Earth Day 2021 : ಎಲ್ಲಿದ್ದೀಯೋ? ಇಲ್ಲಿ ಯಾವುದೂ ಹರಿಯುವ ಕಡೆ ಹರಿಯುತ್ತಿಲ್ಲ ನನ್ನ ಗೂಗಲ್ ತೋಲಣ್ಣ…
ಮಳೆಗಾಲದಲ್ಲಿ ರಾತ್ರೋರಾತ್ರಿ ಹೊಸದಾಗಿ ಹುಟ್ಟಿಕೊಳ್ಳುವ ಹೂಗಿಡಗಳೊಂದಿಗೆ ಮಾತಾಡುತ್ತಿದ್ದ. ನಗುತ್ತಿದ್ದ, ಪ್ರಶ್ನಿಸುತ್ತಿದ್ದ. ಹರಿಯುವ ನೀರಿನೊಂದಿಗೆ ಜಗಳಕ್ಕೆ ಬೀಳುತ್ತಿದ್ದ. ಹರಿಯೋ ಕಡೆ ಹರಿಯಬೇಕು. ಎಲ್ಲೆಲ್ಲೋ ಹರಿತಾರಾ? ಇದೇನಾ ಕಲ್ತಿದ್ದು ನೀವು? ಅನ್ನುತ್ತಾ ಹರಿಯುವ ನೀರಿನೊಂದಿಗೆ ನಡೆಯುತ್ತಾ ಮಾತನಾಡುತ್ತಿದ್ದ. ಗಾಳಿ ಮಳೆಗೆ ಬಿದ್ದ ಮರದ ಮುಂದೆ ಸುಮ್ಮನೆ ಮೌನವಾಗಿ ನಿಲ್ಲುತ್ತಿದ್ದ. ನೆಲಕ್ಕೆ ಬಿದ್ದ ಹಣ್ಣುಗಳನ್ನೆಲ್ಲಾ ಆಯ್ದು ಒಂದೆಡೆ ಗುಡ್ಡೆ ಸೇರಿಸಿ ಹಕ್ಕಿಗಳನ್ನು ಕರೆಯುತ್ತಿದ್ದ. ಸಮಾಧಾನವಾಗಿ ಹಂಚಿಕೊಂಡು ತಿನ್ನಿ, ತಿಂದ ಮೇಲೆ ಅಲ್ಲಿ ಹೋಗಿ ನೀರು ಕುಡೀರಿ ಅನ್ನುತ್ತಾ ದೂರದ ನೀರಿನ ಹಳ್ಳ ತೋರಿಸಿ ನಡೆಯುತ್ತಿದ್ದ.
‘ಅವ್ವಾ ಅಮ್ಮಾಳಮ್ಮ, ತಾಯೀ ಇಲ್ಲೀ ತನ್ಕ ಬದುಕಿಸಿದ್ದೀ ಕಣವ್ವಾ, ಏನೋ ನಿನ್ ದಯೆ, ಮಕ್ಳು ಮರಿ ಎಲ್ರೂ ಊಟ ಮಾಡ್ತಾ ನೆಮ್ಮದಿಯಾಗಿ ಬದುಕಿದ್ದೀವಿ. ಕಾಡಿಗೆ ಸರಿ ಮಳೆ ಬೇಕು ಕಣವ್ವಾ. ನಾವ್ ಸತ್ರೂ ಪರ್ವಾಗಿಲ್ಲ, ಆದ್ರೆ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಊಟ ಇಲ್ಲದೆ ಸಾಯ್ಬಾರ್ದು. ಜಿಂಕೆ ಹುಲ್ಲು ತಿನ್ಬೇಕು, ಹುಲಿ ಜಿಂಕೆ ತಿನ್ಬೇಕು, ಇದು ನಿನ್ ನ್ಯಾಯ. ಅದ್ ನಡೀಬೇಕಂದ್ರೆ ಮಳೆ ಬರ್ಬೇಕು, ವರ್ಷವರ್ಷ ಸರಿಯಾಗಿ ಮಳೆ ಬರ್ಸವ್ವಾ ತಾಯಿ. ನಾವು ಇಲ್ಲೇ ಕಾಡಲ್ಲೇ ಹುಟ್ಟಿ, ಬೆಳೆದು ಸಾಯುವ ಜನ. ನೂರಾರ್ ವರ್ಷ ಬಾಳ್ಬೇಕಾದ ಮರಗಳೆಲ್ಲಾ ಮಳೆಗಾಳಿಗೆ ಬಿದ್ರೆ ಕಾಡು ಹೆಂಗ್ ಉಳ್ಕತದೆ? ಕಾಡು ಬೆಳ್ಸೋದು, ಉಳ್ಸೋದು ಎರಡೂ ನಿನ್ ಕೈಲೇ ಉಂಟು ತಾಯಿ. ನೀನ್ ಕಾಡು ಉಳ್ಸಿದ್ರೆ ನಾವು ಉಳ್ಕೋತಿವಿ. ನಾವ್ ಉಳ್ಕಂಡ್ರೆ ಸಾಯೋ ತನಕ ವರ್ಷಕ್ಕೊಂದ್ಸಲ ನಿಂಗ್ ಪೂಜೆ ಮಾಡ್ತಿವಿ. ಬಲಿ ಕೊಡ್ತೀವಿ. ನಮ್ಮನ್ನೆಲ್ಲಾ ನೀನೇ ಕಾಪಾಡ್ಬೇಕು ತಾಯಿ’
ಈ ಭೂಮಿ ಮೇಲೆ ವಾಸಿಸುತ್ತಿರುವ ಮನುಷ್ಯರು, ಭೂಮಿಯಿಂದ ದೊರೆಯುವ ಎಲ್ಲಾ ಫಲಗಳನ್ನೂ, ಸುಖಗಳನ್ನೂ ಅನುಭವಿಸುತ್ತಾ ಮಜವಾಗಿ ಬದುಕುತ್ತಿದ್ದಾರೆ, ಆದರೆ ಭೂಮಿಯ ಸಂರಕ್ಷಣೆಯ ಜವಾಬ್ದಾರಿಯನ್ನು ಮಾತ್ರ ಸರ್ಕಾರಕ್ಕೂ ಹಾಗೂ ಸಂಬಂಧಪಟ್ಟ ಇಲಾಖೆಯವರಿಗೂ ಬಿಟ್ಟು ಕೊಟ್ಟು ವರ್ಷಪೂರ್ತಿ ಅವರನ್ನೇ ಜರಿಯುತ್ತಾ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ಕೂಡಾ ಅರಣ್ಯ ಸಂರಕ್ಷಣೆ, ನಿರ್ವಹಣೆ ಬಗ್ಗೆ ವಿವಿಧ ಕಾನೂನು, ಸುತ್ತೋಲೆ, ಆದೇಶಗಳನ್ನು ಮಾಡಿ ಇಲಾಖೆಗೂ, ಸಾರ್ವಜನಿಕರಿಗೂ ತಲುಪಿಸಿ ಕೈತೊಳೆದುಕೊಳ್ಳುತ್ತೆ. ಅದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತೆ ಎನ್ನುವುದು ನಿಜಕ್ಕೂ ಯೋಚಿಸಬೇಕಾದ ವಿಚಾರ ಮತ್ತು ನಿಜಕ್ಕೂ ಜಾರಿಗೆ ಬಂದಿದ್ದಲ್ಲಿ ಕಳೆದ ನಾಕೈದು ವರ್ಷಗಳಿಂದ ಕಾಣುತ್ತಿರುವ ಪ್ರಕೃತಿ ವಿಕೋಪಗಳಿಗೆ ಕಾರಣವಾದರೂ ಏನು? ಅನ್ನುವ ಪ್ರಶ್ನೆ ಕಾಡುತ್ತದೆ.
ಈ ಮದ್ಯೆ ಎಲ್ಲಾ ಕಾನೂನು ಮತ್ತು ನಿಯಮಗಳ ವ್ಯಾಪ್ತಿಯನ್ನು ದಾಟಿ ಸ್ವಯಂಪ್ರೇರಿತವಾಗಿ ನಿಯಮಗಳನ್ನು ರೂಪಿಸಿಕೊಂಡು ಆ ನಿಯಮಗಳಿಗೆ ಬದ್ಧರಾಗಿ ಪ್ರಾಮಾಣಿಕತೆಯಿಂದ ಆದರೆ ಪ್ರಕೃತಿಯ ನಿಯಮಗನುಗುಣವಾಗಿ ಬದುಕುತ್ತಿರುವವರು ಅರಣ್ಯದೊಳಗೆ ಮತ್ತು ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು, ಅಂದರೆ ಕಾಡು ಕುರುಬರು, ಜೇನುಕುರುಬರು ಮುಂತಾದವರು.
ಅವನೊಬ್ಬನಿದ್ದ, ಹೆಸರು ತೋಲ, ನಾನು ತಿತಿಮತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆತ ನನ್ನೊಂದಿಗಿದ್ದ. ಭೂಮಿಯೇ ಅವನ ಮನೆಯಾಗಿತ್ತು, ಪ್ರಕೃತಿಯ ಪ್ರತೀ ನಿಯಮಗಳೂ ಅವನಿಗೆ ಬಾಯಿಪಾಠವಾಗಿತ್ತು, ಗಿಡಮರಗಳ ಭಾಷೆ, ಪ್ರಾಣಿ ಪಕ್ಷಿಗಳ ಭಾಷೆ ಅವನಿಗೆ ತೊಟ್ಟಿಲ ಹಾಡಾಗಿದ್ದವೋ ಏನೋ? ಅನ್ನುವಷ್ಟು ಆತ ಪ್ರಾಣಿ ಪಕ್ಷಿಗಳಿಗೆ ಆತ್ಮೀಯನಾಗಿದ್ದ. ನೆಲದಲ್ಲಿ ಉದುರಿದ ಎಲೆಗಳ ಆಧಾರದ ಮೇಲೆ ಅದು ಯಾವ ಮರ? ಯಾವ ಕಾಲಕ್ಕೆ ಹಣ್ಣು ಬಿಡುತ್ತದೆ? ನಾವು ತಿನ್ನಬಹುದೆ? ಅಥವಾ ಯಾವ ಹಕ್ಕಿ ತಿನ್ನುತ್ತದೆ? ಹೀಗೆ ಅದರ ಸಂಪೂರ್ಣ ಮಾಹಿತಿ ನೀಡುತ್ತಿದ್ದ ಆತ ನನ್ನ ಪಾಲಿಗೆ ಗೂಗಲ್ಲೇ ಆಗಿದ್ದ. ಪ್ರತೀ ಮಳೆಗಾಲದಲ್ಲೂ ಆತ ಸಂಭ್ರಮಿಸುತ್ತಿದ್ದ. ಒದ್ದೆಯಾದ ಭೂಮಿ ಕಂಡಾಗೆಲ್ಲಾ ಆತ ಖುಷಿಯಿಂದ ನಗುತ್ತಿದ್ದ. ಮಳೆಗಾಲದಲ್ಲಿ ರಾತ್ರೋರಾತ್ರಿ ಹೊಸದಾಗಿ ಹುಟ್ಟಿಕೊಳ್ಳುವ ಹೂಗಿಡಗಳೊಂದಿಗೆ ಮಾತಾಡುತ್ತಿದ್ದ. ನಗುತ್ತಿದ್ದ, ಪ್ರಶ್ನಿಸುತ್ತಿದ್ದ. ಹರಿಯುವ ನೀರಿನೊಂದಿಗೆ ಜಗಳಕ್ಕೆ ಬೀಳುತ್ತಿದ್ದ. ಹರಿಯೋ ಕಡೆ ಹರಿಯಬೇಕು. ಎಲ್ಲೆಲ್ಲೋ ಹರಿತಾರಾ? ಇದೇನಾ ಕಲ್ತಿದ್ದು ನೀವು? ಅನ್ನುತ್ತಾ ಹರಿಯುವ ನೀರಿನೊಂದಿಗೆ ನಡೆಯುತ್ತಾ ಮಾತನಾಡುತ್ತಿದ್ದ. ಗಾಳಿ ಮಳೆಗೆ ಬಿದ್ದ ಮರದ ಮುಂದೆ ಸುಮ್ಮನೆ ಮೌನವಾಗಿ ನಿಲ್ಲುತ್ತಿದ್ದ. ನೆಲಕ್ಕೆ ಬಿದ್ದ ಹಣ್ಣುಗಳನ್ನೆಲ್ಲಾ ಆಯ್ದು ಒಂದೆಡೆ ಗುಡ್ಡೆ ಸೇರಿಸಿ ಹಕ್ಕಿಗಳನ್ನು ಕರೆಯುತ್ತಿದ್ದ. ಸಮಾಧಾನವಾಗಿ ಹಂಚಿಕೊಂಡು ತಿನ್ನಿ, ತಿಂದ ಮೇಲೆ ಅಲ್ಲಿ ಹೋಗಿ ನೀರು ಕುಡೀರಿ ಅನ್ನುತ್ತಾ ದೂರದ ನೀರಿನ ಹಳ್ಳ ತೋರಿಸಿ ನಡೆಯುತ್ತಿದ್ದ. ಹಾಗಂತ ನೀವು ಅವನನ್ನು ಹುಚ್ಚ ಅಂದುಕೊಳ್ಳಬೇಡಿ, ಅವ ನಮ್ಮ ನಿಮ್ಮ ಹಾಗೇ ಮನುಷ್ಯ. ಆದರೆ ಅವ ಅವನಿಗಿಂತ ಹೆಚ್ಚಾಗಿ ಪ್ರಕೃತಿಯನ್ನು ಪ್ರೀತಿಸುತ್ತಿದ್ದ. ಭೂಮಿತಾಯಿಯೇ ದೊಡ್ಡದು ಅನ್ನುವುದನ್ನು ಅರ್ಥ ಮಾಡಿಕೊಂಡಿದ್ದ, ಹಾಗೂ ಅದನ್ನು ಗೌರವದಿಂದ ಪಾಲಿಸುತ್ತಿದ್ದ. ಭೂಮಿತಾಯಿಗೆ ಸದಾ ಗೌರವ ನೀಡುತ್ತಿದ್ದ. ಭೂಮಿಯಲ್ಲಿ ಬದುಕಿರುವಷ್ಟು ದಿನ ಭೂಮಿಯನ್ನು ಗೌರವಿಸಬೇಕು ಸಾಮಿ. ಯಾರ ತಾಳ್ಮೆ ಬೇಕಿದ್ರೂ ಪರೀಕ್ಷೆ ಮಾಡಿ ಆದ್ರೆ ತಾಯಿ ತಾಳ್ಮೆ ಮಾತ್ರ ಪರೀಕ್ಷೇ ಮಾಡ್ಬಾರ್ದು ಸಾಮೆ? ಅದು ಭುಮಿತಾಯಿಯಾದರೂ ಅಷ್ಟೇ, ಭೂಮಿತಾಯಿ ಮನಸ್ಸು ಮಾಡಿದರೆ ನಾವೆಲ್ಲಾ ಯಾವ ಲೆಕ್ಕ? ಒಂದೇ ಸೆಕೆಂಡಿಗೆ ನಾವೆಲ್ಲರೂ ಮಾಯ! ಅಲ್ವಾ? ಅನ್ನುತ್ತಾ ನಗುತ್ತಿದ್ದ ತೋಲ, ನನ್ನ ಪಾಲಿಗೆ ಪ್ರೀತಿಯ ತೋಲಣ್ಣ. ನಾನು ಪ್ರಕೃತಿಯೆಡೆಗೆ ಒಂದು ಅನನ್ಯವಾದ ಪ್ರೀತಿ ಬೆಳೆಸಿಕೊಳ್ಳಲು ಕಾರಣನಾದವ ಅವ.
ಈ ಬುಡಕಟ್ಟು ಜನಾಂಗದವರು, ಕಾಡು ಕುರುಬರು, ಜೇನು ಕುಡುಬರು ಕಾಡನ್ನು ಪ್ರೀತಿಸುವ ಪರಿಯೇ ಚಂದ. ಸಣ್ಣ ಮಕ್ಕಳು ಅವರ ತಾಯಿಯನ್ನು ಪ್ರೀತಿಸುವಂತೆ. ಮುದ್ದು ಮಾಡುವುದಷ್ಟೇ ಅಲ್ಲಾ, ಎಲ್ಲಾ ತರದ ಕೀಟಲೆಗಳನ್ನು ಕಾಟಗಳನ್ನೂ ನೀಡಿದರೂ ಕೊನೆಗೆ ಅವಳದೇ ಮಡಿಲಿನಲ್ಲಿ ನೆಮ್ಮದಿಯಾಗಿ ನಿದ್ರಿಸುವಂತೆ. ಕಾಡೆಂದರೆ ಅವರಿಗೆ ಹೆತ್ತ ತಾಯಿಯಷ್ಟೇ ಆಪ್ತ. ವರ್ಷಕ್ಕೊಮ್ಮೆ ತಪ್ಪದೇ ಆಚರಿಸುವ ಅಮ್ಮಾಳೆ ಹಬ್ಬದಲ್ಲಿಯೂ ಸಹ ಅವರ ಬೇಡಿಕೆ ಅಥವಾ ಪ್ರಾರ್ಥನೆ ಕೂಡಾ ಕಾಡಿನ ಮೇಲಿನ ಪ್ರೀತಿಯೇ ತುಂಬಿರುತ್ತದೆ. ‘ಅವ್ವಾ ಅಮ್ಮಾಳಮ್ಮ, ತಾಯೀ ಇಲ್ಲೀ ತನ್ಕ ಬದುಕಿಸಿದ್ದೀ ಕಣವ್ವಾ, ಏನೋ ನಿನ್ ದಯೆ, ಮಕ್ಳು ಮರಿ ಎಲ್ರೂ ಊಟ ಮಾಡ್ತಾ ನೆಮ್ಮದಿಯಾಗಿ ಬದುಕಿದ್ದೀವಿ. ಕಾಡಿಗೆ ಸರಿ ಮಳೆ ಬೇಕು ಕಣವ್ವಾ. ನಾವ್ ಸತ್ರೂ ಪರ್ವಾಗಿಲ್ಲ, ಆದ್ರೆ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಊಟ ಇಲ್ಲದೆ ಸಾಯ್ಬಾರ್ದು. ಜಿಂಕೆ ಹುಲ್ಲು ತಿನ್ಬೇಕು, ಹುಲಿ ಜಿಂಕೆ ತಿನ್ಬೇಕು, ಇದು ನಿನ್ ನ್ಯಾಯ. ಅದ್ ನಡೀಬೇಕಂದ್ರೆ ಮಳೆ ಬರ್ಬೇಕು, ವರ್ಷವರ್ಷ ಸರಿಯಾಗಿ ಮಳೆ ಬರ್ಸವ್ವಾ ತಾಯಿ. ನಾವು ಇಲ್ಲೇ ಕಾಡಲ್ಲೇ ಹುಟ್ಟಿ, ಬೆಳೆದು ಸಾಯುವ ಜನ. ನೂರಾರ್ ವರ್ಷ ಬಾಳ್ಬೇಕಾದ ಮರಗಳೆಲ್ಲಾ ಮಳೆಗಾಳಿಗೆ ಬಿದ್ರೆ ಕಾಡು ಹೆಂಗ್ ಉಳ್ಕತದೆ? ಕಾಡು ಬೆಳ್ಸೋದು, ಉಳ್ಸೋದು ಎರಡೂ ನಿನ್ ಕೈಲೇ ಉಂಟು ತಾಯಿ. ನೀನ್ ಕಾಡು ಉಳ್ಸಿದ್ರೆ ನಾವು ಉಳ್ಕೋತಿವಿ. ನಾವ್ ಉಳ್ಕಂಡ್ರೆ ಸಾಯೋ ತನಕ ವರ್ಷಕ್ಕೊಂದ್ಸಲ ನಿಂಗ್ ಪೂಜೆ ಮಾಡ್ತಿವಿ. ಬಲಿ ಕೊಡ್ತೀವಿ. ನಮ್ಮನ್ನೆಲ್ಲಾ ನೀನೇ ಕಾಪಾಡ್ಬೇಕು ತಾಯಿ’ ಅನ್ನುತ್ತಾ ಪ್ರಾರ್ಥಿಸುವ ಕಾಡಿನ ಜನ ಕಾಡಿಗೆ, ಈ ಭೂಮಿಗೆ ನೀಡುವ ಬೆಲೆ, ಪ್ರಾಮುಖ್ಯತೆ ಎಷ್ಟು ಅನ್ನುವುದನ್ನು ಗಮನಿಸಬೇಕು ನಾವು.
ಹೀಗೆ ಬಾಲ್ಯದಿಂದಲೂ ಕಾಡಿಗೆ ಸಮೀಪದ ಊರುಗಳಲ್ಲೇ ಬದುಕಿರುವ ನಾನು, ಕೊಡಗಿನ ಕಾಡುಗಳನ್ನು ಅತೀ ಹೆಚ್ಚು ಪ್ರೀತಿಸಿದ್ದೇನೆ. ಅರಣ್ಯ ಇಲಾಖೆಗೆ ಸೇವೆಗೆ ಸೇರಿ 17 ವರ್ಷಗಳು ಕಳೆದವು. ಅಲ್ಲಿಂದಲೂ ಸಾಕಷ್ಟು ಅಧಿಕಾರಿಗಳಿಂದ ಅರಣ್ಯ ಸಂರಕ್ಷಣೆ ಬಗ್ಗೆ ನಿರ್ವಹಣೆ ಬಗ್ಗೆ ಕಾನೂನುಗಳ ನಿಯಮಗಳ ಮಾಹಿತಿ ಪಡೆದಿದ್ದೇನೆ, ಕಲಿತಿದ್ದೇನೆ. ಇಷ್ಟು ವರ್ಷ ಕಳೆದರೂ ಕಳೆದ ನಾಲ್ಕೈದು ವರ್ಷಗಳಿಂದ ಪ್ರತೀ ವರ್ಷ ಪ್ರಕೃತಿ ನಮ್ಮ ಕಡೆಗೆ ತೋರುತ್ತಿರುವ ಅಸಮಾಧಾನ ಕಂಡಾಗ ತೋಲಣ್ಣನ ಮಾತುಗಳು ನೆನಪಾಗುತ್ತದೆ. ಆದರೆ ತೋಲಣ್ಣನಂಥಾ ಮತ್ತೊಬ್ಬ ಮನುಷ್ಯ ಮಾತ್ರ ಸಿಗಲೇ ಇಲ್ಲ.
* ಪರಿಚಯ : ಸದ್ಯ ಕೊಡಗು ಜಿಲ್ಲೆಯ ಸೋಮವಾರಪೇಟೆ ಅರಣ್ಯ ವಲಯ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿ.ಕೆ. ವಿನೋದ್ ಕುಮಾರ್ ಮೂಲತಃ ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲೂಕಿನ ಶಿವಕೇರಿಯವರು. ಪಕ್ಷಿ ಛಾಯಾಗ್ರಹಣ ಇವರ ಹವ್ಯಾಸ. ಹಕ್ಕಿ ಚಿತ್ರಗಳ ಜೊತೆಗೆ ಮ್ಯಾಕ್ರೋ ಛಾಯಾಗ್ರಹಣದಲ್ಲೂ ಇವರಿಗೆ ಆಸಕ್ತಿ.
ಇದನ್ನೂ ಓದಿ : Earth Day 2021:ಬಂದ ಬಾಗಿಲು ಮಣ್ಣು; ಬಿಡುವ ಬಾಗಿಲು ಮಣ್ಣು ನಡುವೆ ಕಾಪಾಡುವುದು ತಾಯ ಕಣ್ಣು