ಶರಣು ಮಣ್ಣಿಗೆ : ನನಗೂ ‘ಗ್ರೀನ್​ ಥಂಬ್‘ ಇದೆ ಗೊತ್ತಾ?

‘ಅವರು ಕೊಟ್ಟ ಫಾರ್ಮಿನ ವಿಳಾಸಕ್ಕೆ ಹೋದೆವು. ಮೊಟ್ಟಮೊದಲು ಆಕರ್ಷಿಸಿದ್ದು ಊರ ಹೊರಗಿನ ಸ್ವಚ್ಛ ಹವೆ, ಅಲ್ಲಿನ ಹಸುಗಳು, ನಾಯಿ ಬೆಕ್ಕು, ಟರ್ಕಿ ಕೋಳಿ, ನವಿಲು‌! ಆಶ್ಚರ್ಯವಾಯಿತು. ಟರ್ಮ್ಸ್ ಅಂಡ್ ಕಂಡೀಶನ್ಸ್ ಪರಾಮರ್ಶಿಸಿ ನಮಗಾಗಿ ಕೊಡುವ ಜಾಗಕ್ಕೆ ಲೀಸ್ ಆಧಾರದಲ್ಲಿ ಹಣ ಕಟ್ಟಿದೆವು.‘ ಜಯಶ್ರೀ ದೇಶಪಾಂಡೆ

ಶರಣು ಮಣ್ಣಿಗೆ : ನನಗೂ ‘ಗ್ರೀನ್​ ಥಂಬ್‘ ಇದೆ ಗೊತ್ತಾ?
ಮತ್ತೆ ಮಣ್ಣಿನ ಸುಖ
Follow us
ಶ್ರೀದೇವಿ ಕಳಸದ
|

Updated on:Apr 27, 2021 | 2:37 PM

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

‘ಅಪ್ಪ ಅದೇ ನಮ್ಮ ಬಾಡಿಗೆ ಫಾರ್ಮಿನ ಕಿರು ಜಾಗದಲ್ಲಿ‌ ಕೂತು ಮುಗುಳುನಗೆ ನಗುತ್ತಿರುವ ಹಾಗನಿಸುತ್ತದೆ. ಮಣ್ಣೇ ನಾವೆಂದಿಗೂ ಮರಳುವ, ಮರಳಬೇಕಾದ ಜಾಗ‌ ಅಲ್ಲವೇ?’ ಲೇಖಕಿ ಜಯಶ್ರೀ ದೇಶಪಾಂಡೆ ಅವರಿಗೆ ಹೀಗೆ ಅನ್ನಿಸಿದ್ದು ಯಾಕೆ?

*

ಪ್ಪ ತಮ್ಮ ನಿವೃತ್ತಿಯ ವರ್ಷಗಳನ್ನು ಬಯಲು ಸೀಮೆಯ ನಮ್ಮೂರಿನ ನಮ್ಮ ಒಣ ಹೊಲಕ್ಕೆ ತಾವೇ ಕಡೆಸಿದ ಬಾವಿಯ ನೀರುಗ್ಗಿ ಹಸಿರು ತುಂಬುವಲ್ಲಿ, ಅದೇ ಕರಿ ಮಸಾರೀ ಮಣ್ಣಲ್ಲಿ ಅವರು ಚಿಮ್ಮಿಸಿ ನಿಲ್ಲಿಸಿದ ಫಸಲುಗಳ ಜೋಪಾನದಲ್ಲಿ ಹೇಗೆ ತಮ್ಮ ಹಗಲಿರುಳುಗಳನ್ನು ಕಳೆದರೆಂಬುದು ಮನಸ್ಸಿನಲ್ಲೇ ಅಚ್ಚೊತ್ತಿತ್ತು. ಉದ್ದನ್ನ ಕೋಡುಗಳ ಬಿಳಿ ಬಿಳೀ ಮೈಯ, ಕಪ್ಪು ಕಣ್ಣಿನ ಖಿಲಾರಿ ಎತ್ತುಗಳೊಡನೆ ಅವರ ದೋಸ್ತಿ, ಮುಧೋಳದ ನಾಯಿ ತೋಟದಲ್ಲಿ ಅವರ ಸಂಗಾತಿ, ಮೊಲ, ಬೆಕ್ಕು, ಗಿಳಿ ಅವರ ಆ ಮಣ್ಣಿನ ಹಾಡಿನ ಪಕ್ಕವಾದ್ಯಗಳು. ಪಾತಿ ಮಾಡಿ ನೀರು ಹರಿಸಲು ಮಣ್ಣಲ್ಲಿ ಅಷ್ಟುದ್ದ ಚಾಚಿಕೊಂಡ ಅವರ ಕೈ ತೋಳಿನ ಛಾಪು. ಕಾಂಪೋಸ್ಟ್ ಗೊಬ್ಬರದ ತಯಾರಿಯಲ್ಲಿ ಆಚೀಚೆ ಹೊಲಗಳ ರೈತರ ಜೊತೆ ಗಂಟೆಗಟ್ಲೆ ಚರ್ಚೆ. ರಾತ್ರಿ ಬಂದೆರಗುತ್ತಿದ್ದ ತೋಳಗಳ ಕಾಟಕ್ಕೆ ನಮ್ಮ‌ ಮುಧೋಳ ನಾಯಿಗೆ ಕಾವಲಿನ ಟ್ರೇನಿಂಗ್. ಬಾವಿಗೆ ಕೂಡಿಸಿದ್ದ ಪಂಪ್ಸೆಟ್‌ನ ಮರಮ್ಮತ್ ಮಾಡಲು ತಾವೇ ಕಲಿತುಕೊಂಡ ಖುಷಿ. ನಾವು ತೋಟಕ್ಕೆ ಗೆಳತಿಯರ ತಂಡ ಕಟ್ಟಿಕೊಂಡು ಹೊಸಬೆಳೆಯ ‘ಶೀತನಿ’ ಇಂಗುಪ್ಪಿನ ಜೊತೆ ತಿಂದು ಕಬ್ಬಿನ ಹಾಲು ಕುಡಿದು ಮಸ್ತ ಮಜಾ ಮಾಡಿ ಅದೆಲ್ಲ ನಮಗೊದಗಲು ಅಪ್ಪ ಮತ್ತವರ ಜೊತೆ ಅಲ್ಲಿ ದುಡಿವ ಆರೆಂಟು ರೈತರ ಶ್ರಮಕ್ಕೆ ಸಂಭ್ರಾಂತರಾಗಿದ್ದು ನನ್ನ ಕಿಶೋರವಯದ ನೆನಪಿನ ನೆರಳು.

sharanu mannige

ಹಸಿರೇ ಉಸಿರು

ಇದು ಕಳೆದ ಕಾಲದ ಮಾತಾಗಿತ್ತು. ಆದರೇನು? ನನ್ನ ಜೀವನ ಕರೆದೊಯ್ದ ಊರುದಾರಿಗಳಿಗೆ ನಡೆನಡೆದು ಇದ್ದ ಊರಲ್ಲಿ ಸಿಕ್ಕ ಹಣ್ಣು, ತರಕಾರಿಗಳನ್ನು ವಿಧಿಯಿಲ್ಲದೆ ಭಕ್ಷಿಸುವ ಹಲವು ದಶಕಗಳು ಕಳೆದು ಕಡೆಗೂ ಒಮ್ಮೆ ಬೆಂಗಳೂರಿನಲ್ಲಿ ತಳವೂರಿ ಕುಳಿತೆವು. ಹೈಬ್ರೀಡ್ ಫಸಲು, ತರಕಾರಿ, ಹಣ್ಣು, ಗೋಧಿ, ಜೋಳ, ಅಕ್ಕಿ, ಕಡ್ಲೆ ಯಾವುದೆಂದರೆ ಅದು ಗೋಣಿಗಟ್ಲೆ ರಾಸಾಯನಿಕ ಕ್ರಿಮಿನಾಶಕ, ಕೃತಕ ಗೊಬ್ಬರಗಳಲ್ಲಿ ಮುಳುಗಿ ಎದ್ದಿರುತ್ತಿದ್ದ ಆಹಾರ. ಮನೆಯಲ್ಲಿ ಎಲ್ಲರದೂ ಒಂದೇ ದೂರು “ಊಟಕ್ಕೆ ರುಚಿಯಿಲ್ಲ, ಪಲ್ಯ ಚೆನ್ನಾಗಿಲ್ಲ. ಹಸಿ ಚೆಟ್ಣಿಗೆ ಏನೋ‌ ವಾಸನೆ. ರೊಟ್ಟಿಯಲ್ಲಿ ಡಿಡಿಟಿ ಗಮಟು ಹೊಡೀತಾ ಇದೆ. ಚಪಾತಿ ರಬ್ಬರ್ ಥರ ಯಾಕಿದೆ? ಮೊದಲೆಲ್ಲ ಎಷ್ಟು ಛೊಲೋ ಇರ್ತಿತ್ತು? ” ಈ ಪ್ರಶ್ನೆಗಳಿಗೆ ನನ್ನಲ್ಲೂ ಉತ್ತರವಿರುತ್ತಲೇ ಇರಲಿಲ್ಲ. ಹೇಗೆ ಸಾಧ್ಯ? ಹಿಂದೆ ಕಳೆದ ದಿನಗಳು, ತಿಂದ ಶುದ್ಧ ಅನ್ನ ಮತ್ತೆ ಎಲ್ಲಿಂದ ತರಲಿ?

ಮನೆಯ ಹೊರಗಿದ್ದ ಬಾಲ್ಕನಿಯಲ್ಲಿ ಇಡೀ ಮನೆಜನಕ್ಕೆ ಸಾಕಾಗುವಷ್ಟು ದಿನಸಿ, ಹಣ್ಣು, ತರಕಾರಿ ಪಲ್ಯ ಬೆಳೆದೇವಾದರೂ ಹೇಗೆ? ಆದರೂ ನನ್ನ ಬಾಲ್ಕನಿಗಳಲ್ಲಿ ಛಲ ಬಿಡದ ತ್ರಿವಿಕ್ರಮನಂತೆ ಕುಂಡಗಳನ್ನು ಸಾಲುಸಾಲಿಟ್ಟು‌ ಹಾಕಿ ನೀರುಣಿಸಿದ ಬೀಜಗಳು, ಗೊಬ್ಬರ ಎಲ್ಲಾ ಹಾಕಿದೆ. ಹಾಕಿದ್ದ ಒಂದಷ್ಟು ಮೆಂತ್ಯ, ಕೊತ್ತಂಬರಿ, ಟೊಮ್ಯಾಟೊ ಎಷ್ಟೋ ದಿನಗಳ ಮೇಲೆ ಅಷ್ಟಿಷ್ಟು ಫಲ ಚೆಲ್ಲಿ ಸುಮ್ಮನಾಗಿಬಿಡುತ್ತಿದ್ದವು. ಬಲುಬೇಗ ಹಳದೀ ಬಣ್ಣಕ್ಕೆ ತಿರುಗುತ್ತಿದ್ದ ಆ ಗಿಡ, ಎಲೆಗಳನ್ನು ನೋಡಿ ಜೀವ ಮರುಗುತ್ತಿತ್ತು. ಒಣಗಿ ಅಲ್ಲಲ್ಲೇ ಕರಗಿದಾಗ ತುಂಬ ಬೇಸರವಾಗಿ ಕಾರಣಗಳನ್ನು‌ ಹುಡುಕಿದ್ದೆ. ಒಂದು ಬಿಸಿಲು‌ ಅಷ್ಟಾಗಿ‌ ಬೀಳದು, ಇನ್ನೊಂದು ಅದೇ ಗ್ರೀನ್ ಥಂಬ್ ರೂಲು. ಪಾಶ್ಚಾತ್ಯರಲ್ಲಿ ಕೃಷಿಯ ಬಗ್ಗೆ ಇರುವ ಒಂದು ನಂಬಿಕೆಯದು. ಬೆಳೆ ಚೆನ್ನಾಗಿ ಎದ್ದು ನಿಲ್ಲಬೇಕಂದ್ರೆ ಬೀಜ ಹಾಕುವವರಿಗೆ ‘ಗ್ರೀನ್ ಥಂಬ್’ ಇರಬೇಕಂತೆ. ನಮ್ಮ ಹಿರಿಯರಿಗೆ ಗೊತ್ತಿತ್ತಾ ಈ ಸೂತ್ರ? ಹಾಗಿದ್ದರೆ ಅಪ್ಪ ಅಜ್ಜಿಯರ ಕೈಹಿಡಿಯಲ್ಲಿ ನೆಲಕ್ಕೆ ಉಗ್ಗಿಸಿಕೊಂಡು ಉದುರಿದ ಬೀಜಗಳು ತಪ್ಪದೇ ಚಿಗಿಯುತ್ತಿದ್ದದ್ದು ಹೇಗೆ ಎಂದು ಚಿಂತೆಗೀಡಾದೆ. ಕೊನೆಗೆ ಡಿಕ್ಷನರಿ, ಗೂಗಲ್​ ತಡಕಾಡಿದೆ. ಅವೂ ಹಾಗೆ ಹೇಳಿಬಿಟ್ಟುವು. ನನ್ನ ಗಿಡಗಳು ಬೆಳೆಯದೇ ಇರಲು ಅದೇ ಕಾರಣ ಹೌದೋ ಅಲ್ಲವೋ ಎನ್ನುವುದು ತಿಳಿಯದೆ ಸ್ವಲ್ಪ ದಿನ ಬೇಸರಗೊಂಡೆ. ಮತ್ತದೇ ಹಾಪ್ ಕಾಮ್ಸು, ಮತ್ತದೇ ಬಿಗ್ ಬಾಜಾರಿನಂಥ ದಿನಸಿ ತರಕಾರಿ, ಕೊಂಡಿದ್ದನ್ನೆಲ್ಲ  ‘ಮನೆಗೆ ಕಳಿಸುವ’ ವ್ಯವಸ್ಥೆಗಳ ಮೊರೆ ಹೊಕ್ಕೆ.

ಐದು ವರ್ಷಗಳ ಹಿಂದಿನ ಮಾತು, ಒಮ್ಮೆ ಮೊಬೈಲಿನಲ್ಲಿ ಒಂದು ಸಂದೇಶ – ಮಾರ್ಕೆಟಿಂಗ್​ನದ್ದೇ ಹೌದು ಆದರೆ ಸ್ವಾರಸ್ಯಕರ ಅನಿಸಿ ಪೂರ್ಣ ಓದಿದೆ.‌ “ಕೃತಕ ಗೊಬ್ಬರ, ಕೆಮಿಕಲ್ ಫರ್ಟಿಲೈಸರ್, ಪಾಯ್ಸನಸ್ ಪೆಸ್ಟಿಸೈಡ್ ಬಳಸಿದ ಆಹಾರದಿಂದ ಹೊಟ್ಟೆ ಕೆರಳಿ ಒದ್ದಾಡುತ್ತಿದ್ದರೆ ವೈದ್ಯರಲ್ಲಿ ಹೋಗದೆ ಒಮ್ಮೆ ನಮ್ಮಲ್ಲಿ ಬನ್ನಿ. ನಿಮ್ಮ ಸಮಸ್ಯೆಯ ಪರಿಹಾರ ಇಲ್ಲಿಯ ಮಣ್ಣಿನಲ್ಲಿದೆ. ನಾವು ಬೆಳೆದು ಕೊಡುವ ಸಾವಯವ, ಶುದ್ಧ, ಕ್ರಿಮಿನಾಶಕರಹಿತ ದಿನಸಿ, ತರಕಾರಿ, ಹಣ್ಣುಹಂಪಲು, ಕೋಲ್ಡ್ ಪ್ರೆಸ್ ಎಣ್ಣೆಗಳು, ದೇಸಿ ಹಸುವಿನ ಶುದ್ಧ ಹಾಲು… ಕಣ್ಣಾರೆ ನೋಡಿ, ಕೃಷಿಯಲ್ಲಿ ಭಾಗವಹಿಸಿ ಮಣ್ಣಿನ ಪರಿಮಳವನ್ನು ಆನಂದಿಸಿ”

ಹೊಸ ನಮೂನೆಯ ಜಾಹೀರಾತು. ಸಾವಯವ ಕೃಷಿ ಎಂಬ ಪದವಿಲ್ಲದೆಯೂ ಅಪ್ಪನಾಗಲೀ ‌ಅಂದಿನ ರೈತರಾಗಲೀ ‌ಬೆಳೆದದ್ದು ‌ಅದೇ. ಆದರೇನು ಮಾಡುವುದು? ಕಾಲಾಯ ತಸ್ಮೈನ್ನಮಃ ಅಲ್ಲವೇ? ಈಗ ಅದನ್ನೇ ಕೈಗೆತ್ತಿಕೊಂಡಿರುವವರು ಟೆಕ್ಕಿಗಳು. ಕಂಪ್ಯೂಟರ್‌ನ ಮೌಸ್ನ ಜೊತೆಯಲ್ಲೇ ಮಣ್ಣನ್ನೂ ಸಮೀಕರಿಸಿಕೊಂಡು ಕೃತಕತೆಯಿಂದ ದೂರವಾದ ಆಹಾರಧಾನ್ಯ, ತರಕಾರಿ ಹಣ್ಣು ಬೆಳೆಸಿ ಮಾರಿ ಸ್ವಲಾಭ, ಪರಲಾಭ ಎರಡರದ್ದೂ ಪ್ರಾಜೆಕ್ಟ್ ರೂಪಿಸಿಕೊಂಡವರು.

sharanu mannige

ವಾರಕ್ಕೊಮ್ಮೆ ಮನೆಗೇ ಬರುವ ತರಕಾರಿ

ಅವರು ಕೊಟ್ಟಿದ್ದ ಫಾರ್ಮಿನ ವಿಳಾಸಕ್ಕೆ ಹೋದೆವು. ಮೊಟ್ಟಮೊದಲು ಆಕರ್ಷಿಸಿದ್ದು ಊರ ಹೊರಗಿನ ಸ್ವಚ್ಛ ಹವೆ, ಅಲ್ಲಿನ ಹಸುಗಳು, ನಾಯಿ ಬೆಕ್ಕು, ಟರ್ಕಿ ಕೋಳಿ, ನವಿಲು‌! ಆಶ್ಚರ್ಯವಾಯಿತು. ಟರ್ಮ್ಸ್ ಅಂಡ್ ಕಂಡೀಶನ್ಸ್ ಪರಾಮರ್ಶಿಸಿ ನಮಗಾಗಿ ಕೊಡುವ ಜಾಗಕ್ಕೆ ಲೀಸ್ ಆಧಾರದಲ್ಲಿ ಹಣ ಕಟ್ಟಿದೆವು. ‌”ಆಯಾ ಋತುಮಾನ, ಮಳೆ ಗಾಳಿ ಬಿಸಿಲಿನ ಏರಿಳಿತಕ್ಕೆ ತಕ್ಕಂತೆ ಯಾವುದು ಸೂಕ್ತವೋ ಅದೆಲ್ಲ ಬೆಳೀತೀವಿ, ಬೂದಿ ಗೊಬ್ಬರ, ಜೀವಾಮೃತ, ಬೇವಿನ ಲೇಪ ಇಂಥವನ್ನು ಮಾತ್ರ ಬಳಸಲಾಗುತ್ತದೆ” ಎಂದೆಲ್ಲ ವಿವರಿಸಿ‌ ಇಡೀ ತೋಟ ಸುತ್ತಾಡಿಸಿದರು. ಖುಷಿಯಾಯಿತು, ಅಪ್ಪ ಮತ್ತವರ ತೋಟದ ನೆನಪು ಕೊಚ್ಚಿಕೊಂಡು ಬಂತು. “ನೀವೇ ಇಲ್ಲಿ ಸಾಧ್ಯವಾದಾಗ ಬಂದು ಕೆಲಸ ಮಾಡಬಹುದು ಬರ್ತೀರಾ?” ಅಂದರು. “ನನಗೆ ಗ್ರೀನ್ ಥಂಬ್ ಇಲ್ಲ. ನಾನು ಬೀಜ ಹಾಕಿದರೆ ಗಿಡಕ್ಕೆ ಏಳಿಗೆಯಿಲ್ಲ” ಅಂದೆ. ಆತ ನಕ್ಕು ಬಿಟ್ಟರು. ” ಅದೇನು ಹಾಗಂದ್ರೆ? ಅಂಥದ್ದೆಲ್ಲ ಏನೂ ಇಲ್ಲ ಅಕ್ಕಾ. ಬನ್ನಿ‌ ಎರಡು ಬೀಜ ಹಾಕಿ ಇಲ್ಲಿ‌” ಅನ್ನುತ್ತ ಕೆಲವು ತುಳಸಿ, ಒಂದೆರಡು ಕರಿಬೇವಿನ ಬೀಜ ಕೊಟ್ಟರು. ಅನುಮಾನಿಸುತ್ತಲೇ ಅವರು ತೋರಿಸಿದಲ್ಲಿ ಮಣ್ಣು ಕೆದಕಿ ಬೀಜ ಹಾಕಿ ಮುಚ್ಚಿ ನೀರು ಹನಿಸಿದಾಗ ಯಾವುದೋ ವೃಕ್ಷಾರೋಪಣದಂಥ ಘನಕಾರ್ಯ ಮಾಡಿದ ಹಿಗ್ಗು ಉಕ್ಕಿತು.

ಮಳೆ ಬಿದ್ದು ಒಂದು ಹದ ನೆಲ ಮೆತ್ತಗಾದರೆ ಅದರಿಂದ ಹೊರಡುವ ಘಮಲಿನಲ್ಲಿ ಎಳೆಯ ಸಸಿಗಳು ಇನ್ನಷ್ಟು ಫ್ರೆಶ್ ಅನಿಸುತ್ತಿದ್ದುವು. ಹನ್ನೆರಡಡಿ ಉದ್ದ, ನಾಲ್ಕಡಿ  ಅಗಲದ ಭೂಮಿಯ ಪಟ್ಟಿಗಳಂಥ ಭಾಗ ಮಾಡಿ ಅದರ ಎಡಬಲಕ್ಕೆ ಬಿಟ್ಟಿದ್ದ ಪೈಪುಗಳಿಂದ ನೀರು ಚಿಮ್ಮಿಸುವುದು, ಗಿಡಗಳಡಿ ಕಲ್ಲು ಗುಪ್ಪೆಯಿದ್ದರೆ ಸರಿಸಿ, ಕಸದಂಥ ಸಣ್ಣ ಹುಲ್ಲನ್ನು ಕಿತ್ತು ಬೆಳೆಯ ಬೆಳವಣಿಗೆ, ‘ಕಾಯಿ ಮೊಗ್ಗುಗಳು ಈಗ ಎಷ್ಟು ದಪ್ಪ ಇವೆ ಇನ್ನೆಷ್ಟು ಬೆಳೀಬೇಕು’ ಅನಿಸಿ ಮೂಡಿ ಕುತೂಹಲಗಳ ಬಗ್ಗೆ ಅಲ್ಲಿದ್ದ ರೈತಾಪಿಗಳಿಗೆ ಪ್ರಶ್ನೆ ಹಾಕ್ತಾ ಇದ್ದೆ. ಅಲ್ಲಿಂದ ಹೊರಡಲು ಮನಸ್ಸಾಗ್ತಿರಲಿಲ್ಲ ಎಂದು ಯಾವತ್ತೂ ಮರೆಯಲಾಗದ್ದು.

ಅಲ್ಲಿನ ಹಸುಗಳ ಜೊತೆ ದೋಸ್ತಿ ಮಾಡಿಕೊಂಡೆ. ಎರಡು ಹೆಜ್ಜೆ ಕೋಳಿಯ ಬೆನ್ನಟ್ಟಿದೆ. ಬೆಕ್ಕನ್ನು ಎತ್ತಿಕೊಂಡೆ. ಸರಳ ಸಮಾಧಾನವೇ ಸುಖ ಎಂದು ಮತ್ತೊಮ್ಮೆ ಅರಿವಾದ ಗಳಿಗೆಗಳವು. ನಮ್ಮ ಸಾವಯವ ಸಾಂಗತ್ಯ ಮುಂದುವರಿದಿದೆ. ವಾರವಾರವೂ ತರಕಾರಿ ಮನೆಗೇ ಬರುತ್ತದೆ. ಪ್ರತಿ ಬಾರಿಯೂ ನಮ್ಮ ಆರೋಗ್ಯದ ಅಗತ್ಯಕ್ಕೆ ತಕ್ಕಂತೆ ನಾನು ಆಯ್ಕೆ ಮಾಡಿಕೊಂಡ, ಆದರೆ ‌ಆ ‌ಋತುಮಾನ ರೀತ್ಯಾ ಬೆಳೆಸಲಾಗುವ ತರಕಾರಿ, ದಿನನಿತ್ಯ ಹಾಲು ಬಂದಿಳಿಯುತ್ತದೆ. ಕೆಟ್ಟುಹೋಗಿದ್ದ ನಾಲಿಗೆಯ ರುಚಿ ಮರಳಿ ಬಂದಿದೆ. ಕಾಟ ಕೊಡ್ತಿದ್ದ ಉದರಕ್ಕೊಂಚೂರು ‌ಶಾಂತಿ‌ ಸಿಕ್ಕಿದೆ. ಮಗನಿಗೆ ಸಮಯ ಸಿಕ್ಕಾಗ ನಮ್ಮ ‘ಫಾರ್ಮಿಝೆನ್’ ತೋಟದತ್ತ ಚಲೋ’  ಅಂದರೆ ಖುಷಿಯಾಗುತ್ತಿದೆ.

ಅಲ್ಲಿ ನಾ ನೆಟ್ಟಿದ್ದ ತುಳಸಿ ಕರಿಬೇವು ‌ಥೇಟ್ ಅಪ್ಪನ ಹೊಲದಲ್ಲಿನಂತೆಯೇ ಬೆಳೆದು‌ ನಕ್ಕಿದ್ದನ್ನು ನೋಡಿ ಮಿಥ್​ಗಳು ಎಂದಿಗೂ ಮಿಥ್​ಗಳು ಅನಿಸಿ ಖುಷಿಯಾಗಿದೆ. ಈಗಿನ ಕೋವಿಡ್ ಸಮಯದಲ್ಲಂತೂ ಇದರಂಥ ವರದಾನ ಇನ್ನೊಂದಿಲ್ಲವೆನಿಸಿದೆ. ಅಪ್ಪ ಅದೇ ನಮ್ಮ ಬಾಡಿಗೆ ಫಾರ್ಮಿನ ಕಿರು ಜಾಗದಲ್ಲಿ‌ ಕೂತು ಮುಗುಳುನಗೆ ನಗುತ್ತಿರುವ ಹಾಗನಿಸುತ್ತದೆ. ಮಣ್ಣೇ ನಾವೆಂದಿಗೂ ಮರಳುವ, ಮರಳಬೇಕಾದ ಜಾಗ‌ ಅಲ್ಲವೇ?

ಇದನ್ನೂ ಓದಿ :ಶರಣು ಮಣ್ಣಿಗೆ : ಹಸಿರಿಲ್ಲದೆ ಉಪವಾಸ ಬಿದ್ದ ಕಣ್ಣಿಗೆ ಖಿನ್ನತೆಗೆ ಜಾರಿದ ಮನಸ್ಸಿಗೆ ಕಂಡುಕೊಂಡ ಉಪಾಯವಿದು!

sharanu mannige series by writer jayashree deshpande on community farming

Published On - 2:03 pm, Tue, 27 April 21