ನಾನೆಂಬ ಪರಿಮಳದ ಹಾದಿಯಲಿ: ಹಿರಿಯರು ಹಾಕಿದ ಗೆರೆ ದಾಟಬಾರದು ಅಂತ ಮನಸ್ಸು ಟ್ಯೂನ್ ಆಗಿಬಿಟ್ಟಿರುತ್ತಲ್ಲ…

‘ಸರಕಾರಿ ಕ್ವಾರ್ಟರ್ಸ್​ನ ದೆವ್ವದಂಥ ದೊಡ್ಡ ಮನೆಗಳು, ಆಗಾಗ ಊರೂರು ಬದಲಿಸುವುದು, ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ  ಹೊಂದಿಕೊಳ್ಳಲು ಒದ್ದಾಡುತ್ತಿದ್ದ ನನ್ನ ಮಕ್ಕಳನ್ನು ಸಂಭಾಳಿಸುವುದು... ನನ್ನ ಪೆನ್ನು ಹಾಳೆಗಳು ಅಟ್ಟ ಸೇರಿ ಮನಸ್ಸನ್ನು ಹಿಂಡುತ್ತಲೇ ಇರುತ್ತಿದ್ದವು. ನನ್ನನ್ನು ಅಕ್ಷರಗಳಲ್ಲಿ ಹುಡುಕಿಕೊಳ್ಳಲು ಜೀವ ಸದಾ ಕಾತರಿಸುತ್ತಿತ್ತು. ಯಾರೋ ಆಗಲು ಇಷ್ಟಪಡದೇ ನಾನು ನಾನಾಗಿಯೇ ಇರಲು ಪ್ರಯತ್ನಿಸಿ ಬರೆಯಲು ತೊಡಗಿದಾಗ, ತಡವಾಯಿತೇ? ಹಾಗೇನೂ ಅನ್ನಿಸಲಿಲ್ಲ.’ ಜಯಶ್ರೀ ದೇಶಪಾಂಡೆ

ನಾನೆಂಬ ಪರಿಮಳದ ಹಾದಿಯಲಿ: ಹಿರಿಯರು ಹಾಕಿದ ಗೆರೆ ದಾಟಬಾರದು ಅಂತ ಮನಸ್ಸು ಟ್ಯೂನ್ ಆಗಿಬಿಟ್ಟಿರುತ್ತಲ್ಲ...
ಲೇಖಕಿ ಜಯಶ್ರೀ ದೇಶಪಾಂಡೆ
Follow us
ಶ್ರೀದೇವಿ ಕಳಸದ
|

Updated on:Jan 23, 2021 | 6:01 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಲೇಖಕಿ, ಕಥೆಗಾರ್ತಿ ಜಯಶ್ರೀ ದೇಶಪಾಂಡೆ ಅವರ ಅನುಭವ ಕಥನ ನಿಮ್ಮ ಓದಿಗೆ

ರಾತ್ರಿಯ ಮೂರುಗಂಟೆಗೆ ಮನೆ ಬಾಗಿಲ ಬೆಲ್ ಬಾರಿಸಿದಾಗ ಹೊರಗಿದ್ದ ಒಂದು ಅನಿರೀಕ್ಷಿತ ಅಚ್ಚರಿಯ ಬಗ್ಗೆ ಕನಸೂ ಕಂಡಿರಲಿಲ್ಲ ನಾನು. ಬಾಗಿಲು ತೆರೆದಾಗ ಹೊರಗೆ ನನ್ನ ಎರಡನೆಯ ಮಗಳು ನಿಂತಿದ್ದಕ್ಕೆ ಒಂದು ಕ್ಷಣ ತಲೆ ‘ದಿಂ’ ಅಂದಂತಾಗಿ ಸಾವರಿಸಿಕೊಳ್ಳಲು ‌ಸಮಯ ಹಿಡೀತು! ಹದಿನೈದು ಸಾವಿರ ಕಿಲೋಮೀಟರ್ ದಾರಿ ಹಾರಿ ಬಂದಿದ್ದಳು ಅವಳು,‌ ಅದೂ ನನಗೆ ಸೂಚನೆಯನ್ನೇ ಕೊಡದೆ. ಕಾರಣ ಏನೋ ಇತ್ತು, ಅದು ನನ್ನ ಪುಸ್ತಕಗಳ ಬಿಡುಗಡೆ. ಆದರೆ ಅವಳು ಬಂದಾಳೆಂದು ನಾನೆಣಿಸಿರಲೇ ಇಲ್ಲ.

ಅಂದೊಮ್ಮೆ ಅಂಬೆಗಾಲಿಟ್ಟು ಬಂದು ಕಾಲುಕಾಲಿಗೆ ತೊಡರಿಕೊಳ್ಳುತ್ತ, ಬರೆಯಲು ಕೂತ ನನ್ನ ಹಾಳೆ ಪೆನ್ನುಗಳನ್ನು ಎಳೆದು ಹರಿದು, ಒಂದೇ ಒಂದಕ್ಷರವೂ ಬರೆಯಗೊಡದೇ ತನ್ನ ಎತ್ತಿಕೋ‌ ಅಂತಿದ್ದ ಜೊಂಪೆಗೂದಲಿನ ಮಗಳು, ಕೈಬಿಡದೇ ಕೊರಳಿಗೆ ಜೋತು ಬೀಳುತ್ತಿದ್ದ ಮಗಳು. ಇದೀಗ ಅಮೆರಿಕದಿಂದ ಕೇವಲ‌ ನನಗಾಗಿ, ನನ್ನ ಪುಸ್ತಕಕ್ಕಾಗಿ ಮಕ್ಕಳನ್ನು ಅಲ್ಲಿ ಬಿಟ್ಟು ಒಬ್ಬಳೇ ಪ್ರಯಾಣಿಸಿ ಬಂದಿದ್ದಳು. ಇದಾವ ಮಾಯೆಯೊ, ಇದೇನು ಸೋಜುಗವೋ?!

ನನ್ನ ಬಾಲ್ಯಕ್ಕೆ ಇದ್ದ ಬಣ್ಣಗಳೇ ಬೇರೆ. ನಂದಗೋಕುಲದಂಥ ಮನೆಯಲ್ಲಿ ಅಣ್ಣ, ಅಕ್ಕ, ತಮ್ಮಂದಿರ ಚಿಲಿಪಿಲಿಯ ಜೊತೆಗೆ ಮನೆಯಲ್ಲಿನ ನಾಯಿ, ಬೆಕ್ಕು, ಅಪ್ಪನ ತೋಟದ ಕುದುರೆ, ಎತ್ತು, ಹಸು, ಮೊಲ, ಕಡ್ಡಿಕಾಲು ಕೆಂಪುಗಣ್ಣಿನ ಮುಧೋಳ ನಾಯಿಗಳೂ ನನ್ನ ಜೀವದ ಹಸಿ ಮೊಗ್ಗುಗಳ ಹಾಗೆ. ನನ್ನ ಬರಹದ ಪುಟಗಳಲ್ಲಿ ಮುಂದೊಮ್ಮೆ ಅರಳಿ ಬಂದಿದ್ದು ಅವೇ.

ಪ್ರತಿ ವರ್ಷವೂ ನವರಾತ್ರಿ ಬರುತ್ತಿತ್ತು. ಅಪ್ಪ ನವಮಿ ದಿನದ ಆಯುಧ ಪೂಜೆಗೆ ಬಂದೂಕು ಮತ್ತು ಪಿಸ್ತೂಲು ಇಡುತ್ತಿದ್ದರು. ಅವರ ಇಲಾಖೆ ಕೊಟ್ಟಿದ್ದ ಆಯುಧಗಳು. ಹೌದು, ಅಪ್ಪ ಪೊಲೀಸ್ ಅಧಿಕಾರಿ. ಬೇರೆ ಸಮಯದಲ್ಲಿ ಪಿಸ್ತೂಲು ಅವರ ಸೊಂಟದ ಬೆಲ್ಟ್ ನಲ್ಲಿ ಅಡಗಿರುತ್ತಿತ್ತು. ಮೊದಮೊದಲು ನಾನು ಬೆರಗಿನ ಕಣ್ಣುಗಳಿಂದ ನೋಡ್ತಿದ್ದೆ. ಯಾಕೆಂದರೆ ಬದುಕಿನಲ್ಲಿ ಅದೇ ಬೆರಗೆಂಬುದು ಅರಳಿ ಪರಿಚಯವಾಗುವ ವಯಸ್ಸು. ಆರು ಏಳು ಎಂಟು! ನಮ್ಮನೆಯಲ್ಲಿ ಪೊಲೀಸ್ ಇಲಾಖೆಯದೇ ಛಾಪು. ಅಪ್ಪ ಹೇಳುತ್ತಿದ್ದ ರೋಚಕ ಮುಡಿಗಂಟಿನಂಥ ಸಂಗತಿಗಳು. ಮುಂದೊಮ್ಮೆ ಏರ್​ಫೋರ್ಸ್​ ಸೇರಿದ ನನ್ನ ತಮ್ಮ ಹೇಳಿದ ರಣಾಂಗಣದ ಕತೆಗಳು ಮನಸ್ಸಿನೊಳಗೆ ಹೆಪ್ಪುಗಟ್ಟಿ ಆ ಹೊತ್ತಿನ ನೋವಿನ ಕೆಲವು ಕತೆಗಳನ್ನು ನನ್ನಿಂದ ಬರೆಸಿಕೊಂಡದ್ದನ್ನು ಹೇಳಲು ಕಾರಣ ನನ್ನ ಮನೆಯಲ್ಲಿ ‘ಸಾಹಿತ್ಯಿಕ’ ಎಂಬ ವಾತಾವರಣ ಅಷ್ಟಾಗಿ ಇಲ್ಲದಿದ್ದರೂ ನಾನು ಅದರೆಡೆಗೆ ಹೊರಳಲು ಓದು ಬರಹದಲ್ಲಿ ನನಗಿದ್ದ ಆಸಕ್ತಿಯೇ ಮೂಲಬೇರು ಎನ್ನುವದು. ಬರವಣಿಗೆಯಲ್ಲಿ ನನಗೆ ಕಂಡ ಜೀವನದ ಮಜಲುಗಳ ಕೋನಗಳನ್ನು‌ ಸ್ಪರ್ಶಿಸಿದವಳು ನಾನು. ಕಲಿಯುವ ಆಸಕ್ತಿಯೇ ನನ್ನನ್ನು ಐವತ್ತೆರಡರ ವಯಸ್ಸಿನಲ್ಲೂ‌ ಫಿನ್ನಿಶ್ ಕ್ಲಾಸುಗಳಿಗೆ ಹೋಗಲು ಪ್ರೇರೇಪಿಸಿದ್ದು.

ಮುಷ್ಟಿಯೊಳಗಿದ್ದ ಮರಳು ಕೈ ಬಿಚ್ಚಿದೊಡನೆ ಝರ್ರನೆ ಸುರಿದಂತೆ ಅಮ್ಮ ಕ್ಯಾನ್ಸರಿನ ಹಿಡಿತಕ್ಕೆ ಕರ್ಪೂರದಂತೆ ಕರಗಿ ಹೋದಾಗ ಹನ್ನೊಂದರ ಅಬೋಧ ಕಿಶೋರಿ ನಾನು. ಟೀನೇಜಿಗೆ ಕಾಲಿಡುವಾಗ ಅವಳು ಇರಬೇಕಿತ್ತು… ಅಂತ ಹಗಲಿರುಳೂ ಹಂಬಲಿಸಿದ್ದೆ. ಆದರೂ ಅವಳಿಲ್ಲದ ಖಾಲೀತನವನ್ನು ದಾಟಲು ಕಲಿಯಬೇಕಿತ್ತು, ಜ್ವರದಿಂದ ನರಳುವಾಗ ಹಣೆಯ ಮೇಲವಳ ಮೆದು ಅಂಗೈಯ ಸ್ಪರ್ಶ ಇನ್ನಿಲ್ಲವೆನ್ನುವ ವಾಸ್ತವವನ್ನು ಅರಗಿಸಿಕೊಳ್ಳಬೇಕಿತ್ತು.

ಅಮ್ಮನ ಅನುಭವ, ಅಕ್ಕರೆ, ತಿಳುವಳಿಕೆಗಳ ಸಮಗ್ರ ಬಟ್ಟಲು ಮಕ್ಕಳಿಗೆ, ಅದರಲ್ಲೂ‌ ಹೆಣ್ಮಕ್ಕಳಿಗೆ ಹೆಚ್ಚು ಸಿಗಬೇಕೆಂದು ನಾನು ಇನ್ನೂ ಗಾಢವಾಗಿ ‌ಅರಿತಿದ್ದು ನನ್ನ ಹೆಣ್ಣುಮಕ್ಕಳು ಟೀನೇಜ್​ನಲ್ಲಿರುವಾಗ. ಕಣ್ಣೆದುರು ನಾನಾ ಪ್ರಕಾರ ತೆರೆದುಕೊಳ್ಳುತ್ತ ಹೋಗುವ ಜಗತ್ತು, ಪ್ರಬುದ್ಧತೆ ಇನ್ನೂ ಕಾಲಿಟ್ಟಿಲ್ಲದಿರುವ ಸಂಧಿಕಾಲ ಅದು. ಅಂದು ಅಮ್ಮನಿಲ್ಲದ ಮನೆಯಲ್ಲಿ ಹೆಣ್ಮಗಳಾಗಿ ನಾನು ಮುಖಾಮುಖಿಯಾದ ವಾಸ್ತವಗಳೇ ಬೇರೆ. ಹೊತ್ತ ಜವಾಬ್ದಾರಿಗಳೇ ಭಿನ್ನ. ಭಣಗುಡುವ ಅಡುಗೆ ಮನೆಯಲ್ಲಿ ಜೀರಿಗೆ, ಸಾಸಿವೆ, ಎಣ್ಣೆ ಬೆಣ್ಣೆಗಳ ವ್ಯತ್ಯಾಸ ತಿಳಿಯದೆ ಅದೇ ಒಂದು ಪ್ರಯೋಗಶಾಲೆಯಾಗಿ ಎದ್ದು ಬಿದ್ದು ಕಲಿತ ಪಾಠಗಳು ಹತ್ತಾರು. ತಾರುಣ್ಯದ ಹಂತದಿಂದ ನೇರ ಗೃಹಿಣೀತನಕ್ಕೇರಿದ ನನಗೆ ಹೊರಗೆ ಹೋಗಿ ಉದ್ಯೋಗ ಮಾಡುವ ಪ್ರಸಂಗ ಜೀವಮಾನದಲ್ಲಿ ಬರಲೇ ಇಲ್ಲ. ಅದಕ್ಕೆ ಕೆಲವು ಕಾರಣಗಳು… ಮಕ್ಕಳು ಚೆನ್ನಾಗಿ ಓದಬೇಕು ಇದು ‌ಅಪ್ಪನಿಗಿದ್ದ ಹಿರಿಯಾಸೆ. ಪೊಲೀಸ್ ಇಲಾಖೆಯ ಕಠಿಣ ದುಡಿತಕ್ಕೆ ಹಣ್ಣಾದ ಅಪ್ಪ ನಮ್ಮೆಲ್ಲರ ಓದಿಗಾಗಿಯೇ ಬೆಳಗಾವಿಯಲ್ಲಿ ಮನೆ ಇಟ್ಟು ತಾವು ಟ್ರಾನ್ಸಫರ್ ಆದ ಜಾಗಗಳಿಗೆ ತೆರಳಿದವರು. ಕತೆಗಳನ್ನೋದುವ ನನ್ನ ಹುಚ್ಚಿಗೆ ಇಂಬಿತ್ತಿದ್ದ ಅಣ್ಣ, ಅಪ್ಪ ಶಾಲೆ, ಕಾಲೇಜಿನಲ್ಲಿ ನಾನು ಬರೆದಿದ್ದ ಅಷ್ಟೋ ಇಷ್ಟೋ ಬರವಣಿಗೆಯ ಬಗ್ಗೆ ಖುಶಿ ಪಡುವವರು. ಇಂಗ್ಲಿಷ್ ಸಾಹಿತ್ಯದ ಅಖಂಡ ಓದುಗನಾಗಿದ್ದ ಎರಡನೆಯ ಅಣ್ಣನ ಪುಸ್ತಕಗಳನ್ನು ನೋಡಿ, ಮುತ್ತಿನಂಥ ಅಕ್ಷರಗಳಲ್ಲಿ ‌ಅವನು ಬರೆದಿರುತ್ತಿದ್ದ ನೋಟ್ಸ್ ಗಳು, ಭಾಷ್ಯಗಳನ್ನು ಓದಿ ಪ್ರಭಾವಿತಳಾಗ್ತಿದ್ದೆ. ಅವನ ಹಾಗೇ ಬರೆಯಲಾಗುತ್ತೊ ಅಂತ ಪರೀಕ್ಷೆ ಮಾಡಿ ಸೋತಿದ್ದೂ ಇದೆ. ನನ್ನ ನೋಟ್ ಬುಕ್ಕಿನ ಕೊನೆಯ ಪುಟಗಳಂತೂ ನನ್ನ ಬರಹದ ಪ್ರಯೋಗಗಳಿಗೆ ಸಿಕ್ಕಿ ಒತ್ತು, ಕಾಟು, ಗೀಟುಗಳಿಂದ ತುಂಬಿ ಹೋಗಿರುತ್ತಿದ್ದುವು.

ನನ್ನ ಜೀವನದಲ್ಲಿ ಮದುವೆ ತಂದ ಸ್ಥಿತ್ಯಂತರವೆಂದರೆ ನ್ಯಾಯಾಧೀಶರಾಗಿದ್ದ ನನ್ನ ಪತಿ. ಮತ್ತದೇ ಕೋರ್ಟು ಕಚೇರಿ, ಪೋಲಿಸ್ ಸುಳಿದಾಟದ ವಾತಾವರಣ. ಕೆಲವೊಮ್ಮೆ ಮತ್ತದೇ ಬದುಕಿನ ಸಂಘರ್ಷಗಳ, ಕೇಸು ಖಟ್ಲೆ, ವಿಚ್ಛೇದನಗಳ ಸುದ್ದಿಗಳಿಗೆ ಕಿವಿಯಾಗುತ್ತ ಪ್ರಪಂಚದ ನೂರು ಮುಖಗಳ ಪರಿಚಯ. ಕಲ್ಪನೆಗಳು ಬಣ್ಣ ಕಟ್ಟಿಕೊಂಡು ಅಕ್ಷರಗಳಾಗುವ ಹೊತ್ತಿಗೆ ತೊಟ್ಟಿಲನ್ನು ತೂಗುವ ಸಮಯವಾಯಿತು. ಅದೊಂದು ಥರ ಜೈಂಟ್ ವ್ಹೀಲಿನಲ್ಲಿ‌ ಸಿಕ್ಕು ಹಾಕಿಕೊಂಡ ಹಾಗೆ, ಇಳಿಯುವ ಸಮಯಕ್ಕಾಗಿ ಕಾಯುತ್ತ ಮೇಲೆಯೇ ತೂಗಾಡಿಸುವ ತೊಟ್ಟಿಲು! ಮೂವರು ಮಕ್ಕಳಲ್ಲಿ ಎರಡು ಹೆಣ್ಣೆಂದು ಒಬ್ಬಿಬ್ಬರು ಕಣ್ಣು ಹುಬ್ಬೇರಿಸುವ ಹೊತ್ತಿಗೆ ಮಗನೂ ಹುಟ್ಟಿ ಅವರಿಗುತ್ತರವಾದರೂ ಇಂಥದೊಂದು ಮನಸ್ಕತೆಯ ಬಗ್ಗೆ ನನ್ನಲ್ಲಿ ಹೇವರಿಕೆ ಹುಟ್ಟಿದ್ದು ನಿಜ. ಪೂರ್ವಗ್ರಹಗಳನ್ನು ಬಿಟ್ಟರೆ ನಷ್ಟವಾದರೂ ಏನು? ಅತ್ತೆಮನೆ ಎಂದೂ ಕಬ್ಬಿಣದ ಕಡ್ಲೆ ಆಗಿರಲಿಲ್ಲ ಆದರೂ ಹಿರಿಯರಿಟ್ಟ ಗೆರೆ ದಾಟಬಾರದೆಂದು ನಮ್ಮ ಮನಸ್ಸು ಟ್ಯೂನ್ ಆಗಿಯೇಬಿಟ್ಟಿರ್ತದೆ. ಸುಶಿಕ್ಷಿತ ಅತ್ತೆ ಮಾವ ಹಳತು ಹೊಸತಿನ ವಿಚಾರಧಾರೆ ಎರಡೂ ತುಂಬಿಕೊಂಡು ನಡೆದವರು, ನಡೆಯಗೊಟ್ಟವರು.

ಸರ್ಕಾರೀ ಕ್ವಾರ್ಟರ್ಸ್​ನ ದೆವ್ವದಂಥ ದೊಡ್ಡ ಮನೆಗಳಲ್ಲಿರುತ್ತ ಮತ್ತೆ ಊರೂರು ಬದಲಿಸುವಾಗ ಒಂದು ಶಾಲೆಯಿಂದ ಇನ್ನೊಂದಕ್ಕೆ ಹೊಂದಿಕೊಳ್ಳಲು ಒದ್ದಾಡ್ತಿದ್ದ ಮಕ್ಕಳಿಗೆ ಸಹಾಯವಾಗುವಲ್ಲಿ ನನ್ನ ಪೆನ್ನು ಹಾಳೆಗಳು ಎಲ್ಲೋ ‌ಅಟ್ಟ ಸೇರಿದ್ದು ಸದಾ ಮನಸ್ಸನ್ನು ಕೊರೆಯುತ್ತಿರ್ತಿತ್ತು. ನನ್ನನ್ನು ನನ್ನ ಅಕ್ಷರಗಳಲ್ಲಿ ಹುಡುಕಿಕೊಳ್ಳಲು ಜೀವ ಕಾತರಿಸುತ್ತಿತ್ತು. ಅನುಭವಗಳಿಗೆ ಕೊರತೆಯಿರಲಿಲ್ಲ ಆದರೆ ಎಲ್ಲವನ್ನೂ ದಾಖಲಿಸುವ ಧಾರ್ಷ್ಟ್ಯ ಮಾಡಲಾಗದೇ ಉಳಿದೆ. ಈ ಎಲ್ಲದರ ನಡುವೆ ನನ್ನನ್ನು ನಾನು ಕಟ್ಟಿಕೊಳ್ಳುವ ಯತ್ನವಾಗಿ ಉಳಿ ಸುತ್ತಿಗೆಯನ್ನು ಹಿಡಿದು ನನ್ನನ್ನೇ ಕೆತ್ತಿಕೊಳ್ಳತೊಡಗಿದೆ. ಯಶಸ್ಸು, ಸೋಲುಗಳು ಬಂದುವು ಹೋದುವು. ಯಾರೋ ಆಗಲು ಇಷ್ಟಪಡದೇ ನಾನೇ ಒಂದು ವ್ಯಕ್ತಿಯಾಗಲು ಹೊರಟೆ. ಬರವಣಿಗೆಯ ಆರಂಭಕ್ಕೆ ತಡವಾಯಿತೇ? ನನಗೆ ಹಾಗೆನಿಸಲಿಲ್ಲ. ಯಾವುದೂ ತಡವಲ್ಲ ಮನಸ್ಸು ಮಾಡಿದರೆ. ಕಾಲದ ನೀರು ಹರಿದು ಹೋಗುತ್ತ ನನಗೆ ಬರವಣಿಗೆಯ ಪೂರ್ಣಪ್ರಮಾಣದ ಅವಕಾಶವನ್ನು ಉಡುಗೊರೆ ಕೊಟ್ಟಿದ್ದು ಹೀಗೆ. ಒಮ್ಮೆ ‘ತರಂಗ’ ಪತ್ರಿಕೆ ನೀಡಿದ್ದ ಆಹ್ವಾನಕ್ಕೆ ನಾನು ಬರೆದು ಕಳಿಸಿದ್ದ ಕಥೆ ‘ತಿಂಗಳ ವಿಶೇಷ ಕತೆ’ ಅನಿಸಿಕೊಂಡು ಅನೇಕರ ಗಮನವನ್ನು ನನ್ನ ಲೇಖನಿಯತ್ತ ಸೆಳೆದಿತ್ತು. (ಅದೇ ತಿಂಗಳು ಸುಧಾದಲ್ಲಿನ ನನ್ನ ಬಹುಮಾನಿತ ಕತೆಯೂ ಓದುಗರನ್ನು ನನ್ನತ್ತ ಕಳಿಸಿತ್ತು)

ಅನಂತರ ಕತೆಗಳು, ಧಾರಾವಾಹಿ, ಕಾದಂಬರಿಗಳು, ಲಲಿತ‌ ಪ್ರಬಂಧ, ವೈಚಾರಿಕ, ಕಾವ್ಯ, ಮಕ್ಕಳ ಕತೆ, ಅನುವಾದ, ವಿಶೇಷ ಬರಹಗಳು ಹೀಗೊಂದು ನನ್ನ ಅಕ್ಷರಗಳ‌ ಹನಿಗಾಲುವೆ ಹರಿಯಿತು. ಮತ್ತೆ ಇಪ್ಪತ್ತು ವರ್ಷಗಳಲ್ಲಿ ಸುತ್ತಿ ಬಂದಿದ್ದ ಹದಿನೆಂಟು ವಿದೇಶೀ ನೆಲಗಳ ಸ್ವಾರಸ್ಯವೆಲ್ಲ ವಿಭಿನ್ನ ರೂಪದಲ್ಲಿ ಹಾಳೆಗಿಳಿಯಿತು. ಇದೀಗ ವಿರಾಮ ಆಂದುಕೊಳ್ಳಲಾರೆ, ವಿರಾಮ‌ ನಿವೃತ್ತಿಯ ಸೂಚಕ. ಆದರೆ ನನ್ನ ಸಮಯಕ್ಕಾಗಿ ತಹತಹಿಸುತ್ತಿದ್ದ ಸಮಯದ ನೆನಪು ಈ ವಿರಾಮಕ್ಕೆ ಒಂದು ಅರ್ಥವನ್ನೂ ಕೊಡುತ್ತಿದೆ. ಮಗ ನನ್ನ ಆಪ್ತ ಗೆಳೆಯ, ಹೆಣ್ಣು ಮಕ್ಕಳು (ವಿದೇಶದಲ್ಲಿದ್ದರೂ) ನನ್ನ ಜೀವದ ಗೆಳತಿಯರೀಗ. ಹೇಳುತ್ತಾರೆ, ತಿದ್ದುತ್ತಾರೆ, ತಮಾಷೆ ಮಾಡುತ್ತಾರೆ, ಅಷ್ಟೇ ಸಮರ್ಥವಾಗಿ ನನ್ನ ಬೆನ್ನ ಹಿಂದೆ ಹಿಮಾಲಯವಾಗಿ ನಿಂತಿದ್ದಾರೆ.

***

ಪರಿಚಯ : ವಿಜಯಪುರದ ಜಯಶ್ರೀ ದೇಶಪಾಂಡೆ ಮನಶಾಸ್ತ್ರ ಮತ್ತು ಇಂಗ್ಲಿಷಿನಲ್ಲಿ ಪದವಿ ಪಡೆದಿದ್ದಾರೆ.  ಕಥೆ, ಕಾದಂಬರಿಗಳ  ರಚನೆಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ತೊಡಗಿದ್ದಾರೆ. ಇವರು ಬರೆದಿರುವ ಒಟ್ಟು ಕಥೆಗಳು ಸುಮಾರು ಎಂಬತ್ತೈದು. ಪ್ರಕಟಿತ ಕಥಾ ಸಂಕಲನಗಳು ‘ಪದ್ಮಿನಿ’, ‘ಮೂರನೆಯ ಹೆಜ್ಜೆ’, ‘ರೇಖೆಗಳ ನಡುವೆ’, ‘ಸ್ಥವಿರ ಜಂಗಮಗಳಾಚೆ’, ‘ಉತ್ತರಾರ್ಧ’. ಕವನ ಸಂಕಲನ  ‘ಯತ್ಕಿಂಚಿತ್’. ಲಲಿತ ಪ್ರಬಂಧ ಸಂಕಲನ ‘ಮಾಯಿ ಕೆಂದಾಯಿ  ಸ್ಮೃತಿ ಲಹರಿ’ ಹಾಸ್ಯಲೇಖನ ಸಂಕಲನ ‘ಹೌದದ್ದು ಅಲ್ಲ‌ ಅಲ್ಲದ್ದು ಹೌದು’.

ಧಾರಾವಾಹಿಯಾಗಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಕಾದಂಬರಿಗಳು: ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ), ಬೇವು‌ (ವಿಜಯ ಕರ್ನಾಟಕ), ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ (ಉದಯವಾಣಿ), ಧರಾಶಯ್ಯಿ.

ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೋರೂರು ಪ್ರತಿಷ್ಠಾನದ ‘ಶ್ರೇಷ್ಠ ಪುಸ್ತಕ’  ಪ್ರಶಸ್ತಿ, ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ, ದಿ| ಸಿ ಎನ್ ಜಯಲಕ್ಷ್ಮೀದೇವಿ ಪ್ರಶಸ್ತಿ ಸಂದಿವೆ. ಮರಾಠೀ ಮತ್ತು ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಭಾವಾನುವಾದ, ಸಂಗೀತ, ಚಲನಚಿತ್ರಗಳ ವಿಮರ್ಶಾ ಬರವಣಿಗೆ, ಕಥೆ ಮತ್ತು ವಿಮರ್ಶಾ ಕಮ್ಮಟಗಳಲ್ಲಿ ಭಾಗವಹಿಸುವಿಕೆ, ವಿದೇಶಗಳ ಪ್ರವಾಸ, ಚರ್ಚೆಗಳಲ್ಲಿ ಭಾಗವಹಿಸುವಿಕೆ ಇವು ಇವರ ಹವ್ಯಾಸಗಳು.

ನಾನೆಂಬ ಪರಿಮಳದ ಹಾದಿಯಲಿ: ಮಗುವನ್ನು ಬೆಳೆಸುವುದು ವಿಶ್ವಪ್ರೇಮದ ಸಂಕೇತ

Published On - 4:53 pm, Sat, 23 January 21