ಶರಣು ಮಣ್ಣಿಗೆ : ಹುರಿಗಟ್ಟಿದ ರಟ್ಟೆಯೊಂದಿಗೆ ಅವುಡುಗಚ್ಚಿದ ದವಡೆಯೊಂದಿಗೆ ಇಳಕಲ್-ಇಸ್ಲಾಂಪುರದ ರೈತಮಕ್ಕಳು

‘ದೃಢಕಾಯದ ಹುರಿಮೀಸೆಯ ರೈತರು ಹೊಲದಲ್ಲಿ ಕಡಲೆಯೋ, ಜೋಳವೋ, ಸೂರ್ಯಕಾಂತಿಯೋ ಬಿತ್ತಿ, ನಮಗಿಂತಿಷ್ಟು ಸಾಲುಗಳೆಂದು ಎಣಿಸಿ ಕೊಡುತ್ತಿದ್ದರು. ಕಳೆ ತೆಗೆಯುವುದರಿಂದ ಹಿಡಿದು, ಕೀಟನಾಶಕ, ರೋಗನಾಶಕ ಸಿಂಪಡಿಸಿ, ಬೆಳೆಕೊಯ್ದು ರಾಶಿ ಮಾಡುವವರೆಗೂ ನಮ್ಮದೇ ಜವಾಬ್ದಾರಿ. ಇದರಿಂದಾಗಿ ಕೇವಲ ಕೃಷಿ ವಿದ್ಯಾರ್ಥಿಯಾಗಿದ್ದ ನನ್ನಲ್ಲಿ ವೃತ್ತಿಪರ ಕೃಷಿಕನಾಗುವ ಭರವಸೆ ಒಳಗೊಳಗೇ ಮೂಡಿತು. ಮುಂದೆ ಖಾಸಗಿ ಕಂಪನಿಗಳು ದುಡಿಸಿಕೊಂಡಷ್ಟು ಸಂಬಳ ಕೊಡಲಿಲ್ಲ. ಸರ್ಕಾರ ಕರೆದು ನೌಕರಿ ಕೊಡಲಿಲ್ಲ. ಹೀಗಿರುವಾಗ ಎಂಥ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಾ ನೆಚ್ಚಿಕೊಂಡಿದ್ದ ಭೂಮ್ತಾಯಿ ಮಾತ್ರ  ಕೈಬಿಡುವುದಿಲ್ಲ ಎಂಬುದು ಅರ್ಥವಾಗಿಬಿಟ್ಟಿತು.‘ ಉಮರ್ ಫಾರೂಕ್ 

  • ಶ್ರೀದೇವಿ ಕಳಸದ
  • Published On - 16:27 PM, 29 Apr 2021
ಶರಣು ಮಣ್ಣಿಗೆ : ಹುರಿಗಟ್ಟಿದ ರಟ್ಟೆಯೊಂದಿಗೆ ಅವುಡುಗಚ್ಚಿದ ದವಡೆಯೊಂದಿಗೆ ಇಳಕಲ್-ಇಸ್ಲಾಂಪುರದ ರೈತಮಕ್ಕಳು
ಇಸ್ಲಾಂಪುರದ ಯುವರೈತ ಉಮರ್ ಫಾರೂಕ್

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

ಇಸ್ಲಾಂಪುರದ ಯುವರೈತ ಉಮರ್ ಫಾರೂಕ್ ಅವರಿಗೆ ಓದು ಮತ್ತು ಬರೆವಣಿಗೆ ಹವ್ಯಾಸ. ಈ ಸರಣಿಗೆ ಬರೆಯಲು ನನಗೂ ಆಸಕ್ತಿ ಇದೆ ಬರೆಯಬಹುದಾ ಎನ್ನುತ್ತಲೇ ಬರಹವನ್ನೂ ಕಳಿಸಿಬಿಟ್ಟರು. ನೀವುಂಟು ಉಮರರ ಅನ್ನ-ಅಕ್ಷರಗಳ ಚುರುಕು, ಆಪ್ತ ಒಸಗೆಯುಂಟು.

*

ಎಲ್ಲೋ ಬಿದ್ದ ಮಳೆಯ ಹೊಡೆತಕ್ಕೆ ಮೈದುಂಬಿ ಹರಿಯುವ ಕೃಷ್ಣೆ. ಅವಳು ಕುಣಿದು ಕುಪ್ಪಳಿಸಿ ಓಡುತ್ತಿದ್ದರೆ, ನದಿತಟದ ನಮ್ಮ ಕಣ್ಣಲ್ಲಿ ಖುಷಿಯ ಕೇಕೆ. ರಭಸವಾಗಿ ಹರಿಯುವ ಕೃಷ್ಣೆಯ ಅಳುಕು – ಬಳುಕಿನ ವಯ್ಯಾರ, ಮುತ್ತಿನಂಥ ಜೋಳ ಬೆಳೆಯುವ ಫಲವತ್ತಾದ ಕರಿಮಣ್ಣ ನೆಲಕ್ಕೆ ಫೇರ್ ಅಂಡ್ ಲವ್ಲಿಯಂತೆ. ಇಂತಹದೊಂದು ರಮ್ಯ ಮನೋಹರ ಚಿತ್ರಣ ಹೊಂದಿರುವ ಕೃಷಿಪ್ರಧಾನ ಗ್ರಾಮದವನು ನಾನು. ಕೃಷ್ಣಾ ನದಿಯ ತಟದಲ್ಲಿ ಮನೆಮಾಡಿಕೊಂಡಿರುವ ನನ್ನ ಕುಟುಂಬದ ಹಿನ್ನೆಲೆಯೂ ಕೃಷಿಯೇ. ಹಾಗಾಗಿ ಹತ್ತನೇ ತರಗತಿ ಪಾಸಾದ ನಂತರ ಉನ್ನತ ಶಿಕ್ಷಣವಾಗಿ ನಾನು ಆಯ್ದುಕೊಂಡಿದ್ದು ಕೃಷಿಯಲ್ಲಿ ಡಿಪ್ಲೊಮಾ. 567 ಎಕರೆದಷ್ಟು ಬೃಹತ್ತಾದ ವಿಜಯಪುರ ಕೃಷಿ ಮಹಾವಿದ್ಯಾಲಯದ ಕ್ಯಾಂಪಸ್ಸಿನಲ್ಲಿ, ನಾವಾಡಿದ್ದೇ ಆಟ ಎನ್ನುವಂತಿದ್ದ ವಾತಾವರಣವದು. ವಿಜಯಪುರ ಜಿಲ್ಲೆಯ ರಣಬಿಸಿಲಿಗೆ ಒಣಗಿ ಬಾಯಿ ತೆರೆದ ‘ಬರಡು ನೆಲ’ ಎಂದು ಆಡಿಕೊಳ್ಳುವವರೇ ಅಧಿಕ. ಆದರೆ ನಾ ಕಲಿತ ಕೃಷಿ ಮಹಾವಿದ್ಯಾಲಯದಲ್ಲಿ ಆರೋಗ್ಯವಂತ ಆಳೆತ್ತರದ ಎತ್ತುಗಳು, ತೋಟಗಳ ಮಧ್ಯೆ ನೀರಿನ ಪಂಪ್ಸೆಟ್ಟುಗಳು, ತೆನೆಯೊಡೆದ ಜೋಳದಲ್ಲಾದ ಹಾಲು, ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಹಬ್ಬಿನಿಂತ ಹಣ್ಣು ಮತ್ತು ತರಕಾರಿ ತೋಟಗಳ ಸಾಲು. ಬೇರೆಲ್ಲೂ ಸಿಗದ ಆನಂದ ಕಾಲೇಜಿನಲ್ಲಿತ್ತು.

ದಿನದ 6 ಗಂಟೆಯ ಅವಧಿಯಲ್ಲಿ ಮುಖ್ಯವಾಗಿ ನೈಸರ್ಗಿಕ ಸಂಪನ್ಮೂಲಗಳು, ಮಣ್ಣಿನ ಗುಣ, ಕೃಷಿ ವಹಿವಾಟು, ಇಳುವರಿ, ಕೃಷಿ ನಿರ್ವಹಣೆ ಬಗ್ಗೆ ಎರಡು ಗಂಟೆ ಕ್ಲಾಸ್​ರೂಮಿನಲ್ಲಿದ್ದರೆ, ಉಳಿದ ನಾಲ್ಕು ಗಂಟೆ ಕೃಷಿ ಜಮೀನಿನಲ್ಲಿ ಬೆವರು ಹರಿಸಬೇಕಿತ್ತು. ದೃಢಕಾಯದ ಹುರಿಮೀಸೆಯ ರೈತರು ಹೊಲದಲ್ಲಿ ಕಡಲೆಯೋ, ಜೋಳವೋ, ಸೂರ್ಯಕಾಂತಿಯೋ ಬಿತ್ತಿ, ನಮಗಿಂತಿಷ್ಟು ಸಾಲುಗಳೆಂದು ಎಣಿಸಿ ಕೊಡುತ್ತಿದ್ದರು. ಕಳೆ ತೆಗೆಯುವುದರಿಂದ ಹಿಡಿದು, ಕೀಟನಾಶಕ, ರೋಗನಾಶಕ ಸಿಂಪಡಿಸಿ, ಬೆಳೆಕೊಯ್ದು ರಾಶಿ ಮಾಡುವವರೆಗೂ ನಮ್ಮದೇ ಜವಾಬ್ದಾರಿ. ಹೀಗಿರುವಾಗ ಕೇವಲ ಕೃಷಿ ವಿದ್ಯಾರ್ಥಿಯಾಗಿದ್ದ ನನ್ನಲ್ಲಿ ವೃತ್ತಿಪರ ಕೃಷಿಕನಾಗುವ ಭರವಸೆ ಒಳಗೊಳಗೇ ಮೂಡಿತು. ಮುಂದೆ ಖಾಸಗಿ ಕಂಪನಿಗಳು ದುಡಿಸಿಕೊಂಡಷ್ಟು ಸಂಬಳ ಕೊಡಲಿಲ್ಲ. ಸರ್ಕಾರ ಕರೆದು ನೌಕರಿ ಕೊಡಲಿಲ್ಲ. ಹೀಗಿರುವಾಗ ಎಂಥ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಾ ನೆಚ್ಚಿಕೊಂಡಿದ್ದ ಭೂಮ್ತಾಯಿ ಮಾತ್ರ  ಕೈಬಿಡುವುದಿಲ್ಲ ಎಂಬುದು ಅರ್ಥವಾಗಿಬಿಟ್ಟಿತು.

ನಮಗಿರುವ ಅಲ್ಪ ಜಮೀನಿನಲ್ಲಿ ಕೃಷಿಗೆ ತೊಡಗಿಕೊಂಡೆ. ಮೊದಲು ಮನೆಯ ಮುಂದೆ ಮುಳ್ಳು-ಕಂಟಿಗಳು ಬೆಳೆದು ಹಾಳುಕೊಂಪೆಯಂತಾಗಿದ್ದ ಸ್ವಲ್ಪ ಜಾಗವನ್ನು ಸ್ವಚ್ಛಗೊಳಿಸಿ ಬಿತ್ತುವ ಕಾಯಕಕ್ಕೆ ಇಳಿದೆ. ಕೃಷಿಯ ಬಗ್ಗೆ ಶಾಸ್ತ್ರೀಯ ಮತ್ತು ಪ್ರಾಯೋಗಿಕ ಜ್ಞಾನ ಪಡೆದುಕೊಂಡ ಹುರುಪು, ಹುಮ್ಮಸ್ಸು ಸ್ವಲ್ಪ ಜಾಸ್ತಿಯೇ ಇತ್ತು. ರಣಬಿಸಿಲಿನ ದಿನಗಳಲ್ಲಿ ಗುದ್ದಲಿ ಹಿಡಿದು ಜಾಗವನ್ನು ಸ್ವಚ್ಛ ಮಾಡಿ, ಮಣ್ಣು ಹದಮಾಡಿ, ನೀರುಣಿಸಿದೆ. ಗಟಗಟನೆ ನೀರುಂಡ ಮಣ್ಣಿಗೆ ಮನೆಯಲ್ಲಿದ್ದ ಟೊಮ್ಯಾಟೋ, ಮೆಣಸಿನಕಾಯಿ, ಬದನೆಕಾಯಿ, ಚವಳೆಕಾಯಿ ಬೀಜಗಳನ್ನು ಬಿತ್ತಿ ಪೋಷಿಸಿದೆ. ಜೊತೆಗೆ ಅಲ್ಲಲ್ಲಿ ಬದುವಿಗೆ ತೆಂಗಿನಮರ ಮತ್ತು ಬಾದಾಮಿಗಿಡಗಳನ್ನೂ ನೆಟ್ಟೆ. ಹಚ್ಚಹಸಿರಿನ ಎಲೆಗಳನ್ನು ಅಗಲವಾಗಿ ಚಾಚಿಕೊಂಡಿರುವ ಬಾದಾಮಿಗಿಡಗಳು ಬಿಸಿಲನ್ನು ಮರೆಮಾಚುವ ಚಾವಣಿಯಾಗಿದ್ದರೆ, ಬೃಹದಾಕಾರವಾಗಿ ಬೆಳೆದಿರುವ ತೆಂಗಿನಮರಗಳು ಎಳನೀರುಣಿಸಲು ಸಜ್ಜಾಗಿ ನಿಂತವು. ನನ್ನ ಈ ಕೈತೋಟವು, ಅಪ್ಪನಿಗೆ ಸಂತೆಯಿಂದ ತರಕಾರಿ ತರುವುದನ್ನೇ ನಿಷೇಧಿಸಿತು. ರಾಸಾಯನಿಕ ಮುಕ್ತ ತರಕಾರಿಗಳು ನಮ್ಮ ಅಡುಗೆಮನೆ ಸೇರತೊಡಗಿದವು.

ಕೃಷಿ ಎನ್ನುವುದು ಕೇವಲ ಮನಸ್ಸಿನಲ್ಲಷ್ಟೇ ಆಲೋಚಿಸುವಂಥದ್ದಲ್ಲ. ಮೈಬಗ್ಗಿಸಿ ದುಡಿಮೆ ಬೇಡುತ್ತದೆ. ದೇಹ ಮನಸ್ಸು ಒಳಗೊಂಡ ಯಾವ ಕೆಲಸದಲ್ಲಿಯೂ ಖುಷಿ ಇರುತ್ತದೆ. ಸಂಪೂರ್ಣವಾಗಿ ತೊಡಗಿಕೊಂಡ ಆತ್ಮತೃಪ್ತಿಯೂ ಇರುತ್ತದೆ ಎನ್ನುವ ಅನುಭವಕ್ಕೆ ಒಳಗಾಗಿದ್ದೇನೆ. ಆದರೆ ಇಡೀ ಜಗತ್ತು ಕಲುಷಿತ ವಾತಾವರಣದಿಂದ ತುಂಬಿರುವಾಗ ಬೇಸರವಾಗುತ್ತದೆ. ಆಗೆಲ್ಲಾ ನನ್ನ ಮನೆಯ ಮುಂದಿನ ಪುಟ್ಟ ಸಸಿಗಳು ಮೆಲ್ಲಗೆ ಓಲಾಡಿ ನಕ್ಕು ಭರವಸೆ ತುಂಬುತ್ತವೆ. ಈ ಹಸಿರಿನ ಉಸಾಬರಿ ಕೇವಲ ಸ್ವಂತಕ್ಕೋ, ಮಾರಾಟಕ್ಕೋ ಮಾತ್ರವಲ್ಲ. ಅದಕ್ಕಿಂತಲೂ ಹೆಚ್ಚಾಗಿ ಬೇಡವಾದ ಸಂಗತಿಗಳಿಗೆ ಉದ್ವೇಗಕ್ಕೆ ಒಳಗಾಗುವ ನನ್ನ ಉಸಿರನ್ನು ಸಾಂತ್ವನಗೊಳಿಸುವ ಕೀಲಿಕೈ. ಬೆಳೆಸುವುದೆಂದರೆ ದೂರ ನಿಂತು ಆಸ್ವಾದಿಸುವುದಲ್ಲ ಕೈಯ್ಯಾರೆ ನೆಟ್ಟು ಪೋಷಿಸುವುದು. ಎಳೆಚಿಗುರಿನೊಂದಿಗೆ ಸಂವಾದಿಸುವಾಗ ಎಳೆದುಕೊಳ್ಳುವ ಒಂದು ದೀರ್ಘ ಉಸಿರಿನ ಧಾಟಿಯೇ ಸಾಕು ನಿರಾಳತೆಗೆ.

sharanu mannige

ಉಮರ ಅವರ ಕೈತೋಟ

ಹಾಗೆಂದು ಮನೆಯ ಅಂಗಳದಲ್ಲೇ ಇರಲು ಸಾಧ್ಯವೇ? 1965ರಲ್ಲಿ ಆಹಾರ ಅಭದ್ರತೆ ಉಂಟಾಗಿದ್ದರಿಂದ ಜನ ಅನ್ನ ಬೇಡುವ ಸ್ಥಿತಿಗೆ ತಲುಪಿದಾಗ “ಹಸಿರು ಕ್ರಾಂತಿ” ಶುರುವಾಯಿತು. ಈ ಹಸಿರು ಕ್ರಾಂತಿಯ ಪರಿಕಲ್ಪನೆಯೇ ಆಹಾರೋತ್ಪಾದನೆ ಹೆಚ್ಚಿಸುವುದು. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ರಸಗೊಬ್ಬರ, ಕೀಟನಾಶಕ, ಬ್ಯಾಂಕ್ ಸಾಲ ಸೌಲಭ್ಯ, ಬಿತ್ತನೆ ಬೀಜ ಮುಂತಾದ ಸೌಲಭ್ಯಗಳ ಮೂಲಕ 50 ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲು ತಿಣುಕಾಡುತ್ತಿದ್ದ ದೇಶ ಇಂದು 285 ಮೆಟ್ರಿಕ್ ಟನ್ ಆಹಾರ ಉತ್ಪಾದಿಸುವಷ್ಟು ಸಾಮರ್ಥ್ಯ ಬೆಳೆಸಿಕೊಂಡಿತು. ಇಂತಹದೊಂದು ಅಭೂತಪೂರ್ವ ಸಾಧನೆಗೆ ಕಾರಣರಾದದ್ದು ನಮ್ಮ ದೇಶದ ಅನ್ನದಾತರು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ರೈತರ ಕಡೆಗಣನೆ ನಿರಂತರವಾಗಿ ನಡೆಯುತ್ತಲೇ ಇದೆ. ಸಾಲದ್ದಕ್ಕೆ ಈಗ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ, ಬೆಂಬಲ ಬೆಲೆ ಕಾಯ್ದೆ ಮತ್ತು ವಿದ್ಯುತ್ ಕಾಯ್ದೆಯಂತಹ ಮೂರು ಮಾರಕ ಕಾಯ್ದೆಗಳನ್ನು ಜಾರಿಗೆ ತಂದು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದರ ಜೊತೆಗೆ ಕೃಷಿಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ಅಡವಿಡಲು ಹೊರಟಿದ್ದಾರೆ. ದೇಶದ ಅನ್ನದಾತರು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಪಂಚೇಂದ್ರಿಯಗಳನ್ನು ಕಳೆದುಕೊಂಡಂತೆ ವರ್ತಿಸುತ್ತಿರುವುದು ನಿಜಕ್ಕೂ ಖಂಡನೀಯ. ಪ್ರಾಣ ತೆತ್ತಾದರೂ ಸರಿಯೇ ಈ ಮಾರಕ ಕಾಯ್ದೆಗಳು ಜಾರಿಯಾಗದಂತೆ ತಡೆಯಲೇಬೇಕು. ಇಲ್ಲದಿದ್ದರೆ ಈ ಮೂರು ವಿವಾದಾತ್ಮಕ ಕಾಯ್ದೆಗಳು ಮುಂದೊಂದು ದಿನ ನಮ್ಮ ದೇಶದ ಅನ್ನದಾತನ ಪಾಲಿಗೆ ಮರಣಶಾಸನವಾಗುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಇಂದು ರೈತ ಬೀದಿಗೆ ಬಂದಿದ್ದಾನೆ ಅಥವಾ ಬೀದಿಗೀಳಿದಿದ್ದಾನೆ ಎಂದರೆ ಭಾರತ ಮಾರಕಕ್ಕೆ ಹತ್ತಿರವಾಗುತ್ತಿದೆ ಎಂದರ್ಥ. ಕೃಷಿ ಚಟುವಟಿಕೆ ನಿಂತಿತೆಂದರೆ ಇಡೀ ಮಾನವ ಕುಲವೇ ಹಸಿವಿನಿಂದ ಪರಿತಪಿಸಬೇಕಾಗುತ್ತದೆ. ಹಾಗಾಗಿ ಕೃಷಿಕರ ವಿಷಯದಲ್ಲಿ ಸರ್ಕಾರ ಮುಂಜಾಗರೂಕತೆ ವಹಿಸುವುದು ಒಳಿತು.

ನಮ್ಮ ಉತ್ತರ ಕರ್ನಾಟಕ ಭಾಗದ ರೈತರು ಎದುರಿಸುತ್ತಿರುವ ಭೀಕರ ಸಮಸ್ಯೆಗಳಲ್ಲಿ ಒಂದು ನೀರಾವರಿ ಸಮಸ್ಯೆಯಾದರೆ ಎರಡನೇಯದು ಬೆಳೆದ ಬೆಳೆಗೆ ಸಿಗದ ನ್ಯಾಯಯುತ ಬೆಲೆಯಾಗಿದೆ. ಈಗಾಗಲೇ ಕಟ್ಟಲಾಗಿರುವ ದೊಡ್ಡ ಅಣೆಕಟ್ಟುಗಳ ಅನೇಕ ಕಾಲುವೆಗಳು ಕೊನೆಯವರೆಗೂ ನೀರು ತಲುಪದಿರುವುದು ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಹಾಗಾಗಿ ಸಣ್ಣಸಣ್ಣ ಚೆಕ್ ಡ್ಯಾಮ್ಗಳ ನಿರ್ಮಾಣ, ಹನಿ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸ ಮಾಡಬೇಕಿದೆ. ರೈತ ತನಗಾಗುವ ಅದೇನೇ ಸಂಕಷ್ಟಗಳನ್ನು ಎದುರಿಸಿಯೂ ಒಂದಷ್ಟು ಬೆಳೆ ಕೈಗೆ ಬಂದಾಗ ಅದನ್ನು ಮಾರುವಲ್ಲಿ ಆತ ಎದುರಿಸಬೇಕಾದ ತೊಂದರೆಗಳು ಅತ್ಯಂತ ಕ್ರೂರ. ಏಕೆಂದರೆ ಒಬ್ಬ ಸಣ್ಣ ಉದ್ಯಮಿ ಕೂಡ ತಾನು ಉತ್ಪಾದಿಸಿದ ಉತ್ಪನ್ನಕ್ಕೆ ತಾನೇ ಬೆಲೆಕಟ್ಟುವ ಕಾನೂನುಬದ್ಧ ಅಧಿಕಾರ ಹೊಂದಿದ್ದಾನೆ.

ಇಡೀ ದೇಶದಲ್ಲಿ ಇಂತಹದೊಂದು ಹಕ್ಕು ಇಲ್ಲದಿರುವುದು ನಮ್ಮ ರೈತರಿಗೆ ಮಾತ್ರ. ತಾನು ಬೆಳೆದ ಬೆಳೆಗೆ ತಾನೇ ಬೆಲೆಕಟ್ಟಿ ಮಾರುವ ಹಕ್ಕು ರೈತನಿಗೆ ದೊರೆಯುವವರೆಗೂ ರೈತನ ಈ ಬವಣೆ ತಪ್ಪಿದ್ದಲ್ಲ. ಆದ್ದರಿಂದ ರೈತ ಖರ್ಚು ಮಾಡಿರಬಹುದಾದ ಹಣ ಮತ್ತು ಶ್ರಮವನ್ನು ಲೆಕ್ಕಹಾಕಿ ಸರಕಾರವೇ ಒಂದು ನ್ಯಾಯಯುತ ಬೆಲೆಯನ್ನು ನಿಗದಿಪಡಿಸುವ ವ್ಯವಸ್ಥೆಯನ್ನು ರೂಪುಗೊಳಿಸಬೇಕು. ಇತ್ತೀಚಿಗೆ ಕೆಲವು ಕಡೆ ಜಾರಿಗೆ ತಂದಿರುವ ಆನ್ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿಯೂ ರೂಪಿಸಬೇಕು. ದುರಾದೃಷ್ಟವೆಂದರೆ ಈ ಭಾಗದ ರೈತರಿಗೆ ಆನ್ಲೈನ್ ಮಾರುಕಟ್ಟೆಯ ಬಗ್ಗೆ ಗೊತ್ತೇ ಇಲ್ಲ. ಅನ್ನದಾತ ತಾನು ಬೆಳೆದ ಬೆಳೆಗೆ, ತಾನು ಖರ್ಚು ಮಾಡಿರುವ ಹಣವನ್ನು, ತಾನು ನೀಡಿದ ಶ್ರಮವನ್ನು ಲೆಕ್ಕಹಾಕಿ ಬೆಲೆ ನಿಗದಿ ಪಡಿಸುವಷ್ಟು ವಿದ್ಯಾವಂತನು ಬುದ್ಧಿವಂತನೂ ಆಗಿಲ್ಲ! ಪರಿಹಾರ ಎಲ್ಲಿದೆ ಈ ಸಮಸ್ಯೆಗೆ? ಕೃಷಿಯನ್ನೇ ನಂಬಿಕೊಂಡು ಕುಳಿತ ನನ್ನಂಥ ನಮ್ಮೂರಿನ ನೂರಾರು ಯುವಕರು ರಟ್ಟೆಗಳ ಬಲವನ್ನು ಹುರಿಗಟ್ಟಿಸಿಕೊಂಡು, ದವಡೆಯನ್ನು ಅವುಡುಗಚ್ಚಿಕೊಂಡು ಕುಳಿತಿದ್ದಾರೆ. ದಾರಿ ಕಾಣುವುದೇ?

ಇದನ್ನೂ ಓದಿ : ಶರಣು ಮಣ್ಣಿಗೆ : ಮನುಷ್ಯರು ಮೋಸ ಮಾಡಬಹುದು ಮಣ್ಣು ಎಂದಿಗೂ ವಂಚಿಸಲಾರದು

Sharanu Mannige series on agriculture by Umar Farooq from Ilkal Islampur