Earth Day 2021 ; ‘ಶರಣು ಮಣ್ಣಿಗೆ‘ : ಆಡಿಬಂದ ಹಸಿದ ಕಂದನಂತೆ ಕೊಟ್ಟಿದ್ದನ್ನೆಲ್ಲಾ ತಿನ್ನತೊಡಗಿತು ಆ ಮಣ್ಣು

‘ಹಿತ್ತಿಲಿನಲ್ಲಿ ಸೂರ್ಯನ ಬೆಳಕು ಸಾಲುವುದಿಲ್ಲ ಎಂದೆನ್ನಿಸಿದ್ದರಿಂದ ಅಲ್ಲಿ ಕುಂಬಳ, ಹೀರೇಕಾಯಿಗಳ ಬಳ್ಳಿಗಳನ್ನೂ, ಹಣ್ಣಿನ ಮರಗಳನ್ನೂ ಬೆಳೆದು ಅವು ಬೇಗ ಬೇಗ ಮೇಲೆ ಹೋಗಿ ಬೆಳೆದು ಸೂರ್ಯನ ಬೆಳಕನ್ನು ಕುಡಿಯುವ ಸೋಜಿಗಕ್ಕೆ ಸಾಕ್ಷಿಯಾದೆ. ಚಾವಣಿಯ ಮೇಲೆ ಕುಂಡಗಳನ್ನಿಟ್ಟು ವಿವಿಧ ತರಕಾರಿಗಳನ್ನು ಬೆಳೆಯತೊಡಗಿದೆ. ಅಕ್ಕಪಕ್ಕದವರಿಗೆ ಆಗಾಗ ಒಂದೆರಡು ಕಾಯಿಪಲ್ಲೆಯನ್ನು ಕೊಟ್ಟು ನಾನೇ ಬೆಳೆದದ್ದು ಎಂದು ಹೇಳುವ ಸಂತಸದ ಮುಂದೆ ಲಾಕ್​ಡೌನ್​ ಎಂಬ ಕ್ರಮವು ಹಗುರಾಗತೊಡಗಿತು.‘ ಜಯಶ್ರೀ ಜಗನ್ನಾಥ

Earth Day 2021 ; ‘ಶರಣು ಮಣ್ಣಿಗೆ‘ : ಆಡಿಬಂದ ಹಸಿದ ಕಂದನಂತೆ ಕೊಟ್ಟಿದ್ದನ್ನೆಲ್ಲಾ ತಿನ್ನತೊಡಗಿತು ಆ ಮಣ್ಣು
ಲೇಖಕಿ ಜಯಶ್ರೀ ಜಗನ್ನಾಥ
Follow us
ಶ್ರೀದೇವಿ ಕಳಸದ
|

Updated on:Apr 22, 2021 | 4:11 PM

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

ಮೈಸೂರಿನಲ್ಲಿ ವಾಸಿಸುತ್ತಿರುವ ಫ್ರೆಂಚ್ ಶಿಕ್ಷಕಿ, ಅನುವಾದಕಿ ಜಯಶ್ರೀ ಜಗನ್ನಾಥ ಅವರು ಈ ಒಂದು ವರ್ಷದಲ್ಲಿ ಹಸಿರಿನೊಂದಿಗೇ ಹೆಚ್ಚು ಉಸಿರಾಡುತ್ತಿರುವ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. 

2020ರ ಮಾರ್ಚ್​ನಲ್ಲಿ ಇದ್ದಕ್ಕಿದ್ದಂತೆ ನಾಲ್ಕು ದಿನಗಳಲ್ಲಿ ‘ಲಾಕ್ ಡೌನ್’ ಘೋಷಣೆಯಾಯಿತು. ಒಬ್ಬಂಟಿಯಾಗಿ ಮನೆಯಲ್ಲಿ ವಾಸಿಸುತ್ತಿರುವ ನನ್ನ ಚಲನವಲನಕ್ಕೆ ಒಮ್ಮಿಂದೊಮ್ಮಿಗೇ ಕಡಿವಾಣ ಹಾಕಲ್ಪಟ್ಟಿತು. ಬೋನಿನಲ್ಲಿರುವ ವನ್ಯಮೃಗದಂತೆ ಒಂದೆರಡು ದಿನ ಓಡಾಡಿಕೊಂಡಿದ್ದವಳಿಗೆ ಮನೆಯ ಹಿಂದಿರುವ 15/60  ಅಡಿಗಳ ‘ಹಿತ್ತಿಲು’ ಕೈಮಾಡಿ ಕರೆಯಿತು. ಆ ಸುಡುಬಿಸಿಲಿನ ದಿನಗಳಲ್ಲಿ ಸಂಜೆ ಕೈಕಾಲು ಆಡಿಸಲು ಅಲ್ಲಿಗೆ ಹೋಗಿ ಕೂಡುತ್ತಿದ್ದ ನನ್ನ ಗಮನ ಕಾಲಡಿಯಿರುವ ಮಣ್ಣಿನ ಮೇಲೆ ಬಿದ್ದು ಅದು ‘ನನಗೊಂದಿಷ್ಟು ನೀರುಣಿಸು’ ಎನ್ನುತ್ತಿರುವಂತೆ ತೋರಿತು. ನೀರುಂಡ ಮಣ್ಣು ದಿನದಿನಕ್ಕೆ ಹೊಸ ಚಹರೆಯನ್ನು ತೋರುತ್ತಾ ತಾನೊಂದು ನಿರ್ಜೀವ ವಸ್ತುವಲ್ಲ, ಬದಲಾಗಿ ಅಸಂಖ್ಯಾತ ಜೀವಿಗಳನ್ನು ಒಳಗೊಂಡಿರುವ ನಿತ್ಯಚೈತನ್ಯ ತುಂಬಿ ಹರಿಯುವ ಸಜೀವ ಸಾಮ್ರಾಜ್ಯವೆನ್ನಿಸಿತು. ನೀರುಣಿಸಿದ ಕೈಗೆ ಸೊಪ್ಪಿನ ಚಿಗುರುಗಳನ್ನು ನೀಡುವ ಸಜ್ಜನಸ್ನೇಹಿಯೆನಿಸಿತು.

ಅಡುಗೆಮನೆಯಲ್ಲೇ ಇದ್ದ ಮೆಂತ್ಯೆ ಸಾಸಿವೆ ಕೊತ್ತಂಬರಿ ಬೀಜಗಳನ್ನೂ, ಅಡುಗೆಮನೆಯಿಂದ ಹೊರಬರುವ ತರಕಾರಿ ಸಿಪ್ಪೆ ಮತ್ತಿತರ ಕಸದ ವಸ್ತುಗಳನ್ನೂ ಆ ಮಣ್ಣಿಗೆ ಹಾಕಲು ಪ್ರಾರಂಭಿಸಿದೆ. ಆಡಿ ಬಂದ ಹಸಿದ ಕಂದನಂತೆ ಕೊಟ್ಟಿದ್ದನ್ನೆಲ್ಲಾ ತಿನ್ನತೊಡಗಿತು ಆ ಮಣ್ಣು. ಹಿಂದೆ ಮೈಕೈ ಮಣ್ಣಾಗುತ್ತದೆ ಎಂದು ಅನುಮಾನಿಸುತ್ತಿದ್ದ ನಾನು, ನಿಧಾನವಾಗಿ ಮಣ್ಣಿನ ಪರಿಮಳಕ್ಕೆ ಮಾಗತೊಡಗಿದೆ. ಅಗೆಯುವುದು, ಗೊಬ್ಬರ ಹಾಕುವುದು, ಒಣಗಿದ ಎಲೆಗಳನ್ನು ಒಟ್ಟು ಮಾಡಿ ಪಾತಿಗಳಿಗೆ ಹಾಕುವುದು ಹೀಗೇ ನಾನಾ ರೀತಿಯ ಮಣ್ಣಿನ ಕೆಲಸಗಳನ್ನು ಮಾಡತೊಡಗಿದೆ.

earth day

ಬ್ರೊಕೋಲಿ, ಕೆಂಪುಮೆಣಸು

ಸೂರ್ಯರಶ್ಮಿ, ನೀರು ಮಣ್ಣು ಒಳ್ಳೆಯ ಬೀಜ ಇವೆಲ್ಲವನ್ನೂ ನೀಡಿದರೆ ಅತ್ಯಂತ ವಿಧೇಯವಾಗಿ ಭೂಮಿ ನಮಗೆ ಆಹಾರ ಬೆಳೆದು ಕೊಡುತ್ತದೆ. ಒಂದು ಹೊಸ ಭಾಷೆಯನ್ನು ಕಲಿಯುವ ಉತ್ಸಾಹ ತವಕಗಳಿಂದ ಮಣ್ಣಿನ ಹಾಡನ್ನು ಕಲಿಯತೊಡಗಿದೆ. ಬೆಳಗ್ಗೆ, ಸಾಯಂಕಾಲ ಓಡಿಹೋಗಿ ಒಂದು ರಾತ್ರಿಯಲ್ಲಿ ಬೆಳೆದಿರಬಹುದಾದ ಮೊಳಕೆ, ಚಿಗುರು ಕಾಯಿ ಹಣ್ಣುಗಳನ್ನು ನೋಡುವ ಖುಷಿ ಇರುತ್ತಿತ್ತು. ಹಿತ್ತಿಲಿನಲ್ಲಿ ಸೂರ್ಯನ ಬೆಳಕು ಸಾಲುವುದಿಲ್ಲ ಎಂದೆನ್ನಿಸಿದ್ದರಿಂದ ಅಲ್ಲಿ ಕುಂಬಳ, ಹೀರೇಕಾಯಿಗಳ ಬಳ್ಳಿಗಳನ್ನೂ, ಹಣ್ಣಿನ ಮರಗಳನ್ನೂ ಬೆಳೆದು ಅವು ಬೇಗ ಬೇಗ ಮೇಲೆ ಹೋಗಿ ಬೆಳೆದು ಸೂರ್ಯನ ಬೆಳಕನ್ನು ಕುಡಿಯುವ ಸೋಜಿಗಕ್ಕೆ ಸಾಕ್ಷಿಯಾದೆ. ಚಾವಣಿಯ ಮೇಲೆ ಕುಂಡಗಳನ್ನಿಟ್ಟು ವಿವಿಧ ತರಕಾರಿಗಳನ್ನು ಬೆಳೆಯತೊಡಗಿದೆ. ಅಕ್ಕಪಕ್ಕದವರಿಗೆ ಆಗಾಗ ಒಂದೆರಡು ಕಾಯಿಪಲ್ಲೆಯನ್ನು ಕೊಟ್ಟು ನಾನೇ ಬೆಳೆದದ್ದು ಎಂದು ಹೇಳುವ ಸಂತಸದ ಮುಂದೆ ಲಾಕ್ಡೌನ್ ಎಂಬ ಕ್ರಮವು ಹಗುರಾಗತೊಡಗಿತು.

ಸಸ್ಯಗಳ ಹಿಂದೆ ಪಾತರಗಿತ್ತಿಗಳು, ಜೇನುಗೂಡು, ಕಂಬಳಿಹುಳುಗಳು, ಇಲಿ ಹೆಗ್ಗಣಗಳು, ಅಳಿಲು ಬಾವಲಿಗಳು, ಹಕ್ಕಿಪಿಕ್ಕಿಗಳು ಮತ್ತು ಮಂಗಗಳ ಜೀವರಾಶಿಯೇ ನನ್ನ ಹಿತ್ತಲಿಗೆ ಬರಲಾರಂಭಿಸಿದವು. ದೂರದಿಂದ ಕರೆ ಮಾಡಿ ಹೇಗಿದ್ದೀಯಾ ಅಮ್ಮಾ ಒಬ್ಬಳೇ ಇದ್ದೀಯಲ್ಲಾ ಎಂದು ಕೇಳುವ ಮಕ್ಕಳಿಗೆ ನನ್ನ ಮಣ್ಣಿನ ಸಹವಾಸದ ಕತೆಯನ್ನು ವಿವರಿಸಿ ಜೇನುನೊಣಗಳ ವೀಡಿಯೋವನ್ನು ತೋರಿಸಿ ಸಂಭ್ರಮ ಪಟ್ಟೆ.

earth day

ಟೆರೇಸಿನ ಮೇಲೆ ಬಳ್ಳಿ ಮತ್ತು ಬುಟ್ಟಿಯೊಳಗಣ ಬದನೆ

ಇನ್ನು ಮೇಲೆ ಈ ಮಣ್ಣಿನ ಬಾಂಧವ್ಯ ಜೀವಕ್ಕಂಟಿದ ಸತತ ನಂಟು.

ಆಜ್ ಬಾಜ಼ಾರ್ ಮೆ ಇತ್ತರ್ ಕೆ ದಾಮ್ ಗಿರ್ ಗಯೆ ಜಬ್ ಬಾರಿಶ್ ನೆ ಮಿಟ್ಠೀ ಕಾ ಮಾಥಾ ಚೂಮ್ ಲಿಯಾ

(ಇಕ್ ಖ್ವಾಬ್ ಸಿ ಲಡಕೀ)

‘ಈ ದಿನ ಬಜಾರದಲ್ಲಿ ಅತ್ತರಿನ ಬೆಲೆ ಬಿದ್ದು ಹೋಯ್ತು ಯಾಕಂದ್ರೆ ಮಣ್ಣಿನ ಹಣೆಗೆ ವರ್ಷಧಾರೆ ಮುತ್ತು ಕೊಡ್ತು’

ಮಳೆಗೆ ಬಿರಿದು ಕಂಪು ಬೀರುವ ಮಣ್ಣಿನ ಮೇಲೆ ಶೃಂಗಾರ ಕಾವ್ಯ ಬರೆಯದಿರುವ ಭಾಷೆಯೇ ಇಲ್ಲ. ಮಳೆ-ಮಣ್ಣಿನ ನಂಟು ಜೀವಜೀವಗಳನ್ನು ಪುಳುಕಿತಗೊಳಿಸುತ್ತಾ ನವಚೇತನವನ್ನು ಅರಳಿಸುವ ಪ್ರಣಯಗಂಧ. ಮಣ್ಣು ನೀರು ಸೇರಿದರೇ ಭೂಮಿ ತಣಿಯುವುದು; ಮೊಳಕೆಯೊಡೆದು ಸಸ್ಯರಾಶಿ ತೊನೆದಾಡುವುದು, ಕ್ರಿಮಿಕೀಟ, ಪ್ರಾಣಿಪಕ್ಷಿಗಳೆಲ್ಲಾ ಆಹಾರ ಪಡೆದು ತೃಪ್ತಿ ಹೊಂದುವುದು. ಈ ಬದುಕುಳಿಸುವ ಶಕ್ತಿಯಿಂದಲೇ ಇರಬಹುದು, ಮಣ್ಣು ನೀರನ್ನು ಹೀರಿದರೆ ಆ ಪ್ರಕ್ರಿಯೆಗೆ ಸ್ಪಂದಿಸಿ ಆನಂದಿಸುವ ಅನುಭೂತಿಯು ಬಹುಶಃ ನಮ್ಮ ವಂಶವಾಹಿನಿಗಳಲ್ಲಿ ಹರಿದುಹರಿದು ಬರುತ್ತಿದೆ. ಅದಕ್ಕಾಗಿಯೋ ಏನೋ ಚಿಕ್ಕ ಮಕ್ಕಳಿಗೆ ದುಬಾರಿ ಆಟಿಕೆಗಳಿಗಿಂತಾ ಮಣ್ಣಿನಲ್ಲಿ, ಕೆಸರಿನಲ್ಲಿ ಆಡಲು ಮಹದಾನಂದ. ಮಣ್ಣಿನ ಸ್ಪರ್ಷದಿಂದ ರೋಗನಿರೋಧಕ ಶಕ್ತಿ ಸಹಜವಾಗಿ ಹೆಚ್ಚುತ್ತದೆ.

ಚಿಣ್ಣರ ಬಡಿಯೆನು, ಅಣ್ಣನ ಬೈಯ್ಯೆನು ಬೆಣ್ಣೆಯ ಬೇಡೆನು, ಮಣ್ಣು ತಿನ್ನುವುದಿಲ್ಲಾ, ಗುಮ್ಮನ ಕರೆಯದಿರೆ…. ಅಮ್ಮಾ ನೀನು

earth day

ಹಿತ್ತಲೊಳಗಣ ಬದುಕು

ಮಣ್ಣು ತಿಂದು ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ ಕೃಷ್ಣನ ಕತೆಯನ್ನು ಎಲ್ಲರೂ ಕೇಳಿದ್ದೇವೆ.

ಮಣ್ಣು ಎಂದರೆ ನಮ್ಮ ಭೂಮಿಯ ಮೇಲ್ಮೈ. ಸ್ಥೂಲವಾಗಿ ವೈಜ್ಞಾನಿಕವಾಗಿ ಹೇಳುವುದಾದರೆ ಅದರಲ್ಲಿ ವಿವಿಧ ರೀತಿಯ ಖನಿಜಗಳು, ಜೇಡಿಮಣ್ಣು ಮತ್ತು ಜೈವಿಕ ದ್ರವ್ಯಗಳಿದ್ದು ಅವು ಸಸ್ಯಗಳು ಬೆಳೆಯಲು ಸಹಾಯಮಾಡುತ್ತವೆ. ಅದರಲ್ಲಿ ಲೆಕ್ಕವಿಲ್ಲದಷ್ಟು ಸೂಕ್ಷ್ಮಾಣು ಜೀವಿಗಳಿರುತ್ತವೆ. ಅಲ್ಲದೆ ಬೇಕಾದಷ್ಟು ಕ್ರಿಮಿಕೀಟಗಳೂ ಹುಳುಹುಪ್ಪಟೆಗಳೂ ಇರುತ್ತವೆ. ಭೂಮಿಯ ಗಾತ್ರಕ್ಕೆ ಹೋಲಿಸಿದರೆ ಈ ಮಣ್ಣಿನ ಮೇಲ್ಮೈ ಒಂದು ಭಾರೀ ಗಜಗಾತ್ರದ ಗುಡಾಣದಲ್ಲಿ ಹಾಲು ಕಾಯಿಸಿದರೆ ಅದರ ಮೇಲಿನ ಕೆನೆಗಿಂತಾ ತೆಳ್ಳಗಿರುವಷ್ಟೇ ತೆಳು ಪದರ, ಈ ಮಣ್ಣು. ಇದು ಭೂಮಿಯ ಮೇಲಿನ ಜೀವರಾಶಿಯನ್ನು ಸಾಕಿಸಲಹುವ ಮೂಲ ದ್ರವ್ಯ.

ಜಗತ್ತಿನ ಎಲ್ಲಾ ನಾಗರೀಕತೆಗಳ ಎಲ್ಲಾ ಪರಂಪರೆಗಳಲ್ಲೂ ಭೂಮಿಯನ್ನು, ಮಣ್ಣನ್ನು ಅಂದರೆ ಬೆಳೆ ಬೆಳೆಯುವ ಮಣ್ಣನ್ನು ಪೂಜಿಸುವ ಪದ್ಧತಿ ಹಿಂದೆಯೂ ಇತ್ತು, ಈಗಲೂ ಇದೆ. ಭೂತಾಯಿ ಎಂದು ಗೌರವಿಸುವ ನಮ್ಮ ಧರ್ಮದಲ್ಲಿ ಶ್ರೀರಾಮನ ಪತ್ನಿ ಸೀತೆಯನ್ನು ಭೂಮಿಯಿಂದ ಹುಟ್ಟಿದ ಮಣ್ಣಿನ ಮಗಳು ಎಂದು ಕರೆಯಲಾಗುತ್ತದೆ. ಜೆಬ್ ಎನ್ನುವುದು ಈಜಿಪ್ಶಿಯನ್ ಜನಾಂಗವು ಪೂಜಿಸುತ್ತಿದ ಮಣ್ಣಿನ ದೈವ. ದೆಮೆಟರ್ ಎಂಬ ದೇವತೆಯನ್ನು ಗ್ರೀಕ್ ಜನಾಂಗವು ಮಣ್ಣಿನ, ವ್ಯವಸಾಯದ ದೇವತೆಯೆಂದು ಪೂಜಿಸುತ್ತಿದ್ದರು.

earth day

ನುಗ್ಗೆಕಾಯಿ ನುಗ್ಗೆ ಸೊಪ್ಪು ನುಗ್ಗೆಹೂ!

ಮಣ್ಣು ಅತ್ಯಮೂಲ್ಯವಾಗುತ್ತ ಬಂದು ಮಾನವನ ಅತಿಯಾದ ದುರಾಸೆಗೆ ಸಿಕ್ಕಿ ನರಳುತ್ತಿದೆ. ಹೊನ್ನು ಹೆಣ್ಣು ಮಣ್ಣು ಇವರಲ್ಲಿ ಯಾರು ಹಿತವರು ಎಂದು ದಾಸರು ಕೇಳಿದ್ದೇನೋ ನಿಜ. ಆದರೆ ಇದು ಅನ್ಯಾಯವಲ್ಲವೇ. ಹೊನ್ನು ಹೆಣ್ಣಿಲ್ಲದೇ ಬದುಕಿಬಿಡಬಹುದು, ಮಣ್ಣಿಲ್ಲದೆ ಬದುಕುವುದಿರಲಿ, ಸಾಯುವುದಾದರೂ ಎಲ್ಲಿ, ಹೇಗೆ? ಬದುಕಿಗೆ ಮಣ್ಣು ಬೇಕಾದಂತೆ ಸಾವಿಗೂ ಮಣ್ಣು ಅತ್ಯವಶ್ಯಕ. ಮೃತಪಟ್ಟ ದೇಹಗಳನ್ನು ಮಣ್ಣು ಮಾಡುತ್ತೇವೆ. ಸುಟ್ಟರೂ ಸಹ ಕಡೆಗೆ ಬೂದಿಯೂ ನೀರಿಗೆ ಸೇರಿ ಮಣ್ಣಿನಲ್ಲೇ ಬೆರೆತುಹೋಗುತ್ತದೆ. ಅಲ್ಲಿರುವ ಸೂಕ್ಷಾಣು ಜೀವಿಗಳಿಗೆ ಆಹಾರವಾಗಿ ಮತ್ತೆ ಚಿಗುರು ಕೊನರುತ್ತದೆ, ಮತ್ತೆ ಜೀವಪಡೆಯುತ್ತದೆ.

ಮಣ್ಣನ್ನು ಪೋಷಿಸಿ, ಕಾಪಾಡಿಕೊಂಡು ಅದರ ಆರೋಗ್ಯವನ್ನು ಉಳಿಸಿಕೊಂಡರೆ ನಮಗೂ ಉಳಿಗಾಲ, ಇಲ್ಲದಿದ್ದರೆ ‘ಮಣ್ಣು’ ತಿನ್ನಬೇಕಾಗುತ್ತದಷ್ಟೆ!

ಇದನ್ನೂ ಓದಿ : Earth Day 2021: ಭೂ ದಿನದ ಉದ್ದೇಶ, ಮಹತ್ವ ಮತ್ತು ಪ್ರಾಮುಖ್ಯತೆ ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ

Published On - 2:10 pm, Thu, 22 April 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ