ಶರಣು ಮಣ್ಣಿಗೆ : ಆಗುವುದೆಲ್ಲಾ ಎಷ್ಟೊಂದು ಒಳ್ಳೆಯದಕ್ಕೆ! ಇದೋ ನಿನಗೆ ವಂದನೆ ನನ್ನೊಳು ಹೊಕ್ಕ ರೋಗವೇ..

‘ಹೋಬಳಿಯಿಂದ ಸಾಮಾನುಗಳನ್ನೆಲ್ಲಾ ಹೊತ್ತು ಆ ಹೊಲ ಸೇರಿದೆವು. ರಾತ್ರಿಯಿಡೀ ಜೋರು ಮಳೆ.‌ ಮಳೆಗೊ ಬಿಸಿಲಿಗೊ ನಿಲ್ಲಲು‌ ಕಟ್ಟಿದ್ದ ಒಂದೇ ಕೋಣೆಯಲ್ಲಿ ಐದೂ ಜನ ಕಳೆದೆವು. ಮುಗಿಲಿಗೆ ತೂತು ಬೀಳುವಂತೆ ಬಿದ್ದ ಮಳೆಗೆ ಹಂಚುಗಳೆಲ್ಲಾ ಹಾರಿಹೋಗಿದ್ದವು. ಅಕ್ಕಪಕ್ಕ ಕಾಡು. ಬೆಳಕು ಹರಿದ ಮೇಲೆ ಒಂದಿಷ್ಟು ಜನರು ಬಂದು ಬುದ್ಧಿ ಹೇಳಿದರು. ಮಳೆಗೆ ಸತ್ತೇ ಹೋಗುತ್ತೀರಿ. ಮಕ್ಕಳ ಶಾಲೆ ಹಾಳಾಗುತ್ತದೆ ಅಂತೆಲ್ಲಾ. ಆದರೆ ಅಪ್ಪ ಅಮ್ಮ ಇಟ್ಟ ಹೆಜ್ಜೆ ಹಿಂದೆ ತೆಗೆಯಲಿಲ್ಲ.’ ಅರ್ಚನಾ ಫಾಸಿ

ಶರಣು ಮಣ್ಣಿಗೆ : ಆಗುವುದೆಲ್ಲಾ ಎಷ್ಟೊಂದು ಒಳ್ಳೆಯದಕ್ಕೆ! ಇದೋ ನಿನಗೆ ವಂದನೆ ನನ್ನೊಳು ಹೊಕ್ಕ ರೋಗವೇ..
ಮತ್ತೆ ಹೊಲದ ಹಾದಿಗೆ ಅರ್ಚನಾ ಫಾಸಿ
Follow us
ಶ್ರೀದೇವಿ ಕಳಸದ
|

Updated on:May 02, 2021 | 4:45 PM

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

ನಮ್ಮದೂ ಅಂತೊಂದು ಹಳ್ಳಿಯಿದ್ದರೆ, ಅಲ್ಲೊಂದಿಷ್ಟು ಜಮೀನಿದ್ದರೆ, ಅದರೊಳಗೊಂದು ಮನೆಯೂ ಇದ್ದು ಮನೆತುಂಬ ದನಕರುಗಳು, ಕೋಳಿಕುರಿಗಳು, ಮಕ್ಕಳು, ಒಡಹುಟ್ಟಿದವರು ಮತ್ತು ಹೆತ್ತವರೂ ಜೊತೆಗಿದ್ದರೆ ಮಹಾನಗರವೇ ಯಾಕೆ ಬೇಕು ಎಂದು ಊರಕಡೆ ಮುಖ ಮಾಡಿದ್ದಾರೆ ಅರ್ಚನಾ ಫಾಸಿ

sharanu mannige

ಆ ಮಂದೆಯಿಂದ ಸರಿದು ಈ ಮಂದೆಗೆ…

ದುಕು ಯಾವ ಕ್ಷಣ ಹೇಗೆ ತಿರುವು ಪಡೆದುಕೊಳ್ಳುತ್ತೊ ಯಾರಿಗೆ ಗೊತ್ತು. ಹಾಗೆ ನೋಡಿದರೆ, ನನಗೆ ಬದುಕು ಯಾವತ್ತೂ ಕೌತುಕದ ಸಂಗತಿಯಾಗಿರಲೇ ಇಲ್ಲ. ನಾನು ಬೆಳೆದದ್ದೇ ತುಂಬು ಪ್ರಕೃತಿಯ ಮಡಿಲಲ್ಲಿ. ಸ್ವಚ್ಛ ಶುದ್ಧ ಗಾಳಿಯ ತಣ್ಣನೆಯ ಹಂಚಿನ‌ಮನೆ, ಹೊಲದ ಮಧ್ಯೆ. ಹೀಗಾಗಿ ನಿಸರ್ಗದ ಮಡಿಲಲ್ಲಿ ನಡೆಯುವ ಕೌತುಕಗಳು ಇನ್ನಷ್ಟು ಜೀವನ್ಮುಖಿಯಾಗಿಸಿದವು. ಹುಟ್ಟಿಮುಳುಗುವ ಸೂರ್ಯ, ರಾತ್ರಿಯ ಚಂದಿರ, ನಕ್ಷತ್ರಗಳು, ಅಮವಾಸ್ಯೆ ಕತ್ತಲು, ಬೆಳದಿಂಗಳು, ಸುಯ್ಯನೆ ಸುಳಿಯುವ ಗಾಳಿ, ಮೌನದಿ ಹರಿಯುವ ನದಿ, ಕಾಡಿನ ಮೌನ, ಹಕ್ಕಿಗಳ ಕಲರವ, ಆರ್ಭಟಿಸುವ ಸುರಿಯುವ ಮಳೆ, ಮಂಜಿನ ಬೆಳಗು, ಹೊಂಬಿಸಿಲಿಗೆ ಆಗಷ್ಟೆ ಅರಳುವ ಹೂ… ಒಂದೇ ಎರಡೇ?  ಪ್ರೀತಿಸಲು.

ಇದಕ್ಕೆಲ್ಲಾ ಕಾರಣ ನನ್ನಪ್ಪ ಅಮ್ಮ ಮತ್ತು ಅವರ ಜೀವನಪ್ರೀತಿ. ನಾನು ಹುಟ್ಟಿದ್ದು ಆರ್ಮಿ ಆಸ್ಪತ್ರೆಯ ಪಂಜಾಬ್, ಬೆಳೆದಿದ್ದೆಲ್ಲಾ ಕನ್ನಡದ ನೆಲ. ಪಂಜಾಬ್, ಹರಿಯಾಣಾದಲ್ಲಿ ಅಪ್ಪ ಮಿಲಿಟರಿ ಸರ್ವಿಸ್​ನಲ್ಲಿದ್ದಾಗ ಅವರಿಗೊಂದು ಕನಸಿತ್ತು; ವಿಶ್ರಾಂತ ಜೀವನ ವ್ಯವಸಾಯ, ಎಮ್ಮೆ ಆಕಳುಗಳೊಂದಿಗೆ ಕಳೆಯಬೇಕು. ನಿವೃತ್ತಿಯಾದ ನಂತರ ಅವರಿಚ್ಛೆಯಂತೆ ಸರ್ಕಾರದಿಂದ ಜಮೀನು ದೊರೆಯಿತು. ಹಾಗಂತ ಅಪ್ಪಟ ಜಮೀನೇನಲ್ಲ. ಕುರುಚಲು ಗಿಡಗಳಿಂದ ಕೂಡಿದ ಗೋಮಾಳದಂತಹ ಜಾಗ. ಅದನ್ನು ಅಪ್ಪ ಸರಿಪಡಿಸಿದರು. ಬೋರ್​ವೆಲ್ ಕೊರೆಸಿದರು. ನೀರು ಚಿಮ್ಮಿತು. ಆತನಕ ನಾವು ಮೂರು ಜನ ಮಕ್ಕಳು ಅಪ್ಪ ಅಮ್ಮನೊಂದಿಗೆ ಹೋಬಳಿ ಥರದ ಊರಲ್ಲಿ ಒಂದು ವರ್ಷ ಇದ್ದೆವು. ಆನಂತರ ಹೊಲವನ್ನು ಇತರರಿಗೆ ಯಾಕೆ ಲಾವಣಿಗೆ ಹಾಕುವುದು ಎಂದು ಹೊಲದಲ್ಲೇ ವಾಸಿಸಲಾರಂಭಿಸಿದೆವು.

sharanu mannige

ಹರಿವ ಕಾರುಣ್ಯವತಿ

ಆ ದಿನ‌ ನನಗಿನ್ನೂ ನೆನಪಿದೆ. ಅದಕ್ಕಿಂತ ಹೆಚ್ಚಾಗಿ ಅದು ನನ್ನ ಬಾಲ್ಯದ ನೆನಪಿನಬುತ್ತಿಯ ಮೊದಲ ಕಥೆ. ನಾವು ಹೋಬಳಿಯಿಂದ ನಮ್ಮ‌ ಸಾಮಾನುಗಳನ್ನೆಲ್ಲಾ ಹೊತ್ತು ಆ ಹೊಲ ಸೇರಿದೆವು. ರಾತ್ರಿಯಿಡೀ ಜೋರು ಮಳೆ.‌ ಮಳೆಗೊ ಬಿಸಿಲಿಗೊ ನಿಲ್ಲಲು‌ ಕಟ್ಟಿದ್ದ ಒಂದೇ ಕೋಣೆಯಲ್ಲಿ ರಾತ್ರಿ ಕಳೆದೆವು. ಮುಗಿಲಿಗೆ ತೂತು ಬೀಳುವಂತೆ ಬಿದ್ದ ಮಳೆಗೆ ಮೇಲಿನ ಹಂಚುಗಳೆಲ್ಲಾ ಹಾರಿಹೋಗಿದ್ದವು. ಮಬ್ಬುಗತ್ತಲಿನಲ್ಲಿ ನೋಡಿದರೆ ಮನೆಯ ಹಿಂದಿನ ಕೆರೆ ಪೂರ್ತಿ ತುಂಬಿತ್ತು. ಮನೆಯ ಮೇಲೊಂದಿಷ್ಟು ಇನ್ನೊಬ್ಬ ರೈತರ ಜಮೀನು. ಅಲ್ಲಿ ಮತ್ತೊಂದು ಕೆರೆ. ಅಕ್ಕ ಪಕ್ಕ ಕಾಡು. ಮಧ್ಯೆ ನಮ್ಮದೊಂದೇ ಕೆಂಪು ಹೆಂಚಿನ ಒಂದೇ ಕೋಣೆಯ ಕರಿನೆಲದ ಮನೆ.‌ ಕೆಳಗೆ ಕಾಲಿಟ್ಟರೆ ನೀರು ಜುಯ್ಯ ಎಂದು ಪಾದ ತೋಯಿಸುತ್ತಿತ್ತು. ಬೆಳಕು ಹರಿದ ಮೇಲೆ ಒಂದಿಷ್ಟು ಜನರು ಬಂದು ನಮಗೆ ಬುದ್ಧಿ ಹೇಳಿದರು. ವಿಪರೀತ ಮಳೆಗೆ ಸತ್ತೇ ಹೋಗುತ್ತೀರಿ. ಮಕ್ಕಳ ಶಾಲೆ ಹಾಳಾಗುತ್ತದೆ ಅಂತೆಲ್ಲಾ. ಆದರೆ ಅಪ್ಪ ಅಮ್ಮ ಇಟ್ಟ ಹೆಜ್ಜೆ ಹಿಂದೆ ತೆಗೆಯಲಿಲ್ಲ. ಓದದೇ ಇದ್ದರೆ ಹೊಲ ಇದೆ, ವ್ಯವಸಾಯ ಮಾಡಿಕೊಂಡು ಇರುತ್ತಾರೆ ಎಂದುಬಿಟ್ಟರು.

ಅಲ್ಲಿಂದ ಶುರುವಾದದ್ದು ಹೊಲದ ಬದುಕು. ನಾನಾಗ ಎರಡನೇ ತರಗತಿ. ರಸ್ತೆ ಇರಲಿಲ್ಲ ಶಾಲೆಗೆ, ಮೂರು ಕಿ.ಮೀ‌ ನಡೆದುಕೊಂಡೇ ಕೆಸರು ಗದ್ದೆಗಳಲ್ಲಿ ಹೋಗಬೇಕಿತ್ತು. ಪಕ್ಕದಲಿ ದೊಡ್ಡದಾದ ಕೆರೆ.‌ ಮಳೆ ಬಂದರೆ ಅದರ ಅಲೆ ದಡಕ್ಕೆ ಗಾಳಿಗೆ ಅಪ್ಪಳಿಸುತ್ತಿದ್ದ ಶಬ್ದ ಯಾವ ಚಂಡಮಾರುತಕ್ಕೂ ಕಡಿಮೆ ಇರಲಿಲ್ಲ. ಅಲ್ಲಿ ಅಕ್ಕಪಕ್ಕದಲ್ಲೂ ಹೊಲಗಳು. ಮಳೆಗಾಲಕ್ಕೆ ಹಸಿರಿನಿಂದ ತುಂಬಿರುವ ಭತ್ತದ ಗದ್ದೆ, ಚಳಿಗಾಲಕ್ಕೆ, ಬೇಸಿಗೆಗೆ ಮೈಮರೆಸುವ ಹಸಿರು ತುಂಬಿದ ಜೋಳ, ರಾಗಿ, ಶೇಂಗಾ, ಹೆಸರು, ಕಡ್ಲೆ, ಕಬ್ಬು, ಹತ್ತಿ, ಸೂರ್ಯಪಾನ… ಒಂದೆರೆಡೆ? ನನಗಂತೂ ಆ ಹಸಿರು ಪೈರು, ಕೆರೆ, ಮಳೆ, ವಟಗುಟ್ಟುವ ಕಪ್ಪೆಗಳು, ಏಡಿ… ಸ್ವರ್ಗದ ಉತ್ತುಂಗದಲ್ಲಿ ಬಾಲ್ಯ. ಹಾಗೆಯೇ ವ್ಯವಸಾಯವೆಂದರೆ ತಪಸ್ಸಿನಂತೆ ಸ್ವೀಕರಿಸಿದ್ದ ತಂದೆಯಿಂದ ದಿನಕ್ಕೊಂದು ಪಾಠ.

sharanu mannige

ಕಾಲಡಿಯ ಮಣ್ಣು ತಲೆಮೇಲಿನ ಮಂಜು ಸಾಕು ಬದುಕಿಗಿಷ್ಟು.

ಅವರು ಹೊಲದಲ್ಲಿ ಹೊಸಹೊಸ ಬೆಳೆ ಬೆಳೆಯುವ ಉತ್ಸಾಹ ಪ್ರತೀಸಲ ನನ್ನನ್ನು ಸೋಜಿಗಗೊಳಿಸುತ್ತಿತ್ತು. ಈಗಲೂ ಅವರದು ನಿಲ್ಲದ ಉತ್ಸಾಹ. ಹರೆಯ‌ ಕಳೆದರೂ ವ್ಯವಸಾಯದ ಬಗ್ಗೆ ಅವರ ವ್ಯಾಮೋಹ ಇನ್ನೂ ಹಾಗೇ ಇದೆ. ನಾನೋ ಅಪ್ಪನ ಪಡಿಯಚ್ಚು. ಒಂದು ಬೆಳಗು ಐದುಗಂಟೆಗೆ ಕನಸಿನಲ್ಲಿ ಬಂದಂತೆ ನಾಲ್ಕೈದು ಆಕಳುಗಳು ಮನೆಗೆ ಬಂದಿದ್ದವು; ಕೆಂಪಿ, ಪಿನ್ನಿ, ಮುನ್ನಿ, ಲಾಲಿ, ಗೌರಿ, ಗಂಗಾ, ಕಲ್ಯಾಣಿ, ಗೋಪಮ್ಮ ಮತ್ತು ಎರಡು ಎತ್ತು ಕೆಂದ, ಕರಿಯಾ. ಚಕ್ಕಡಿ, ಹೊಲ ಉಳುವ ಸಾಮಾನುಗಳೂ ಬಂದವು. ಅಪ್ಪ ಅಮ್ಮ ದನಗಳ ಹಾಲು ಹಿಂಡಲು ಹೋದಾಗ ನಾನು ಅವರ ಹಿಂದೆಯೇ ಹೋಗಿ ದನದ ಕೊಟ್ಟಿಗೆಯೊಳಗೆ ಕೂತಿರುತ್ತಿದ್ದೆ. ಹಾಲು ಅಂದರೆ ದಿನಕ್ಕೆ ನಾಲ್ವತ್ತು ಲೀಟರ್! ನಾನೂ ಆಕಳ ಕೆಚ್ಚಲಿಗೆ ಕೈ ಹಾಕಿ ಹಾಲು‌ ಹಿಂಡೊದು. ಅವರು ತಮ್ಮ ಮಿಲಿಟರಿ ಕಥೆ ಹೇಳೋದು. ಹೊಸಹೊಸ ಬೆಳೆಗಳ ಬಗ್ಗೆ ಚರ್ಚಿಸೋದು. ಮತ್ತೆ ಶಾಲೆಯಿಂದ ಮರಳಿ ಬಂದಮೇಲೆ ಕೊಟ್ಟಿಗೆಯಲ್ಲಿ ಇದೇ ದೃಶ್ಯ ಪುನರಾವರ್ತನೆಯಾಗುತ್ತಿತ್ತು. ಆನಂತರ ಹಾಸ್ಟೆಲ್, ಓದು, ನೌಕರಿ ಎಂದು ದೂರ ಇದ್ದರೂ ಮಣ್ಣಿನೊಂದಿಗಿನ ವ್ಯಾಮೋಹ ತಗ್ಗಲೇ ಇಲ್ಲ. ಇನ್ನು ಅಪ್ಪನಿಗೆ ಹೊಲದಗುಂಟ ಮರ ಬೆಳೆಸೋ ಆಸೆ.‌ ಮೊದಲು ಗಾಳಿಮರ ಅಂತ ಬೆಳೆಸಿದ್ದರು. ಅದನ್ನು ಕಟಾವು ಮಾಡಿ‌ ನೀಲಗಿರಿ, ಆಕೇಷಿಯಾ ಹಚ್ಚಿದರು.‌‌ ನಂತರ ಅವು ಅಂತರ್ಜಲ ಹೀರಿಕೊಳ್ಳುತ್ತವೆ ಎಂದು ಜೆಸಿಬಿಯಿಂದ ನೆಲಸಮಗೊಳಿಸಿದರು. ಈಗ ಹೆಬ್ಬೇವು, ಮಹಾಗನಿ.

ನಾನು ಕಾಲೇಜು ಅಥವಾ ನೌಕರಿಯಲ್ಲಿದ್ದಾಗ ರಜೆಯಲ್ಲಿ ಊರಿಗೆ ಬಂದಾಗ ಮೊದಲು ಸಿಗುತ್ತಿದ್ದುದೇ ಅಪ್ಪ. ಬಸ್ಸಿನಿಂದ ಇಳಿದ ನನ್ನನ್ನು ಕರೆದೊಯ್ಯಲು ಬರುತ್ತಿದ್ದರು. ‘ಹೇಗಿದ್ದೀಯಾ?’ ಎನ್ನುವ ಪದ ಅಲ್ಲಿ ನುಸುಳದೆ ಭತ್ತ ಹೇಗಿದೆ, ಜೋಳ ಹೇಗಿದೆ, ಆಕಳು, ಎಮ್ಮೆ, ನಾಯಿ ಹೇಗಿದಾವೆ‌. ಬೆಳೆ ಎಷ್ಟು ಬಂತು, ಎಷ್ಟು‌ ನಷ್ಟ ಆಯಿತು, ಆಳುಗಳ‌‌‌‌ ಲೆಕ್ಕ, ಎರೆಹುಳ ಗೊಬ್ಬರ… ಇನ್ನು‌ ಮನೆಗೆ ಹೋದರೆ ಅಮ್ಮನದೂ ಅದೇ ಕಥೆ. ಅಪ್ಪ ಎಲ್ಲ ವರದಿ ಒಪ್ಪಿಸಿದ್ದಾರೆಂದು ಹುಸಿಕೋಪ ವ್ಯಕ್ತಪಡಿಸುತ್ತಿದ್ದರು. ನನ್ನೊಂದಿಗೆ ಮಾತನಾಡಲು ಅಪ್ಪ ಹೊಲದ ಬದುವಿಗೆ ಕರೆದೊಯ್ಯುತ್ತಿದ್ದರು. ಅಂಥದ್ಧೇನು ನಿಮ್ಮಿಬ್ಬರ ಮಾತುಕತೆ ಎಂದು ಅಮ್ಮ ಓರೆಗಣ್ಣು ಮಾಡುತ್ತಿದ್ದರು ಒಂದೊಂದು ಸಲ. ಅನಂತರ ಕಾಫಿ ಕುಡಿದು ಬರೀಗಾಲಿನಲಿ ಹೊಲದ ತುಂಬಾ ಓಡಾಡುವುದೇ ಮೊದಲ ಕೆಲಸವಾಗುತ್ತಿತ್ತು. ಆ ಮಣ್ಣಿನ ಘಮ, ಅದರೊಳಗಿನ ಮೃದು… ಒಳ್ಳೆಯ ಮೈಸೂರು ಪಾಕಿನಲಿ ಪಾದವಿಟ್ಟಂತೆ.

sharanu mannige

ಕಾಲಕಾಲಿಗೆ ಕೋಳಿಯ ಕಾಲು

ಕೋಳಿಮನೆ, ದನದಮನೆ, ಕರುಗಳು, ನಾಯಿ, ಗಿಡ, ಮರ ಎಲ್ಲ ಸುತ್ತಿ ಮನೆಯೊಳಗೆ ಬರುವುದು. ಇನ್ನು ನನಗೆ ಯಾವಾಗಲೂ ಹೂವಿನ ಗಿಡಗಳನ್ನ ತಂದು ನೆಡೋದು ಭಾರೀ ಖುಷಿ. ಅಮ್ಮನಿಗೆ ಪೂಜೆಗಾಗಿ ಎಲ್ಲ ಕಡೆಯಿಂದ ಗಿಡ ತಂದು ನೆಟ್ಟಿದ್ದೇನೆ. ತಿಂಗಳಿಗೊಮ್ಮೆ ಊರಿಗೆ ಬರಲು ರಾತ್ರಿ ಬಸ್ಸಿಗೆ ಹತ್ತುವಾಗ ಒಂದೆರೆಡು ಗಿಡ, ಒಂದು ಪುಸ್ತಕ, ಅಪ್ಪನಿಗೆ ಸೋನ್​ಪಾಪಡಿ ಮತ್ತು ಮೈಸೂರು ಪಾಕ್ ಕಾಯಂ. ರಾತ್ರಿ ಸಿಕ್ಕ ಕೆಎಸ್ಆರ್​ಟಿಸಿ ಬಸ್ಸು ಹತ್ತಿ ಹೊರಟರೆ ಬೆಳಗ್ಗೆ ಅಪ್ಪ ಬಸ್​ಸ್ಟಾಪಿನಲ್ಲಿ ಹಾಜರ್. ಸಾಕಷ್ಟು ಸಲ ನನ್ನದು ಅಚಾನಕ್ ಪಯಣ. ಯಾವುದಕ್ಕೂ ಲೆಕ್ಕಾಚಾರವಿಲ್ಲ. ಸಿಕ್ಕ ಗಾಡಿ, ಲಾರಿ, ಬಸ್ಸು ಎಲ್ಲದರಲ್ಲಿಯೂ ಸುತ್ತಿದ್ದಿದೆ. ಆದರೆ ಯಾವತ್ತೂ ಯಾವ ಕೆಟ್ಟ ಅನುಭವವೂ ನನಗೆ ಆಗಲಿಲ್ಲ. ಡ್ರೈವರ್​ಗಳ ಕಥೆ ಕೇಳಿ ಪಾಪ ಎಷ್ಟು ಕಷ್ಟ ಪಡುತ್ತಾರಲ್ಲ ಅನ್ನಿಸುತ್ತಿತ್ತು. ಸರ್ದಾಜಿಗಳು, ಅವರ ಶಾಯರಿ, ಹಾಡುಗಳು, ತಮಿಳಿನ ಕಿಂಕರರಂಥವರು ಅವರ ಜೋಕುಗಳು ಬದುಕಿಗೆ ಭರಪೂರ ಅನುಭವ.

ನಾನು ವ್ಯವಸಾಯ ಮಾಡಲೇಬೇಕು ಎನ್ನುವ ನಿರ್ಧಾರ ಮಾಡಿಯಾಗಿತ್ತು. ಅಪ್ಪ ಒಪ್ಪಿದರೂ ಅಮ್ಮ ಒಪ್ಪಿರಲೇ ಇಲ್ಲ. ಬೇಡ, ನೀನು ನೌಕರಿಯೇ ಮಾಡು ಎಂದು ಆಕೆ. ಅವತ್ತು ಕಾರಿನಲ್ಲಿ ನನ್ನ ತಮ್ಮ ಪ್ರಭು ಬಂದಿದ್ದ ಬಸ್ಸು ಹತ್ತಿಸಲು. ನಾನು ಅವನಿಗೆ ಹೇಳಿದ್ದೆ, ಇನ್ನೊಂದೆರೆಡು ವರ್ಷ ಕಣೋ. ವಾಪಾಸು ಬಂದು ಪೂರ್ತಿ ಹೊಲ ಮಾಡುತ್ತೇನೆ ನೌಕರಿ ಸಾಕಿನ್ನು ಅಂದಿದ್ದೆ. ಅವತ್ತು ಬಹುಶಃ ಅಶ್ವಿನಿ ದೇವತೆಗಳೋ ಕೃಷ್ಣನೋ ಅಸ್ತು ಅಂದಿರಬೇಕು. ಯಾವ ಬಾಯಿಯಿಂದ ಅಂದಿದ್ದ್ಯೋ ಹೊಲ‌ ಮಾಡುತ್ತೇನೆ ಅಂತ ಅಂತೂ ಬಂದೇಬಿಟ್ಟೆಯಲ್ಲ ಎಂದು ಅಮ್ಮ ತಮಾಷೆ ಮಾಡುತ್ತಾಳೆ ಈಗ. ನನಗೆ ನಗುವೋ ನಗು.

sharanu mannige

ಯಾರಿಲ್ಲಿ ನನ್ನ ಕಟ್ಟಿ ಹಾಕಿದವರು?

ಈಗ ವ್ಯವಸಾಯ ನನ್ನ ಜೀವನದ ಭಾಗ. 2019 ನಂತರ ಜೆನೆಟಿಕ್ ಅನೀಮಿಯಾ ಜೊತೆ ಹೋರಾಡುತ್ತಿರುವಾಗ ಉಸಿರು ಕೊಟ್ಟಿದ್ದೇ ಈ ವ್ಯವಸಾಯ. ಮತ್ತೆ ಮರಳಿ ಮಣ್ಣಿಗೆ ಎಂದು ನಾನು ಊರು ಸೇರಿದೆ. ಕಾಯಿಲೆ ಉಲ್ಬಣಗೊಂಡಾಗಲೂ ಹೊಲ ಸುತ್ತಿದ್ದೇ. ತೋಟದಲ್ಲಿ ಪುಲ್ವಾಮಾ ಸೈನಿಕರ ನೆನಪಿಗೆ ಎಂಬತ್ತು ತೆಂಗಿನಸಸಿ ನೆಟ್ಟೆವು. ಮಾವು ಮೊದಲೇ ಇತ್ತು. ಪೇರಲ, ಪಪ್ಪಾಯಿ, ಚಿಕ್ಕು, ನೇರಳೆಯೂ ಬೆಳೆಯುತ್ತಿವೆ. ಹದಿನಾರು ಕುರಿಗಳೂ ಇವೆ. ಚಿಕಿತ್ಸೆಗಾಗಿ ಈಗ ಬೆಂಗೂರಿನಲ್ಲೇ ವಾಸ. ಅಪ್ಪ ನಾನು ಭೇಟಿಯಾಗಿ ನಾಲ್ಕು ತಿಂಗಳುಗಳು ಕಳೆದವು. ಅವರು ಎಲ್ಲಿಯೂ ಹೋಗುವುದಿಲ್ಲ ಏಕೆಂದರೆ ಎಮ್ಮೆ, ಆಕಳುಗಳ ಹಾಲು ಅವರೇ ಹಿಂಡಬೇಕು. ತಮಾಷೆ ಎಂದರೆ ಈಗಲೂ ನಾವಿಬ್ಬರೂ ಫೋನ್​ನಲ್ಲಿ ಮಾತನಾಡುವುದು, ಯಾವ ಬೆಳೆ ಹಾಕೋಣ ಅಂತಲೇ. ವಯಸ್ಸಾಯಿತು ಎಂದರೆ ಒಪ್ಪಿಕೊಳ್ಳುವುದಿಲ್ಲ. ಹುಷಾರಾಗಿ ಬೇಗ ವಾಪಸ್ಸಾಗು ಬಹಳ ಕೆಲಸಗಳು ಬಾಕಿ ಇವೆ ಎನ್ನುತ್ತಾರೆ. ಈಗಲೂ ಐದಕ್ಕೆ ಏಳುವ ಎಪ್ಪತ್ಮೂರು ವರ್ಷದ ಮಿಲಿಟರಿ ಯುವಕ ನನ್ನಪ್ಪ. ಈತನಕ ಬೇಸರ ಎನ್ನುವ ಪದವೇ ಅವರಿಂದ ಬಂದಿದ್ದಿಲ್ಲ. ಬೆಳೆ ನಷ್ಟವಾದಾಗಲೂ ಜಗತ್ತಿಗೆ ಆಗಿದ್ದು ನಮಗೂ ಆಗುತ್ತದೆ. ಎಷ್ಟು ಸಿಗಬೇಕೋ ಅಷ್ಟು ಸಿಗುತ್ತದೆ. ಬೇಸರವೇಕೆ? ಎನ್ನುವ ಸರಳ ಜೀವಿ. ಆಳುಗಳು ಕೇಳಿದಷ್ಟೇ ಪಗಾರ ಕೊಡು ಉದಾರವಾದಿ. ಅವರ ಹೆಜ್ಜೆಯಲ್ಲಿಯೇ ನನ್ನ ಮುಂದಿನ ಹೆಜ್ಜೆಗಳೂ. ಈ ರೋಗ ಬಂದು, ನನ್ನನ್ನು ಮರಳಿ ಮಣ್ಣಿಗೆ, ನನ್ನ ಕನಸಿನ ಕೃಷಿಗೆ ಮರಳಿಸುತ್ತಿದೆ. ಇದು ಬದುಕು ನೀಡುವ ಬಹುಮಾನ. ಆಗುವುದೆಲ್ಲ ಎಷ್ಟೊಂದು ಒಳ್ಳೆಯದಕ್ಕೆ?

sharanu mannige

ಅಪ್ಪ ಅಮ್ಮನೊಂದಿಗೆ ಅರ್ಚನಾ

ಇದನ್ನೂ ಓದಿ : ಶರಣು ಮಣ್ಣಿಗೆ : ಬಿಗಿದ ಅವರ ಮುಷ್ಟಿಗಳನ್ನು ಬಿಚ್ಚುವುದು ನಮ್ಮೆಲ್ಲರ ಹೊಣೆ

Published On - 4:42 pm, Sun, 2 May 21