ಅವಿತ ಕವಿತೆ : ಕಟ್ಟಕಡೆಯ ಪ್ರಜೆಗೆ ತಲುಪದ ಜನತೆಯ ಕಣ್ಮಣಿಯೇ ಆಕ್ರಂದನದ ಮೊರೆ ಕೇಳು

‘ನನ್ನೊಂದಿಗೆ ನಾನೇ ಮಾತು ಬಿಟ್ಟಿದ್ದೇನೆ. ಕ್ಷಣಕ್ಷಣವೂ ತಿರುಗುವ ಕಾಲದ ಮುಳ್ಳಿನ ಜೊತೆಗೆ ಮಾತನಾಡುವ ಹಂಬಲ ಮೂಡಿ ಸೋತಿದ್ದೇನೆ. ಒಂದು ಸೋಲು ಮರೆಯಲು ಇನ್ನೊಂದು ಸೋಲಿಗೆ ಸಿದ್ಧನಾಗಿದ್ದೇನೆ. ನನಗೆ ಗೊತ್ತಾಗಿ ಹೋಗಿದೆ ಕಾವ್ಯ ಭಾಷೆಯ ಹೊರತಾಗಿ ನನಗೆ ಇನ್ನೇನೂ ಗೊತ್ತಿಲ್ಲ ಎಂಬುವುದು.‘ ಸುಮಿತ್ ಮೇತ್ರಿ

ಅವಿತ ಕವಿತೆ : ಕಟ್ಟಕಡೆಯ ಪ್ರಜೆಗೆ ತಲುಪದ ಜನತೆಯ ಕಣ್ಮಣಿಯೇ ಆಕ್ರಂದನದ ಮೊರೆ ಕೇಳು
ಕವಿ ಸುಮಿತ್ ಮೇತ್ರಿ
Follow us
ಶ್ರೀದೇವಿ ಕಳಸದ
|

Updated on:May 02, 2021 | 10:50 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ಸುಮಿತ್ ಮೇತ್ರಿ ಅವರ ಕವಿತೆಗಳು ನಿಮ್ಮ ಓದಿಗೆ.

* ಬಯಲಾಗಿ ತೆರೆದುಕೊಂಡಿರುವ ಯುಗಧರ್ಮ ಮತ್ತು ಮುಕ್ತ ಛಂದಸ್ಸು ಈ ಕಾಲದ ತರುಣರ ಕಾವ್ಯದ ಎರಡು ಮುಖ್ಯ ಗುಣಗಳಾಗಿವೆ. ಸಿದ್ಧಾಂತಗಳ ಭಾರವಿಲ್ಲದ, ಆದರೆ ತಲ್ಲಣಗೊಂಡ ಲೋಕದಲ್ಲಿ ಅಳುಕುತ್ತಲೇ ನೈತಿಕ ನಿಲುವನ್ನು ತೆಗೆದುಕೊಳ್ಳಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ಸಾಹಿತ್ಯ ರಚಿಸುವುದು ಅತ್ಯಂತ ಸವಾಲಿನ ಕೆಲಸ. ಇಂದು ಕಾವ್ಯ ಕಟ್ಟುತ್ತಿರುವ, ಹೊಸ ಕಥನದ ಮಾದರಿಗಳನ್ನು ಹುಡುಕುತ್ತಿರುವ ತಾರುಣ್ಯ ಉಕ್ಕುವ ಎಳೆಯರನ್ನು ನೋಡಿ. ಅವರ ಉತ್ಸಾಹ, ಆತ್ಮವಿಶ್ವಾಸ, ಕಾತರ, ಜಗಳಗಂಟ ಸ್ವಭಾವ, ಹಲವೊಮ್ಮೆ ಅಂಚಿನ ನಿಲುವು ತೆಗೆದುಕೊಂಡು ಸಮರ್ಥಿಸಿಕೊಳ್ಳುವ ಹುಂಬತನ ಎಲ್ಲವೂ ಅವರ ತೊನೆಯುವ ವಯಸ್ಸಿನಿಂದಾಗಿ ಆಕರ್ಷಕವೇ. ವೈರುಧ್ಯ, ಭಿನ್ನಾಭಿಪ್ರಾಯ, ತಕರಾರುಗಳಿಲ್ಲದ ಸಾಹಿತ್ಯ ಸಮಾಜ ನಿಂತು ಪಾಚಿಗಟ್ಟಿದ ನೀರಿನಂತೆ.

ಹೊಸ ನುಡಿಗಟ್ಟುಗಳನ್ನು ಟಂಕಿಸಲು, ಸವಕಲು ರೂಪಕಗಳನ್ನು ಬಿಟ್ಟುಕೊಟ್ಟು ತಮ್ಮದೇ ಪ್ರತಿಮೆಗಳನ್ನು ಎರಕ ಹೊಯ್ಯಲು ಹಾತೊರೆಯುತ್ತಿರುವ ಸುಮಿತ್ ಮೇತ್ರಿ ಸಂದಣಿಯಲ್ಲೂ ತಮ್ಮದೇ ಅಸ್ತಿತ್ವವನ್ನು ರೂಪಿಸಿಕೊಳ್ಳಬಲ್ಲ ಪ್ರತಿಭೆಯನ್ನು ಪಡೆದಿದ್ದಾರೆ. ಕೆಲವು ಕವಿತೆಗಳಲ್ಲಿ ಅಚ್ಚರಿಯ ಯಶವನ್ನು ಸಾಧಿಸಿದ್ದಾರೆ. ಕವಿತೆಗಳು ಅಪ್ಪಟ ಪ್ರಾಮಾಣಿಕ ದನಿಯನ್ನು ಹೊಮ್ಮಿಸುತ್ತಿವೆ. ದಿನದ ಸಣ್ಣ ಸಂಗತಿ, ಪ್ರೇಮ, ವಿಸ್ಮಯ, ಸೈದ್ಧಾಂತಿಕ ತಾಕಲಾಟ, ತಾರುಣ್ಯದ ಸಹಜ ಸೆಳೆತದಿಂದ ಎಲ್ಲ ವಿಷಯಗಳತ್ತಲೂ ವಾಲುವಿಕೆ, ಎಲ್ಲದರ ಮಾಧುರ್ಯ-ಕಟುತ್ವವನ್ನು ಸವಿದು ನೋಡಿಯೇ ಸಿದ್ಧ ಎಂಬ ಮನೋಭಾವ ಇಲ್ಲಿ ಎದ್ದು ಕಾಣುತ್ತಿದೆ. ಇನ್ನಷ್ಟು ಮತ್ತಷ್ಟು ಗಟ್ಟಿ ಕಾಳನ್ನು ಬಿತ್ತಿ ಸುಗ್ಗಿ ಮಾಡುವುದರ ಮುನ್ಸೂಚನೆಯದು. ಕೇಶವ ಮಳಗಿ, ಹಿರಿಯ ಕಥೆಗಾರ, ವಿಮರ್ಶಕ

* ದೊಡ್ಡ ದೊಡ್ಡ ಕ್ರಾಂತಿಗಳನ್ನೋ ಯುದ್ಧಗಳನ್ನೋ, ನಾಯಕರನ್ನೋ ಕವಿತೆಗೆ ಒಳಗಾಗಿಸುವುದು ಒಂದು ಕ್ರಮ; ಇಂದು ಪೋಸ್ಟ್ ಎಪಿಕ್ ಯುಗದಲ್ಲಿ ನಾವಿದ್ದೇವೆ. ಇಂದಿನ ಕವಿಗಳು ಜನಸಾಮಾನ್ಯರ ಬಗ್ಗೆಯೇ ಬರೆಯಬೇಕಾಗಿದೆ. ಸುಮಿತ್ ಅವರ ಕವನಗಳಲ್ಲಿ ಎಲ್ಲವೂ ಬರುತ್ತವೆ. ಇಡೀ ಜನಜೀವನವೇ, ಇದನ್ನು ಭಾವ, ಅನುಭಾವ ಏನು ಬೇಕಾದರೂ ಕರೆಯಿರಿ. ರೂಮಿ, ಸಾಕಿ, ಗಾಲಿಬ್, ಬಸವ, ಅಲ್ಲಮ, ಅಕ್ಕ, ಅವರ ಸಾಲಿನಲ್ಲೇ ಐಗೋಳ ಹುಸೇನ್ ಕೂಡ. ಎಲ್ಲೂ ಆರಾಧನಾ ಭಾವವಿಲ್ಲ, ಆದರೆ ಆಪ್ತತೆಯಿದೆ. ತೀರ ಸಾಮಾನ್ಯವಾದ ವಸ್ತು ವಿವರಗಳನ್ನು ಇವರು ಒಂದರ ಮೇಲೊಂದು ಪೇರಿಸುತ್ತಾರೆ. ಅವುಗಳಲ್ಲಿ ವೈವಿಧ್ಯವಿದೆ, ಅಂತರ, ಸಮಾನಾಂತರಗಳಿವೆ. ಚಕಿತಗೊಳಿಸುವ ಗುಣವಿದೆ. ಕೆ. ವಿ. ತಿರುಮಲೇಶ್, ಹಿರಿಯ ಕವಿ, ಸಾಹಿತಿ

avitha kavithe

ಇಲ್ಲಸ್ಟ್ರೇಷನ್ : ಸುಮಿತ್ ಮೇತ್ರಿ

ಧ್ಯಾನಕ್ಕೆ ಗುಹೆ ಬೇಕಿಲ್ಲ

ನಿಶ್ಯಬ್ದ ಪ್ರಾರ್ಥನೆಯ ಮಾಯಾ ಬಜಾರಿನ ಮುಂದೆ ದುಬಾರಿ ಪಾದರಕ್ಷೆಗಳ ಸಣ್ಣ ಸದ್ದು ಕಾಲದ ದಿವ್ಯ ನಿರ್ಲಕ್ಷ್ಯ ಪಯಣ ಸುದೀರ್ಘ ಎನಿಸಲು ಆಟಿಕೆಗಳನ್ನು ಆಗಂತುಕವಾಗಿ ಮುರಿದುಬಿಡುತ್ತೇವೆ

ಮಿಣುಕು ಮಿಣುಕು ಮಿಂಚಿನ ಕಣ್ಣುಗಳಲ್ಲಿ ಪರಿಚಯ ಆಗಿಬಿಡುವ ಮೊದಲೇ ಮಾತು ಬಿಕ್ಕಳಿಸಿ ಮೌನ ಉಸಿರಾಡುತ್ತಾ ಏಕಾಂತಕ್ಕೆ ಜಾರುತ್ತೇನೆ ಅಳಿವು ಉಳಿವು ಹುಟ್ಟು ಸಾವಿನ ದೌಲತ್ತಿನ ಮುಂದೆ ಉತ್ತರಿಸುವುದೇ ಅಂತಿಮವಲ್ಲ ಪ್ರಶ್ನೆಗಳ ಸುರಿಮಳೆ ನಿಲ್ಲಿಸಲಾಗದು

ದುಖಾನಿನಿಂದ ದೂರವಾಗಿ ಉಳಿದರು ಕೇಳದ ಹೃದಯಗಳ ಕಂಪನ ಚೆಲ್ಲಾಪಿಲ್ಲಿಯಾಗಿ ಬಿದ್ದ ಕನಸುಗಳು ಎದೆಯಲ್ಲಿ ಮುರಿದ ಮುಳ್ಳೊಂದು ತೂಕದ ಕಲ್ಲುಗಳನ್ನು ನಂಬಿದ ತಕ್ಕಡಿ ಪರಡೆ ಹಸಿದ ಹಸಿವಿಗೆ ಹಸಿವೇ ಉಣಿಸಿದ ಹಸಿವು ಕೂಡ ಇಲ್ಲಿ ತೀರ ಕ್ಷಣಿಕ

ಬಸವನ ಹುಳುವಿಗೆ ಮೂಡಿದ ರೆಕ್ಕೆಯ ಅಪೀಲ್ ಅರ್ಜಿ ಗುಜರಾಯಿಸಿ ಸತ್ಯಕ್ಕೆ ಬಣ್ಣ ಬಳಿದ ದಾಸ್ತಾನಿನ ಗೋದಾಮು ಆರೋಗ್ಯ ಕರ ವಾದ ಒಂದು ದಿನ ಸಾಕು ದೇವರನ್ನು ಇನ್ನೆಷ್ಟು ಸಿಂಗರಿಸುವುದು ಮೃತ್ಯುವನ್ನು ಚುಂಬಿಸಿದರು ಕಾಲ ನಮ್ಮ ಪರವಾಗಿರಲು ವಿಷವೂ ಅಮೃತವಾಗುತ್ತದೆ

ಶತಮಾನಗಳಿಂದ ಹರಿಯುವ ನದಿ ಇಲ್ಲವಾಗುವ ಸೂಚನೆ ಗ್ರಹಣ ಹಿಡಿದ ಕಣ್ಣುಗಳು ಮುಕ್ತ ಆಕಾಶದಲ್ಲಿ ಕಳೆಗುಂದಿದ ಸೂರ್ಯ ಹೃದಯದ ನಾಲ್ಕು ಕೋಣೆಗಳ ದುರಸ್ತಿ ಕಾಮಗಾರಿ ಪರಿಶೀಲನೆಯಲ್ಲಿದೆ ಈ ಧ್ಯಾನಸ್ಥ ಸ್ಥಿತಿಯಲ್ಲೂ ಕವಿಯ ಕಣ್ಣಲ್ಲಿ ಆತಂಕ ಆವರಿಸಿದೆ

ಮೈಲಿಗಲ್ಲುಗಳ ಎಣಿಸುತ್ತಾ ಎಣಿಸುತ್ತಾ ಲೆಕ್ಕ ತಪ್ಪಿದ ಮಳೆಗಾಲದ ಮಳೆ ಹಾರುವ ಹಕ್ಕಿಗಳ ತಪ್ಪಿದ ದಾರಿ ನನಗೂ ರೆಕ್ಕೆ ಇರಬಾರದಿತ್ತೇ? ಸಾಲು ಮರೆತ ಇರುವೆ ಹಿಂಡಿನ ಕೂಗು ಕೇಳಿ ಬರಲು ಕಲ್ಲುಗಳಿಗೆ ಈಗ ಮೊದಲಿನಂತೆ ಹಣ್ಣುಗಳು ಉದುರುವುದಿಲ್ಲ ಇನ್ನೂ ಈ ಋತುವಿನಲ್ಲಿ ಯಾವ ಹೂವು ಬೆಳೆಯಲಿ

ಜಗವ ಕಾಯುವ ಪತ್ತೆದಾರಿ ಮಹಾನೇತ್ರ ಕನ್ನಡಿಯಿಂದ ಕನ್ನಡಿಗೆ ಪ್ರತಿಬಿಂಬಿತ ಹೊಂಚು ಹಾಕುವ ಪ್ರತಿಫಲಿತ ಕನ್ನಡಿಗಳು ನಿರ್ಜೀವ ಪ್ರತಿಮೆಯ ದೇವರೇ ಸುಮ್ಮನಿದ್ದು ಬಿಡು ಸದ್ದು ಕೇಳುತ್ತಲೇ ಇದ್ದೇವೆ ಮಗುವಿನ ಸದ್ದು ಕನ್ಯೆಯ ಸದ್ದು ಹಸಿದ ಹೊಟ್ಟೆಯ ಸದ್ದು ಏಕೆ ನಾನು ನಿನ್ನನ್ನೇ ಅವಗಾಹನಿಸಿಕೊಂಡು ದಿಟ್ಟಿಸುತ್ತಾ ಕೂಡಬೇಕು

ಪುಣ್ಯ ಪುರುಷನ ಅಗೋಚರ ಉಪಸ್ಥಿತಿ ಕಣ್ಣು ಮೂಗು ತುಟಿ  ಕಿವಿ ಮೊಲೆ ಶಿಶ್ನ ಯೋನಿ ಕತ್ತರಿಸುವ ಹೊಲೆಯುವ ಬೀಳಿಸುವ ಕಟ್ಟುವ ಕಾಯಕ ಬಣ್ಣ ಬಣ್ಣದ ದಾರದಿಂದ ಹೊಲಿಗೆ ಹಾಕುವ ನಿಯೋಜಿತ ತುಕಡಿ ಸುಟ್ಟು ಕರಕಲಾದ ಹಕ್ಕಳೆಗಟ್ಟಿದ ಗಾಯದ ಚರ್ಮ

ಪುರಾವೆಗೆ ಗಾಳಿಯ ಮೂಟೆ ಕಟ್ಟಿಸುವ ತೀರ್ಪು ಕೆಂಪು ಕಟ್ಟಡದಲ್ಲಿ ಪವಿತ್ರ ಗ್ರಂಥ ಮೇಲೆ ಆಣೆ ಮಾಡಿಸುವಾಗ ನನ್ನ ಕವಿತೆಯನೊಮ್ಮೆ ಓದಬೇಕು ಸಾಕ್ಷಿ ಎಂದೂ ಅಂಗೀಕರಿಸಲಾರದ ನಿನ್ನ ನಿಸ್ಸಾಹಾಯಕೆ ಸಹಾನುಭೂತಿ ಇದ್ದೇ ಇದೆ

ಗಾಯಗಳಿಗೆ ಸಾಕ್ಷಿ ಹೇಳುವ ಪಾದದ ಗುರುತುಗಳು ಧ್ಯಾನಕ್ಕೆ ಗುಹೆಯೇ ಬೇಕಿಲ್ಲ ಕಟ್ಟಕಡೆಯ ಪ್ರಜೆಗೆ ತಲುಪದ ಜನತೆಯ ಕಣ್ಮಣಿಯೇ ಆಕ್ರಂದನದ ಮೊರೆ ಕೇಳು ಹಸಿವಾಗದಿರಲೆಂದು ದೇವರಲ್ಲಿ ಮೊರೆಯಿಟ್ಟೆ

ಒಲೆಯ ಧ್ಯಾನಸ್ಥ ಬೆಂಕಿ ಬದುಕಿನ ಬಿದಾಯಿ ಕೊಡುವ ಘಳಿಗೆ ಸುಳ್ಳು ಸತ್ಯವಾಗುವ ಸತ್ಯ ಸುಳ್ಳಾಗುವ ಪ್ರತ್ಯಕ್ಷ ಕಂಡರೂ ಕಣ್ಣಲಿ ತನ್ನನ್ನೇ ತಾನು ನೋಡುವ ದಾಖಲೆ ಕೇಳುವ ಕಾಲ

ಶಾರೀರಿಕ ಸಾವಿನ ಕಥೆ ಬಿಡಿ ಮಾನಸಿಕ ಸಾವಿನ ಸಂಖ್ಯೆಯ ಲೆಕ್ಕವಿಡಿ ಮಿದುಳಿಗೆ ಅಮಲಿನ ಬಾಣ ಬಿಟ್ಟು ಕುಹಕ ನಗು ಉಕ್ಕಿಸಿ ಕುಲುಮೆ ಕಕ್ಕುವ ಹೊಗೆ ಇದು ನಿರ್ನಾಮ ಇಲ್ಲವೇ ನಿರ್ಮಾಣ? ಇಡೀ ಜೀವ ಸಂಕುಲದ ಸಾವಿನ ಸುದ್ದಿ ಕೇಳಲು ಈ ನಿನ್ನ ಸದ್ದು ಶಾಶ್ವತವೇ ದೊರೆ!

avitha kavithe

ಇಲ್ಲಸ್ಟ್ರೇಷನ್ : ಸುಮಿತ್ ಮೇತ್ರಿ

ದೇವರ ಕಣ್ಣಲ್ಲಿನ ಸಾವಿರದ ಪ್ರಶ್ನೆಗಳು ಕಾಲದ ಚಂಡಮಾರುತ ಪ್ರತಿ ನೋವಿಗೂ ಒಂದು ಮುಖ ಗಾಯಗಳಿಗೆ ಸಾಕ್ಷಿ ಕೇಳುವ ಕಾಲದಲ್ಲಿ ಗಾಯಗಳನ್ನು ಮುಚ್ಚಿಕೊಂಡಿದ್ದೇನೆ ಆತ್ಮವನ್ನು ದಫನ್ ಮಾಡಿದ ಶ್ವೇತಪ್ರಿಯ ಸಂತ ಮೂಕನಾಗಿದ್ದಾನೆ ನಡೆದಾಡುವ ಗೋಡೆಗಳು ಎದೆಯ ಮೇಲಿನ ಪ್ರತಿಬಿಂಬ ಬಣ್ಣ ಬಣ್ಣದ ಬಟ್ಟೆ ಕಳಚಿಕೊಂಡು ವಿಳಾಸಕ್ಕೆ ತಲುಪದ ಪತ್ರಗಳು ಕೈಯಾರೆ ಸಾವಿನ ಪರದೆ ಕಿತ್ತೆಸೆದಿರಲು ಅದ್ಯಾವುದೋ ಕರೆಯೊಂದು ಕೇಳುತ್ತಲೇ ಇದೆ

ಇಲ್ಲಿ ಸಾವು ಪ್ರತಿ ಕ್ಷಣವೂ ಪಾದ ಚುಂಬಿಸುತ್ತದೆ ಸಾವೇ ಸತ್ತು ಹೋಗಿರಲು ಆಚರಣೆಯೊಂದು ಅಮಲು ಅಮಲೇರಿಸುವ ಪರಿ ಡೋಲಿ ಹೊತ್ತವನ ಹೆಗಲು ನೋವು ಯಾರಿಗೆ ಹೇಳುವುದು ಅದ್ಯಾರೋ ಕೂಗುತ್ತಾರೆ ಒಂದೇ ಸಮನೆ

ಕಾಲಿಗೆ ಚುಚ್ಚಿದ ಕಲ್ಲು ಮೇಣದ ಬತ್ತಿಯ ನಾಲಿಗೆ ಮಿಣುಕು ಮಿಣುಕೆನ್ನುತ್ತಲೇ ಕತ್ತಲೆ ಆವರಿಸುತ್ತದೆ ಜೊಲ್ಲು ನುಂಗುತ್ತಿದ್ದೇನೆ ಅಂತ್ಯ ಇರುವುದೂ ದೇವರ ಹೆಸರಿನಲ್ಲೋ ಇಲ್ಲ ಸಾವಿನ ಹೆಸರಿನಲ್ಲೋ ದೇವರ ಕಣ್ಣಲ್ಲಿ ಸಾವಿರದ ಪ್ರಶ್ನೆಗಳು

avitha kavithe

ಸುಮಿತ್ ಅವರ ಕವನ ಸಂಕಲನ

ಪ್ರತಿ ಸಲವು ಪ್ರಾರಂಭವೆ. ಬರವಣಿಗೆ ನಮಗೆ ಗೊತ್ತಿರದ ಸಂಗತಿಗಳಿಂದ ನಿರಂತರ ಹುಟ್ಟಿ ಬರುತ್ತದೆ ಹೊರತು ಗೊತ್ತಿರುವ ಸಂಗತಿಗಳಿಂದಲ್ಲ ಎನ್ನುವ ಡಬ್ಲ್ಯೂ ಎಚ್. ಮರ್ವಿನ್ ರನ್ನು ತಾಗಿಸಿಕೊಂಡು, ಚಲಾವಣೆಯ ನಾಣ್ಯಗಳಂತೆ, ಪ್ರಚಾರದ ಕರಪತ್ರಗಳಂತಾದರೆ ಹೇಗೆಂದು ಕಾವ್ಯದ ಕುರಿತಾಗಿ ಧ್ಯಾನಿಸುವಾಗೆಲ್ಲ ಏಕಾಂತದ ವಶವಾಗಿದ್ದೇನೆ. ನನ್ನೊಳಗೆ ನಾನೇ ಇಳಿಯುವ ಪರಿಗೆ ಕಾವ್ಯ ಆತ್ಮದ ದಾರಿಯ ಪಥಿಕನನ್ನಾಗಿಸಿದೆ. ನೋವನ್ನೇ ಹಚ್ಚಿಕೊಳ್ಳಲು ಆರಂಭಿಸಿದ, ಯಾರ ಹತ್ತಿರವೂ ಹೇಳಲಾಗದ, ಹೇಳಿದರೂ ಅರ್ಥವಾಗದ ಕಾಲಘಟ್ಟದಲ್ಲಿ, ಎಲ್ಲಾ ಬೇಲಿಗಳನ್ನು ಮೀರಿ, ತೋರಿಕೆಯ ಕೃತಕತೆ ಮುರಿದು, ಆತ್ಮದ ಗೋಡೆಯ ಗುಂಟ ಹಬ್ಬುವ ಶುದ್ಧಾನು ಶುದ್ಧ ಕಾವ್ಯದ ಬಳ್ಳಿಯಂತೆ ಹಬ್ಬಲು ಪಯಣದ ಒಂದೊಂದೇ ಹೆಜ್ಜೆ ಇಟ್ಟಿದ್ದೇನೆ.

ಈ ಕಾವ್ಯ ಒದಗಿಸುವ ಒಲವು, ಮುದ, ಸಾಮಿಪ್ಯ, ನೆಮ್ಮದಿ ಮತ್ತು ಸದಾ ಲೋಕಹಿತ ಬಯಸುವ ಭಾವಸ್ಪರ್ಶ ಅರಿಯಲು ಧ್ಯಾನಸ್ಥನಾಗದೆ ಇರಲಾರೆ. ಯಾವ ನೋವಿನ ಕಲೆಯೂ ನನ್ನ ಮನಸ್ಸಿನಲ್ಲಿ ಉಳಿಯುವುದಿಲ್ಲ, ನನ್ನೊಳಗಿನ ಜಗತ್ತಿನಲ್ಲಿ ಭಾವುಕತೆಯ ಹೊರತಾಗಿ ವೈರುಧ್ಯಗಳಿಗೆ ಮನ್ನಣೆಯಿಲ್ಲ. ಮೌನ ಅನಂತದಷ್ಟು ಆಳವಾದದ್ದು; ಮಾತು ಕಾಲದಷ್ಟು ಕ್ಷಣಿಕ ಅಂತ ಅರಿತ ನಾನು, ಕಾರಣಗಳನ್ನು ಮೀರಿ, ಈ ಕಾಲ, ಆ ಕಾಲ, ಯಾವುದೇ ಕಾಲ, ಸದಾ ಕಾಲದ ತುಮುಲಗಳನ್ನು ಹೊತ್ತುಕೊಂಡು, ಶಾಶ್ವತವಾಗಿ ಗಂಟು ಬಿದ್ದ ಮರೆಯಲಾಗದ ನೆನಪುಗಳೊಂದಿಗೆ ಜೀವಿಸಲು ಬಯಸಿದವನು. ನನ್ನೊಂದಿಗೆ ನಾನೇ ಮಾತು ಬಿಟ್ಟಿದ್ದೇನೆ. ಕ್ಷಣಕ್ಷಣವೂ ತಿರುಗುವ ಕಾಲದ ಮುಳ್ಳಿನ ಜೊತೆಗೆ ಮಾತನಾಡುವ ಹಂಬಲ ಮೂಡಿ ಸೋತಿದ್ದೇನೆ. ಒಂದು ಸೋಲು ಮರೆಯಲು ಇನ್ನೊಂದು ಸೋಲಿಗೆ ಸಿದ್ಧನಾಗಿದ್ದೇನೆ. ನನಗೆ ಗೊತ್ತಾಗಿ ಹೋಗಿದೆ ಕಾವ್ಯ ಭಾಷೆಯ ಹೊರತಾಗಿ ನನಗೆ ಇನ್ನೇನೂ ಗೊತ್ತಿಲ್ಲ ಎಂಬುವುದು.

ಕರಿಬೆಕ್ಕು

ಕಣ್ಣುಗಳಿಗೆ ನೀರಡಿಕೆ ಒಂದೇ ಸಮನೆ ಹೂವುಗಳು ಉದುರತೊಡಗಿವೆ ನನ್ನ ಸ್ವಂತ ಮನೆಯ ದಾರಿಯೇ ತಿಳಿಯದಾಗಿದೆ ಇನ್ನೂ ಮುಖಗಳನ್ನು ಹೇಗೆ ಗುರುತಿಸುವುದು?

ಒಂದು ಕವಿತೆ ಬರೆದು ಏನೇನೋ ಹೇಳಬೇಕೆಂದಿದ್ದೆ ಈಗ ಸುಮ್ಮನೆ ಇರುವುದೇ ವಾಸಿ ಎಂದೆನಿಸಿದೆ ದೀಪ ಸುತ್ತಿ ಸುತ್ತಿ ಸುತ್ತಿ ಈ ಹುಳು ತನ್ನನ್ನೇ ತಾನು ಸಮರ್ಪಿಸಿಕೊಂಡಿದೆ ಕಣ್ಣು ನೋಟುಗಳಲ್ಲಿ ಎಲ್ಲವೂ ವಿಚಿತ್ರ ಎನ್ನಿಸುತ್ತದೆ

ಎಲ್ಲವನ್ನೂ ದಿಟ್ಟಿಸುವುದ  ಅಷ್ಟು ಉಚಿತವಲ್ಲ ಮತ್ತು ಒಳ್ಳೆಯದಲ್ಲ ಮಾತನಾಡಬೇಕು ಗಟ್ಟಿಯಾಗಿ ದನಿ ಹೊರಡುತ್ತಿಲ್ಲ ದನಿ ಹೊರಡುತ್ತಿದೆ ಈಗ ಕೇಳುವವರಿಲ್ಲ ಆಟದ ನಿಯಮ ನನಗೆ ಸರಿಯಾಗಿ ಗೊತ್ತಿತ್ತೇ? ಅದು ಗೊತ್ತಿಲ್ಲ

ನನ್ನನ್ನು ಬಂಧಿಸಲಾಗಿದೆ ಮಾತಿನಲ್ಲಿನ ಸುಳ್ಳು ಮೌನದಲ್ಲಿನ ನಿಜ ಅದನ್ನೆಲ್ಲ ಹೇಗೆ ಹೇಳಲಿ ನಾನಾದರೂ ಈ ಕರಿಬೆಕ್ಕಿನ ಸ್ವಾತಂತ್ರ್ಯ ಸ್ವಾಭಿಮಾನ ನನಗೆ ಹೊಟ್ಟೆ ಕಿಚ್ಚು ತರಿಸುತ್ತದೆ ಕಾಲಭಾಷೆ ಮುಂದೆ ಅಂತ್ಯ ಮತ್ತು ಆದಿ ನಡುವೆ ಏನು ವ್ಯತ್ಯಾಸ? ಕುತ್ತಿಗೆವರೆಗೆ ಎತ್ತರಿಸಿದ ಗೋಡೆಯನ್ನು ಕೆಡುವಬೇಕಿದೆ ಇನ್ನೇನೂ ಸಾವು ಹತ್ತಿರ ಬರುತ್ತಿದೆ ಬಡಮಾನವನ ಸಾವಿನಲ್ಲಿ ಗೌರವಾನ್ವಿತ ದೇವರಿಗೆ ಖುಷಿಯೋ ಖುಷಿ.

avitha kavithe

ಕೈಬರಹದೊಂದಿಗೆ ಸುಮತ್ ಮೇತ್ರಿ

ಪಾದುಕೆ ಪುಷ್ಪ ಕಾಲದ ಪಾದಧೂಳು ಕ್ಷಣಭಂಗುರತೆಯ ಲಗಾಮು ಅವಿರ್ಭಾವದ ದೃಷ್ಟಿಭ್ರಮೆ ಮಹೋತ್ಸಾಹವನ್ನುಂಟು ಮಾಡುವುದೆ? ಅಹಂಕಾರ ಭಾವನೆಯನ್ನುಂಟು ಮಾಡುವ ಏನನ್ನೂ ಯಾವುದೂ ಬೇಡವೇ ಬೇಡ

ಮಧುಬಟ್ಟಲು ಹೀರುತ್ತಾ ಗುಡುಗುಡಿ ಸೇದುತ್ತಾ ಒಮ್ಮೆ ಹೀಗೆ ಇನ್ನೊಮ್ಮೆ ಹಾಗೆ ವಾಲಿಕೊಂಡು ಒಮ್ಮೆ ತಲೆ ಮೇಲೆತ್ತಿಕೊಂಡು ಇನ್ನೊಮ್ಮೆ ತಲೆತಗ್ಗಿಸಿಕೊಂಡು ಕೂಗುವ ಸಾರುವ ರಜಸ್ಸು ಬೇಡೆನಗೆ

ಯಾವುದು ಮಹತ್ತರವಾದುದು? ದುರ್ಗಾ ಪೂಜೆ ದರ್ಗಾ ನಮಾಜ್ ಪರಮೋತ್ಕೃಷ್ಟ ನಿರ್ವಿಕಲ್ಪ ಅನುಭವ ಸೂಫಿ ಸಂನ್ಯಾಸಿಯ ದೀಕ್ಷೆ ಅಲ್ಲಾಹುವಿನ ಆಜಾನ್ ರಾಮನಾಮಜಪ

ನಿರಪೇಕ್ಷವೂ ಸಾಪೇಕ್ಷವೂ ಅಲ್ಲದ ಕಾವ್ಯದಲ್ಲಿ ನೆಲೆಗೊಂಡ ಕವಿಯೇ ಕೆಲವೊಮ್ಮೆ ಹುಚ್ಚನಂತೆ ಕೆಲವೊಮ್ಮೆ ಮಗುವಿನಂತೆ ಕೆಲವೊಮ್ಮೆ ಪ್ರೇಮಿಯಂತೆ ಕೆಲವೊಮ್ಮೆ ಅಮ್ಮನಂತೆ ಕೆಲವೊಮ್ಮೆ ಮೂರ್ಖನಂತೆ ಕೆಲವೊಮ್ಮೆ ವೈರಾಗಿಯಂತೆ ಏಕೆ ಹೀಗೆ ಅಲೆಯುವೆ

ಜಗನ್ಮಾತೆಯೇ ಪಾದುಕೆಗೆ ಪುಷ್ಪವೊಂದು ಸಮರ್ಪಣೆ ಯಾರದೋ ಹೆಸರ ಮೇಲೆ ಅಚ್ಚಾಗು ಪ್ರಾರ್ಥನೆಯ ಕಾವ್ಯವೇ ಸುಮ್ಮನೆ ಪ್ರಾಪಂಚಿಕನನ್ನಾಗಿ ಮಾಡಬೇಡ ಬಯಸದೆ ಎಲ್ಲವೂ ಸಿಕ್ಕಿರುವಾಗ ನಿನ್ನನ್ನು ಉಸಿರಾಡಲು ಅವಕಾಶ ಕೊಡು

*

ಪರಿಚಯ : ವಿಜಯಪುರ ಜಿಲ್ಲೆಯ ಹಲಸಂಗಿಯಲ್ಲಿ ಜನನ. ಓದು-ಬರಹ, ಕಾವ್ಯ, ಕಾಡು, ಸುತ್ತಾಟ ಇವರ ಅಭಿರುಚಿ. ಮೌನ, ಧ್ಯಾನ ಅಂದರೆ ಬಲು ಇಷ್ಟ. ಏಕಾಂತ ಇವರ ಪಾಲಿನ ಸ್ವರ್ಗ. ಪೋಟೋಗ್ರಫಿ ಮೆಚ್ಚಿನ ಹವ್ಯಾಸಗಳಲ್ಲೊಂದು. ‘ಸುಗಮ’ ಅಂತರ್ಜಾಲ ಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುದೀರ್ಘ ಕಾಲ ಕಾವ್ಯದೊಂದಿಗೆ ಜೀವಿಸಿದ ತರುವಾಯ ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ, ಕರ್ನಾಟಕ ಅಕಾಡೆಮಿ ಪ್ರಶಸ್ತಿ ಒಳಗೊಂಡಂತೆ ಅನೇಕ ಪುರಸ್ಕಾರಗಳಿಗೆ ಭಾಜನವಾಗಿದೆ.

ಇದನ್ನೂ ಓದಿ : Poetry; ಅವಿತ ಕವಿತೆ : ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ

Published On - 10:40 am, Sun, 2 May 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ