ನಾನು ಇದೇ ಕಾರಣಕ್ಕಾಗಿ ಮತ್ತೆ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದ ಜನಾರ್ದನ ರೆಡ್ಡಿ
ನಾನು ಸತ್ತರೂ ನನ್ನ ಹೆಸರು ಸಾವಿರ ವರ್ಷ ಭೂಮಿ ಮೇಲಿರಬೇಕು. ಇದೇ ಕಾರಣಕ್ಕಾಗಿ ನಾನು ಮತ್ತೆ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರ: ನಾನು ಸತ್ತರೂ ನನ್ನ ಹೆಸರು ಸಾವಿರ ವರ್ಷ ಭೂಮಿ ಮೇಲಿರಬೇಕು. ಇದೇ ಕಾರಣಕ್ಕಾಗಿ ನಾನು ಮತ್ತೆ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಗಾಲಿ ಜನಾರ್ದನ ರೆಡ್ಡಿ (Janardhana Reddy) ಹೇಳಿದರು. ಜಿಲ್ಲೆಯ ಬಾಗೇಪಲ್ಲಿಯಲ್ಲಿ ಆಯೋಜಿಸಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶದಲ್ಲಿ ಅವರು ಮಾತನಾಡಿ, ನಾನು ಏನನ್ನು ಹೇಳುತ್ತೇನೋ ಅದನ್ನು ಮಾಡಿ ತೋರಿಸುತ್ತೇನೆ. ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷಕ್ಕೆ ರಾಜ್ಯಾದ್ಯಂತ ಬೆಂಬಲ ಸಿಗುತ್ತಿದೆ. ಸಮಯದ ಕೊರತೆಯಿಂದ ಆಯ್ದ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ಗೆಲ್ಲುವ ಸಾಮರ್ಥ್ಯವಿರುವ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದೇವೆ. ಈ ಚುನಾವಣೆಯಲ್ಲಿ KRPPಯಿಂದ 6-7 ಶಾಸಕರು ಗೆದ್ದರೆ ಸಾಕು. ನನ್ನ ಟಾರ್ಗೆಟ್ 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಎಂದರು.
ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಯಾರು ಎದುರಾಳಿಗಳಲ್ಲ. 2028ರ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತೇವೆ. ಅದಕ್ಕೆ ಈಗಿನಿಂದಲೇ ತಯಾರಾಗುತ್ತಿದ್ದೇವೆ. ಬಾಗೇಪಲ್ಲಿಯಿಂದ ಕೆಆರ್ಪಿಪಿ ಅಭ್ಯರ್ಥಿಯಾಗಿ ಅರಕೆರೆ ಕೃಷ್ಣಾರೆಡ್ಡಿ ಸ್ಪರ್ಧೆ ಮಾಡುತ್ತಾರೆ ಎಂದು ಜನಾರ್ದನರೆಡ್ಡಿ ಹೇಳಿದರು.
ಇದನ್ನೂ ಓದಿ: ರಾಜಕೀಯ ಅಂದರೆ ಮೋಸ, ಸುಳ್ಳು, ವಂಚನೆ: ಜನಾರ್ದನ ರೆಡ್ಡಿ
ಶ್ರೀರಾಮುಲುರನ್ನು ನಾನು ಎಂದಿಗೂ ಸ್ವಾರ್ಥಕ್ಕೆ ಬಳಸಿಕೊಳ್ಳುವುದಿಲ್ಲ
ನನಗೆ ಯಾವುದೇ ತನಿಖಾ ಸಂಸ್ಥೆಯಿಂದ ನೋಟಿಸ್ ಬಂದಿಲ್ಲ. ಕೇಂದ್ರದ ತನಿಖಾ ಸಂಸ್ಥೆಗಳು ನೋಟಿಸ್ ನೀಡಿದೆ ಎಂಬುದು ಸುಳ್ಳು. ಶ್ರೀರಾಮುಲು ಜತೆ ನನ್ನ ಸ್ನೇಹ ಜೀವನ ಪರ್ಯಂತ ಹಾಗೇ ಇರುತ್ತೆ. ಶ್ರೀರಾಮುಲುರನ್ನು ನಾನು ಎಂದಿಗೂ ಸ್ವಾರ್ಥಕ್ಕೆ ಬಳಸಿಕೊಳ್ಳುವುದಿಲ್ಲ ಎಂದರು.
ನಾನು ಬೇರೆ ರಾಜಕೀಯ ಪಕ್ಷ ನಂಬಿ ಮೋಸ ಹೋದೆ
ಈ ಹಿಂದೆ ನಾನು ಬೇರೆ ರಾಜಕೀಯ ಪಕ್ಷ ನಂಬಿ ಮೋಸ ಹೋದೆ. ರಾಜಕೀಯ ಅಂದರೆ ಮೋಸ, ಸುಳ್ಳು, ವಂಚನೆ. ನದಿಯಲ್ಲಿ ಈಜುವ ಮೀನನನ್ನು ಬಂಧಿಸಿದ ಹಾಗೆ ನನ್ನನ್ನು ಬಲೆಯಲ್ಲಿ ಬಂಧಿಸಿದರು. ಮೂವತ್ತಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಳ್ಳುವ ತಾಕತ್ತು ನನಗಿದೆ. ಬದುಕಿದರೆ ವೈ ಎಸ್. ರಾಜಶೇಖರ ರೆಡ್ಡಿ, ಮಾಜಿ ಸಿಎಂ. ಜಯಲಲಿತ ಹಾಗೆ ಬದುಕಬೇಕು. ಹದಿನೈದು ವರ್ಷಗಳ ಬಳಿಕ ನಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Illegal Mining Case: ಚುನಾವಣೆ ಹೊತ್ತಲ್ಲೇ ಜನಾರ್ದನ ರೆಡ್ಡಿಗೆ ಸಿಬಿಐ ಸಂಕಷ್ಟ; ನಾಲ್ಕು ದೇಶಗಳಿಂದ ಹಣದ ವಿವರ ಪಡೆಯಲು ಅನುಮತಿ
ಕಾಂಗ್ರೆಸ್ಗೆ ಟಕ್ಕರ್ ಕೊಟ್ಟ ರೆಡ್ಡಿ
ಕಾಂಗ್ರೆಸ್ನ ಗೃಹಲಕ್ಷ್ಮೀ ಘೋಷಣೆಗೆ ಟಕ್ಕರ್ ನೀಡಿರುವ ರೆಡ್ಡಿ, ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 2,500 ರೂ. ಆರ್ಥಿಕ ನೆರವು ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಚೆನ್ನಮ್ಮ ಅಭಯಹಸ್ತ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಲಾಗಿದೆ. ಸ್ತ್ರೀ ಶಕ್ತಿ ಗುಂಪಿಗೆ ಬಡ್ಡಿ ರಹಿತ 10 ಲಕ್ಷ ರೂ. ಸಾಲ ನಿಡಲಾಗುವುದು ಎಂದೂ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ವೇತನ ಹೆಚ್ಚಳ ಸೇರಿದಂತೆ ಅನೇಕ ಭರವಸೆಗಳನ್ನು ನೀಡಲಾಗಿದೆ.
ಕನಕಗಿರಿ ಅಭ್ಯರ್ಥಿ ಘೋಷಣೆ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕನಕಗಿರಿ ಅಭ್ಯರ್ಥಿಯಾಗಿ ಡಾ. ಚಾರುಲ್ ವೆಂಕಟರಮಣ ಅವರ ಹೆಸರನ್ನು ರೆಡ್ಡಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಚುನಾವಣೆ ಸಿದ್ಧತೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಬಗ್ಗೆ ಅವರು ಸಂದೇಶ ರವಾನಿಸಿದ್ದಾರೆ. ಬಿಜೆಪಿಯಲ್ಲಿ ರಾಜಕೀಯವಾಗಿ ಮುಂದುವರಿಯುವ ಅವಕಾಶ ಕಠಿಣವೆಂಬುದನ್ನರಿತಿದ್ದ ರೆಡ್ಡಿ ಇತ್ತೀಚೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ್ದರು. ಆ ಮೂಲಕ ಮಿತ್ರ ಶ್ರೀರಾಮುಲು ಹಾಗೂ ತಮ್ಮ ಹಿಂದಿನ ರಾಜಕೀಯ ಪಕ್ಷ ಬಿಜೆಪಿ ವಿರುದ್ಧವೇ ತೊಡೆತಟ್ಟಿದ್ದಾರೆ. ಇದೀಗ ಚುನಾವಣಾ ಸಿದ್ಧತೆ ಚುರುಕುಗೊಳಿಸಿರುವ ಅವರು, ಪ್ರಚಾರ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 pm, Sun, 12 March 23