ಶಿವಮೊಗ್ಗ: ಫೆ.27ರಂದು ಶಿವಮೊಗ್ಗ ಏರ್ಪೋರ್ಟ್ನ್ನು ಪ್ರಧಾನಿ ನರೇಂದ್ರ ಮೋದಿ (Narendra Modi)
ಉದ್ಘಾಟಿಸಲಿದ್ದಾರೆ. ಏರ್ಪೋರ್ಟ್ ಆವರಣದಲ್ಲಿ ಜಿಲ್ಲಾಡಳಿತದಿಂದ ಬೃಹತ್ ಸಮಾವೇಶಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ. ಸುಮಾರು ಒಂದು ಲಕ್ಷ ಜನರನ್ನು ಸೇರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಇದೆಲ್ಲಾ ಕಾರ್ಯಕ್ರಮದ ಸಿದ್ಧತೆ ನಡುವೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೋಸ್ಟರ್ ಸಮರ ಶುರುವಾಗಿದೆ. ‘ಸಾಕಪ್ಪ ಸಾಕು ಕಿವಿ ಮೇಲೆ ಹೂವು‘ ಪೋಸ್ಟರ್ ಅಂಟಿಸಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ನಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನಕುಮಾರ್ ನೇತೃತ್ವದಲ್ಲಿ ವಿಭಿನ್ನ ಪ್ರತಿಭಟನೆ ಮಾಡಲಾಯಿತು. ಇತ್ತ ನಗರದಲ್ಲಿ ಬಿಜೆಪಿಯಿಂದಲೂ ಪೋಸ್ಟರ್ ಅಭಿಯಾನ ಶುರು ಮಾಡಿದ್ದು, ಪ್ರಧಾನಿ ಮೋದಿ, ನಡ್ಡಾ, ಬೊಮ್ಮಾಯಿ, ಬಿಎಸ್ವೈ ಕಟೀಲ್ ಫೋಟೋ ಇರುವ ಬಿಜೆಪಿಯೇ ಭರವಸೆ, ಅಭಿವೃದ್ಧಿ ಕಾರ್ಯಗಳ ವಿವರ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ.
ಪಕ್ಷದ ಹೈಕಮಾಂಡ್ ಸೂಚಿಸಿದರೆ ಶಿಕಾರಿಪುರ ಕ್ಷೇತ್ರದಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸದ್ಯ ಯಡಿಯೂರಪ್ಪ ಅವರು ಚುನಾವಣೆಗೆ ಗುಡ್ಬೈ ಹೇಳಿದ್ದು, ಇವರು ಸ್ಪರ್ಧಿಸುತ್ತಿರುವ ಶಿಕಾರಿಪುರ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಯಾರು ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಟಿವಿ9 ಜೊತೆ ಮಾತನಾಡಿದ ಯಡಿಯೂರಪ್ಪ, ಪಕ್ಷ ಒಪ್ಪಿಗೆ ನೀಡಿದರೆ ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧಿಸುತ್ತಾನೆ ಎಂದರು.
ನಾನು ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ, ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತೇನೆ. ರಾಜ್ಯದ ಉದ್ದಗಲಕ್ಕೂ ನಾನು ಚುನಾವಣಾ ಪ್ರವಾಸ ಮಾಡುತ್ತೇನೆ ಎಂದರು. ಜನರ ಆಶೀರ್ವಾದದಿಂದ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ನಾವು ಅಧಿಕಾರಕ್ಕೆ ಬರುತ್ತೇವೆ. ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದರು.
ಇದನ್ನೂ ಓದಿ: ಶಿವಮೊಗ್ಗ: VISL ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ; ಭದ್ರಾವತಿ ಬಂದ್ಗೆ ಕರೆ
ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಅದಲ್ಲೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಹೆಸರು ಹೆಚ್ಚು ಮುನ್ನಲೆಗೆ ಬರುತ್ತಿದೆ. ಚುನಾವಣೆ ಕಾವು ಜೋರಾಗುವ ಮುನ್ನ ಯಡಿಯೂರಪ್ಪ ಅವರು ಹಲವು ಬಾರಿ ತಾನು ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುತ್ತಾನೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಮಾತ್ರವಲ್ಲದೆ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂಬ ಘೋಷಣೆಗಳು ಕೂಡ ಮೊಳಗುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:23 pm, Sat, 25 February 23