ಶರಣು ಮಣ್ಣಿಗೆ : ಮನುಷ್ಯರು ಮೋಸ ಮಾಡಬಹುದು ಮಣ್ಣು ಎಂದಿಗೂ ವಂಚಿಸಲಾರದು

‘ಬೀಜನ ಇರುಬಿ ತಿಂತಾವ ಯವ್ವ ಅಂತ ಅವ್ವ ಎಷ್ಟು ಹೇಳಿದರೂ ಕೇಳದೇ ಬೀಜದ ಗಂಟು ಹಿಡ್ಕೊಂಡು ಹೊಲಕ್ಕ ಹೊರಟೆ. ಅವ್ವನು ನಿರ್ವಾ ಇಲ್ದೇ ಜೊತಿಗಿ ಬಂದ್ಲು. ಬದುವಿನ್ಯಾಗ ಹೀರಿ, ಕುಂಬಳ, ತುಪ್ರಿ ಬೀಜ ಊರಿಂದ ನೀರಡಿಕಿ ಆತು. ಎದ್ದು ಬಾವಿ ಕಡೆ ಹೋದೆ. ಬಾವಿ ಒಣಗೇತಿ ಅಂತ ನಂಬದಷ್ಟು ಭ್ರಮೆ ಆಗಿತ್ತು. ಹುಚ್ಚು ಹಿಡಿದಾಕಿಯಂಗ ಬಾವ್ಯಾಗ ಇಳಿದೆ. ಒಂದು ಚೂಪನ್ನ ಕಲ್ಲು ತಗೊಂಡು ಗೆಬರಿದೆ ಗೆಬರಿದೆ ಗೆಬರಿದೆ. ಎಷ್ಟಕೊಂಡ ಉದ್ದ ಅಗಲ ತೋಡಿದರೂ ಒಂದ್ಹನಿ ನೀರೂ ಇಲ್ಲ.‘ ಸಾವಿತ್ರಿ ಹಟ್ಟಿ

ಶರಣು ಮಣ್ಣಿಗೆ : ಮನುಷ್ಯರು ಮೋಸ ಮಾಡಬಹುದು ಮಣ್ಣು ಎಂದಿಗೂ ವಂಚಿಸಲಾರದು
ಮಕ್ಕಳೊಂದಿಗೆ, ಲೇಖಕಿ, ಶಿಕ್ಷಕಿ ಸಾವಿತ್ರಿ ಹಟ್ಟಿ
Follow us
ಶ್ರೀದೇವಿ ಕಳಸದ
|

Updated on:Apr 28, 2021 | 6:25 PM

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

ತುಮಕೂರಿನಲ್ಲಿ ಶಿಕ್ಷಕಿಯಾಗಿರುವ ಸಾವಿತ್ರಿ ಹಟ್ಟಿ ಅವರದು ಲವಲವಿಕೆಯ ವ್ಯಕ್ತಿತ್ವ. ಪ್ರತಿಯೊಂದನ್ನೂ ಬೆರಗುಗಣ್ಣಿನಿಂದ ನೋಡುತ್ತ ಆಪ್ತವಾಗಿ ಬರೆಯುವುದು ಇವರ ಹವ್ಯಾಸ. ಇದೀಗ ಮಣ್ಣಿನೊಂದಿಗಿನ ತಮ್ಮ ಬಾಲ್ಯದ ನಂಟನ್ನು ನೆನಪನ್ನು ಕೆದಕುತ್ತ ಉತ್ತರ ಕರ್ನಾಟಕದ ರೈತಾಪಿ ಮಕ್ಕಳ ಜೀವನಶೈಲಿಯ ಪದರಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಹಾಗೆಯೇ ತಮ್ಮ ಊರಿನ ರೈತರ ಪರಿಸ್ಥಿತಿಯನ್ನೂ ತಿಳಿಸಿದ್ದಾರೆ.

*

ನಾನು ಹುಟ್ಟಿ ಬೆಳೆದುದು ಸಣ್ಣ ಕೃಷಿ ಕುಟುಂಬದಾಗ. ತೀರಾ ಸಣ್ಣ ಕೂಸಿದ್ದಾಗಿನಿಂದಲೇ ಹೊಲದ ಮಣ್ಣಾಗ ಆಡ್ಕೊಂತ ಬೆಳೆದ ನನಗ ಮಣ್ಣಂದ್ರ ಚಿನ್ನಕ್ಕಿಂತ ಅಮೂಲ್ಯ. ಬಾಲ್ಯದಾಗ ನಮಗ ಆಟಕ್ಕ ಒಂದು ಸಣ್ಣ ಕೈಕಾಲು ಗೊಂಬಿನೂ ಗತಿ ಇಲ್ಲದ ಕಾಲದು. ಅರಲಿನ ಗೊಂಬಿ ಮಾಡಿ ಆಡಿದ್ದು, ಕಾಲು ಹೊಗಿಸಿ ಮಣ್ಣಿನ ಮನಿ ಮಾಡಿ ಆಡಿದ್ದು, ಅಂಗಳದಾಗ ನಮ್ಮ ಕಾಲುಗಳನ್ನೇ ಎತ್ತುಗಳನ್ನಾಗಿ ಮಾಡಿ ಹೊಲದ ಥರಾ ಹರಗಿ ಬಿತ್ತನೆ ಆಟ ಆಡಿದ್ದು, ಸೇವಂತಿ ಹೂವು ಬಿಡಿಸಿದ ನಂತರ ವಿಷಮಯವಾದ ಕೈಗೆ ಮಣ್ಣನ್ನೇ ಡಿಟರ್ಜೆಂಟಿನಂಗ ಉಜ್ಜಿ ತೊಳಕೊಂಡಿದ್ದು ಕೆಂಜಿಗ, ಕಟ್ಟಿರುವೆ ಕಡಿದಾಗ ಹೊಲದ ಕೆಂಪು ಮಣ್ಣನ್ನೆ ಕಲೆಸಿ ಹಚ್ಚಿಕೊಂಡಿದ್ದು ಎಲ್ಲಾ ಹಸಿರಾದ ನೆನಪು. ಸಣ್ಣಾಕಿದ್ದಾಗ ನಾನೆಂದೂ ಹೊಲಕ್ಕ ಹೋಗಾಕ ಒಲ್ಲೆ ಅಂತ ತಪ್ಪಿಸಿಕೊಂತಿರಲಿಲ್ಲ. ಬದಲಾಗಿ ಸಾಲಿ ತಪ್ಪಿಸಿ ಹೊಲಕ್ಕ ಹೋಗೂದಂದ್ರನೂ ಹಬ್ಬ! ಅವ್ವ ಅಪ್ಪನ ಕಷ್ಟದಾಗ ಪಾಲ್ಗೊಳ್ಳಬೇಕು ಅಂತೇನೂ ತಿಳುವಳಿಕೇನೂ ಇರದ ವಯಸ್ಸಿನ್ಯಾಗ ನಾನು ಮಣ್ಣಿಗೆ ಶರಣಾಗತಳಾಗಿದ್ದು ಯಾಕೆ ಅಂತ ಈಗ ನೆನಪಾಗಾಕ್ಹತ್ತೇತಿ.

ನಾಗರ ಅಮಾಸಿ ಮುಗಿದು ಶ್ರಾವಣ ಶುರುವಾತು ಅಂದ್ರ ಸೇವಂತಿಗಿ ಮೊಗ್ಗು ಒಡೆದು ಹೂವಾಗುವ ಕಾಲ. ಆ ಹೂವಿನದೊಂದು ಹಿತವಾದ ಪರಿಮಳವಾದರೆ ಎಲೆಯದೊಂದು ಕಹಿಮಿಶ್ರಿತ ಸುವಾಸನೆ. ಆ ಪರಿಮಳ ನೀರುಂಡ ನೆಲದ ಪರಿಮಳದೊಂದಿಗೆ ಸೇರಿ ಬೆಳಗಿನ ಕುಳಿರ್ಗಾಳಿಯೊಂದಿಗೆ ತ್ವಾಟದಿಂದ ಅಷ್ಟು ದೂರದ ತನಕೂ ಹಿತವಾಗಿ ತೇಲಿ ಬರೂ ಸುಗಂಧ ನನ್ನ ಸೆಳೀತಿತ್ತು. ನೀರಾವರಿ ಇಲ್ಲದ ರೈತರು ಸೇಂಗಾ ಬಿತ್ತನೆ ಮಾಡಿ ಅದರ ಸುತ್ತಲೂ ನಾಲ್ಕೂ ಕಡೆ ಗುರೆಳ್ಳು, ಎಳ್ಳು, ಅಲಸಂದೆ, ಮಡಿಕಿ, ಹೆಸರು, ತೊಗರಿ ಇತ್ಯಾದಿ ಅಕ್ಕಡಿ ಕಾಳು ಬಿತ್ತಿರ್ತಿದ್ರು. ಆ ಎಲ್ಲಾ ಅಕ್ಕಡಿ ಸಾಲಿನ ಮಿಶ್ರ ಪರಿಮಳ ಎಳೇ ಸೇಂಗಾಬಳ್ಳಿಯ ಕಂಪಿನೊಂದಿಗೆ ಸೇರಿಕೊಂಡು ಉಕ್ಕು ಕಬ್ಬಿಣವನ್ನು ಆಕರ್ಷಿಸುವಂತೆ ನನ್ನ ಎಳೀತಿತ್ತು. ಹೂವು ಬಿಡಿಸಿ ಮುಗಿಯುವ ಹೊತ್ತಿಗೆ ಬಾರಕೇರ ಅಂದಮ್ಮನ ಹೊಲದ ಬದುವುನ್ಯಾಗಿನ ಬಾರಿಹಣ್ಣಿನ ಗಿಡಗಳು ನನ್ನ ಕೈ ಮಾಡಿ ಕರೀತಿದ್ವು. ಸಾಮಾನ್ಯವಾಗಿ ಎಲ್ಲರ ತ್ವಾಟಗಳ ಬಾವಿ ಮಣ್ಣಿನ ಕುಟ್ರಿ ಸುತ್ತ ಹುಟ್ಟಿರ್ತಿದ್ದ ಔಡಲ ಗಿಡ, ಚೆಂಡು ಹೂವಿನ ಗಿಡಗಳು, ಕುಂಬಳ ಬಳ್ಳಿಗಳು, ಹೀರಿ, ತುಪ್ರಿ(ತುಪ್ಪದ ಹೀರೆ), ಹಾಗಲ ಕಾಯಿಗಳ ಬಳ್ಳಿ ನನ್ನ ಜೀವದ ಗೆಳತ್ಯಾರೇನೊ ಅನ್ನುವಷ್ಟು ಆಪ್ತ ಆಗಿದ್ವು.

sharanu mannige

ಭೂಮಿತಾಯ ಮಕ್ಕಳು

ಬ್ಯಾಸಿಗಿ ಸೂಟಿ ಬಂತು ಅಂದ್ರ ಮಲ್ಲಿಗಿ ಹೂವಿನ ಸುಗ್ಗಿ ನಮಗ. ನಾಲ್ಕಾರು ತ್ವಾಟ ತ್ವಾಟ ಅಲೆದಾಡಿ ಮಲ್ಲಿಗಿ ಮಗ್ಗಿ ತರೂದಂದ್ರ ಎಂಥಾ ಸಂಭ್ರಮ! ಎಪ್ರೀಲ್, ಮೇ ದಿನಗಳ ಚುರುಕು ಬಿಸಿಲಿನ ಛತ್ರಿ ತಲಿಮ್ಯಾಲಿದ್ರ ಹುರಿದ ಉಪ್ಪಿನಂಥಾ ಮಣ್ಣು ಕಾಲಕೆಳಗ. ಆದ್ರ ಮಗ್ಗಿ ತರಾಕ ಹೋಗಾಕ ಒಲ್ಲೆ ಅಂತ ಒಂದಿನವೂ ಅಂತಿರಲಿಲ್ಲ. ಹಾಡ್ಕೊಂತ ಕುಣ್ಕೊಂತ ಮಗ್ಗಿ ತ್ವಾಟದ ತನಕ ಓಡಿದ್ದೇ ಓಡಿದ್ದು. ಅಲ್ಲಲ್ಲಿ ಸಿಕ್ಕ ಸಗಣಿ ಹೊತ್ತಲದಾಗ ಪಾದ ಇಟ್ಟು ಅದರ ತಂಪು ಆರುವತನಕ ಅದೊಂಥರಾ ಹಿತಾನುಭೂತಿ ಪಡ್ಕೊಂತ ಓಡ್ತಿದ್ವಿ ತಂಗಿ, ನಾನು. ಅದು ಬಸವಣ್ಣನ ಕೆರಿ ದಾಟೂ ಹೊತ್ತಿಗಿ ಉದುರಿ ಹೊಕ್ಕಿತ್ತು. ಮತ್ತ ಕೆರಿ ಅರಲನ್ನ ಪಾದಕ್ಕೆಲ್ಲಾ ಚಪ್ಪಲಿ ಥರಾ ಮೆತ್ತುಕೊಂಡು ಮತ್ತೆ ಓಡ್ತಿದ್ವಿ. ಅದು ಕಾದ ಮಣ್ಣಿನ ಎದುರು ಸೋತು ಒಣಗಿ ಉದುರಿಂದ ಸುಡು ಹಂಚಿನಂತಾ ನೆಲದಾಗ ಜಿಂಕೆ ಮರಿಗಳಂಗ ಕಾಲು ನೆಲಕ್ಕ ಹತ್ತಿತೊ ಇಲ್ವೊ ಅನ್ನುವಂತ ನರಗುಂದ ಕಾಕಾರ ತ್ವಾಟ ಬರೂತನಕ ಓಡ್ತಿದ್ವಿ. ಹಂಗ ಕಷ್ಟಪಟ್ಟಾರು ನಾವಷ್ಟೇ ಅನ್ನಂಗಿಲ್ಲ. ನಮ್ಮ ವಾರಿಗಿ ಎಲ್ಲಾ ರೈತರ ಮಕ್ಕಳು ಮತ್ತ ಕೃಷಿ ಕಾರ್ಮಿಕರ ಮಕ್ಕಳ ಪಾಡು ಇಂಥದ್ದೇ ಆಗಿತ್ತು. ಎಷ್ಟೋ ಸಲ ನಾವು ಸಾಲಿ ತಪ್ಪಿಸಿ ಹೊಲ ಗದ್ದೆ ಅಲೆದಾಟ ಮಾಡುತ್ತಿದ್ದುದರ ಉದ್ದೇಶ ಎಷ್ಟೋ ಸಲ ಮಧ್ಯಾಹ್ನದ ಹಸಿವೆ ಹಿಂಗಿಸಿಕೊಳ್ಳೂದಾಗಿತ್ತು. ಹೊಲಕ್ಕ ಹೋದ್ರ ಬಾರಿ ಹಣ್ಣು, ಚಳ್ಳು ಹಣ್ಣು, ಪ್ಯಾರಲ ಹಣ್ಣು, ಸೇಂಗಾ, ಅಲಸಂದೆ, ತೊಗರಿ, ಚಪ್ಪರದ್ಹಣ್ಣು, ಪಪಾಯ ಹಿಂಗೆ ಒಂದಿಲ್ಲೊಂದು ತಿನ್ನಾಕ ಏನಾರ ಸಿಕ್ಕೇ ಸಿಗತಾವಲ್ಲ ಅನ್ನುವ ಭರವಸೆ ನಮಗಿತ್ತು. ಸುಗ್ಗಿ ಸಮಯದಾಗ ಹೊಲದ ನಡಬರಕ ಕಣ ಮಾಡಿದಾಗಂತೂ ನಮಗ ಹಬ್ಬ. ಅಪ್ಪ ದುಂಡಗ ನೆಲ ಮಟ್ಟಸ ಮಾಡಿ, ನೀರುಣಿಸಿ ಬಡಿದು ಸಮ ಮಾಡೀದ್ರ ಅವ್ವ ಸಗಣಿ ನೀರು ಹಾಕಿ ಸಾರಿಸಿ ಮೇಟಿ ಪೂಜೆ ಮಾಡಿ ಒಕ್ಕಲಿ ಸುರು ಮಾಡ್ತಿದ್ದ ದಿನಗಳಂತೂ ಜಾತ್ರೆಯ ದಿನಗಳೇನೊ ಅನ್ನುವಂಗ ಭಾಸ ಆಗ್ತಿದ್ವು.

ಸಂಜೆ ಹೊತ್ತು ಮನಿಗಿ ಬರುವಾಗ ಎಲ್ಲಾ ತಾಯಂದಿರ ತಲಿ ಮ್ಯಾಲೆ ಕಟ್ಟಿಗಿ, ಕುಳ್ಳು, ಹುಲ್ಲು, ಮೇವು ಯಾವುದಾದರೊಂದು ಹೊರೆ ಇದ್ದೇ ಇರೂದು. ಬಗಲಾಗೊಂದು ಕೂಸು, ಕೈಯ್ಯಾಗೊಂದು ಕೂಸು, ಹಿಂದೊಂದು ಕೂಸು ಮುಂದೊಂದು ಕೂಸು. ಗ್ಲಂಗ್ಲಕ್ ಗ್ಲಂಗ್ಲಕ್ ಅಂತ ಲಯಬದ್ಧವಾಗಿ ಗೆಜ್ಜೆ ಸದ್ದು ಮಾಡ್ಕೊಂತ ಮನಿ ದಾರಿ ಹಿಡಿಯೂ ಎತ್ತು, ದನ ಕರುಗಳ ಹಿಂಡು, ಎಳೆ ಕರುಗಳ ಚಿನ್ನಾಟ, ಹೋಮದ ಹೊಗಿಯಂಗ ಆಗಸದೆತ್ತರಕ್ಕ ಎದ್ದ ಧೂಳು, ಹರೇದ ಹುಡುಗ ಹುಡುಗಿಯರ ತರಲೆ, ಚೇಷ್ಟೆ, ಮುನಿಸಿನ ಮಾತು ಕತೆಗಳು, ಗೋಧೂಳಿ ಸಮಯಕ್ಕೆ ಮೆರುಗು.

sharanu mannige

ಯಾರನ್ನೂ ಎಳೆವ ಬಂಡಿ

ನಾನು ಎಂಟನೇಯತ್ತ ಇದ್ದಾಗ ನಡೆದುದು. ಅಡಚಣಿ ಮತ್ತ ಮೇವಿನ ಕೊರತೆ ಸಲುವಾಗಿ ಅಪ್ಪ ಒಂದೆರಡು ದನ ಕರು ಮಾರಿಬಿಟ್ಟಿದ್ದ. ಒಂದೆರಡನ್ನು ಗುಡ್ಡದ ಕಡೆ ಹೊಡದು ಬಂದಿದ್ದ. ನಮ್ಮ ಚಪ್ಪರದ ಜಾಗ ಖಾಲಿ ಆಗಿತ್ತು. ದನುಕರುಗಳೇ ಇಲ್ಲಲ್ಲ ಅಂತ ಅದರ ಕಟ್ಟಿಗಿ ಎಲ್ಲಾ ಹಿರಕೊಂಡು ಹಿರಕೊಂಡು ಒಲಿಗೆ ಹಾಕಿ ಬಿಟ್ಟಿದ್ವಿ. ಕಟ್ಟೆ ಗ್ವಾಡಿಯ ಮಣ್ಣಾಗ ಬಿದ್ದ ಒಂದು ಹಕ್ಕರಿಕಿ ಬೀಜ ಹಸುರಾಗಿ ಮೊಳೆತು ದಿನದಿನಕ್ಕೂ ಬೆಳೆದು ಚಿತ್ತಾರವಾಗಿ ಕಂಗೊಳಿಸಾಕ್ಹತ್ತಿತ್ತು. ಅದ್ನ ಯಾರೂ ಕೀಳಬ್ಯಾಡ್ರಿ ಅಂತ ತಾಕೀತು ಮಾಡಿದ್ದೆ. ನಂತರ ಅದು ಬೆಳೆದು ಸೊಂಪಾದಾಗ ಎಲೆ ಮಾತ್ರ ತಕ್ಕೊಂಡು ರೊಟ್ಟಿ ಜೊತೆ ತಿಂದ ಆ ದಿನ ನನಗಿನ್ನೂ ನೆನಪೈತಿ. ಅವತ್ತಂತೂ ಮಣ್ಣಿನ ಮ್ಯಾಲೆ ಸಿಕ್ಕಾಪಟ್ಟೆ ಪ್ರೀತಿ ಹರಿದುಬಿಟ್ತು. ದನದ ಕೊಟ್ಟಿಗೆಗೆ ಕಲ್ಲು ಹಾಸೇನೂ ಇರಲಿಲ್ಲ. ಅದು ಮೇಲ್ಹೊದಿಕೆಯನ್ನೂ ಕಳಕೊಂಡು ಬಟಾಬಯಲಾಗಿತ್ತು. ನಾನು ಕೆಲವು ಟೊಮೊಟೊ, ಮೆಣಸಿನ ಸಸಿಗಳನ್ನು ಅಲ್ಲಿ ಸಾಲಾಗಿ ಊರಿ ನೀರು ಹಾಕಿದೆ. ಸ್ವಲ್ಪ ದಿನದಾಗ ಅವು ಚೆಂದಾಗಿ ಬೆಳೆದವು. ಅವು ಹೂವು ಬಿಟ್ಟಿದ್ದು, ಮುಗುಳೊಡೆದದ್ದು ನಿತ್ಯವೂ ನೋಡಿ ನೋಡಿ ಆನಂದ ಪಡ್ತಿದ್ದೆ. ಒಂದ್ಸಲ ಅಕ್ಕ “ಶಾವಿ ನಿನ್ನ ತ್ವಾಟದಾಗ ಮೆಣಸಿನಕಾಯಿ ಆಗ್ಯಾವಲ್ಲ ಒಂದೆರಡು ತಗದು ಕೊಡ” ಅಂತ ಕೇಳಿದ ದಿನ ನಾನು ಮಹಾನ್ ತ್ವಾಟದ ಮಾಲೀಕಳಾದಷ್ಟು ಸಂಭ್ರಮವಾಗಿ ಬಿಟ್ಟಿತ್ತು.

ಇದ್ದಕ್ಕಿದ್ದಂತೆ ಬಾಲ್ಯ ಸರಿದು ಹೋದದ್ದು ಗೊತ್ತಾಗಲೇ ಇಲ್ಲ. ಡಿಗ್ರಿ ಸರ್ಟಿಫಿಕೇಟ್ ಬಂದು ಕೈಯ್ಯಾಗ ಕುಂತಿತ್ತು. ಅವ್ವನ ದುಡಿಯುವ ಶಕ್ತಿ ಕುಂದಿತ್ತು. ಡಿಗ್ರಿ ಮಾಡಿದರೇನಾತು ನಾನು ಅನಕಾತ ಹೂವು ಮಾರತೀನಿ ಅಂದಾಗ ಅವ್ವ “ ತಲಿಕೆಟ್ಟಾಕೇ ಮುಚ್ಚು ಬಾಯಿ” ಅಂತ ಚೀರಿದ್ಲು. ಇಪ್ಪತ್ತು ವರ್ಷ ಹೂವು ಕಟ್ಟಿ ಮಾರಿ ಹೊಟ್ಟಿಗಿ ನೆತ್ತೀಗಿ ಕಂಡೀವಲ್ಲಬೇ ಈಗ ನಿನಗ ದುಡಿಯೂ ಶಕ್ತಿ ಇಲ್ಲ, ನಾನು ಮಾರೀದ್ರ ಏನ್ ತಪ್ಪು ಅಂತ ಅಂತ ಕೇಳೀದ್ರ ಅವ್ವ ಇಷ್ಟಕೊಂಡ ಓದ್ಸಿ ಮಗಳನ್ನ ಹೂವು ಮಾರಾಕ ಕಳಿಸ್ತಾಳ ಅಂತ ಜನ ಅನ್ನಂಗಿಲ್ಲೇನು ಇದ್ದಾಗ ತಿನ್ನು, ಇರದಾಗ ಉಪಾಸ ಇರು. ಗಣ್ಮಕ್ಳು ಇವತ್ತಿಲ್ದಾ ನಾಳೆ ದುಡಿಯೂದು ಕಲಿತಾರ, ಇದ್ದಷ್ಟು ಗೇಣು ಭೂಮಿ ಒಳಗ ದೇವರು ಒಂದು ಹೊತ್ತಿಗಾರ ಅನ್ನ ಕೊಡತಾನ ನೀನು ಚಿಂತಿ ಮಾಡಬ್ಯಾಡ ಅಂದಿದ್ಲು ಅವ್ವ. ಜಾಸ್ತಿ ಮಾತಾಡದೇ ಸುಮ್ಕಾಗಿದ್ದೆ.

ಮುಂದೆ ಕಾರಣಾಂತರಗಳಿಂದ ನಮ್ಮ ಪುಟ್ಟ ತ್ವಾಟದ ಬಾವಿ ಬತ್ತಿ ಹೋಗಿತ್ತು. ಮೂರು ನಾಕು ವರ್ಷ ಬರಗಾಲ ಬೇರೆ. ಯಾವಾಗಲೂ ತುಂಬಿರ್ತಿದ್ದ ಬಾವಿ ಒಣಗಿತ್ತು. ಯಾವುದೊಂದು ಬೆಳೆ ಇಲ್ಲದೇ ಹೊಲ ರಣಭೂಮಿ ಆಗಿ ಕಾಣಸ್ತಿತ್ತು. ಬ್ಯಾರೆಯವರ ಹೊಲದ ಕೆಲಸಕ್ಕ ಹೋಗ್ಬೇಕು ಅಂತ ಕೇಳೀದ್ರ ಯಾವಾಗ್ಲೂ ದುಡಿಯೂ ಮಂದಿಗೇ ಹ್ವಾರೇವು ಇಲ್ಲಬೇ ಓದಿದಾಕಿ ನಿನಗೆಲ್ಲಿ ಕೆಲಸ ಕೊಡೂನು ಅಂತ ಅಂದಾಗ ಚೂರಿ ತಗೊಂಡು ಚುಚ್ಚಿದರೇನೊ ಅನ್ನುವ ಯಾತನೆ ಕಾಡಿತ್ತು. ಆ ವರ್ಷದ ಮೇ ತಿಂಗಳ ದಿನಗಳು. ಒಂದೆರಡು ಸಲ ಮಳಿ ಬಿದ್ದಿತ್ತು. ಅವ್ವಗ ಗಂಟು ಬಿದ್ದು ಬದುವಿನ್ಯಾಗ ಏನಾರ ಬೀಜ ಊರೂನು ಬಾ ಬೇ ಅಂತ ಹಠ ಹಿಡಿದೆ. ಬಾವ್ಯಾಗ ನೀರಿಲ್ಲ, ಮಳಿ ಇನ್ನೂ ಚೊಲೊ ಬಂದಿಲ್ಲ. ಬೀಜನ ಇರುಬಿ ತಿಂತಾವ ಯವ್ವ ಅಂತ ಅವ್ವ ಎಷ್ಟು ಹೇಳಿದರೂ ಕೇಳದೇ ಬೀಜದ ಗಂಟು ಹಿಡ್ಕೊಂಡು ಹೊಲಕ್ಕ ಹೊರಟೆ. ಅವ್ವನು ನಿರ್ವಾ ಇಲ್ದೇ ಜೊತಿಗಿ ಬಂದ್ಲು. ಬದುವಿನ್ಯಾಗ ಹೀರಿ, ಕುಂಬಳ, ತುಪ್ರಿ ಬೀಜ ಊರಿಂದ ನೀರಡಿಕಿ ಆತು. ಎದ್ದು ಬಾವಿ ಕಡೆ ಹೋದೆ. ಬಾವಿ ಒಣಗೇತಿ ಅಂತ ನಂಬದಷ್ಟು ಭ್ರಮೆ ಆಗಿತ್ತು. ಹುಚ್ಚು ಹಿಡಿದಾಕಿಯಂಗ ಬಾವ್ಯಾಗ ಇಳಿದೆ. ಒಂದು ಚೂಪನ್ನ ಕಲ್ಲು ತಗೊಂಡು ಗೆಬರಿದೆ ಗೆಬರಿದೆ ಗೆಬರಿದೆ. ಎಷ್ಟಕೊಂಡ ಉದ್ದ ಅಗಲ ತೋಡಿದರೂ ಒಂದ್ಹನಿ ನೀರೂ ಇಲ್ಲ. ತೋಡಿದ ತೆಗ್ಗಿನ್ಯಾಗ ಕಣ್ಣೀರು ಬಳ ಬಳ ಉದುರಿದವು. ಉಗುರು ಕಣ್ಣು ಉರಿಯಾಕ್ಹತ್ತಿದ್ವು. ಮ್ಯಾಲೆ ಅವ್ವ ಶಾವಕ್ಕ ಬಾ ಶಾವಕ್ಕ ಬಾ ಅಂತ ನೀರಿನ ಮಗಿ ಹಿಡಕೊಂಡು ನಿಂತಿದ್ಲು. “ನೀನು ಮತ್ತೆ ತುಂಬಬೇಕು ನೋಡು, ತುಂಬಿ ತುಳುಕಬೇಕು, ನಿನ್ನಿಂದನೇ ನಮಗ ಅನ್ನ, ನೀ ಕೈ ಬಿಟ್ರ ಹೆಂಗ! ಈ ಸಲ ಮಳೆಗಾಲ ಚೊಲೊ ಆಗಬೇಕು ನೀ ತುಂಬಬೇಕು” ಅಂತ ಬಡಬಡಿಸ್ಕೊಂತ ಬಾವಿಯಿಂದ ಹೊರಗ ಬಂದಿದ್ದೆ. ಅವ್ವ ಕುಡಿಯೂ ನೀರು ಬ್ಯಾರೆಯವರ ಬಾವಿ ಇಳದು ತಂದಿದ್ಲು. ನಂತ್ರ ಆ ವರ್ಷ ಒಳ್ಳೇ ಮಳಿ ಬಿತ್ತು. ಮತ್ತೆ ನಮ್ಮ ಬಾವಿ ತುಂಬಿತು. ಮತ್ತೆ ನೆಲದವ್ವ ಹಸಿರುಟ್ಟು ನಿಂತ್ಲು. ಆಗಿನಿಂದ ಈಗಲೂ ನೀರಿಗೆ ಕೊರತೆ ಆಗದಂಗ ದೇವರು ಹೆಂಗೊ ತುಂಬಿಕೊಂಡೇ ಇರತಾನ ಬಾವ್ಯಾಗ.

sharanu mannnige

ಓನಾಮದಯ್ಯಗ ಶಿವಶರಣು ಬಸವಣ್ಣ

ನಮ್ಮೂರಾಗ ಭಾಳ ಮಂದಿ ಸಣ್ಣ ರೈತರು. ಕೆಲವರು ಬಂದ ಬೆಳೀನೆಲ್ಲಾ ಎಪಿಎಮ್ಸಿಗೆ ಹಾಕಿ ಬರತಾರ. ಮತ್ತೆ ಕೆಲವು ಮಾರ್ಕೆಟ್ ನ್ಯಾಗ ದಲ್ಲಾಳಿಗಳಿಗೆ ಸುರಿದು ಬರತಾರ. ಮತ್ತೆ ಕೆಲವು ಜನ ರೈತರು ತಾವೇ ಊರೂರು ತಿರುಗಿ ಮಾರತಾರ. ನನ್ನ ಸಹೋದರರು ಅತಿ ಸಣ್ಣ ಕೃಷಿ ಭೂಮಿ ನಂಬಿ ಬದುಕ್ತಿರೂದ್ರಿಂದ ಅವರು ಯಾವಾಗಲೂ ಬಂದದ್ದನ್ನೆಲ್ಲಾ ಮಾರ್ಕೆಟ್ಟಿಗೆ ನೇರವಾಗಿ ಮಾರಂಗಿಲ್ಲ. ಜಾಸ್ತಿ ಬಂದಾಗ ಮಾರ್ಕೆಟ್ಟಿಗೆ ಕೊಟ್ಟು ಸ್ವಲ್ಪ ಉಳಿಸಿಕೊಂಡು ತಾವೇ ತಿರುಗಾಡಿ ಮಾರಿಬಿಡ್ತಾರ. ಮಾರ್ಕೆಟ್ಟಿನ್ಯಾಗ ಕೆಲವೊಮ್ಮೆ ಸುರಿದು ಬರುವ ಪರಿಸ್ಥಿತಿ ಇದ್ದಾಗ ಕಡಿಮಿ ಬೆಲೆಗೆ ನೇರವಾಗಿ ಅಂತಿಮ ಗ್ರಾಹಕರಿಗೆ ಮಾರೂದು ಒಳ್ಳೇದು ಅಂತ ನನ್ನ ಅಭಿಪ್ರಾಯ. ಏನೇ ಆದರೂ ರೈತರಿಗೆ ಸಿಗಬೇಕಾದ್ದಷ್ಟು ಫಲ ಸಿಗವಲ್ದು. ದಲ್ಲಾಳಿಗಳು ಇವರಿಂದ ಖರೀದಿಸಿದ ಬೆಲೆಗಿಂತ ಎರಡು ಪಟ್ಟು ಜಾಸ್ತಿ ಬೆಲೆಗೆ ಚಿಲ್ಲರೆ ಮಾರಾಟಗಾರರಿಗೆ ಮಾರ್ತಾರೆ. ಅವರು ಕೂಡ ಮತ್ತೆ ಎರಡು ಪಟ್ಟು ಬೆಲೆ ನಿಗದಿ ಮಾಡಿ ಮಾರಿಕೊಂಡು ಬದುಕಿಬಿಡ್ತಾರೆ. ಉತ್ತನೆ, ಬಿತ್ತನೆ, ಗೊಬ್ಬರ, ಕಳೆ ಕಾಸ್ಗಿ ಅಂತ ಎಲ್ಲಾ ಖರ್ಚು ಲೆಕ್ಕ ಹಾಕಿದರೆ ರೈತರಿಗೆ ಮಾಡಿದ ಖರ್ಚೂ ಕೂಡ ಗಿಟ್ಟದ ಸ್ಥಿತಿನೇ ಬಹಳ. ಮತ್ತೆ ಹೆಂಗ ಬದುಕ್ತಾರ ರೈತರು ಅಂದ್ರ ಸಾಲ… ತೀರಿಸುವವರು ಬದುಕಿದ್ದಾಗಲೇ ಸಾಲ ತೀರಿಸ್ತಾರೆ. ಬಡ್ಡಿ ಕಟ್ಟಲಾಗದ, ಅವಮಾನಕ್ಕೀಡಾಗಿ ಸೋತು ಹೋದವರು ಸಾಲ ತೀರುವಷ್ಟರಲ್ಲೇ ತಾವೇ ತೀರಿ ಹೋಗಿರತಾರ. ರೈತನ ಮಗಳಾಗಿ, ರೈತನ ಮಡದಿಯಾಗಿ ಈ ವಿಷ ವರ್ತುಲವನ್ನು ನೋಡಿ ನೋಡಿ ಬ್ಯಾಸತ್ತೀನಿ.

ಇನೊಂದು ಸಮಸ್ಯೆ ಏನಂದ್ರ ನಮ್ಮ ಅಣ್ಣತಮ್ಮಂದಿರನ್ನೂ, ನನ್ನ ಪತಿಯನ್ನೂ ಹಿಡಿದು ಭಾಳ ಜನ ರೈತರು ಓದಿದವರೆಂಬ ಕಾರಣಕ್ಕೇ ನಮ್ಮ ಸಲಹೆಗೆ ಬೆಲೆ ಕೊಡಂಗಿಲ್ಲ. ಸಾವಯವ ಕೃಷಿ, ಸುಸ್ಥಿರ ಕೃಷಿ ಅಂತ ಹೇಳೀದ್ರ ನಿನಗೇನು ಗೊತ್ತೈತಿ ಹೋಗಬೇ ಸುಮ್ಮ ಊಟ ಮಾಡಿ ಕುಂತ್ಕೊ ಅನ್ನೋರೇ ಜಾಸ್ತಿ. ನಾವು ಸಲಹೆ ನೀಡಿದ್ದು ಪಾಲಿಸಲ್ಪಡಬೇಕು ಅಂದ್ರ ನಾವು ಪ್ರಸ್ತುತ ಆ ಕ್ಷೇತ್ರದಾಗ ನಿಂತಿರಬೇಕು. ಹೊರಗಿನಿಂದ ಸಲಹೆ ಕೊಟ್ಟರೆ ಅದಕ್ಕೆ ಬೆಲೆ ಇಲ್ಲ. ನನ್ನ ಪತಿಯೂ ಸಣ್ಣ ರೈತ. ಇವರಿಗೆ ಸಾವಯವ ಕೃಷಿ ಬಗ್ಗೆ ಸಾಕಷ್ಟು ತಿಳುವಳಿಕೆ ಇದ್ರೂನೂ ಅದ್ಯಾಕೊ ಅದು ಶೀಘ್ರ ಫಲ ಕೊಡಂಗಿಲ್ಲ ಅಂತ ಅದನ್ನ ನಿರ್ಲಕ್ಷ್ಯ ಮಾಡಾಕ್ಹತ್ಯಾರ. ನಮ್ಮೂರಿನ ಶೇ.90 ಜನ ಯುವಕರು ಮಹಾನಗರವಾಸಿಗಳು. ಹಳೇ ಜನ, ಎಲ್ಲೋ ಅಪರೂಪಕ್ಕೆ ನನ್ನ ಪತಿಯಂತಹ ಯುವಕರು ಊರಾಗಿರೂದು. ಹಿಂಗಿದ್ದವ್ರೂ ಕೂಡ ಮಾರುಕಟ್ಟೆ ದೋಷಗಳು, ಬೆಲೆ ವಂಚನೆಗೆ ಈಡಾಗಿ ಸಾಲದ ಸುಳಿಗೆ ಸಿಕ್ಕವರೇ ಜಾಸ್ತಿ.

ಶಾಲೆಗೆ ಸೇರುವ ಮೊದಲು ಐಡಿಎಫ್​ನಲ್ಲಿ ಕೆಲಸ ಮಾಡುತ್ತಿದ್ಧಾಗ ಅಲ್ಲಿ ಹಮ್ಮಿಕೊಳ್ತಿದ್ದ ಸಾವಯವ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಂದ ನನಗೆ ಸಾಕಷ್ಟು ತಿಳುವಳಿಕೆ, ಅನುಭವ ಸಿಕ್ಕಿತು. ಅದನ್ನೆಲ್ಲಾ ನಾನು ಕಾರ್ಯಗತ ಮಾಡಾಕ ನನಗೆ ಇನ್ನೂ ಅವಕಾಶ ಸಿಕ್ಕಿಲ್ಲ. ನನ್ನ ಶಾಲೆಯ ಕರ್ತವ್ಯ ಒಂದು ಊರಾಗ, ಪತಿ ಮನೆ ಒಂದು ಊರಾಗ. ತವರು ಮನೆ ಒಂದೂರಾಗ. ಬಾಡಿಗೆ ವಾಸ್ತವ್ಯದ ಮನಿ. ಇದ್ದುದರಾಗ ಶಾಲೆಯ ಮಣ್ಣು ಸದ್ಯಕ್ಕೆ ನನಗೆ ಆಸರೆ. ಇಲ್ಲಿ ಕೂಡ ಸಾಕಷ್ಟು ಸಲ ಮಕ್ಕಳೊಂದಿಗೆ ನೆಟ್ಟ ಸಸಿಗಳು ಕಿಡಿಗೇಡಿಗಳ ಪಾಲಾದವು. ಮುಖ್ಯ ಶಿಕ್ಷಕರ ಮಾರ್ಗದರ್ಶನದೊಂದಿಗೆ ಮತ್ತೆ ಹೊಸ ಸಸಿಗಳನ್ನು ನೆಡಲಾಗಿದೆ. ಸಮುದಾಯದ ಜನರಿಗೂ ಕಾಳಜಿ ಮೂಡಬೇಕು. ಆಗ ಮಾತ್ರ ಇದಕ್ಕೆಲ್ಲಾ ಭದ್ರತೆ ಸಿಗುವುದು. ಈ ನಿಟ್ಟಿನ್ಯಾಗ ಸಾಧ್ಯ ಆದಷ್ಟು ಪ್ರಯತ್ನ ಮಾಡಾಕ್ಹತ್ತೀನಿ.

ನಿವೃತ್ತಿಯ ನಂತ್ರ ನನ್ನ ಭವಿಷ್ಯತ್ತನ್ನು ನಾನು ಮಣ್ಣಿನೊಂದಿಗೇ ಕಳೆಯೂದು. ಒಮ್ಮೆ ಮಣ್ಣಿನ ಮಹತ್ತನ್ನು ಅರಿತ ಜೀವ ಯಾವತ್ತಿಗೂ ಅದನ್ನು ಮರೀಲಾರ್ದು. ನನಗ ತುಮಕೂರಿಂದ ಆಗಾಗ್ಗೆ ಗದಗನ್ಯಾಗಿರೋ ನನ್ನ ತವರಿಗೆ ಹೋಗಾಕ ಅನುಕೂಲಾಗಂಗಿಲ್ಲ. ಎಷ್ಟೋ ಸಲ ಎರಡು ಮೂರು ತಿಂಗಳಿಗೊಮ್ಮೆ ಹೋದರೆ ಭಾಗ್ಯ. ಹೆತ್ತವರು ಮತ್ತು ನಾನು ಆಡಿ ಬೆಳೆದ ನಮ್ಮ ಹೊಲದ ಅಗಲಿಕೆಯನ್ನ ಸಹ್ಯವಾಗಿಸಾಕ ಹೊಲದ ಮಣ್ಣನ್ನ ಕಟ್ಟಿಕೊಂಡು ಬಂದೀನಿ. ಅದನ್ನು ಮುಟ್ಟಿದರೆ, ಮೂಸಿದರೆ ಅಲ್ಲೇ ನನ್ನ ತವರಿನ ಹೊಲದಾಗ ಹೂವುಗಳ ಮಧ್ಯೆ ನಿಂತ ಭಾವ ಆವರಿಸುತ್ತ… ಅನುಕೂಲಾದಾಗ ತವರಾಗಲಿ, ಪತಿ ಮನೆಗಾಗಲಿ ಹೋದಾಗ ನಾನು ಮೊದಲು ಹೋಗೂದು ಹೊಲಕ್ಕೆ. ನನ್ನ ಕೈಲಿ ಆದಷ್ಟು ಏನಾದರೂ ಕೆಲಸ ಮಾಡುವೆ. ಕೆಲಸ ಏನೂ ಇಲ್ಲಂದ್ರ ಸೊಪ್ಪು, ತರಕಾರಿ, ಹೂವು ಏನನ್ನಾದರೂ ಅಮ್ಮನ ಮಡಿಲಿಂದ ಎತ್ತಿಕೊಂತೀನಿ. ಒಂದಷ್ಟು ಹೊತ್ತು ನೆಲದಾಗ ಬೇರಿಳಿದಂಗ ಸುಮ್ನ ಕುಂತು ಬಿಡ್ತೀನಿ ಎಲ್ಲಾ ಭಾರ ನೆಲದವ್ವನ ಉಡಿಯಾಗ ಹಾಕಿ ಹಾಯಾಗಿದ್ದುಬಿಡ್ತೀನಿ.

sharanu mannige

ಬಾಲ್ಯದಲ್ಲಿ ಆಡಿ ಬೆಳೆದ ಬಾವಿ ಮತ್ತು ಸಾವಿತ್ರಿ

ಮನುಷ್ಯರು ಮೋಸ ಮಾಡಬಹುದು. ಮಣ್ಣು ಎಂದಿಗೂ ವಂಚಿಸಲಾರದು. ನಾವು ಪ್ರೀತಿಸಿದಷ್ಟೂ ನಮಗೆ ಸಮೃದ್ಧಿಯಾಗಿ ದಕ್ಕುವ ಮಣ್ಣಿಗೆ ಸಮ ಯಾವುದೂ ಇಲ್ಲ. ಅದಕ್ಕೇ ಹೇಳಿದ್ದು ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು.

ಇದನ್ನೂ ಓದಿ : ಶರಣು ಮಣ್ಣಿಗೆ : ಮತ್ತೊಂದು ಕೆರೆ ಕಟ್ಟಿಸುವ ಕನಸಿನಲ್ಲಿ ನಂದಿನಿ

Published On - 6:20 pm, Wed, 28 April 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ