ಬೆಂಗಳೂರು: ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳನ್ನು (Congress Guarantees) ಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ (Congress) ಮಾತು ತಪ್ಪಿದ ಹಿನ್ನೆಲೆ ಜನಾಕ್ರೋಶ ವ್ಯಕ್ತವಾಗಲು ಆರಂಭವಾಗಿದೆ. ಹೀಗಾಗಿ ಸಾಂಕೇತಿಕವಾಗಿ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಲು ಕಾಂಗ್ರೆಸ್ ಮುಂದಾಗಿದೆ. ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಹಲವು ಗಣ್ಯರ ಸಮ್ಮುಖದಲ್ಲಿ ಗ್ಯಾರಂಟಿಗಳಿಗೆ ಸಾಂಕೇತಿವಾಗಿ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಅರಮನೆ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸುವ ಕಾರ್ಯಕ್ರಮಕ್ಕೆ 50,000ಕ್ಕೂ ಹೆಚ್ಚು ಜನರನ್ನು ಸೇರಿಸುವ ಚಿಂತನೆ ನಡೆಸಲಾಗಿದೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಆಹ್ವಾನ ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ಸದ್ಯ ಮಳೆಗಾಲ ಹಿನ್ನೆಲೆ ಪರಿಸ್ಥಿತಿ ನೋಡಿಕೊಂಡು ಕಾರ್ಯಕ್ರಮಕ್ಕೆ ಸೂಕ್ತ ದಿನಾಂಕ ನಿಗದಿ ಮಾಡಲು ಚಿಂತಿಸಲಾಗುತ್ತಿದ್ದು, ಜೂನ್ ಮೊದಲ ವಾರ ಅಥವಾ 2ನೇ ವಾರದಲ್ಲಿ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ. ಬಜೆಟ್ ಬಳಿಕ ಪೂರ್ಣ ಪ್ರಮಾಣದಲ್ಲಿ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: PM Modi in Ajmer: ಕಾಂಗ್ರೆಸ್ ‘ಗ್ಯಾರಂಟಿ’ ದಶಕಗಳಷ್ಟು ಹಳೆಯದು, ಗರೀಬಿ ಹಟಾವೋ ದೊಡ್ಡ ಸುಳ್ಳು: ಮೋದಿ
5 ಗ್ಯಾರಂಟಿಗಳನ್ನೂ ಜಾರಿ ಮಾಡೋದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುತ್ತಿದ್ದರೂ ಗ್ಯಾರಂಟಿ ಜಾರಿಗೆ ಅನುದಾನ ಹೊಂದಿಸುವುದು ಸದ್ಯಕ್ಕೆ ಕಷ್ಟ ಎಂದು ಹಣಕಾಸು ಅಧಿಕಾರಿಗಳು ಹೇಳುತ್ತಿದ್ದಾರೆ. ಅದಾಗ್ಯೂ, ಗ್ಯಾರಂಟಿ ಜಾರಿ ಮಾಡಲು ಸಿಎಂ ನೇತೃತ್ವದ ಸಭೆಯಲ್ಲಿ ಸಚಿವರು ಪಟ್ಟು ಹಿಡಿದಿದ್ದು, ಹಣಕಾಸು ಇಲಾಖೆ ಅಧಿಕಾರಿಗಳು ಒಂದು ದಿನ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಗುರುವಾರ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.
ಸಿಎಂ ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸುವ ಮುನ್ನ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸುವ ನಿರೀಕ್ಷೆ ಇದೆ. ಈಗಾಗಲೇ ಅಧಿಕಾರಿಗಳ ಜತೆ ಸಿಎಂ ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಯಾವುದೇ ಷರತ್ತುಗಳಿಲ್ಲದೆ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸರ್ಕಾರ ಘೋಷಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈಗಾಗಲೇ ಸುಳಿವು ನೀಡಿದ್ದಾರೆ.
ಏತನ್ಮಧ್ಯೆ, ಯೋಜನೆಗಳ ಅನುಷ್ಠಾನ ವಿಳಂಬದ ಬಗ್ಗೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಪ್ರಶ್ನಿಸುತ್ತಿವೆ. ಇನ್ನೊಂದೆಡೆ, ರಾಜ್ಯ ಸರ್ಕಾರದಿಂದ 5 ಗ್ಯಾರಂಟಿಗಳ ಜಾರಿ ವಿಚಾರವಾಗಿ ಗೊಂದಲಕಾರಿ ಹೇಳಿಕೆ ನೀಡದಂತೆ ಸಭೆಯಲ್ಲಿ ಸಚಿವರಿಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಅನಗತ್ಯ ಹೇಳಿಕೆಗಳಿಂದ ಗೊಂದಲ ಮೂಡುತ್ತಿದೆ. ಯಾವ ಸಚಿವರೂ ಅನಗತ್ಯವಾಗಿ ಹೇಳಿಕೆ ನೀಡಬೇಡಿ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ 5 ಪ್ರಮುಖ ಗ್ಯಾರಂಟಿಗಳ ಕುರಿತು ಮಹತ್ವದ ಸಭೆ ನಡೆಸಲಾಗಿದ್ದು, ಇದಕ್ಕಾಗಿ ಒಂದು ವ್ಯವಸ್ಥೆ ಜಾರಿಗೆ ತರುವ ಸಂಬಂಧ ಚರ್ಚಿಸಲಾಗಿದೆ. ಆರ್ಥಿಕ ಇಲಾಖೆಗಳು ನಮಗೆ ಆಯ್ಕೆಗಳನ್ನು ನೀಡಿದ್ದು, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಶುಕ್ರವಾರ ಕ್ಯಾಬಿನೆಟ್ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಸಲಾಗುವುದು. ಗ್ಯಾರಂಟಿಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಾರ್ವಜನಿಕರು ಯಾವುದೇ ಗಾಳಿಸುದ್ದಿಗಳಿಗೆ ಕಿವಿಕೊಡದಂತೆ ನಾನು ಮನವಿ ಮಾಡುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Wed, 31 May 23