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವೋಟ್ ಪಡೆಯಬೇಕು. ರಾಜ್ಯದಲ್ಲಿ ನರೇಂದ್ರ ಮೋದಿಯವರು 35 ರ‍್ಯಾಲಿ ಮಾಡಬೇಕು ಎಂಬ ಧೋರಣೆ ಇತ್ತು. ಹಾಗಾದ್ರೆ ನೀವ್ಯಾಕೆ ಇದ್ದೀರಪ್ಪಾ? ಎಂದು ಗುತ್ತೇದಾರ್ ವಾಗ್ದಾಳಿ ನಡೆಸಿದರು.
ಇಂತಹ ಪರಿಸ್ಥಿತಿ ಬಿಜೆಪಿಗೆ ಬಂದಿರುವುದರಿಂದ ಬಹಳ ನೋವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಒಳ್ಳೆ ಆಡಳಿತ ನಡೆಸುತ್ತಿದ್ದರು. ಸುಮ್ಮನೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಯಡಿಯೂರಪ್ಪ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂದು ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.
ಇದನ್ನೂ ಓದಿ: Bengaluru News: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್
ಈ ಮಧ್ಯೆ, ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರಾದ ಸಿದ್ದಮರಿಗೌಡ, ರಮೇಶ್ ನಡುವೆ ಗಲಾಟೆ ನಡೆದಿದೆ. ವಿಧಾನಸಭೆ ಚುನಾವಣೆ ವಿಚಾರವಾಗಿ ಕಾರ್ಯಕರ್ತರ ನಡುವೆ ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ ಮುಂದೆಯೇ ಗಲಾಟೆ ನಡೆದಿದೆ. ಬಳಿಕ ಇಬ್ಬರು ಕಾರ್ಯಕರ್ತರನ್ನೂ ಅಶ್ವಥ್ ನಾರಾಯಣ ಸಮಾಧಾನಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ