ಆರ್‌ಎಸ್‌ಎಸ್‌ ಕಾರ್ಯಕರ್ತನಿಗೆ ತಲೆಬಾಗಿ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ

|

Updated on: Mar 12, 2023 | 10:56 PM

ಆರ್‌ಎಸ್‌ಎಸ್‌ ಕಾರ್ಯಕರ್ತನಿಗೆ ಪ್ರಧಾನಿ ಮೋದಿ ನರೇಂದ್ರ ತಲೆಬಾಗಿ ನಮಸ್ಕರಿಸಿರುವಂತಹ ಘಟನೆ ಧಾರವಾಡ ಐಐಟಿ ಕ್ಯಾಂಪಸ್‌ ಉದ್ಘಾಟನಾ ವೇದಿಕೆಗೆ ತೆರಳುವಾಗ ಕಂಡುಬಂದಿದೆ.

ಧಾರವಾಡ: ಆರ್‌ಎಸ್‌ಎಸ್‌ ಕಾರ್ಯಕರ್ತನಿಗೆ ಪ್ರಧಾನಿ ಮೋದಿ ನರೇಂದ್ರ (Naredra Modi) ತಲೆಬಾಗಿ ನಮಸ್ಕರಿಸಿರುವಂತಹ ಘಟನೆ ಧಾರವಾಡ ಐಐಟಿ ಕ್ಯಾಂಪಸ್‌ ಉದ್ಘಾಟನಾ ವೇದಿಕೆಗೆ ತೆರಳುವಾಗ ಕಂಡುಬಂದಿದೆ. ಹುಬ್ಬಳ್ಳಿ ಮೂಲದ ಚೇತನ್ ರಾವ್‌ಗೆ ತಲೆಬಾಗಿ ಮೋದಿ ನಮಸ್ಕರಿಸಿದ್ದಾರೆ. ವೇದಿಕೆಗೆ ತೆರಳುವ ಮುಂಚೆ ಕೆಲವು ಪ್ರತಿನಿಧಿಗಳಿಂದ ಮೋದಿಯನ್ನು ಸ್ವಾಗತ ಮಾಡಲಾಯಿತು. ಮೋದಿ ಕಾಲಿಗೆ ನಮಸ್ಕರಿಸಲು RSS ಕಾರ್ಯಕರ್ತರು ಮುಂದಾಗಿದ್ದಾರೆ. ಈ ವೇಳೆ ಸಂಪೂರ್ಣ ಬಾಗಿ ಪ್ರತಿ ನಮಸ್ಕಾರ ಮಾಡಿದ್ದಾರೆ. ಮೋದಿ  ಇಂದು ಧಾರವಾಡದ ಐಐಟಿ ಕ್ಯಾಂಪಸ್​ ಮತ್ತು ಸಿದ್ದರೂಡ ಸ್ವಾಮೀಜಿ ರೈಲು ಪ್ಲಾಟ್‌ಫಾರ್ಮ್ ಸೇರಿದಂತೆ ಹಲವು ಯೋಜನೆ ಉದ್ಘಾಟನೆ ಮಾಡಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯು ಗುಣಮಟ್ಟದ ಶಿಕ್ಷಣ ಪಡೆಯಬೇಕು: ಪ್ರಧಾನಿ ಮೋದಿ

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ವಿದ್ಯಾರ್ಥಿಯು ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು. ಧಾರವಾಡದಲ್ಲಿರುವ ಐಐಟಿಯ ಹೊಸ ಕ್ಯಾಂಪಸ್ ಗುಣಮಟ್ಟದ ಶಿಕ್ಷಣವನ್ನು ಸುಗಮಗೊಳಿಸುತ್ತದೆ. ಇದು ಉತ್ತಮ ನಾಳೆಗಾಗಿ ಯುವ ಮನಸ್ಸುಗಳನ್ನು ಪೋಷಿಸುತ್ತದೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ಸಿಗಬೇಕು. ಕಳೆದ ಒಂಬತ್ತು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: IIT Dharwad Inauguration: ಪ್ರತಿಯೊಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು: ನರೇಂದ್ರ ಮೋದಿ

ನಾವು ಏಮ್ಸ್ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಏಳು ದಶಕಗಳಲ್ಲಿ, ದೇಶವು ಕೇವಲ 380 ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಕಳೆದ 9 ವರ್ಷಗಳಲ್ಲಿ 250 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ ಎಂದು ಪ್ರಧಾನಿ ಹೇಳಿದರು.

ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ: ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲೇ ಇಷ್ಟು ದೊಡ್ಡ ಕಾರ್ಯಕ್ರಮ ನೋಡಿಲ್ಲ. ನರೇಂದ್ರ ಮೋದಿ ದೂರದೃಷ್ಟಿಯುಳ್ಳ ನಾಯಕರು. ಪ್ರಧಾನಿ ಮೋದಿ ಆಶೀರ್ವಾದದಿಂದ ರಾಜ್ಯದ ರೈಲ್ವೆ ಹಳಿಗಳ ಅಭಿವೃದ್ಧಿ ಆಗಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಹೆಚ್ಚಿನ ಅನುದಾನ ನೀಡಿದ್ದಾರೆ. ಇದು ಡಬಲ್‌ ಇಂಜಿನ್ ಸರ್ಕಾರದ ಸಾಧನೆ, ಇದಕ್ಕೆ ಧಮ್ ಬೇಕಾಗುತ್ತೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ. ಯುವಕರಿಗೆ ಉದ್ಯೋಗ ಕಲ್ಪಿಸಲು ಡಬಲ್ ಇಂಜಿನ್ ಸರ್ಕಾರ ಶ್ರಮಿಸುತ್ತಿದೆ ಎಂದರು.

ಇದನ್ನೂ ಓದಿ: ಲಿಂಗಾಯತರು, ವೀರಶೈವರು ಯಾವುದೇ ಕಾರಣಕ್ಕೂ ಕಾಂಗ್ರೆಸ್​ನ್ನು ನಂಬಬಾರದು: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ: ಪ್ರಲ್ಹಾದ ಜೋಶಿ  

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಪ್ರಧಾನಿರವರ ಅಮೃತ ಹಸ್ತದಿಂದ ಧಾರವಾಡದ ಐಐಟಿ ಉದ್ಘಾಟನೆ ಆಗಿದೆ. 2019ರ ಫೆ.10ರಂದು ಐಐಟಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಾನೇ ಧಾರವಾಡದ ಐಐಟಿ ಉದ್ಘಾಟಿಸುವುದಾಗಿ ಪ್ರಧಾನಿ ಹೇಳಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಮಲಪ್ರಭಾ ನದಿಯಿಂದ ಧಾರವಾಡ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುತ್ತೇವೆ. ಯುಪಿಎ ಆಡಳಿತ ಅವಧಿಯಲ್ಲಿ ದೇಶ ಭ್ರಷ್ಟಾಚಾರದಿಂದ ಮುಳುಗಿತ್ತು ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:56 pm, Sun, 12 March 23