ಶರಣು ಮಣ್ಣಿಗೆ : ಬಿಗಿದ ಅವರ ಮುಷ್ಟಿಗಳನ್ನು ಬಿಚ್ಚುವುದು ನಮ್ಮೆಲ್ಲರ ಹೊಣೆ

‘ಕಷ್ಟವೆನಿಸಿದರೂ ಸಾವಯವ ಕೃಷಿಯನ್ನೇ ಮಾಡುತ್ತೇವೆ ಎಂಬ ಹಠದ, ಅಪಾರ ಜ್ಞಾನವುಳ್ಳ ಕೃಷಿಕರೂ ವಿರಳವಾಗಿಯಾದರೂ ಇದ್ದಾರೆ. ಆದರೆ ಅವರನ್ನು ಹುಡುಕಿ, ಭೇಟಿ ಮಾಡಿ ಬರೆಯುವವರ ಸಂಖ್ಯೆ ಹೆಚ್ಚಾಗಬೇಕಿದೆ. ಮಣ್ಣಕಂಪಿನ ಬರಹಗಳಿಂದ ನನ್ನ ಅನುಭವದ ಪರಿಧಿಯೂ ಹಿಗ್ಗಿದೆ. ಸಾಮಾಜಿಕ ಮನ್ನಣೆಯೂ ಸಿಕ್ಕಿದೆ. ವಿದ್ಯಾವಂತರೂ ಕೃಷಿಗೆ ಮರಳುತ್ತಿರುವ ಈ ಹೊತ್ತಿನಲ್ಲಿ ಕೃಷಿ ಬರಹಗಳು ಅಗತ್ಯವಾಗಿದ್ದವು ಆದರೆ ಕನ್ನಡದ ಬಹುತೇಕ ಪತ್ರಿಕೆಗಳು ಈಗ ಕೃಷಿ ಪುರವಣಿಯನ್ನು ನಿಲ್ಲಿಸಿವೆ.‘ ಮಾಲತಿ ಹೆಗಡೆ

ಶರಣು ಮಣ್ಣಿಗೆ : ಬಿಗಿದ ಅವರ ಮುಷ್ಟಿಗಳನ್ನು ಬಿಚ್ಚುವುದು ನಮ್ಮೆಲ್ಲರ ಹೊಣೆ
ಹಸಿರುಟ್ಟ ನೆಲದವ್ವನೊಂದಿಗೆ ಧಾರವಾಡದ ಹವ್ಯಾಸಿ ಕೃಷಿ ಪತ್ರಕರ್ತೆ ಮಾಲತಿ ಹೆಗಡೆ
Follow us
ಶ್ರೀದೇವಿ ಕಳಸದ
|

Updated on:May 01, 2021 | 1:32 PM

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

*

ಬಹುಪಾಲು ರೈತಕುಟುಂಬಗಳು ಸದ್ಯದ ಪರಿಸ್ಥಿತಿಯಲ್ಲಿಯೂ ನೆಟ್ಟಗಿನ ಸೂರಿಲ್ಲದೆ ಅರೆಹೊಟ್ಟೆಯಲ್ಲಿಯೇ ಬದುಕುತ್ತಿವೆ. ಬೆಳೆಯುತ್ತಿರುವ ಜಗತ್ತಿನೊಂದಿಗೆ, ಹೊಸ ಸಮಸ್ಯೆಗಳನ್ನು ನೀಗಿಸಿಕೊಂಡು ಹೇಗೆ ಹೆಜ್ಜೆ ಹಾಕಬೇಕೆಂಬ ತಿಳಿವಳಿಕೆ ಇಲ್ಲದೆ ಬದುಕನ್ನು ಇನ್ನೂ ಹೈರಾಣಾಗಿಸಿಕೊಳ್ಳುತ್ತಿವೆ. ಹೀಗಿರುವಾಗ ಅವರನ್ನು ಮುನ್ನೆಲೆಗೆ ಬೆಸೆಯುವುದು ಪ್ರತಿಯೊಬ್ಬ ಅಕ್ಷರಸ್ಥರ ಜವಾಬ್ದಾರಿ. ಮುಕ್ತಮನಸಿನಿಂದ ಅವರೊಂದಿಗೆ ಒಡನಾಡುವುದನ್ನು ರೂಢಿಸಿಕೊಂಡಾಗ ಮಾತ್ರ ವಾಸ್ತವ ಅರ್ಥವಾಗುತ್ತದೆ, ತೆರೆದುಕೊಳ್ಳುವ ಮುಂದಿನ ಹಾದಿಗಳು ಪರಸ್ಪರ ಅನುಕೂಲಕಾರಿಯಾಗಿರುತ್ತವೆ. ನಮ್ಮ ಭವಿಷ್ಯವೂ ಅವರ ಕೈಯಲ್ಲೇ ಇದೆ ಎನ್ನುವುದಂತೂ ಸತ್ಯಸ್ಯ ಸತ್ಯ. ನಿಮ್ಮೊಳಗಿನ ತಾಕತ್ತು ಇದು, ಕೌಶಲ ಇದು, ನಿಮ್ಮ ಅಸ್ತಿತ್ವ ಇದು ಎನ್ನುವುದನ್ನು ತಿಳಿಸಿಕೊಟ್ಟು ಆತ್ಮಸ್ಥೈರ್ಯ ತುಂಬುವ ತುರ್ತು ಈವತ್ತಿದೆ. ಈ ನಿಟ್ಟಿನಲ್ಲಿ ನಮ್ಮ ನಡುವಿನ ಕೆಲ ಸಂವೇದನಾಶೀಲ, ಪ್ರಜ್ಞಾವಂತ ವ್ಯಕ್ತಿಗಳು ಈಗಾಗಲೇ ಪ್ರಯತ್ನಿಸುತ್ತಿದ್ದಾರೆ;  ಧಾರವಾಡದ ಮಾಲತಿ ಹೆಗಡೆ ಅವರು ಮಣ್ಣಿನ ನಂಟಿನಿಂದಾಗಿಯೇ ತಾನು ಹವ್ಯಾಸಿ ಕೃಷಿ ಪತ್ರಕರ್ತೆ ಆಗಿದ್ದು ಹೇಗೆ ಎನ್ನುವುದನ್ನು ಇಲ್ಲಿ ಹಂಚಿಕೊಂಡಿದ್ದು ನಿಮ್ಮ ಓದಿಗೆ.

* ಮಣ್ಣಿನ ಒಡನಾಟದಲ್ಲಿ, ಹಸಿರ ಸಾಂಗತ್ಯದಲ್ಲಿ ಸಿಗುವ ನೆಮ್ಮದಿ, ಅನುಭವ ಮಾತಿಗೆ ನಿಲುಕದ್ದು. ನಮ್ಮ ಕೈತೋಟದಲ್ಲಿ ಗಿಡ ಬೆಳೆಸಿದ ಅನುಭವಗಳನ್ನು ಬರೆಯಬೇಕೆನ್ನಿಸಿತು. ಮಣ್ಣನ್ನು ನಂಬಿ ಬೆಳೆ ಬೆಳೆದವರು ಸಾಮಾನ್ಯವಾಗಿ ರೈತರೆನ್ನಿಸಿಕೊಳ್ಳುತ್ತಾರೆ. ಆದರೆ ಮಣ್ಣನ್ನು ಪ್ರೀತಿಸಿ ಕೈತೋಟ ಬೆಳೆಸಿ ಕ್ರಮೇಣ ರೈತರೊಂದಿಗೆ ಒಡನಾಟ ಬೆಳೆಸಿಕೊಂಡು ಬರೆಯುತ್ತ ಬರೆಯುತ್ತ ಅನಿರೀಕ್ಷಿತವಾಗಿ ಹವ್ಯಾಸಿ ಕೃಷಿ ಪತ್ರಕರ್ತೆಯಾದೆ. ಕನ್ನಡದ ಪ್ರಮುಖ ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದೆ. ಇದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿಲ್ಲ, ಸಾಧ್ಯತೆ ಎಂದು ಬರೆಯುತ್ತಿರುವೆ. ಆ ಎಲ್ಲ ಬದಲಾವಣೆಯ ಹಿಂದೆ ಇರುವ ಮಣ್ಣಿನ ಒಡನಾಟದ ಹಳೆಯ ನೆನಪು ಕೆದಕಿದರೆ ಕಳ್ಳ ಮಳೆಗೆ ತೋಯ್ದ ಇಳೆ ಸೂಸುವ ಘಮ್ಮೆನ್ನುವ ಪರಿಮಳ.

sharanu mannige

ಕೈತೋಟದಲ್ಲಿ ಮಾಲತಿ

ಉತ್ತರ ಕನ್ನಡದ ಹಳ್ಳಿಯಲ್ಲಿ ಕಳೆದ ಬಾಲ್ಯದಲ್ಲಿ ಮಣ್ಣಾಟಕ್ಕೆ ಎಲ್ಲಿಲ್ಲದ ಮಹತ್ವ. ಇರುವೆ ಗೂಡು ಕಟ್ಟಲೆಂದು ಒತ್ತಿದ ಹುಡಿ ಮಣ್ಣು, ಮುರಿದ ಹುತ್ತದ ಮಣ್ಣು ಸಿಕ್ಕಿದರೆ ನಿಧಿ ಸಿಕ್ಕಂತೆನಿಸುತ್ತಿತ್ತು. ಅದನ್ನು ಹದವಾಗಿ ಕಲೆಸಿ ದೋಸೆ, ಚಪಾತಿ, ಇಡ್ಲಿ, ಉಂಡೆ ತಯಾರಿಸಿ ನೆರಳಿನಲ್ಲಿ ಒಣಗಿಸಿ ಅಡುಗೆ ಆಟ ಆಡುತ್ತಿದ್ದೆವು. ನಮ್ಮ ಶಾಲೆಯೆದುರು ಪುಟ್ಟ ಕೈತೋಟದಲ್ಲಿ ಎಲ್ಲರ ಮನೆಯಿಂದ ಹೂವಿನ ಗಿಡಗಳನ್ನು, ಟೊಂಗೆಗಳನ್ನು ತಂದು ನಮಗೆ ತಿಳಿದಂತೆ ನೆಡುತ್ತಿದ್ದೆವು. ಅದಕ್ಕೆ ಶಿಕ್ಷಕರ ಮಾರ್ಗದರ್ಶನವಿರುತ್ತಿತ್ತು. ತೆರೆದ ಬಾವಿಯಿಂದ ನೀರು ಸೇದಿ ಗಿಡಗಳಿಗೆ ನೀರುಣಿಸುವುದು ಸಾಹಸದ ಕೆಲಸವಾಗಿತ್ತು. ಯಡಳ್ಳಿ ಹೈಸ್ಕೂಲಿನಲ್ಲಿ ಓದುವಾಗ ತೋಟಗಾರಿಕೆಗೂ ಮಹತ್ವವಿತ್ತು. ಅಲ್ಲಿ ನಾವೆಷ್ಟು ಗಿಡಗಳನ್ನು ಬೆಳೆದೆವು ಎನ್ನುವುದಕ್ಕಿಂತ ಅಲ್ಲಿಯ ಮಣ್ಣು, ಪರಿಸರದೊಂದಿಗೆ ಒಡನಾಟವನ್ನು, ಶ್ರಮ ಸಂಸ್ಕೃತಿಯನ್ನೂ ರೂಢಿಸಿಕೊಂಡೆವು ಎನ್ನಬಹುದು. ಈ ‘ಮಾಲಿ ಕೂಸು ಹಿಂದಿನ ಜನ್ಮದಲ್ಲಿ ಮಂಗನೇ ಆಗಿತ್ತಕ್ಕೂ ಎಂತಾ ನಮನಿ ಮರ ಇದ್ರು ತುದಿವರಿಗೆ ಹತ್ತಿ ಹಣ್ಣು, ಹೂವು ಹರಿತು’ ಊರಿನವರು ಹೇಳುವ ಸಾಹಸಿ ಪ್ರವೃತ್ತಿ ನನಗಿತ್ತು. ‘ಮಾಲತಿ ತಲೆಯಲ್ಲಿ ವೆರೈಟಿ ಹೂವಾಗ್ತು’ ಎಂದು ಗೆಳತಿಯರು ಛೇಡಿಸುವಷ್ಟು ಹೂ ಮುಡಿಯುವ ಹುಚ್ಚಿತ್ತು. ಮನೆಯಲ್ಲಿ ಊರಿನಲ್ಲಿ ಕೃಷಿ ಪರಿಸರವಿರುವುದರಿಂದ ಮಣ್ಣು ಗೊಬ್ಬರ ನಾಟಿ ಕೊಯ್ಲು ಸುಗ್ಗಿ ಇವೆಲ್ಲವುಗಳಲ್ಲಿ ಭಾಗಿಯಾಗುತ್ತಲೇ ಆ ಅನುಭವಗಳನ್ನು ನನ್ನದಾಗಿಸಿಕೊಳ್ಳುತ್ತಲೇ ಬೆಳೆದೆ. ಗುಡ್ಡ ಬೆಟ್ಟ, ಬೇಣ, ತೋಟ, ಗದ್ದೆ, ಹೊಳೆ, ಹಳ್ಳಗಳ ಎಂದು ಹಂಬಲಿಸುತ್ತ ನಿತ್ಯ ತಿರುಗಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎನ್ನುವಂತಿದ್ದೆ.

ಇಂತಿಪ್ಪ ಹಸಿರ ಹುಚ್ಚಿನ ನಾನು ಮೆಚ್ಚಿದವನನ್ನು ಮದುವೆ ಆಗಿ ಧಾರವಾಡ ನಗರವಾಸಿಯಾದೆ. ಬೆಚ್ಚನೆಯ ಮನೆ, ಇಚ್ಛೆಯನರಿವ ಪತಿ ಇದ್ದರೂ ಮಣ್ಣಿನ, ಗಿಡಗಳ ಒಡನಾಟವಿಲ್ಲದ ಖಾಲಿತನ ಕಾಡುತ್ತಲೇ ಇತ್ತು. ಮಾರುಕಟ್ಟೆಯಿಂದ ತಂದಿಟ್ಟ ಮರುದಿನವೇ ಕೊಳೆಯುವ ಸೊಪ್ಪುಗಳು, ಹದಹಿಡಿದು ಕೊಯ್ಯದ ತರಕಾರಿಗಳು ರೇಜಿಗೆ ಹುಟ್ಟಿಸುತ್ತಿದ್ದವು. ಎಂಟು ವರ್ಷಗಳ ನಂತರ ಧಾರವಾಡದಲ್ಲಿಯೇ ನಮ್ಮ ಕನಸಿನ ಮನೆಯೊಂದನ್ನು ಕಟ್ಟುವಾಗ ಒಂದಿಷ್ಟು ಜಾಗವನ್ನು ಕೈತೋಟಕ್ಕಾಗಿ ಮೀಸಲಿಟ್ಟೆವು. ತರಕಾರಿ, ಹೂವಿನಗಿಡ, ಔಷಧೀಯ ಸಸ್ಯ ಬೆಳೆಯುವುದಕ್ಕೆ ಆದ್ಯತೆ ನೀಡಿದೆವು. ಬಸಳೆ, ತೊಂಡೆ, ಬೆಂಡೆ, ಹೀರೆ, ಹಾಗಲ, ಟೊಮ್ಯಾಟೋ, ಕರಿಬೇವು, ಹೊನಗೊನೆ, ವೀಳ್ಯದೆಲೆ, ವೆಲ್ವೆಟ್ ಬೀನ್ಸ್ ಅದೆಷ್ಟು ವೈವಿಧ್ಯದ ಗಿಡ ಬಳ್ಳಿಗಳನ್ನು ಬೆಳೆದರೂ ತಣಿಯದ ಉತ್ಸಾಹ. ದೇವರ ಪೀಠದ ತುಂಬ ಹೂವುಗಳು. ನಿತ್ಯವೂ ಅಡುಗೆಗೊದಗುವ ತರಕಾರಿ, ಪರಿಚಿತರಿಗೆ ಹಂಚುವ ಹುಮ್ಮಸ್ಸು. ನಿತ್ಯ ಬಳಕೆಯ ಹಸಿ ಕಸಗಳೆಲ್ಲ ಗೊಬ್ಬರವಾಗಿಸಿ ಭೂಮಾಲಿನ್ಯಕ್ಕೆ ನಮ್ಮ ಕೊಡುಗೆ ಕಡಿಮೆ ಎನ್ನುವಂತಾಯಿತು. ಮನೆಮದ್ದಿನ ಜ್ಞಾನವೃದ್ಧಿ ಆಯಿತು. ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಆಸ್ಪತ್ರೆ ತಿರುಗುವುದು ತಪ್ಪಿತು. ಸ್ವಚ್ಛ ಶುಭ್ರ ಪರಿಸರದಲ್ಲಿ ಬೆಳೆದ ತರಕಾರಿ ಉಣ್ಣುವ ಭಾಗ್ಯ ದಕ್ಕಿತ್ತು. ಸಮಾನಮನಸ್ಕ ಗೆಳತಿಯರು ಸಿಕ್ಕರು. ಗಿಡಗಳು ಚಿಗುರುವವರೆಗೆ ತವಕ, ಚಿಗುರಿ ಬೆಳೆದಾಗ ಸಂತಸ, ಹೂವು, ಕಾಯಿ ಹಣ್ಣುಗಳಾದಾಗ ಕೌತುಕ, ತಿಂದುಣ್ಣುವಾಗ ಸಂಭ್ರಮ, ಗಿಡಗಳಳಿದಾಗ ದಕ್ಕುವ ಸಹಜ ತತ್ವಜ್ಞಾನ, ಕಿಟಕಿಯಿಂದಾಚೆ ನೋಡಿದಾಗಲೆಲ್ಲ ಕಾಣುವ, ಬದಲಾಗುವ ನೈಜ ಚಿತ್ರಗಳು… ಇವೆಲ್ಲವುಗಳ ಒಟ್ಟೂ ಮೊತ್ತವೇ ನಮ್ಮ ಕೈತೋಟ. ಗಿಡಗಳನ್ನು ಬೆಳೆಸಿ ವರುಷ ಕಳೆಯುವುದರಲ್ಲಿ ನಡುಮನೆಯ ಸೂರಿಗೆ ಸಾಕಷ್ಟು ಗುಬ್ಬಚ್ಚಿಗಳು ಬಂದು ಗೂಡು ಕಟ್ಟಿದವು. ಹದಿನೈದು ವರ್ಷ ನಮ್ಮೊಂದಿಗೆ ಸಹಬಾಳ್ವೆ ಮಾಡಿದವು. ಕೈತೋಟದಲ್ಲಿ ಕಾಣುವ ಬಣ್ಣದ ಪಾತರತ್ತಿಗಳ ಸಲ್ಲಾಪ, ಕರಿಬೇವಿನ ಹಣ್ಣು ತಿಂದು ಕೂಜನಗೈಯುವ ಕೋಗಿಲೆ, ಹೂವಿನ ರಸ ಹೀರಲು ಬರುವ ಹೂಕುಟುಕ ಹಕ್ಕಿ, ಪೇರಲೆಹಣ್ಣಿನಾಸೆಗೆ ಬರುವ ಗಿಣಿರಾಮ, ದಾಸವಾಳ ಗಿಡಕ್ಕೆ ಗೂಡು ಕಟ್ಟುವ ಕೋಲ್ಜೇನು, ನುಗ್ಗಿ ಮರಕ್ಕೆ ಬಂದು ಕೂತು ಕತ್ತು ಕುಣಿಸುವ ಹಾರ್ನಬಿಲ್, ಆಗೀಗ ಭೇಟಿ ನೀಡಿ ಹೆದರಿಸುವ ಕೆರೆಹಾವು, ಚೇಳು… ಪರಿಸರ ಪ್ರೀತಿಯನ್ನು ಹೆಚ್ಚಿಸಿದವು.

ಅಲ್ಲಿಯವರೆಗೆಂದೂ ಲೇಖನ, ಕತೆಗಳನ್ನೆಲ್ಲ ಎಂದೂ ಬರೆಯದ ನನಗೆ ಬರೆಯುವ ಬಯಕೆಯನ್ನೂ ಹುಟ್ಟಿಸಿದವು. ಏಳೆಂಟು ವರ್ಷ ಕೈತೋಟ ಮಾಡಿದ ಅನುಭವವನ್ನು, ಕ್ಯಾಮ್ ಕೋರ್ಸಿನ ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಆಧರಿಸಿ ಧಾರವಾಡ ಜಿಲ್ಲೆಯ ಹಳ್ಳಿಗಳನ್ನು ಓಡಾಡಿ ರೈತರನ್ನು ಸಂದರ್ಶನ ಮಾಡಿ ಕೃಷಿ ಲೇಖನಗಳನ್ನು ಬರೆಯಲಾರಂಭಿಸಿದೆ. ಆಗ ಗಮನಕ್ಕೆ ಬಂದಿದ್ದು ನೂರಾರು ಸಂಗತಿಗಳು. ಅವುಗಳಲ್ಲಿ ಕೆಲವು ಆತಂಕಕ್ಕೆ ದೂಡಿದವು. ನೆಲದ ಸ್ವಾಸ್ಥ್ಯವನ್ನು ಕಾಪಾಡಬೇಕಾಗಿರುವ ಅನೇಕ ರೈತರು ರಸಗೊಬ್ಬರಗಳನ್ನು ಅವಲಂಬಿಸಿರುವುದು ತಿಳಿಯಿತು. ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ಭೂಮಿಯ ಸ್ವಾಸ್ಥ್ಯ ಏನಾಗುತ್ತದೆ ಎಂಬ ಅರಿವಿಲ್ಲದೆ ಬೆಳೆಯುವುದು, ಲಾವಣಿ ಪಡೆದ ಭೂಮಿಯಲ್ಲಂತೂ ಲಾಭ ಪಡೆಯಲೇಬೇಕೆಂಬ ಜಿದ್ದಿಗೆ ಬಿದ್ದಂತೆ ರಾಸಾಯನಿಕ ಗೊಬ್ಬರ ಸುರಿದು ಬೆಳೆ ಬೆಳೆಯುತ್ತಿರುವುದು, ನಗರದ ಅಂಚಿನ ಕೃಷಿಕರು ಚರಂಡಿ ನೀರನ್ನು (ಕರಿನೀರು) ಬಳಸಿ ತರಕಾರಿ ಬೆಳೆದು ನಗರಕ್ಕೆ ಮಾರುತ್ತಿರುವುದು, ಕೆಲವು ರೈತರು ತಮ್ಮ ಮನೆ ಬಳಕೆಗೆ ಸಾವಯವ ಪದ್ಧತಿಯಲ್ಲಿ ಬೆಳೆದು ಮಾರುವುದಕ್ಕೆ ಮಾತ್ರ ರಾಸಾಯನಿಕ ಗೊಬ್ಬರ ಹಾಕಿ ಬೆಳೆಯುತ್ತಿರುವುದು… ಶುಂಠಿ, ಅನಾನಸ್, ಮಸೂರಿ ಅಕ್ಕಿ, ಕಬ್ಬು, ದ್ರಾಕ್ಷಿ ಹೀಗೆ ಅನೇಕ ಬೆಳೆಗಳಿಗೆ ಬಳಸುವ ಒಳಸುರಿಗಳನ್ನು, ಕೀಟನಾಶಕಗಳ ಬಳಕೆಯ ಎಗ್ಗಿಲ್ಲದ ಪ್ರಮಾಣವನ್ನು ಗಮನಿಸಿದರೆ ಬೆಳೆಯುವ ಮಣ್ಣಿನ ಬಗ್ಗಾಗಲಿ, ಉಣ್ಣುವ ಗ್ರಾಹಕರ ಆರೋಗ್ಯದ ಬಗೆಗಾಗಲಿ ಇವರು ವಿಚಾರ ಮಾಡುತ್ತಿಲ್ಲವಲ್ಲ ಎನ್ನಿಸಿತು.

sharanu mannige

ಕುಂತ ನೆಲಕೆ ಉರಿವ ಒಲೆಗೆ ಹರಿವ ಮಾತುಕಥೆಗೆ ಯಾವ ಗಡಿಯುಂಟು?

ಒಂದೂ ಮರವಿಲ್ಲದ ಸಾವಿರಾರು ಎಕರೆ ಹೊಲಗಳು ಉತ್ತರ ಕರ್ನಾಟಕದಲ್ಲಿವೆ. ಸಾಕಷ್ಟು ಸಾವಯವ ಪದಾರ್ಥಗಳನ್ನು ತೋಟಗಳಿಗೆ, ಹೊಲಗಳಿಗೆ ಸೇರಿಸದೇ ಇರುವುದರಿಂದ ಭೂಮಿ ಶರವೇಗದಲ್ಲಿ ಮರುಭೂಮಿಯಾಗಿ ಪರಿವರ್ತನೆ ಹೊಂದುತ್ತಿದೆ. ಕೆಲವೆಡೆ ಹೇರಳವಾದ ನೀರಿನ ಬಳಕೆಯಿಂದ ಭೂಮಿ ಜವುಳಾಗುತ್ತಿದೆ. ಹಾಗೆಂದು ಈ ಪರಿಸ್ಥಿತಿಗೆ ಕೇವಲ ರೈತರನ್ನು ದೂಷಿಸುವಂತೆಯೂ ಇಲ್ಲ. ಸ್ವಚ್ಛ, ಸುಂದರ ಸ್ವರ್ಗ ಸಮಾನ, ಸರಳ ಬದುಕಿನ ಹಳ್ಳಿಗಳು ಎರಡು ಮೂರು ದಶಕದಿಂದೀಚೆಗೆ ನಗರದ ಪ್ರಭಾವದಿಂದ ತುಂಬಾ ಬದಲಾಗಿವೆ. ಆಧುನಿಕ ಬದುಕಿನ ಎಲ್ಲ ಸೌಲಭ್ಯಗಳೂ ಹಳ್ಳಿಯ ಬದುಕಿಗೂ ಅನಿವಾರ್ಯ ಎನಿಸಿ ಹೆಚ್ಚು ದುಡಿಯಬೇಕಾದ ಅನಿವಾರ್ಯತೆಯನ್ನು ರೈತರು ಎದುರಿಸುತ್ತಿದ್ದಾರೆ. ಮಿರಿಮಿರಿ ಮಿಂಚುವ ತರಕಾರಿ, ಹೊಳೆಯುವ ಹಣ್ಣುಗಳು, ಗಾತ್ರದಲ್ಲಿ ದೊಡ್ಡದಾಗಿದ್ದು ಹಸನು ಮಾಡಲು ಸುಲಭವಾದ ಧಾನ್ಯಗಳ ಬೇಡಿಕೆಯನ್ನಿಡುವ ಇಡುವ ಗ್ರಾಹಕರು ಮೆಚ್ಚುವಂತಹ ಬೆಳೆ ಬೆಳೆಯಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಅನೇಕ ರೈತರು ಉತ್ಪಾದಕರಾಗುತ್ತಿದ್ದಾರೆ. ಮಣ್ಣಿನ ಹಿತ ಕಾಯುವುದರಲ್ಲಿ ವಿಫಲರಾಗುತ್ತಿದ್ದಾರೆ. ಮಾರುಕಟ್ಟೆಯ ಬೆಲೆಯ ಏರಿಳಿತದಲ್ಲಿ, ಮಧ್ಯವರ್ತಿಗಳ ಹಾವಳಿಯಲ್ಲಿ ಸೋತು ಸುಣ್ಣವಾಗಿದ್ದಾರೆ. ಆದರೆ ಎಲ್ಲ ರೈತರೂ ಹೀಗಿಲ್ಲ ಎನ್ನುವುದು ರೈತಕುಟುಂಬದಲ್ಲಿ ಹುಟ್ಟಿ ಬೆಳೆದ ನನ್ನ ತಿಳಿವಳಿಕೆಯಾಗಿತ್ತು. ಕೃಷಿಯ ಸಕಾರಾತ್ಮಕ ಅಂಶಗಳನ್ನು ಸಮಾಜದ ಮುಂದೆ ತರಬೇಕು, ಮಾದರಿಗಳನ್ನು ತೋರಿಸಬೇಕು ಎಂಬ ಹಟ ಬಲಿಯಿತು.

ಕೃಷಿ ಯಶೋಗಾಥೆಗಳನ್ನು ಹುಡುಕುತ್ತ ಹಲವಾರು ಹಳ್ಳಿಗಳನ್ನು ಅಲೆದೆ. ಉತ್ತರ ಕರ್ನಾಟಕದ ಹಳ್ಳಿ ಬದುಕನ್ನು ಅರಿಯುವ ಯತ್ನ ಮಾಡಿದೆ. ಕೆಲವು ಹಳ್ಳಿಗಳಲ್ಲಿ ಊಟ ಸಿಗುತ್ತಿರಲಿಲ್ಲ ಕೆಲವೆಡೆ ಕುಡಿಯಲು ನೀರು ಸಿಗುತ್ತಿರಲಿಲ್ಲ. ಕೆಲವರು ಬ್ರಾಹ್ಮಣ ಹೆಂಗಸಿಗೆ ಊಟ ಹಾಕಿದರೆ ಪಾಪ ಬಂದೀತೆಂದು ಅಳುಕುತ್ತಿದ್ದರು. ಆದರೆ ಸಂದರ್ಶನ ಮುಗಿಯುವ ಸಮಯಕ್ಕೆ ತಮ್ಮ ಕಷ್ಟ ಸುಖಗಳನ್ನೆಲ್ಲ ಹೇಳಿ ಹಗುರಾಗಿ ಆಪ್ತಬಂಧುವಿನಂತಾಗುತ್ತಿದ್ದರು. ಹಾಗೆ ಹುಡುಕಿ ಬರೆದ ಬರಹಗಳು ಪ್ರಜಾವಾಣಿ ಹುಬ್ಬಳ್ಳಿ ಮೆಟ್ರೋದಲ್ಲಿ ‘ವಿಭಿನ್ನ ನೋಟ ವಿಶಿಷ್ಟ ತೋಟ’ ಹೆಸರಿನ ಸರಣಿ ಬರಹಗಳಾಗಿ ಪ್ರಕಟವಾಗಲಾರಂಭಿಸಿದವು. (ಆ ಸರಣಿಯ ಆಯ್ದ ಲೇಖನಗಳು ‘ನೆಲದ ನಂಟು’ ಪ್ರಕಟಣೆಯ ಹಾದಿಯಲ್ಲಿದೆ) ಆ ಓಡಾಟದಲ್ಲಿ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ಸಾವಯವ ಕೃಷಿಯಲ್ಲಿ ತೊಡಗಿ ಮಣ್ಣು, ನೀರಿನ ಸದ್ಬಳಕೆಯಿಂದ ಯಶಸ್ಸನ್ನು ಕಂಡ ಅತ್ಯದ್ಭುತ ರೈತರನ್ನು ಭೇಟಿ ಮಾಡಿದೆ.

ಒಂದೇ ಗುಂಟೆ ಜಾಗದಲ್ಲಿ ಮನೆಯ ಅಗತ್ಯಕ್ಕೆ ಬೇಕಾದ ತರಕಾರಿ ಬೆಳೆಯುವ ಚಂದ್ರಕಲಾ ಘಾಟಗಿ ಧಾರವಾಡ, ತಮ್ಮ ಹೊಲಕ್ಕೆ ಕಕ್ಕಸಿಗೆ ಬರುವ ಊರಿನವರಿಗೆ ಶೌಚಾಲಯ ಕಟ್ಟಿಸಿಕೊಟ್ಟು ಅದರಿಂದ ಬಯೋಗ್ಯಾಸ್ ಉತ್ಪಾದಿಸಿ ಅಡುಗೆ ಮಾಡಿಕೊಳ್ಳುವ ಸಾವಯವ ಕೃಷಿ ಮಾಡುವ ಕುರಂದವಾಡದ ದಯಾನಂದ, ಪುರುಷರಿಗೆ ಸರಿಸಮನಾಗಿ ರೆಂಟೆಕುಂಟೆ ಹೊಡೆದು ಕೃಷಿ ಮಾಡುವ ಮಂಡಿಹಾಳದ ಲಕ್ಷ್ಮವ್ವ ಹಡಪದ, ಮಾವಿನಮರದ ಕೆಳಗೆ ನಾಲ್ಕಾರು ಕ್ವಿಂಟಲ್ ಎರೆಗೊಬ್ಬರ ಮಾಡುವ ಚಿಕ್ಕಮಲ್ಲಿಗವಾಡದ ಬಸವರಾಜ, ಇಡೀ ಊರಿನವರಿಗೆ ಕಸಿ ಕೌಶಲ ಕಲಿಸಿದ ತೇರಗಾಂವಿನ ಕಸಿಕುಶಪ್ಪ, ತಿರುಗುತ್ತಲೇ ಬದುಕು ಕಟ್ಟುವ ಅಲೆಮಾರಿ ಕುರುಬರ ಮಡ್ಡೆವ್ವ… ಹೀಗೆ ಎಲೆ ಮರೆಯ ಕಾಯಿಗಳಂತಿದ್ದ ನೂರಾರು ರೈತರನ್ನು ಸಮಾಜಕ್ಕೆ ಪರಿಚಯಿಸಿದೆ. ಅವರ ಯಶಸ್ಸನ್ನು ದಾಖಲಿಸಿದೆ. ‘ನೀವು ಹಿಂಗೆ ಬರೆದ್ರೆ ನಮಗೇನಾರ ಉಪಯೋಗ ಆಕ್ಕೇತ್ತೇನ್ರೀ ಮೇಡಮ್ಮ’ ಎಂದು ಕಾತರದಿಂದ ಕೇಳುತ್ತಿದ್ದವರಿಗೆ ಉತ್ತರಿಸಲು ಆರಂಭದಲ್ಲಿ ತುಂಬ ಕಷ್ಟ ಎನಿಸುತ್ತಿತ್ತು. ಕ್ರಮೇಣ ಪ್ರಕಟಿತ ಲೇಖನದ ಹಿಮ್ಮಾಹಿತಿಗಳು ಬರಲಾರಂಭಿಸಿದವು. ಲೇಖನದ ಓದುಗರನೇಕರು ರೈತರ ಹೊಲಕ್ಕೆ ಭೇಟಿ ನೀಡುತ್ತಿದ್ದರು. ಕೆಲವರು ರೈತರಿಗೆ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ನರ್ಸರಿಯ ಬಗ್ಗೆ ಬರೆದಾಗ ತುಂಬಾ ಗಿಡಗಳು ಮಾರಾಟವಾದವು. ಕೆಲವರಿಗೆ ಧಾರವಾಡ ಅಗ್ರಿಕಚ್ಚರ್ ಯುನಿವರ್ಸಿಟಿ ಕೃಷಿ ಪಂಡಿತ ಪ್ರಶಸ್ತಿ ಬಂತು. ಲಕ್ಷ್ಮವ್ವ ಹಡಪದ, ಬಸವರಾಜ, ದಯಾನಂದರಿಗೆ ರಾಜ್ಯ ಪ್ರಶಸ್ತಿ ಬಂತು. ಅದು ಅವರ ಕೆಲಸಕ್ಕೆ ಸಂದ ಗೌರವ. ನಾನು ಬರಹ ನಿಮಿತ್ತ ಮಾತ್ರ. ಆದರೂ ಮೇಡಂ ‘ಇಷ್ಟ ದಿನಾ ನಾವೇನು ಮಾಡ್ತೀವಿ ಅನ್ನೋದು ನಮ್ಮೂರ ಮಂದಿಗೆ ಗೊತ್ತಿರಲಿಲ್ಲ. ಏನೋ ಮಾಡ್ತಾರ ಎಂದು ಅಸಡ್ಡೆ ಮಾಡತಿದ್ರು. ಲೇಖನ ಬಂದ ಮ್ಯಾಲೆ, ಪ್ರಶಸ್ತಿ ಬಂದ ಮೇಲೆ ಅವ್ರು ನೋಡೋ ದೃಷ್ಟಿನೇ ಬದಲಾಗೇತ್ರಿ’ ಎಂದು ಆ ರೈತರು ಸಂತಸದಿಂದ ಫೋನ್ ಮಾಡುತ್ತಿದ್ದರು. ಆಗ ಬರೆಯಲಾರಂಭಿಸಿದ್ದು ಸಾರ್ಥಕ ಎನಿಸುತ್ತಿತ್ತು.

sharanu mannige

ಮಾಲತಿ ಹೆಗಡೆ ಮತ್ತು ಉತ್ತರ ಕರ್ನಾಟಕದ ರೈತಮಹಿಳೆ ಕಮಲಮ್ಮ

ಒಬ್ಬರ ಬಗ್ಗೆ ಬರೆದಾಗ ಅವರೇ ಇನ್ನೊಬ್ಬ ರೈತರ ಬಗ್ಗೆ ಸುಳಿವು ಕೊಡುತ್ತಿದ್ದರು. ಪೇರಲೆ ಕೃಷಿ ಮಾಡುವ ಶಿವಕ್ಕನನ್ನು ಹುಡುಕಿಕೊಂಡು ಹೋದರೆ ಪಕ್ಕದಲ್ಲಿಯೇ ಕಾಕಡಾ ಮಲ್ಲಿಗೆ ಬೆಳೆದ ವಾಚ್ಮನ್ ಮಹದೇವನ ಸಾಧನೆ ಮತ್ತೂ ದೊಡ್ಡದಾಗಿ ಕಾಣಿಸುತ್ತಿತ್ತು. ‘ಅಲೆಮಾರಿ ಕುರುಬರ ಮಂದಿಗೆ ತಿನ್ನಾಕ ಕಮ್ಮಿ ಇಲ್ರಿ ಅಕ್ಕಾರ ಆದ್ರೆ ಒಮ್ಮೊಮ್ಮೆ ಕುಡಿಯಾಕ ನೀರ ಸಿಗಲಾರದೆ ಹುಳಾ ಬಿದ್ದು ಒದ್ದಾಡೋ ಹೊಂಡದ ನೀರು ಸೋಸಿ ಮಕ್ಕಳಿಗೆ ಅಡಗಿ ಮಾಡೋ ಪರಿಸ್ಥಿತಿನೂ ಬರತತ್ರಿ, ಎರಡ ಕೊಡಾ ನೀರಿಗಾಗಿ ಒಂದೆರಡು ಮೈಲು ಹುಡುಕಾಡಬೇಕಾಕ್ಕೇತ್ರಿ’ ಎನ್ನುವ ಕುರುಬರ ಮಡ್ಡೆವ್ವನ ಮಾತಿಗೆ ಅಸಹಾಯಕತೆಯಿಂದ ನೀರಿಗಾಗಿ ಕಣ್ಣೀರು ಹಾಕಿ ಬಂದಿದ್ದೂ ಇದೆ. ಪತ್ರಿಕೆಯವರು ನನಗೆ ನೀಡುವ ಗೌರವಧನವನ್ನು ‘ಒಂದು ಗಿಡ ತಗೊಳ್ರೀ’ ಎಂದು ಕೆಲವು ಕಷ್ಟದಲ್ಲಿದ್ದ ರೈತರ ಕೈಗಿತ್ತು ಬಂದಿದ್ದಿದೆ. ಕೆಲವರು ನೀಡುವ ಅಪಾರ ಮಾಹಿತಿಗಳಿಗೆ ಬೆರಗಾಗಿ ಎರಡು ಮೂರು ಸಲ ಭೇಟಿ ನೀಡುತ್ತಿದ್ದೆ. ಮೇದಾರರು, ಕುಂಬಾರ ಬಳಿ ಮೌಲ್ಯವರ್ಧಿತ ಪದಾರ್ಥಗಳಿದ್ದರೆ ಖರೀದಿಸುತ್ತಿದ್ದೆ. ಅವರೊಟ್ಟಿಗೆ ಕುಳಿತು ಉಂಡಿದ್ದು ಇದೆ. ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿರುವ ಕಷ್ಟವೆನಿಸಿದರೂ ಸಾವಯವ ಕೃಷಿಯನ್ನೇ ಮಾಡುತ್ತೇವೆ ಎಂಬ ಹಠದ, ಅಪಾರ ಜ್ಞಾನವುಳ್ಳ ಕೃಷಿಕರೂ ವಿರಳವಾಗಿಯಾದರೂ ಇದ್ದಾರೆ. ಆದರೆ ಅವರನ್ನು ಹುಡುಕಿ, ಭೇಟಿ ಮಾಡಿ ಬರೆಯುವವರ ಸಂಖ್ಯೆ ಹೆಚ್ಚಾಗಬೇಕಿದೆ. ಮಣ್ಣ ಕಂಪಿನ ಬರಹಗಳಿಂದ ನನ್ನ ಅನುಭವದ ಪರಿಧಿಯೂ ಹಿಗ್ಗಿತು. ಸಾಮಾಜಿಕ ಮನ್ನಣೆಯೂ ಸಿಕ್ಕಿತು. ರಾಜ್ಯದಾದ್ಯಂತ ಕೃಷಿ ಪ್ರವಾಸ ಮಾಡಬೇಕು ಎನ್ನುವ ಆಸೆಗೆ ಕೊರೋನಾ ಬ್ರೇಕ್ ಹಾಕಿದೆ. ವಿದ್ಯಾವಂತರೂ ಕೃಷಿಗೆ ಮರಳುತ್ತಿರುವ ಈ ಹೊತ್ತಿನಲ್ಲಿ ಕೃಷಿ ಬರಹಗಳು ಅಗತ್ಯವಾಗಿದ್ದವು ಆದರೆ ಕನ್ನಡದ ಬಹುತೇಕ ಪತ್ರಿಕೆಗಳು ಈಗ ಕೃಷಿ ಪುರವಣಿಯನ್ನು ನಿಲ್ಲಿಸಿವೆ.

ಇನ್ನು ನಗರದ ವಿಷಯಕ್ಕೆ ಬಂದರೆ ಅನೇಕ ನಾಗರಿಕರಿಗೆ (!?) ಗಿಡಗಳೆಂದರೆ ಎಲೆಯ ಕಸ ಉತ್ಪಾದಿಸುವ, ಬೇರು ಕಳಿಸಿ ಮನೆ ಕಾಂಪೌಂಡಿನ ಗೋಡೆ ಒಡೆಯುವ, ಹುಳಹುಪ್ಪಡಿಗೆ ಆಶ್ರಯ ನೀಡುವ ಸಂಗತಿ ಮಾತ್ರ ಎಂಬಷ್ಟು ಅಜ್ಞಾನ! ಅವರು ಸಾಲುಮರಗಳನ್ನೂ ದ್ವೇಷಿಸುತ್ತಾರೆ. ಮನೆಯ ಸುತ್ತಲೂ ಪುಟ್ಟ ಕಳೆಯೂ ಬೆಳೆಯದಂತೆ ಕಲ್ಲಿನ ಚಪ್ಪಡಿ ಹಾಕಿಸುತ್ತಾರೆ. ಗಿಡ ಬೆಳೆಸುವುದು ನಗರಪಾಲಿಕೆಯ ಹೊಣೆ ಎಂದುಕೊಂಡಿದ್ದಾರೆ. ಮಣ್ಣಿನಿಂದ ಮಾನಸಿಕವಾಗಿ ಬಲು ದೂರವೇ ಅವರ ಬದುಕು. ನಗರಗಳಲ್ಲಿ ನಿತ್ಯವೂ ಉತ್ಪತ್ತಿಯಾಗುವ ಲಕ್ಷಾಂತರ ಟನ್ ತ್ಯಾಜ್ಯ ಭೂಮಿಗೆ ಭಾರವೇ. ಛಾವಣಿ ನೀರಿನ ಸಂಗ್ರಹ, ಅಂಗಳದಲ್ಲಿ ತಾರಸಿಯ ಮೇಲೆ ಅನುಕೂಲವಿದ್ದವರಾದರೂ ಗಿಡಗಳನ್ನು ಬೆಳೆಯುವ ಮನಸ್ಸು ಮಾಡಿದರೆ ಭೂಮಿಗೊಂದಿಷ್ಟಾದರೂ ನ್ಯಾಯ ಸಂದೀತು. ಅಂತಹ ಪ್ರಯತ್ನವನ್ನು ಕೆಲವರಾದರೂ ಮಾಡುತ್ತಿದ್ದಾರೆ ಎಂಬುದು ಸಮಾಧಾನ. ಹಿಡಿಮಣ್ಣಿನಲ್ಲಿ ಸಾವಿರಾರು ಸೂಕ್ಷ್ಮಾಣು ಜೀವಿಗಳಿರುತ್ತವೆ. ಭೂಮಿಯ ಜೀವಂತಿಕೆಯನ್ನು ಸರಳವಾಗಿ ಅರ್ಥ ಮಾಡಿಸುವ ಶಕ್ತಿ ಇರುವುದು ಗಿಡಗಳಿಗೆ ಮಾತ್ರ. ಪರಿಸರದ ಮಹತ್ವ ಅರಿಯದವರ ಮನೋಭಾವ ಬದಲಿಸಲು ಶಿಕ್ಷಣದಲ್ಲಿ, ಸಾಹಿತ್ಯದಲ್ಲಿ, ಮಾಧ್ಯಮಗಳಲ್ಲಿ ಮಣ್ಣಿನ ಮಹತ್ವ ತಿಳಿಸುವ ಪ್ರಯತ್ನಗಳಾಗಬೇಕಾದ ಜರೂರತ್ತಿದೆ.

ಹತ್ತಿಪ್ಪತ್ತು ಅಡಿ ಮಣ್ಣು ಸಿಕ್ಕರೆ ನೂರಾರು ಗಿಡ ಬೆಳೆಸಿಬಿಡಬಹುದು ಎನ್ನುವ ಸಾಧ್ಯತೆಯನ್ನು ಕಂಡ ಮೇಲೆ ಪ್ರವಾಸ ಮಾಡಿದ ಮೇಲೆ ನಾನು ಯಾವ ಊರಿಗೆ ಹೋಗಿ ವಾಸ ಮಾಡುವ ಸಂದರ್ಭ ಬಂದಾಗಲೂ ಬೆಕ್ಕು ಮರಿಗಳನ್ನು ಕಚ್ಚಿ ಒಯ್ಯುವಂತೆ ಒಂದಿಷ್ಟು ಗಿಡ ಒಯ್ದು ನೆಡುತ್ತೇನೆ. ಅವು ನಗರದ ಬದುಕಿನ ಏಕತಾನತೆಯನ್ನು ಕಡಿಮೆ ಮಾಡಿ ಜೀವನವನ್ನು ಸಹ್ಯವಾಗಿಸುವ ಅಂಗಳದ ಮಕ್ಕಳು. ಕುಂಬಾರರು, ಮೇದಾರರು, ಅಲೆಮಾರಿ ಕುರುಬರ ಬಗ್ಗೆ ಬರೆದಂತೆ ಆದಿವಾಸಿಗಳು, ನೇಕಾರರು, ಚಮ್ಮಾರರ ಬಗ್ಗೆ ಬರೆಯಬೇಕಿದೆ. ನನ್ನ ಮನದ ಮಾತೊಂದೇ ‘ಭೂಮಿಯಲ್ಲಿ ಬದುಕುವ ಪ್ರತಿ ಜೀವಿಯೂ ಮಣ್ಣಿನ ಮಹತ್ವ ಅರಿತು ಬಾಳಬೇಕು’. ನಾವಿಲ್ಲದಿದ್ದಾಗಲೂ ಮಣ್ಣಿತ್ತು. ನಾವಿಲ್ಲದಿದ್ದರೂ ಮಣ್ಣಿರುತ್ತದೆ. ಆದರೆ ಮಣ್ಣಿಲ್ಲದೇ ನಮಗೆ ಬದುಕುಂಟೆ? ಆದ್ದರಿಂದಲೇ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ತೋರಿಸಬೇಕು ಅಪರಿಮಿತ ಪ್ರೀತಿ, ಅಪಾರ ಕೃತಜ್ಞತೆ. ಶರಣೆನ್ನೋಣ ಮಣ್ಣಿಗೆ.

ಇದನ್ನೂ ಓದಿ : ಶರಣು ಮಣ್ಣಿಗೆ : ಆಕೆ ತೋಯಲು ಸಿದ್ಧವಾಗಿದ್ದಾಳೆ ಅವ ಹನಿಯಬೇಕಷ್ಟೇ

Published On - 1:28 pm, Sat, 1 May 21

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ