Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

|

Updated on: May 09, 2021 | 3:25 PM

‘ನನಗೋ ಎರಡು ಜೊತೆ ಮೊಲೆವಾಲು; ಕೊಂಕಣಿ ಮತ್ತು ಕನ್ನಡ. ಕುಡಿದು ಬೆಳೆವ ಭಾಗ್ಯ. ಅಂತಃಕರಣ ನೀಡಿದ ಕೊಂಕಣಿ, ಲೋಕದೃಷ್ಟಿ ದಯಪಾಲಿಸಿದ ಕನ್ನಡ. ಕವಿತೆ ನಿಷ್ಕಪಟಿ, ಕಳಂಕರಹಿತ, ಕೇಡಿಲ್ಲದ್ದು. ಅನ್ನದಷ್ಟೇ ಅಮೂಲ್ಯ. ನನ್ನ ಪಾಲಿನ ವ್ರತ, ಪೂಜೆ, ಧ್ಯಾನ ಎಲ್ಲವೂ ಅದೇ. ಅದು ಬತ್ತಲೆಗೆ ಬಟ್ಟೆ ನೇಯುವುದು, ಕತ್ತಲೆಯ ಬೆಳಕು ಮಾಡುವುದು. ಕವಿತೆ ಕರೆಯಬೇಕು. ನಾನು ಬರಬೇಕು. ಮಿಕ್ಕಂತೆ ಅದನ್ನೇ ನಾನು ನೆಚ್ಚಿಕೊಂಡಿರುವುದಕ್ಕೆ ಕಾರಣವೇ ಹೊಳೆಯುತ್ತಿಲ್ಲ.‘ ಸವಿತಾ ನಾಗಭೂಷಣ

Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ
ಹಿರಿಯ ಕವಿ ಸವಿತಾ ನಾಗಭೂಷಣ
Follow us on

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಹಿರಿಯ ಕವಿ ಸವಿತಾ ನಾಗಭೂಷಣ ಅವರ ಕವಿತೆಗಳು ನಿಮ್ಮ ಓದಿಗೆ.

*

ಸಹಜವಾಗಿ
ಸರಳವಾಗಿ
ಹೂವು ಅರಳುವಂತೆ
ನಿಮ್ಮ ಕವಿತೆ
ಪುಟಕ್ಕಿಂತ ಹೆಚ್ಚಲ್ಲ
ಇದ್ದರೂ ಅದಕ್ಕೊಂದು ಮೊನೆ
ಹಾಲುಗಾಳು ತುಂಬಿ
ತೂಗುವ ತೆನೆ
ಭಾವದ ಮೂಲ ಹಿಡಿದು
ಅರ್ಥವನ್ನು ಅಲುಗಾಡಿಸಿ
ವ್ಯರ್ಥ ಶಬ್ದವಿರದ
ಸಾರ್ಥಕ ಕವಿತೆ
ಬಿಡಿ ಬಿಡಿ ಪದಗಳು
ಸಂಧಿಯಿಲ್ಲ, ಸಮಾಸವಿಲ್ಲ
ಮೋಸವಿಲ್ಲ, ದೋಷವಿಲ್ಲ
ವೇಷಭೂಷಣವಿಲ್ಲದ
ಅಲಂಕಾರ
ಕಾವ್ಯದ ಝೇಂಕಾರ
ಚೆನ್ನವೀರ ಕಣವಿ, ಹಿರಿಯ ಸಾಹಿತಿ

*
ಕವನಿಸಿರುವುದರಲ್ಲಿ ಸರಳತೆಯಿದ್ದರೂ ಅರ್ಥವಂತಿಕೆಯಲ್ಲಿ ಬೇಕಾದಷ್ಟು ಧ್ವನಿ ತುಂಬಿಕೊಂಡಿದೆ. ಕಾವ್ಯದ ಶಕ್ತಿಯಿರುವುದು ಧ್ವನಿಯಲ್ಲಿ ತಾನೆ? ‘ಕಾವ್ಯಸ್ಯಾತ್ಮಾ ಧ್ವನಿ’ ನಮ್ಮ ಆಲಂಕಾರಿಕ ಉಕ್ತಿ ಒಂದು ಶಾಶ್ವತ ಸತ್ಯ.
ಕಾವ್ಯ ತಂತ್ರಗಳ ತಕರಾರುಗಳಿಲ್ಲದ ಸರಳ, ಸಹಜ ರಚನೆಗಳ ಹಿಂದೆ ಪ್ರಸನ್ನವಾದ ಮನಸ್ಸೊಂದು ಮಿಡಿಯುತ್ತಿರುವುದು ಗಮನಾರ್ಹವಾಗಿದೆ.
ಗುರುಲಿಂಗ ಕಾಪ್ಸೆ, ಹಿರಿಯ ಸಾಹಿತಿ

*

ನಿಮ್ಮ ಪದ್ಯಗಳ ನಿರಾಡಂಬರ ಸರಳತೆ, ಅನಿರೀಕ್ಷಿತ ಬೆಳವಣಿಗೆ ಮತ್ತು ಕೆಲವೆಡೆಯಲ್ಲಿನ ಸಾರ್ಥಕ ಮುಕ್ತಾಯ ಇವೊತ್ತಿನ ಕವಿಗಳಿಗೆ ಪಾಠವಾಗುವಂಥದು. ಸ್ತ್ರೀವಾದಿತ್ವದ ಉರುಬಿನಲ್ಲಿ ಬದುಕಿನ ಅನೇಕಮುಖಿ ಅನುಭವಗಳಿಗೆ ನೀವು ಎರವಾಗದಿರುವುದು ಹಾಗೂ ಆ ಅನುಭವಗಳನ್ನು ಸಂವೇದನಾತ್ಮಕವಾಗಿ ಪಡೆಯಲು ಉತ್ಸುಕರಾಗಿರುವುದು ಶ್ಲಾಘನೀಯವೆನ್ನಿಸುತ್ತದೆ. ನಮ್ಮ ಕವಯತ್ರಿಯರಲ್ಲೇ ನಿಮಗೊಂದು ವಿಶಿಷ್ಟ ಸ್ಥಾನವಿರುವುದನ್ನು ನಿಮ್ಮ ಪದ್ಯಗಳ ಮೂಲಕ ನಾನು ಗುರುತಿಸಿದ್ದೇನೆ.
ಕೆ. ಎಸ್. ನಿಸಾರ್ ಅಹಮದ್, ಹಿರಿಯ ಕವಿ

*

ಆ ಮನೆ ಈ ಮನೆ

ಕತ್ತಲು ಕವಿದಿದೆ
ಪರದೆಯು ಇಳಿದಿದೆ
ಕಿಟಕಿಯು ಮುಚ್ಚಿದೆ
ಬಾಗಿಲೂ ಮುಚ್ಚಿದೆ
ಬೀಗವು ಜಡಿದಿದೆ
ನಾಯಿಯು ಬೊಗಳಿದೆ
ಕಾವಲು ತಡೆದಿರೆ
ನಿಲ್ಲುವೆನು ಹೊರಗೆ.

-2-

ತಂಗಾಳಿ ನಾನು
ಕೈಕಾಲು ಬೀಸುತ
ನಡೆವೆ, ಓಡುವೆ
ಗುಡಿಸಲು ಇರುವೆಡೆ
ಅಂಗಳದಲಿ ಮಗು
ನಿದಿರೆಗೆ ಸಂದಿದೆ
ಸಣ್ಣಗೆ ದೀಪ ತಾನೆ ಬೆಳಗಿದೆ
ಬಾಗಿಲು ತೆರೆದಿದೆ
‘ಬಾ ‘ಎಂದು ಕರೆದಿದೆ
ಸುಳಿದಾಡುವೆ ಒಳಗೆ ಹೊರಗೆ
ಜ್ಯೋತಿ ಬೆವರಿರಲು ಬೀಸಿ ಬೀಸಣಿಗೆ
ಹೊತ್ತು ತಂದಿರುವ ಹೂವಿನ ಬುಟ್ಟಿಯ
ಹಟ್ಟಿಯ ಮೂಲೆಗೆ ಇಟ್ಟು ಹೋಗುವೆ!

ಕೈಬರಹ ಮತ್ತು ಮುದ್ದಿನ ಬೆಕ್ಕಿನಮರಿಯೊಂದಿಗೆ ಸವಿತಾ ನಾಗಭೂಷಣ

ನನ್ನ ಮನೆಮಾತು ಕೊಂಕಣಿ. ನಾವು ಬಾಲ್ಯದಲ್ಲಿ ಮಕ್ಕಳು ಕನ್ನಡದಲ್ಲಿಯೇ ವ್ಯವಹರಿಸುತ್ತಿರುವಾಗ ನನ್ನ ಅಜ್ಜಿ ಗದರುತ್ತಿದ್ದರು. ನಮಗೆ ದೇವರು ಕೊಟ್ಟ ಭಾಷೆ ಕೊಂಕಣಿ ನಾವು ಕೊಂಕಣಿಯಲ್ಲಿಯೇ ಮಾತನಾಡಬೇಕು. ಕನ್ನಡವೇನಿದ್ದರೂ ಹೊಸಿಲಾಚೆ ಎನ್ನುತ್ತಿದ್ದರು. ಆದರೂ ನಾವು ಮಕ್ಕಳು ಕನ್ನಡದಲ್ಲಿಯೇ ಗುದ್ದಾಡಿಕೊಂಡು ಅಪ್ಪ ಅಮ್ಮ ಅಜ್ಜಿಯ ಜೊತೆ ಮಾತ್ರ ವಿಧೇಯರಾಗಿ ಕೊಂಕಣಿ ಮಾತನಾಡುತ್ತಿದ್ದೆವು.

ಕೊಂಕಣಿಗೆ ಲಿಪಿ ಇಲ್ಲ. ಹಾಗಾಗಿ ನಾನು ಕನ್ನಡದಲ್ಲಿ ಬರೆದೆನೋ ಏನೋ! ತಾಯಿಯ ಎದೆಹಾಲು ಕುಡಿದ ಮಕ್ಕಳು ಗಟ್ಟಿಮುಟ್ಟಾಗಿ ಬೆಳೆದು ಲೋಕವನ್ನೇ ಜಯಿಸುವಂತೆ. ನನಗೋ ಎರಡು ಜೊತೆ ಮೊಲೆವಾಲು; ಕೊಂಕಣಿ ಮತ್ತು ಕನ್ನಡ. ಕುಡಿದು ಬೆಳೆವ ಭಾಗ್ಯ. ಅಂತಃಕರಣ ನೀಡಿದ ಕೊಂಕಣಿ, ಲೋಕದೃಷ್ಟಿ ದಯಪಾಲಿಸಿದ ಕನ್ನಡವ ಬೆಸೆದು ಹಿಂದಣ ಹಿರಿಯರು ಪುರಂದರ-ಕನಕ-ಬಸವ-ಅಕ್ಕ ಇವರ ಹಾದಿಯಲ್ಲಿ ಹೆಜ್ಜೆಗಳನ್ನು ಇಟ್ಟಿರುವೆ.

ಕವಿತೆ ನಿಷ್ಕಪಟಿ, ಕಳಂಕರಹಿತವಾದದ್ದು ಹಾಗೂ ಕೇಡಿಲ್ಲದ್ದು. ಅದು ಅನ್ನದಷ್ಟೇ ಅಮೂಲ್ಯವಾದದ್ದು. ನನ್ನ ಪಾಲಿನ ವ್ರತ, ಪೂಜೆ, ಧ್ಯಾನ ಎಲ್ಲವೂ ಅದೇ. ಅದು ಬತ್ತಲೆಗೆ ಬಟ್ಟೆ ನೇಯುವುದು, ಕತ್ತಲೆಯ ಬೆಳಕು ಮಾಡುವುದು. ಕವಿತೆ ಕರೆಯಬೇಕು. ನಾನು ಬರಬೇಕು. ಮಿಕ್ಕಂತೆ ಅದನ್ನೇ ನಾನು ನೆಚ್ಚಿಕೊಂಡಿರುವುದಕ್ಕೆ ಕಾರಣವೇ ಹೊಳೆಯುತ್ತಿಲ್ಲ.

ಬೇಳೆ ಬೇಯಿಸಿಕೊಳ್ಳುವವರು

ಇವರು ನಿತ್ಯ
ಅಡಿಗೆ ಮಾಡುವ ಪೈಕಿ ಅಲ್ಲ!
ಆದರೂ ಆಗಾಗ ಯಾರೋ ಇಟ್ಟ
ಎಸರಿಗೆ ಬೇಳೆ ಸುರುವಿ
ಬೇಯಿಸತೊಡಗುವರು.
ಹೊಟ್ಟೊಟ್ಟಿ ಕೆಂಡ ಸುರುವಿ
ಧಗಧಗ ಉರಿಸುವರು ಬೆಂಕಿ
ಊದುವರು ಉಸಿರೊತ್ತೊತ್ತಿ.

ಅಲ್ಲೊಂದು ಅತ್ಯಾಚಾರ ಇಲ್ಲೊಂದು ಕೊಲೆ
ತೂರುವರು ಕಲ್ಲು, ದೊಂಬಿ ಕೆಸರೆರಚಾಟ
ಮೀಸೆ ತಿರುವಿ ಆಗುವರು ಉಗ್ರ-ವ್ಯಗ್ರ
ಖಂಡಿಸಿ-ಮಂಡಿಸಿ
ಅರಚುವರು, ಪರಚುವರು
ಮಾತಿನ ಯುದ್ಧ ಗೆದ್ದು ಸೋತು
ನಗುವರು ಅಮಾಯಕರಂತೆ.
ಶಾಂತಿ ಸಭೆ ಕರೆದು
ಗಮನ ಎತ್ತೆತ್ತಲೋ ಸೆಳೆದು
ಬೇಳೆ ಹದವಾಗಿ ಬೆಂದಿರಲು
ಸಂತಾಪ ವ್ಯಕ್ತಪಡಿಸಿ ಕೈಮುಗಿವರು
ಕತ್ತೆಗಳು ಕಣ್ಕಣ್ಣು ಬಿಟ್ಟು ನೋಡುತಿರಲು
ಪೊಗದಸ್ತಾಗಿ ಉಂಡು ತೇಗಿ
ಹೋಗುವರು ಎಂಜಲೆಲೆ ಬಿಟ್ಟು.

ಕವನ ಸಂಕಲನಗಳು

ತೀರ್ಪು

ನಾನು ಹಸಿವೆಯಿಂದ ಸತ್ತೇ ಹೋಗುವೆ
ಅಂದುಕೊಂಡಿದ್ದೆ ಕೊನೆಗೂ ಅವರು
ನ್ಯಾಯದ ರೊಟ್ಟಿ ಎಸೆದರು

ನಾನು ಹಸಿದಿದ್ದೆ ಅದು ಸುಳ್ಳಲ್ಲ ಎಂದು
ಖಾತರಿಪಡಿಸಿಕೊಳ್ಳಲು
ಸಾವಿರ ಸಾಕ್ಷ್ಯಗಳನ್ನು ಸಂಗ್ರಹಿಸಿದರು

ಎಷ್ಟೊಂದು ಅಡೆತಡೆಗಳು
ವಾದ ಪ್ರತಿವಾದಗಳು
ಕೊನೆಗೂ ತೀರ್ಪು
ಹಸಿದವಳ ಪರವಾಯಿತು

ತಡವಾಗಿಯಾದರೂ ರೊಟ್ಟಿ
ನೀಡಿದಿರಿ ಧನ್ಯವಾದಗಳು

ಗಾಳಿಯ ಕರುಣೆ
ಉಸಿರಾಡುತಿರುವೆ, ನಿಮಗೂ
ತಪ್ಪಿತು ಅಪವಾದಗಳು!

*

ಸಾಧ್ಯವಿಲ್ದದ್ದು

ಬೆಕ್ಕಿಗೆ ಹಾಲು ನೀಡಿದರೆ
ಹಕ್ಕಿಗೆ ಕಾಳು ನೀಡೀದರೆ
ನಾಯಿಗೆ ರೊಟ್ಟಿ ನೀಡಿದರೆ
ಮೊಲಕ್ಕೆ ಸೊಪ್ಪು ನೀಡಿದರೆ
ಹಸುವಿಗೆ ಹುಲ್ಲು ನೀಡಿದರೆ
ಇರುವೆಗೆ ಸಕ್ಕರೆ ನೀಡಿದರೆ

ಪ್ರೀತಿಯ ಬಲೆಯಲ್ಲಿ
ಸಿಲುಕುವುದು ಖಚಿತ
ಕಟ್ಟಿಕೊಂಡಾಗ ಪುಳಕ
ಅಟ್ಟಿ ಬಿಡುವಾಗ ನರಕ!

ಜಗತ್ತು ವಿಶಾಲವಾಗಿದೆ
ದಯೆ ಅಪಾರವಾಗಿದೆ
ದೈವ ಅವರ ಪರವಾಗಿದೆ
ಅಂದುಕೊಳ್ಳುವುದೇ ಉಚಿತ!

ಹೆಸರಿಗೆ ಮೂಕ ಲೋಕ
ಜೀವ ಪೂರ್ಣ ಪರಿಪಾಕ

ಸವಿತಾ ಅವರ ಕವನ ಸಂಕಲನಗಳು

ಹೆಣ್ಣು ಧರ್ಮ

ಒದ್ದವನ ಕಾಲ ನಮಿಸುವೆ
ಬಿದ್ದವನ ಎತ್ತಿ ನಿಲಿಸುವೆ
ಕುದ್ದವನ ತಂಪು ಉಣಿಸುವೆ
ಗೆದ್ದವನ ಜೀವ ಉಳಿಸುವೆ

ಕೇಳದಿರಿ ಇದೆಂಥ ಬಾಳುವೆ
ಉತ್ತು ಬಿತ್ತಿ ಬೆಳೆಯಲು ನಾಳೆ
ಅಗೋ ಸುರಿದಿದೆ ಮಳೆ.

*
ಪರಿಚಯ : ಶಿವಮೊಗ್ಗದಲ್ಲಿ ನೆಲೆಸಿರುವ ಸವಿತಾ ಅವರ ಜನನ ಚಿಕ್ಕಮಗಳೂರು. ಶಿಕ್ಷಣ ಶಿವಮೊಗ್ಗದಲ್ಲಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಪ್ರಶಸ್ತಿಗಳು ಸಂದಿವೆ. ಅವರ ವಿಶಿಷ್ಟ ಕಾದಂಬರಿ ‘ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ ಪ್ರಶಸ್ತಿ ಲಭಿಸಿವೆ. ‘ಸಾಹಿತ್ಯ ಸಂವಾದ’ ಸಾಂಸ್ಕೃತಿಕ ದ್ವೈಮಾಸಿಕದ ಸಂಪಾದಕರೂ ಆಗಿದ್ದ ಅವರು, ಅಕಾಡೆಮಿಯ ‘ಸುವರ್ಣ ಕಾವ್ಯ’ ಸಂಪಾದಕರಲ್ಲಿ ಒಬ್ಬರಾಗಿದ್ದರು.

ಇದನ್ನೂ ಓದಿ : ಅವಿತ ಕವಿತೆ : ಕಟ್ಟಕಡೆಯ ಪ್ರಜೆಗೆ ತಲುಪದ ಜನತೆಯ ಕಣ್ಮಣಿಯೇ ಆಕ್ರಂದನದ ಮೊರೆ ಕೇಳು

Published On - 11:02 am, Sun, 9 May 21