- Kannada News Photo gallery Cricket photos Sanju Samson Out of RCB Match: Rajasthan Royals Face Another Blow
IPL 2025: ಆರ್‌ಸಿಬಿ ವಿರುದ್ಧದ ಪಂದ್ಯದಿಂದ ಹೊರಬಿದ್ದ ರಾಜಸ್ಥಾನ್ ರಾಯಲ್ಸ್ ನಾಯಕ
Sanju Samson Out of RCB Match: ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ 2025ರಲ್ಲಿ ನಿರಂತರ ಸೋಲುಗಳನ್ನು ಎದುರಿಸುತ್ತಿದೆ. ಈಗ, ನಾಯಕ ಸಂಜು ಸ್ಯಾಮ್ಸನ್ ಗಾಯದಿಂದ ಬಳಲುತ್ತಿದ್ದು, ಆರ್‌ಸಿಬಿ ವಿರುದ್ಧದ ಮುಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಲಕ್ನೋ ವಿರುದ್ಧದ ಪಂದ್ಯದಲ್ಲೂ ಆಡದ ಸಂಜು ಬದಲಿಗೆ ರಿಯಾನ್ ಪರಾಗ್ ತಂಡದ ನಾಯಕತ್ವವಹಿಸಲಿದ್ದಾರೆ.
Updated on: Apr 21, 2025 | 7:11 PM

2025 ರ ಐಪಿಎಲ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟು ಟೂರ್ನಿಯಿಂದಲೇ ಹೊರಬೀಳುವ ಆತಂಕದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇಂಜುರಿಯಿಂದ ಬಳಲುತ್ತಿರುವ ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್ ಇದೀಗ ಆರ್‌ಸಿಬಿ ವಿರುದ್ಧದ ಮುಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ.

ವಾಸ್ತವವಾಗಿ ಗಾಯದ ಕಾರಣದಿಂದಾಗಿ ಸಂಜು ಸ್ಯಾಮ್ಸನ್ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಈಗ ಏಪ್ರಿಲ್ 24 ರಂದು ಆರ್‌ಸಿಬಿ ವಿರುದ್ಧದ ಪಂದ್ಯದಿಂದ ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಸಂಜು ಸ್ಯಾಮ್ಸನ್ ಪ್ರಸ್ತುತ ಚೇತರಿಕೆಯ ಹಂತದಲ್ಲಿದ್ದು, ಅವರು ತಂಡದ ತವರು ನೆಲೆಯಲ್ಲಿಯೇ ಉಳಿಯಲಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಡಳಿತ ಮಂಡಳಿ ತಿಳಿಸಿದೆ.

ಮುಂದಿನ ಪಂದ್ಯಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಸಂಜು ಸ್ಯಾಮ್ಸನ್ ಮಾತ್ರ ತಂಡದಲ್ಲಿ ಕಾಣಿಸಿಕೊಂಡಿಲ್ಲ. ತಂಡದ ಆಡಳಿತ ಮಂಡಳಿಯು ಸಂಜು ಸ್ಯಾಮ್ಸನ್ ಅವರ ಗಾಯದ ಮೇಲೆ ನಿಗಾ ಇಟ್ಟಿದ್ದು, ಅವರು ಸಂಪೂರ್ಣ ಫಿಟ್ ಆದ ನಂತರವೇ ತಂಡಕ್ಕೆ ಮರಳುತ್ತಾರೆ ಎಂಬ ಮಾಹಿತಿ ನೀಡಿದೆ. ಇದರರ್ಥ ಆರ್‌ಸಿಬಿ ವಿರುದ್ಧದ ಮುಂದಿನ ಪಂದ್ಯದಲ್ಲೂ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ.

ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ಅವರ ಪ್ರದರ್ಶನ ಮಿಶ್ರವಾಗಿದೆ. ಆಡಿರುವ 7 ಪಂದ್ಯಗಳಲ್ಲಿ ಸಂಜು 37.33 ಸರಾಸರಿಯಲ್ಲಿ ಕೇವಲ 224 ರನ್ ಕಲೆಹಾಕಿದ್ದಾರೆ. 143 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಸಂಜು ಇದರಲ್ಲಿ ಒಂದು ಅರ್ಧಶತಕ ಬಾರಿಸಿದ್ದಾರೆ.

ಇನ್ನು ಈ ಸೀಸನ್ನಲ್ಲಿ ರಾಜಸ್ಥಾನ್ ತಂಡದ ಪ್ರದರ್ಶನದ ಬಗ್ಗೆ ಹೇಳುವುದಾದರೆ... ಈ ತಂಡ ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ವಾಸ್ತವವಾಗಿ ರಾಜಸ್ಥಾನ್ ತಂಡ ನಾಲ್ಕು ಪಂದ್ಯಗಳಲ್ಲಿ ಗೆಲ್ಲುವ ಅವಕಾಶ ಹೊಂದಿತ್ತು. ಆದರೆ ಕಳೆದ ಎರಡು ಪಂದ್ಯಗಳನ್ನು ನಂಬಲು ಕಷ್ಟವಾಗುವ ರೀತಿಯಲ್ಲಿ ಸಂಜು ಪಡೆ ಸೋತಿದೆ. ಲಕ್ನೋ ವಿರುದ್ಧದ ಪಂದ್ಯವನ್ನು 2 ರನ್‌ಗಳಿಂದ ಸೋತಿದ್ದ ರಾಜಸ್ಥಾನ್, ಈ ಮೊದಲು ದೆಹಲಿ ವಿರುದ್ಧ ಸೂಪರ್ ಓವರ್ ಆಡಿ ಸೋತಿತು.



















