SSLC
ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದರೆ ಅದು 10ನೇ ತರಗತಿ ಅಂದರೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಸಿಗುವ ಅಂಕಪಟ್ಟಿ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವಪೂರ್ಣವಾದ ದಾಖಲೆಯಾಗಿದೆ. ಹೆಸರು, ಜನ್ಮ ದಿನಾಂಕ ಪರಿಶೀಲಿಸಲು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅಂಕಪಟ್ಟಿಯನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಪ್ರಮಾಣ ಪತ್ರ ಅತ್ಯವಶ್ಯಕ. ಅದೇ ರೀತಿ ಉದ್ಯೋಗ, ಸರ್ಕಾರದ ಸೌಲಭ್ಯಗಳು ಪಡೆಯಬೇಕಾದರೆ, ಇನ್ನೂ ಅನೇಕ ರೀತಿಯ ಕೆಲಸ ಕಾರ್ಯಗಳಿಗೆ ಈ ಪ್ರಮಾಣ ಪತ್ರ ಬೇಕೇ ಬೇಕು. ಇಷ್ಟೆಲ್ಲಾ ಮಹತ್ವವುಳ್ಳ ಪ್ರಮಾಣ ಪತ್ರ ಪಡೆಯಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುವ 10ನೇ ತರಗತಿ ಉತ್ತೀರ್ಣರಾಗಬೇಕು. ಈ ಪರೀಕ್ಷೆ ಪ್ರತಿ ವರ್ಷ ನಡೆಯುತ್ತದೆ. ಇದು ಪಬ್ಲಿಕ್ ಪರೀಕ್ಷೆಯಾಗಿರುವುದರಿಂದ ಬಿಗಿ ಬಂದೋಬಸ್ತ್ನಲ್ಲಿ ನಡೆಸಲಾಗುತ್ತದೆ. ಆಯ್ದು ಕೊಂಡ ವಿಷಯಗಳ ಆಧಾರದ ಮೇಲೆ ಪರೀಕ್ಷೆಗಳು ನಡೆಯುತ್ತವೆ. ಆಯಾ ಶಾಲೆಗಳು ಕಳುಹಿಸಿದ ಮಾಹಿತಿ ಆಧಾರದ ಮೇಲೆ ವಿದ್ಯಾರ್ಥಿಗಳ ಹೆಸರಿನ ಮೇಲೆ ಹಾಲ್ ಟಿಕೆಟ್ ನೀಡಲಾಗುತ್ತೆ. ಆ ಹಾಲ್ ಟಿಕೆಟ್ ಇದ್ದರೆ ಮಾತ್ರ ಪರೀಕ್ಷೆ ಬರೆಯಲು ಅನುಮತಿ ಇರುತ್ತದೆ. ಕಾಲೇಜು ಮೆಟ್ಟಿಲು ಹತ್ತಲು ಈ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಬರುವ ಮೊದಲ ಘಟ್ಟವನ್ನು ಎಸ್ಎಸ್ಎಲ್ಸಿ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ