ವಿಜಯಪುರ: ವಿಧಾನಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದಾಗಿ ಬಿಜೆಪಿ ಕಾರ್ಯಕರ್ತರ ಹಾಗೂ ನಾಯಕರ ಮಧ್ಯೆ ವಾಕ್ಸಮರ ನಡೆದ ಬಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವರದಿಯಾಗಿದೆ. ಈ ಮಧ್ಯೆ, ವಿಜಯಪುರದಲ್ಲಿ (Vijayapura) ಸೋಮವಾರ ನಡೆದ ಕಾರ್ಯಕರ್ತರ (BJP Workers Meet) ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಬೆಂಬಲಿಗರ ಮಧ್ಯೆ ಜಟಾಪಟಿಯಾಗಿದೆ. ಇಷ್ಟಕ್ಕೇ ನಿಲ್ಲದೆ, ಇಬ್ಬರೂ ನಾಯಕರು ಪರೋಕ್ಷವಾಗಿ ವೇದಿಕೆಯಲ್ಲೇ ಆರೋಪ-ಪ್ರತ್ಯಾರೋಪ ಮಾಡಿಕೊಂಡ ಘಟನೆ ನಡೆದಿದೆ. ನಂತರ ನಿರಾಣಿ ಅವರು ವೇದಿಕೆಯಿಂದ ಎದ್ದುಹೋಗಿದ್ದಾರೆ. ಯತ್ನಾಳ್ ವಿರುದ್ಧ ಮುರುಗೇಶ ನಿರಾಣಿ, ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ಅವರ ಧಿಮಾಕಿನ ಮಾತು ಇನ್ನು ಮುಂದೆ ನಡೆಯದು. ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ. ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. 2018ರಲ್ಲಿ ಕಾರಜೋಳರ ಪುತ್ರನನ್ನು ಸೋಲಿಸಿದ್ದು ಯಾರು? ವಿಜುಗೌಡ ಪಾಟೀಲ್ ಮೂರು ಸಾರಿ ಸೋತಿದ್ದಾರೆ, ಅವರನ್ನು ಸೋಲಿಸುವ ಪ್ರಯತ್ನ ಯಾರು ಮಾಡಿದ್ದಾರೆ ಎಂದು ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದ್ದಾರೆ.
ನಾನೇ ಹಿಂದೂ ಹುಲಿ, ನಾನೇ ಹಿಂದೂ ಹುಲಿ ಎಂದು ಜಂಭ ಕೊಚ್ಚಿಕೊಂಡವರು ಪಾರ್ಟಿ ಬಿಟ್ಟು ಹೋಗಿ ಟೋಪಿ ಹಾಕಿ ನಮಾಜ್ ಮಾಡಿದ್ದಾರೆ. ಇದನ್ನು ವಿಜುಯಪುರದ ಜನರು ಮರೆತಿಲ್ಲ, ಮಾತನಾಡಲು ಬಹಳ ಇದೆ. ಮಾಳಿಗೆ ಏರಿದ ಮೇಲೆ ಏಣಿ ಒದ್ದರು ಅನ್ನೋ ಹಾಗೇ ಆಗಬಾರದು ಎಂದು ನಿರಾಣಿ ಕಿಡಿಕಾರಿದ್ದಾರೆ.
ಇಲ್ಲಿಗೆ ಚುನಾವಣೆ ಮುಗಿದಿಲ್ಲ, ನಾವಷ್ಟೇ ಸೋತಿರುವುದೂ ಅಲ್ಲ. ವಾಜಪೇಯಿಯವರು, ಯಡಿಯೂರಪ್ಪ ಕೂಡ ಈ ಹಿಂದೆ ಸೋತಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ತಲೆತಗ್ಗಿಸುವ ಹಾಗೆ ಮಾಡುತ್ತಿದ್ದಾರೆ. ಯತ್ನಾಳ್ಗೆ ತಲೆಯಲ್ಲಿ ಕೋಡು (ಕೊಂಬು) ಬಂದಿವೆ. ನಾನೊಬ್ಬನೇ ಗೆದ್ದಿದ್ದೇನೆ ಎನ್ನುವ ಧಿಮಾಕು, ಅಹಂ ಬಂದಿದೆ ಎಂದು ನಿರಾಣಿ ಟೀಕಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಬಿಜೆಪಿ ಸಭೆಯಲ್ಲಿ ಜಟಾಪಟಿ, ಬೊಮ್ಮಾಯಿ, ಯತ್ನಾಳ್ ಭಾಗವಹಿಸಿದ್ದ ಸಭೆಯಲ್ಲೇ ಕಾರ್ಯಕರ್ತರ ಗಲಾಟೆ
ಮಾಜಿ ಶಾಸಕ ನಡಹಳ್ಳಿ ಆಕ್ರೊಶ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ಬಿಜೆಪಿ ಸತ್ತಿಲ್ಲ, ನಾವು ಸೋತ್ತಿದ್ದೇವೆ. ನಾವು ಏಳು ಜನ ಸೋತಿದ್ದೇವೆ ಆದರೆ ಬಿಜೆಪಿ ಸತ್ತಿಲ್ಲ. ನಾವೆಲ್ಲ ವಾಪಸ್ ಬಿಜೆಪಿ ಕಟ್ಟಿ ತೋರಿಸುತ್ತೇವೆ, ಆ ತಾಕತ್ ನಮಗೆ ಇದೆ. ಎಂಟಕ್ಕೆ ಎಂಟು ಸ್ಥಾನಗಳನ್ನು ಗೆದ್ದು ತೋರಿಸುತ್ತೇವೆ. ಮುಂದಿನ ಲೋಕಸಭೆ ಚುನಾವಣೆ ಗೆಲ್ಲಿಸಿ ತೋರಿಸುತ್ತೇವೆ. ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಿ ತೋರಿಸುತ್ತೇವೆ. ಇವತ್ತಿನಿಂದ ಮನಗೆ ಹೋಗಲ್ಲ, ಹೆಂಡತಿ ಮಕ್ಕಳ ಮುಖ ನೋಡಲ್ಲ. ಲೋಕಸಭೆ ಚುನಾವಣೆ ಗೆದ್ದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಗದ್ದಲವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿ ವಿಜಯಪುರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಹೋದಲೆಲ್ಲಾ ಗಲಾಟೆ ಆಗುತ್ತಿಲ್ಲ. ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಉತ್ತಮ ಕಾರ್ಯಕ್ರಮಗಳಾದವು. ಬಾಗಲಕೋಟೆಯ ಕಾರ್ಯಕ್ರಮದಲ್ಲಿ ಓರ್ವ ಕಾರ್ಯಕರ್ತನ ಗಲಾಟೆ ಮಾತ್ರ ಆಗಿದೆ. ಅದೇನು ದೊಡ್ಡ ವಿಚಾರವಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕರ್ತರ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿಲ್ಲ. ಅವರಿಗೆ ಬೇರೆ ಕೆಲಸ ಇರುವ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲ. ಬೇರೆ ಕೆಲಸವಿದೆ ಎಂದು ಈ ಮೊದಲೇ ಯತ್ನಾಳ್ ನನಗೆ ಹೇಳಿದ್ದರು, ಅವರು ವಿಜಯಪುರದಲ್ಲಿಲ್ಲ. ಯತ್ನಾಳ್ ಕಾರ್ಯಕ್ರಮಕ್ಕೆ ಬರಬೇಕೆಂದು ಅವರ ಅಭಿಮಾನಿಗಳು ಒತ್ತಾಸೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಯಾವುದೇ ನಾಯಕರ ಬಗ್ಗೆ ವ್ಯತ್ಯಾಸ ಇಲ್ಲ. ಇದೆಲ್ಲವನ್ನು ಸರಿಪಡಿಸಿ ಮತ್ತೊಮ್ಮೆ ವಿಜಯಪುರದಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಯತ್ನಾಳ್ ವಿರುದ್ಧ ಮುರುಗೇಶ್ ನಿರಾಣಿ, ನಡಹಳ್ಳಿ ತೀವ್ರ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಅವರೇನೇ ಹೇಳಿದರೂ ಕೂಡ ಎಲ್ಲರನ್ನು ಒಗ್ಗೂಡಿಸಿಕೊಂಡು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ವಿಜಯಪುರ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ ಅವರಿಗೆ ಟಿಕೆಟ್ ನೀಡಲಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 pm, Mon, 26 June 23