ಶರಣು ಮಣ್ಣಿಗೆ : ಮತ್ತೊಂದು ಕೆರೆ ಕಟ್ಟಿಸುವ ಕನಸಿನಲ್ಲಿ ನಂದಿನಿ
‘ಕೆರೆಯ ಬಗ್ಗೆ ಓದುವುದು, ಕೆರೆಯನ್ನು ನೋಡುವುದು, ಕೆರೆಯೊಳಗೆ ಇಳಿಯುವುದಕ್ಕಿಂತ ಕೆರೆ ತೆಗೆಸುವುದೇ ನಿಜವಾದ ಸಂತೋಷ. ತೆಗೆಸುವುದಕ್ಕೆ ಕೇವಲ ಹಣ ಜಮೀನು ಇದ್ದರೆ ಸಾಲದು. ಯೋಗ ನಮ್ಮ ವಿಧಿಯಲ್ಲಿ ಇರಬೇಕಂತೆ. ವಿಧಿ ಎಂದರೆ ನಾನಿಲ್ಲಿ ಸೂಕ್ತ ಜಾಗದಲ್ಲಿ ಸೂಕ್ತ ಪ್ರಯತ್ನವೆಂದುಕೊಳ್ಳುತ್ತೇನೆ. ತೆಗೆಸಿದ ಕೆರೆ ತುಂಬುವುದನ್ನು, ಜೀವ ತಳೆಯುವುದನ್ನು ಗಮನಿಸುವುದೇ ಒಂದು ಅನುಭಾವ. ಉಳಿದ ಆಯಸ್ಸಿನಲ್ಲಿಇನ್ನೊಂದೇ ಒಂದು ಕೆರೆಯನ್ನು ತೆಗೆಸುವ ಸೌಭಾಗ್ಯ ನನ್ನದಾಗಲಿ ಎನ್ನುವುದೇ ನನ್ನ ಕನಸುಗಳಲ್ಲೊಂದು.‘ ನಂದಿನಿ ಹೆದ್ದುರ್ಗ
ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.
ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್ಲೈನ್ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com
‘ಕೆರೆ ಇಪ್ಪತ್ತು ಅಡಿ ಆಳಕ್ಕೆ ಹೋಗುತ್ತಿದೆ ಎನ್ನುವಾಗ ಕೆರೆಯಲ್ಲಷ್ಟು ಜಿನುಕಲು ನೀರು ತುಂಬಿಕೊಂಡಿತು. ಎರಡೇ ದಿನಕ್ಕೆ ಅಲ್ಲಿ ನಾಕಾರು ಕಪ್ಪೆಗಳು ಈಜಾಡಹತ್ತಿದವು. ಅತೀ ಸಣ್ಣ ಸಸ್ಯ ಪ್ರಭೇದವೊಂದು ಮೂರನೇ ದಿನಕ್ಕೆ ನೀರಿನ ಮೇಲ್ಬಾಗದಲ್ಲಿ ತೇಲಾಡಹತ್ತಿತು’ ಮುಂದೇನಾಯಿತು? ರೈತಮಹಿಳೆ, ಕವಿ, ನಂದಿನಿ ಹೆದ್ದುರ್ಗ ಅವರ ಕೃಷಿಕಥನ ಓದಿ.
*
ಕಿಟಿಕಿಯ ಧೂಳು ಒರೆಸುತ್ತ ಪಕ್ಕದಲ್ಲಿದ್ದ ಮಗಳಿಗೆ ‘ಚೀನಿಯರು ಮಂಗಳದಲ್ಲಿ ಸಿಟಿ ಮಾಡಿ ವಲಸೆ ಹೋಗ್ತಾರಂತೆ ಮಗಳೆ’ ಎಂದೆ. ಹಟ್ಟಿ ಗುಡಿಸುತ್ತಿದ್ದ ಜಯಮ್ಮ ಥಟಾರನೆ ‘ನೆಂಟರು ಪಂಟರು, ಮದ್ವೆ ಮುಂಜಿ, ಹೋಗಾದು ಬರಾದು ಖರ್ಚು ಯೆಚ್ಚಾ ಎಲ್ಲಾ ಏನು ಸುಮ್ನೇ ಆದಾದ. ಇಮಾನದಾಗೇ ಹೋಗ್ಬೇಕು, ಬರಬೇಕು, ಮಣ್ಣಿನ ಋಣ ಅನ್ನದೊಂದೂ ಐತಲ್ಲಾ ಅವ್ವಾ’ ಅಂದರು. ಮಮಕಾರದ ಕಂಬಕ್ಕೆ ಡಿಕ್ಕಿ ಹೊಡೆದುಕೊಂಡು ಹೃದಯ ಕಳಕ್ಕೆಂದು ಉಳುಕಿದಂತಾಯ್ತು.
ಕಾಫಿತೋಟವೇ ಬದುಕಾದವಳಿಗೆ ಬುದ್ದಿ ತಿಳಿದಾಗಿನಿಂದಲೂ ಕಿವಿಯ ಮೇಲೆ ಬೀಳುತ್ತಿದ್ದಿದ್ದು ಬರೀ ಮಣ್ಣಿನ ಮಾತೇ. ಕಾಡು ಮಣ್ಣು, ಗೋಡು ಮಣ್ಣು, ಕೆಬ್ಬೆ ಮಣ್ಣು, ಉಬ್ಬೆ ಮಣ್ಣು, ಕಲ್ಲುಜರುಗು, ಮರಳುಮಿಕ್ಸು, ಬಿಳಿಮಣ್ಣು, ಕರಿಗಲ್ಲು, ಬಿಳಿಗಲ್ಲು, ಕೆಂಚಟೆ… ಹೀಗೆ ಥರಹೇವಾರಿ ಮಣ್ಣುಗಳ ಮಾತೇ ಮಾತು ಕಲಿಯುವುದಕ್ಕೂ ಮುನ್ನ ಹೃದಯಕ್ಕೆ ತಾಗಿದ್ದವು. ಬಾಲ್ಯದಲ್ಲಿ ಬಸ್ ಪ್ರಯಾಣದ ಅವಕಾಶ ಸಿಕ್ಕಾಗಲೆಲ್ಲಾ ಅತ್ತುಕರೆದು ಹಟಹಿಡಿದು ಕಿಟಿಕಿ ಪಕ್ಕ ಸೀಟು ಗಿಟ್ಟಿಸುತಿದ್ದ ಉದ್ದೇಶ ಮಾರುಮಾರಿಗೂ ಬದಲಾಗುವ ಮಣ್ಣಿನ ಬಣ್ಣ, ಗುಣಧರ್ಮ ಗಮನಿಸುವುದು. ಯಾಕೆಂದ್ರೆ ಚಿಕ್ಕಂದಿನಲ್ಲಿ ‘ಮಣ್ಣು ಎಂಥಾ ಚೆನ್ನಾಗಿದೆ ಗೊತ್ತಾ’ ಎನ್ನುವ ವಾಕ್ಯ ಬೀಳದೇ ಇದ್ದ ದಿನವೇ ಇಲ್ಲ.
ಆಗೆಲ್ಲಾ ಹೀಗೆ ಮಣ್ಣಿನ ಕುರಿತೇ ಯೋಚಿಸುವುದು ಒಂದು ರೀತಿಯಲ್ಲಿ ಚಟವೇ ಆಗಿತ್ತು. ಈಗಲೂ ಹಾಗೇ. ಪ್ರಯಾಣವೆಂದರೆ ಅಲರ್ಜಿಯಿದ್ದವಳು ನಾನು. ಹೊಟ್ಟೆ ತೊಳೆಸಿ ವಾಕರಿಸಿದರೂ ಕಣ್ಣು ಹೊಸಕಿಕೊಂಡು ಮತ್ತೆ ಮಣ್ಣು ಗಮನಿಸುವುದು ಮತ್ತು ಅದಕ್ಕೆ ಹೊಂದಿಕೊಳ್ಳುವ ವಿವಿಧ ಬೆಳೆಗಳನ್ನು ಗುರುತಿಸುವುದು ಬುದ್ಧಿ ತಿಳಿದಾಗಿಂದಲೂ ನನ್ನಿಷ್ಟದ ಅಭ್ಯಾಸ. (ಕಾಫಿ ಮೆಣಸು ಏಲಕ್ಕಿ ಅಡಿಕೆ ತೆಂಗಿನಂತಹ ತೋಟಗಾರಿಕೆ ಬೆಳೆಗಳನ್ನು ಮಾತ್ರ ನೋಡಿದ್ದ ಕಾರಣ ಸಾಕಷ್ಟು ಬೇಳೆಕಾಳು, ತರಕಾರಿ, ಹಣ್ಣುಗಳನ್ನು ಮನೆಬಳಕೆಗೆ ಬೆಳೆಯುತ್ತಿದ್ದರಾದರೂ ಮುಖ್ಯ ಬೆಳೆಯೆಂದರೆ ಮೇಲಿನವು ಮಾತ್ರ) ಹೊಗೆಸೊಪ್ಪು ಎಳ್ಳು ಈರುಳ್ಳಿ ಹುರುಳಿಯಂತ ಬೆಳೆಗಳನ್ನು ನೋಡಿದಾಗ ಅವುಗಳ ಜಾತಿ ತಿಳಿಯದೆ ಪಕ್ಕದಲ್ಲಿ ಕುಳಿತಿದ್ದ ಅಪ್ಪನನ್ನು ‘ಅದೆಂತದ್ದು ಇದೆಂತದ್ದು’ ಅಂತ ಕೇಳುತ್ತಿದ್ದಿದ್ದು, ಕೇಳುವುದು ಈಗಲೂ ಇದ್ದೇ ಇದೆ. ರಜೆ ಇದ್ದಾಗ ತೋಟಕ್ಕೆ ಹೋದರೆ ಹಾದಿಯುದ್ದಕ್ಕೂ ‘ಇದ್ಯಾವ ಮರ, ಅದ್ಯಾವ ಬಳ್ಳಿ, ಇದೆಂತಾ ಹೂವು, ಅದೆಂತಾ ಹುಳ’ ಎನ್ನುವ ಸಾಲುಸಾಲು ಪ್ರಶ್ನೆಗಳು.
ಒಂದು ಭಾಗ ಮಣ್ಣು ಮೂರು ಭಾಗ ನೀರು ಇರುವ ಈ ಸುಂದರ ಕಲಾಕೃತಿಯನ್ನು ಭೂಮಿ ಅಂತಾರೆ ಎನ್ನುತ್ತೇವಾದರೂ ಕಣ್ಣಿಗೆ ಕಾಣುವ ಇಲ್ಲಿನ ಸಮಸ್ತವೂ “ಮಣ್ಣಿನ ಮತ್ತೊಂದು ರೂಪ” ಎನ್ನುವುದು ಮತ್ತೆಮತ್ತೆ ಚಿತ್ತಕ್ಕಿಳಿದು ಅಚ್ಚರಿ ಎನಿಸುತ್ತದೆ. ಮಣ್ಣು ನೀರು ಬೆಳಕು ಈ ಮೂರು ಹುಲುಸಾಗಿ ಸಿಕ್ಕರೆ ಈ ಭೂಮಿ ಜಗದ ಮೇಲಿನ ಸಮಸ್ತ ಜೀವರಾಶಿಯನ್ನೂ ಉಡುಗೊರೆಯಾಗಿ ಕೊಟ್ಟು ನೋಡು ನನ್ನ ಮಹಿಮೆ ಎನ್ನುತ್ತದೆ. ಗಿಡ ಮರ ಪ್ರಾಣಿ ಪಕ್ಷಿ, ಹುಳ ಎಲ್ಲವೂ ಮಣ್ಣಿನ ಮತ್ತೊಂದು ರೂಪವೇ.
ಹೀಗೆ ಮಣ್ಣು ತನ್ನನ್ನು ತಾನು ರೂಪಾಂತರಿಸಿಕೊಳ್ಳುವ ಪ್ರಕ್ರಿಯೆಯ ಸಹಸ್ರಾರು ವರ್ಷಗಳಲ್ಲಿ ಕಿಂಚಿತ್ತದಾರೂ ಕುಗ್ಗಿರಬಹುದೇ ಅಥವಾ ಹಿಗ್ಗಿರಬಹುದೇ? ಈ ಭೂಮಿಯ ಮೇಲಿನ ಅಚ್ಚರಿಗಳಲ್ಲಿ ಈ ವಿಚಾರವೂ ಬೆರಗಿನದ್ದೇ. ಭೂಮಿ ಎಂದು ಕರೆಸಿಕೊಳ್ಳುವ ಈ ಇಲ್ಲಿ ಮಣ್ಣು ನೀರು ಮತ್ತು ಗಾಳಿ ಈ ಮೂರೂ ಮೂಲವಸ್ತಗಳೂ ಇಂತಿಷ್ಟೇ ಅಂತ ನಿಖರವಾಗಿ ಇರುತ್ತದೆ. ಈ ಮೂರೂ ಪದಾರ್ಥಗಳು ಪ್ರಮಾಣದಲ್ಲಿ ವ್ಯತ್ಯಾಸ ಆಗದಂತೆ ಸೀಲ್ಡ್ ಆಗಿಯೇ ಬಂದಿದೆ ಎನ್ನುವ ವಿಜ್ಞಾನ, ನೀರಿಲ್ಲ ಎನ್ನುವ ಮಾತು ಶುದ್ಧ ತಪ್ಪು. ಬಳಸಲು ಯೋಗ್ಯವಾದ ನೀರು ಕ್ಷೀಣಿಸುತ್ತಿದೆ ಅಂತ ತಿದ್ದುತ್ತದೆ.
ಮಣ್ಣಿನ ಮಾತು ಬಂದಾಗಲೂ ಅಷ್ಟೇ. ನಮಗೆ ಬೇಕಿರುವುದು ಖಾಲಿ ಮಣ್ಣಲ್ಲ. ಪಿ ಎಚ್ ವ್ಯಾಲ್ಯೂ ಏಳರ ಆಜುಬಾಜಿಗಿರುವ, ಕಾರ್ಬನ್ ಕಾಂಪೌಂಡ್ಸ್ ಹೆಚ್ಚಿರುವ, ಸೂಕ್ಷ್ಮಾಣು ಜೀವಿಗಳು ಯಥೇಚ್ಛವಾಗಿರುವ ಆರೋಗ್ಯ ಪೂರ್ಣ ಮಣ್ಣು. ಹಾಗಿದ್ದಾಗ ಮಾತ್ರ ನಾವು ಬಿತ್ತಿದ್ದು ಹುಲುಸು. ಇದೆಲ್ಲವೂ ಹೀಗೇ ಇರುತ್ತದಾ ಅಥವಾ ಇದೆಲ್ಲವನ್ನೂ ನಮ್ಮ ಪ್ರಯತ್ನದಿಂದ ಸರಿಮಾಡಬೇಕಾ ಎಂದರೆ ವರ್ಷಾನುಗಟ್ಟಲೆ ಅರಣ್ಯ ಪ್ರದೇಶವಿರುವ ಪ್ರದೇಶದ ಮಣ್ಣು ಸಹಜವಾಗಿಯೇ ಉತ್ತಮವಾಗಿರುತ್ತದೆ. ಅರಣ್ಯದ ಕಳಿತ ಎಲೆ ಕಾಂಡ ಒಣಮರಗಳು, ಪ್ರಾಣಿಪಕ್ಷಿಗಳ ಮಲಮೂತ್ರಗಳು, ಸತ್ತ ಜೀವಿಯ ಶರೀರ ಕೊಳೆತು ಮಣ್ಣಿನ ಹ್ಯೂಮಸ್ ಹೆಚ್ಚಿರುತ್ತದೆ. ಅಂತಹ ಮಣ್ಣನ್ನು ನೋಡುವಾಗಲೂ ಮುಟ್ಟುವಾಗಲೂ ಅದು ಅರಿವಿಗೆ ಬರುತ್ತದೆ.
ಈ ಕಾರಣಕ್ಕಾಗಿಯೇ ಹೊಸತೋಟ ಮಾಡುವವರೂ, ನರ್ಸರಿ ಮಾಡಲು ಬುಟ್ಟಿ ತುಂಬುವವರು ಕಾಡುಮಣ್ಣನ್ನು ತಮ್ಮ ಜಮೀನಿನ ಮಣ್ಣಿನೊಂದಿಗೆ ಮಿಕ್ಸ್ ಮಾಡಿಕೊಳ್ತಾರೆ. ಸೂಕ್ಷ್ಮಾಣು ಜೀವಿಗಳ ಗುಣವೆಂದರೆ ನೀರು ಬೆಳಕು ಸರಿಯಾಗಿದ್ದರೆ ತಾವು ಸೇರಿಕೊಂಡ ಮಣ್ಣಿನಲ್ಲಿ ಅಗಾಧವಾಗಿ ವೃದ್ಧಿ ಹೊಂದುವುದು. ಮಣ್ಣು ನೆಚ್ಚಿ ಕೃಷಿ ಮಾಡುವ ನಾವು ಮತ್ತೊಂದು ಆಸಕ್ತಿಕರ ವಿಷಯವನ್ನು ಗಮನಿಸಬೇಕು. ಒಂದು ಎಕರೆ ಜಮೀನಿನಿಂದ ಇಂತಿಷ್ಟು ಪ್ರಮಾಣದ ಧಾನ್ಯ/ಹಣ್ಣು/ಉತ್ಪನ್ನಗಳನ್ನು ಬೆಳೆದು ನಮ್ಮ ಗೋದಾಮಿಗೆ ಸಾಗಿಸಿದ್ದೇವೆಂದರೆ ಅಷ್ಟು ಪ್ರಮಾಣದ ಮಣ್ಣಿನ ಮತ್ತೊಂದು ರೂಪವನ್ನು ನಾವು ಅಲ್ಲಿಂದ ಸಾಗಿಸಿದ್ದೇವೆ ಎಂದೇ ಅರ್ಥ. ಅದನ್ನು ಯಾವ ರೂಪದಲ್ಲಾದರೂ ಮರುಪೂರೈಸಿದರೆ ಮಾತ್ರ ಮಣ್ಣು ಆರೋಗ್ಯವಾಗಿ ಉಳಿಯಬಲ್ಲದು. ತೋಟಗಾರಿಕೆ ಬೆಳೆಗಳಲ್ಲಿ ಒಂದು ಹಂತಕ್ಕೆ ಮಣ್ಣಿನ ಈ ಮರುಪೂರಣ ಪ್ರಕ್ರಿಯೆ ಸಹಜವಾಗಿಯೇ ಆಗುತ್ತದಾದರೂ ಬೇಳೆಕಾಳು, ಆಹಾರಧಾನ್ಯದಂತ ಕೃಷಿಯಲ್ಲಿ ಕೇವಲ ಒಯ್ಯುವುದೇ ಹೊರತೂ ಮಣ್ಣಿಗೆ ಮರಳಿಕೊಡುವುದೇನೂ ಇಲ್ಲ. ಹಟ್ಟಿ ಗೊಬ್ಬರ ಹಸಿರುಗೊಬ್ಬರ, ಗೋಡು ಮಣ್ಣಿನಪೂರೈಕೆ ಈ ಕೊರತೆಯನ್ನು ಯಶಸ್ವಿಯಾಗಿ ನಿವಾರಿಸಬಲ್ಲವು.
ಪ್ರತಿನಿತ್ಯವೂ ಮಿಲಿಯನ್ ಟನ್ನುಗಳಷ್ಟು ಕೊಳೆಯದ ಕಸವನ್ನು ಉತ್ಪತ್ತಿ ಮಾಡುವುದರಲ್ಲಿ ನಾವು ಬಹಳ ನಿಸ್ಸೀಮರು. ಅಭಿವೃದ್ಧಿ ಆಗುತ್ತಿರುವ ಹೊತ್ತಿನಲ್ಲಿ ಇದೆಲ್ಲವೂ ಸಹಜ ಎನ್ನುವ, ನಾನೊಬ್ಬ ಪ್ಲಾಸ್ಟಿಕ್ ಬಳಸುವುದು ನಿಲ್ಲಿಸಿದರೆ ಏನ್ ಮಹಾ ಆಗ್ತದೆ ಎನ್ನುವ ತಿಕ್ಕಲು ಮಂದಿ ಈಗಲೂ ಇದ್ದಾರೆ. ಮೊನ್ನೆ ಪೆನ್ನು ಕೊಳ್ಳುವುದಕ್ಕೆಂದು ಹೋದೆ. ‘ರೀಫಿಲ್ಲೂ ಮತ್ತು ಇಡೀ ಪೆನ್ನು ಎರಡಕ್ಕೂ ಒಂದೇ ರೇಟು, ಪೆನ್ನೇ ತಗೋಳಿ ಮೇಡಮ್ ‘ ಅಂದರು ಅಂಗಡಿಯವರು. ಇಲ್ಲಿ ನಮ್ಮ ಹೃದಯವನ್ನು ತುಸು ಖರ್ಚು ಮಾಡಬೇಕು. ಪ್ರತಿ ಖರೀದಿ ಮಾಡುವಾಗಲೂ ಅತಿಕಡಿಮೆ ಮಾಲಿನ್ಯ ಆಗುವ ವಸ್ತು ನಮ್ಮ ಆಯ್ಕೆಯಾದಾಗ ಈ ಭೂತಾಯಿ ಇನ್ನೂ ನಾಕಾರು ಹಗಲು ಫಲವತಿಯಾಗೇ ಉಳಿಯಬಹುದು. ಸಣ್ಣ ಪೇಪರ್, ನ್ಯಾಪ್ಕೀನ್ ಎಕ್ಸ್ಟ್ರಾ ಬಳಸುವಾಗ ಕೂಡ ಪರಿಸರದ ಕಡೆಗೆ ಯೋಚಿಸುವಂತೆ ನಮ್ಮ ಮಕ್ಕಳಿಗೆ ತಿಳುವಳಿಕೆ ಕೊಡುವುದು ಕೂಡ ಸದ್ಯದ ತುರ್ತು.
ಸಣ್ಣ ತಮಾಷೆ ಪ್ರಸಂಗ, ಆದರೆ ನನ್ನ ದೃಷ್ಟಿಯಲ್ಲಿ ಯಾಕೋ ಗಂಭೀರ ಅನಿಸಿಬಿಡ್ತು; ‘ಅವರ ಮದುವೆಯಾಗಿ ಮೂರು ವರ್ಷವಷ್ಟೇ ಆಗಿದೆ. ಇನ್ನೂ ಹಸಿಬಿಸಿಯಲ್ಲೇ ಇದ್ದಾರೆ ಗಂಡಹೆಂಡತಿ. ಹಾಗೇ ಇರಬೇಕು. ಹಾಗಿದ್ದರೇ ಸೊಗಸು. ಇಲ್ಲಿ ಗಂಡ ತುಸು ಹೆಚ್ಚೇ ಸಮಾಧಾನಿ. ಹುಡುಗಿ ರವಷ್ಟು ಮುಂಗೋಪಿ. ಆ ಸಂಜೆ ಬೇಗ ಬರ್ತೀನಿ, ಸಿನೆಮಾಗೆ ಹೋಗೋಣ ಅಂತ ಹೇಳಿ ಹೋದವನಿಗೆ ಕೆಲಸದ ತುರ್ತು ಅಡ್ಡಿಯಾಗಿ ಬರುವುದು ತಡವಾಯ್ತು. ಮನೆಗೆ ಹೋದರೆ ಮಡದಿ ಸಾಕ್ಷಾತ್ ಚಂಡಿ. ಪ್ರೀತಿಯ ಹೆಂಡತಿ ಮುನಿಸಿಕೊಂಡರೆ ಮನೆ ಮನೆಯಾಗಿ ಉಳಿದೀತೆ? ಹುಡುಗ ಗೊತ್ತಿದ್ದ ಕಸರತ್ತೆಲ್ಲವನ್ನೂ ಮಾಡಿದ, ಉಡುಗೊರೆಗಳ ತಂದು ತುಂಬಿದ. ಮೂರನೇ ದಿನಕ್ಕೆ ಅವಳ ಮುಖದಲ್ಲಿ ಒಂದಿಷ್ಟು ಬೆಳಕು. ಆದರೆ ಪೂರ್ತಿ ಹೊಳೆಯಬೇಕಾದರೆ ನಾಕು ದಿನ ಆಚೆ ಹೋಗಿ ಬರುವಾ ಅಂದಳು. ಮುನಿಸಿನ ಅವಧಿಯಲ್ಲೇ ಸ್ಥಳ, ಪ್ರಯಾಣ ಎಲ್ಲವನ್ನೂ ತೀರ್ಮಾನಿಸಿಯೂ ಬಿಟ್ಟಿದ್ದಳು.ಕೆಲಸದ ತುರ್ತಿದ್ದರೂ ಹುಡುಗ ಒಪ್ಪಿದ. ವೆಹಿಕಲ್ಲು, ತಿರುಗಾಟ, ಹೋಟೆಲ್, ಪಿಝಾ ಬೇಕಿರದಿದ್ದರೂ ಅಟೈಯರು, ಆ್ಯಕ್ಸಸ್ಸರೀಸು… ಮನೆಗೆ ಬಂದ ಮೇಲೆ ಅದನ್ನೆಲ್ಲ ತುಂಬಲು ಈಗಿದ್ದ ವಾರ್ಡರೋಬ್ ಹಿಡಿಸಲಿಲ್ಲ. ಕಾರ್ಪೆಂಟರ್ರಿಗೆ ಕರೆ. ತಿರುಗಾಡಿ ಬಂದ ಆಯಾಸಕ್ಕೆ ನಾಕು ದಿನ ಕಳೆದು ಜ್ವರ. ಡೋಲೊಗೆ ಇಳಿಯದೆ ಹೋದಾಗ ಕ್ಲಿನಿಕ್ಕು, ತಪಾಸಣೆ, ವೈರಲ್ ಫಿವರು, ನಾಕು ದಿನ ರೆಸ್ಟು. ಉಶ್ಯಪ್ಪಾ… ಕೇವಲ ಪತಿರಾಯ ಆ ಸಂಜೆ ತಡವಾಗಿ ಬಂದ ಬದಲಿಗೆ ಈ ಭೂಮಿ ಇಷ್ಟೆಲ್ಲಾ ಭರಿಸಬೇಕಾಯ್ತು. ಬಳಸಿದ ಪ್ಲಾಸ್ಟಿಕ್, ಸುರಿದ ಇಂಧನ, ಸರಿದ ಕಾಲ, ಹಳಿತಪ್ಪಿದ ಆರೋಗ್ಯ, ಕೈಬಿಟ್ಟ ಕಾಸು, ಮನೆಗೆ ತುಂಬಲಾಗದಷ್ಟು ಸರಕು.
ಹೀಗೇ ಆಗುತ್ತದೆ ಎಂದಲ್ಲದಿದ್ದರೂ ಇದೊಂದು ಉದಾಹರಣೆಯಷ್ಟೆ. ಪರಿಸ್ಥಿತಿಗೆ ನಾವು ಪ್ರತಿಕ್ರಿಯಿಸುವುದು ಸರಳವಾದಷ್ಟೂ, ಸಹಜವಾದಷ್ಟೂ ಭೂಮಿ ನೆಮ್ಮದಿಯಾಗಿರಬಹುದಾ? ಯೋಚಿಸಬೇಕಲ್ವಾ. ಅಪ್ಪ ಯಾವಾಗಲೂ ಒಂದು ಮಾತು ಹೇಳುತ್ತಾರೆ. ‘ಹತ್ತು ಮಕ್ಕಳನ್ನು ಹುಟ್ಟಿಸಿ ಬೆಳೆಸುವುದಕ್ಕಿಂತ ಒಂದು ಗಿಡ ನೆಟ್ಟು ಆರೈಕೆ ಮಾಡುವುದು ಪುಣ್ಯದ ಕೆಲಸ, ನೂರು ಮರ ಬೆಳೆಸಿದಷ್ಟು ಪುಣ್ಯದ ಕೆಲಸ ಒಂದು ಕೆರೆ ತೋಡಿಸುವುದರಿಂದ ಸಿಕ್ಕುತ್ತದೆ’ ಅಂತ. ನನಗೊಂದು ಸಂತೋಷ ಅಥವಾ ಸಾಧನೆ ಅಂತ ನನಗೆ ನಾನೇ ಅಂದುಕೊಳ್ಳುವ ಕೆಲಸವೆಂದರೆ ಒಂದು ಕೆರೆ ತೆಗೆಸಿದ್ದು. ಹೌದು, 100/100 ಅಳತೆಯ ವಿಶಾಲವಾದ ಕೆರೆ ತೆಗೆಸುವಾಗ ಒಂದು ಬಗೆಯ ಸಂತೋಷದ ಉದ್ವೇಗ. ಕಾಫಿ ತೋಟಕ್ಕೆ ನೀರಾವರಿಗೆ ಅಂತ ತೆಗೆಸಿದ್ದೇ ಆದರೂ ಅದರಾಚೆಗೆ ಕೆರೆ ತೆಗೆಸಿದ ಖುಷಿ ಕೊಡುವ ಅನುಭವವೇ ಬೇರೆ.
ಕೆರೆ ಇಪ್ಪತ್ತು ಅಡಿ ಆಳಕ್ಕೆ ಹೋಗ್ತಿದೆ ಎನ್ನುವಾಗ ಕೆರೆಯಲ್ಲಿಷ್ಟು ಜಿನುಕಲು ನೀರು ತುಂಬಿಕೊಂಡಿತು. ಎರಡೇ ದಿನಕ್ಕೆ ಅಲ್ಲಿ ನಾಕಾರು ಕಪ್ಪೆಗಳು ಈಜಾಡಹತ್ತಿದವು. ಅತೀ ಸಣ್ಣ ಸಸ್ಯ ಪ್ರಭೇದವೊಂದು ಮೂರನೇ ದಿನಕ್ಕೆ ನೀರಿನ ಮೇಲ್ಬಾಗದಲ್ಲಿ ತೇಲಾಡಹತ್ತಿತು. ವಾರ ಕಳೆಯುವಷ್ಟರಲ್ಲಿ ಕೆರೆಯ ಗೋಡೆಯನ್ನು ಏಡಿಗಳು ಸಣ್ಣಗೆ ರಂಧ್ರ ಮಾಡಿಕೊಂಡು ಮಹಲು ನಿರ್ಮಿಸುತ್ತಿದ್ದವು. ಸೂಕ್ಷ್ಮವಾಗಿ ಗಮನಿಸುವಾಗ ಈ ಜೀವವೈವಿದ್ಯವು ನಮ್ಮ ಕಣ್ಣೆದುರಿಗೆ ಹರಹಿಕೊಳ್ಳುತ್ತಾ ಹೋಗುತ್ತದೆ. ವರ್ಷ ತುಂಬಿದ ಕೆರೆಯಲ್ಲಿ ಈಗ ಭರ್ತಿ ನೀರಿದೆ. ಮೀನುಗಳೂ ಆಗೀಗ ಕಾಣಿಸುತ್ತವೆ. ಅದನ್ನು ಹಿಡಿಯಲು ಮಿಂಚುಳ್ಳಿಯಂತ ಹಕ್ಕಿಗಳು, ಬೆಳ್ಳಕ್ಕಿ ಏರಿಯಲ್ಲಿ ಹೊಂಚು ಹಾಕಿ ಕಾಯುತ್ತಿರುತ್ತವೆ. ಕೆರೆ ಹಾವೊಂದು ತನ್ನ ಮಕ್ಕಳು ಮರಿಗಳೊಂದಿಗೆ ಪಕ್ಕದ ಅಡಿಕೆ ತೋಟದಲ್ಲಿ ಇಲಿ ಬೇಟೆಗೆ ಹೋಗಿಬಂದು ಕೆರೆಯಲ್ಲಿ ಸುಖವಾಗಿ ಈಜಾಡುತ್ತದೆ. ಈಗ ಇನ್ನೊಂದಿಷ್ಟು ನೈದಿಲೆಯಂತಹ ಸಸ್ಯಗಳು ಏಳ್ತಿವೆ.
ಕೆರೆ ಹೇಗೇ ನೋಡಿದರೂ ಸಾಕ್ಷಾತ್ ದೇವತೆ. ಸುರಿವ ಮಳೆ ನೀರನ್ನು ಉಳಿಸಿಕೊಂಡು ಇಂಗಿಸುವ ಆ ಮೂಲಕ ಭೂಮಿಯ ಅಂತರ್ಜಲದ ಮಟ್ಟ ಹೆಚ್ಚಿಸುವ ತವನಿಧಿ. ಕೆರೆಯ ಬಗ್ಗೆ ಓದುವುದು, ಕೆರೆಯನ್ನು ನೋಡುವುದು, ಕೆರೆಯೊಳಗೆ ಇಳಿಯುವುದಕ್ಕಿಂತ ಕೆರೆ ತೆಗೆಸುವುದೇ ನಿಜವಾದ ಸಂತೋಷ. ತೆಗೆಸುವುದಕ್ಕೆ ಕೇವಲ ಹಣ ಜಮೀನು ಇದ್ದರೆ ಸಾಲದು ಅಂತ ಹಿರಿಯರು ಹೇಳ್ತಾರೆ. ಆ ಕೆರೆ ತೆಗೆಸುವ ಯೋಗ ನಮ್ಮ ವಿಧಿಯಲ್ಲಿ ಇರಬೇಕಂತೆ. ವಿಧಿ ಎಂದರೆ ನಾನಿಲ್ಲಿ ಸೂಕ್ತ ಸಂದರ್ಭದಲ್ಲಿ, ಸೂಕ್ತ ಜಾಗದಲ್ಲಿ ಸೂಕ್ತ ಪ್ರಯತ್ನವೆಂದುಕೊಳ್ಳುತ್ತೇನೆ. ತೆಗೆಸಿದ ಕೆರೆ ತುಂಬುವುದನ್ನು, ಜೀವ ತಳೆಯುವುದನ್ನು ಗಮನಿಸುವುದೇ ಒಂದು ಅನುಭಾವ. ಉಳಿದ ಆಯಸ್ಸಿನಲ್ಲಿಇನ್ನೊಂದೇ ಒಂದು ಕೆರೆಯನ್ನು ತೆಗೆಸುವ ಸೌಭಾಗ್ಯ ನನ್ನದಾಗಲಿ ಎನ್ನುವುದು ನನ್ನ ಕನಸು.
ಮಣ್ಣಿಗೆ ಹತ್ತಿರವಿದ್ದವರು, ಕೃಷಿಯನ್ನೇ ನೆಚ್ಚಿ ಬದುಕುವವರು ಮಣ್ಣನ್ನು ಉಳಿಸುವತ್ತ ಮಾತಾಡುತ್ತೇವೆ. ಸಮುದ್ರ ನಂಬಿದ ಅಗಾಧ ಜೀವಿಗಳಿಗೆ ಮಾತು ಬಾರದು. ಅದನ್ನೇ ನೆಚ್ಚಿರುವವರು ಸಮುದ್ರದ ಮಾಲಿನ್ಯದ ಕುರಿತು ಹೇಳುತ್ತಾರೆ. ಇಲ್ಲಿ ಮಾತ್ರವಲ್ಲ, ಇಡೀ ಅಂತರಿಕ್ಷವೇ ಭೂಮಿಯಿಂದ ಉಡ್ಡಯನಗೊಂಡ ಸರಕುಗಳಿಂದ ತುಂಬುತ್ತಿದೆ ಎನ್ನುತ್ತಿದೆ ವಿಜ್ಞಾನ. ವಿಷವನ್ನೇ ಚೆಲ್ಲಿ ಅದನ್ನೇ ಸೇವಿಸುವ ಕಾಲದಲ್ಲಿರುವ ನಾವು ಮನುಷ್ಯರೆನಿಸಿಕೊಳ್ಳಬಹುದೇ? ಭೂಮಿ ಕರುಣಿಸಿರುವ ಸೌಭಾಗ್ಯವನ್ನು ಸಂಪತ್ತನ್ನು ಇನ್ನಾದರೂ ಹಿತಮಿತವಾಗಿ ಬಳಸುವ ಬುದ್ದಿ ನಮ್ಮದಾಗಿ ಈ ಭೂಮಿ ದಿನಕ್ಕೊಂದು ಅರ್ಥಪೂರ್ಣ ವ್ಯಾಖ್ಯಾನ ಒದಗಿಸುವ ಹೊಣೆ ನಮ್ಮೆಲ್ಲರ ಮೇಲಿದೆ.
ಇದನ್ನೂ ಓದಿ : ಶರಣು ಮಣ್ಣಿಗೆ : ನನಗೂ ‘ಗ್ರೀನ್ ಥಂಬ್‘ ಇದೆ ಗೊತ್ತಾ?
Published On - 2:10 pm, Wed, 28 April 21