ಆತ ಸಣ್ಣ ಹುಡುಗ, ಗಾಡಿ ಹೊಡೆದು ಬಾಗಿಲು ಕಾದು ಎಂಎಲ್‌ಸಿ ಆದವ: ಚನ್ನರಾಜ್ ಹಟ್ಟಿಹೊಳಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

ರಾಜಹಂಸಗಡ ಅಭಿವೃದ್ಧಿಯನ್ನ ಕಾಂಗ್ರೆಸ್ ಮಯ ಮಾಡಲು ಹೊರಟಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ, ಶಾಸಕರಿಗೆ ಸಿಗಬೇಕಾದ ಗೌರವ ಸಿಗಲೇಬೇಕು, ಅದಕ್ಕೆ ನಮ್ಮ ವಿರೋಧವಿಲ್ಲ. ಇದು ಸರ್ಕಾರಿ ಕಾರ್ಯಕ್ರಮ, ಸಿಎಂ ನೇತೃತ್ವದಲ್ಲೇ ಕಾರ್ಯಕ್ರಮ ಆಗಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ಆತ ಸಣ್ಣ ಹುಡುಗ, ಗಾಡಿ ಹೊಡೆದು ಬಾಗಿಲು ಕಾದು ಎಂಎಲ್‌ಸಿ ಆದವ: ಚನ್ನರಾಜ್ ಹಟ್ಟಿಹೊಳಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ
ರಮೇಶ್ ಜಾರಕಿಹೊಳಿ ಮತ್ತು ಚನ್ನರಾಜ ಹಟ್ಟಿಹೊಳಿ
Image Credit source: Tv9
Updated By: Rakesh Nayak Manchi

Updated on: Feb 18, 2023 | 4:50 PM

ಬೆಳಗಾವಿ: ರಾಜಹಂಸಗಡ ಅಭಿವೃದ್ಧಿಯನ್ನ ಕಾಂಗ್ರೆಸ್ ಮಯ ಮಾಡಲು ಹೊರಟಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ. ಶಾಸಕರಿಗೆ ಸಿಗಬೇಕಾದ ಗೌರವ ಸಿಗಲೇಬೇಕು, ಅದಕ್ಕೆ ನಮ್ಮ ವಿರೋಧವಿಲ್ಲ. ಇದು ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನೇತೃತ್ವದಲ್ಲೇ ಕಾರ್ಯಕ್ರಮ ಆಗಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ಆಗ್ರಹಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ರಾಜಹಂಸಗಡ ಕೋಟೆಯಲ್ಲಿ (Rajahamsa Gada Fort) ಮಾತನಾಡಿದ ಅವರು, 2010 ರಿಂದಲೇ ರಾಜಹಂಸಗಡ ಅಭಿವೃದ್ಧಿ ಕಾರ್ಯ ನಡೆದಿವೆ. ನಾನು ನೀರಾವರಿ ಸಚಿವನಾಗಿದ್ದಾಗ ಸಿ.ಟಿ ರವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರು. ಹಣ ಬಿಡುಗಡೆ ವಿಚಾರ ಕ್ಯಾಬಿನೆಟ್‌ನಲ್ಲೂ ಚರ್ಚೆ ಆಗಿತ್ತು. ಯಾವುದೇ ಪಕ್ಷ ಇರಲಿ ಅಭಿವೃದ್ಧಿ ಮುಖ್ಯ ಎಂದು ನಾನು ಅಂದಿನ ಸಭೆಯಲ್ಲಿ ಹೇಳಿದ್ದೆ ಎಂದರು.

ರಮೇಶ್ ಜಾರಕಿಗೊಳಿಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೂ ಏನು ಸಂಬಂಧ? ರಮೇಶ್ ವಿರುದ್ಧ ಹಕ್ಕು ಚ್ಯುತಿ ಮಾಡುವುದಾಗಿ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್, ಚನ್ನರಾಜ್ ಹಟ್ಟಿಹೊಳಿ ‌ಬಹಳ ಸಣ್ಣ ಹುಡುಗ, ಗಾಡಿ ಹೊಡೆದು, ಬಾಗಿಲು ಕಾದು ಎಂಎಲ್‌ಸಿ ಆದವ. ಅವನೇನೂ ಹೋರಾಟ ಮಾಡಿ, ಸಂಘಟನೆ ಮಾಡಿ ಎಂಎಲ್​ಸಿ ಆದವ ಅಲ್ಲ. ನಾನು ಚನ್ನರಾಜ ಜೊತೆಗೆ ಬಹಿರಂಗ ಚರ್ಚೆ ಮಾಡಲ್ಲ, ಅಗತ್ಯ ಬಿದ್ದರೆ ಡಿ.ಕೆ.ಶಿವಕುಮಾರ್ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು.

ಚನ್ನರಾಜ್ ನನ್ನ ಲೇವಲ್ ಅಲ್ಲ, ಎಂಎಲ್‌ಸಿ ಆದರೂ ಕನಿಷ್ಠ ಜ್ಞಾನವೂ ಆತನಿಗೆ ಇಲ್ಲ. ಹಕ್ಕುಚ್ಯುತಿ ಮಂಡನೆ ಮಾಡಲು ಆತನಿಗೆ ಹಕ್ಕಿದೆ. ಹಾಗಾದರೆ ನನ್ನ ಪಕ್ಷ ಸಂಘಟನೆ ಮಾಡಲು ನನಗೆ ಹಕ್ಕಿಲವೇ? ನಾನೇನು ಗ್ರಾಮೀಣದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ, ಸರ್ಕಾರಿ ಕೆಲಸದಲ್ಲಿ ಶಿಷ್ಟಾಚಾರ ಪಾಲಿಸುವಂತೆ ಆಗ್ರಹಿಸುತ್ತಿದ್ದೇನೆ. ಶಿಷ್ಟಾಚಾರ ಪ್ರಕಾರ ನಾಳೆಯೇ ಶಿವಾಜಿ ಮೂರ್ತಿ ಉದ್ಘಾಟಿಸಲಿ, ನಮ್ಮದೇನೂ ಅಭ್ಯಂತರವಿಲ್ಲ ಎಂದರು.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠ ಸಮುದಾಯದ ಬೆಂಬಲವಿಲ್ಲದೆ ಗೆಲ್ಲಲು ಆಗಲ್ಲ‌: ರಮೇಶ್ ಜಾರಕಿಹೊಳಿ

ಡಿಕೆಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ 50 ಲಕ್ಷ ಅನುದಾನ ನೀಡಿದ್ದಾರೆ, ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ 5 ಕೋಟಿ ಅನುದಾ‌ನ ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್, ಸ್ವಾಗತ. ದಾಖಲೆ ಇದ್ದರೆ ತೊರಿಸಲಿ ಎಂದು ಸವಾಲು ಹಾಕಿದರು. ಕಾರ್ಯಕ್ರಮ ಕಾಂಗ್ರೆಸ್ ಮಯ ಮಾಡಿದ್ದಕ್ಕೆ ನಮ್ಮ ವಿರೋಧ ಇದೆ. ಶಿಷ್ಟಾಚಾರ ಪಾಲಿಸಿ ಕಾರ್ಯಕ್ರಮ ಮಾಡಿದರೆ ನಮ್ಮ ಅಭ್ಯಂತರ ಇಲ್ಲ ಎಂದರು.

ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಮಂತ್ರಣ ಪತ್ರಿಕೆ ಮುದ್ರಣ ಆಗಿಲ್ಲ

ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಆಯೋಜನೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಚನ್ನರಾಜ್ ಹಟ್ಟಿಹೊಳಿ, ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಮಂತ್ರಣ ಪತ್ರಿಕೆ ಮುದ್ರಣ ಆಗಿಲ್ಲ. ಹೆಸರು ಬಿಟ್ಟಿದ್ದರೆ ಶಿಷ್ಟಾಚಾರ ಉಲ್ಲಂಘನೆ ಆಗುತ್ತದೆ ಎಂದರು. ಮುಂದುವರೆದು ಮಾತನಾಡಿದ ಅವರು, ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ಪ್ರವಾಸೋದ್ಯಮದಿಂದ 3 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 50 ಲಕ್ಷ ರೂ. ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವೈಯಕ್ತಿಕವಾಗಿ 1 ಕೋಟಿ ಹಣ ನೀಡಿದ್ದಾರೆ ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.

ರಮೇಶ್ ಗೋಕಾಕ್ ಶಾಸಕರು, ಅವರಿಗೆ ಬೆಳಗಾವಿಗೆ ಏನೂ ಸಂಬಂಧ?

ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದ ಶಾಸಕರು, ಅವರಿಗೂ ಬೆಳಗಾವಿಗೆ ಏನೂ ಸಂಬಂಧ? ಇವರೇನೂ ಜಿಲ್ಲಾ ಉಸ್ತುವಾರಿ ಸಚಿವರಾ? ಎಂದು ಚನ್ನರಾಜ್ ಪ್ರಶ್ನಿಸಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ. ಈ ಮತಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಶಾಸಕ ರಮೇಶ್ ಜಾರಕಿಹೊಳಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ವಿಧಾನಸಭೆ ಸ್ಪೀಕರ್‌ಗೆ ನಾವು ಪತ್ರ ಬರೆಯುತ್ತೇವೆ‌. ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Sat, 18 February 23