SSLC ಪರೀಕ್ಷೆಗೆ ಹೊಸ ಗೈಡ್ಲೈನ್ಸ್ ಪ್ರಕಟ: ವಿದ್ಯಾರ್ಥಿ, ಶಿಕ್ಷಕರಿಗೆ ಖಡಕ್ ಸೂಚನೆ
ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಮ್ಮ ಶಾಲೆಗಳ ಫಲಿತಾಂಶ ಹೆಚ್ಚಳಕ್ಕೆ ಕೆಲ ಶಾಲಾ ಮುಖ್ಯಶಿಕ್ಷಕರು ಪ್ರಯತ್ನಿಸಿದ್ದರು. ಇದಕ್ಕಾಗಿ ಪೂರಕವಾಗಿ ವಿದ್ಯಾರ್ಥಿಗಳನ್ನು ತಯಾರಿಗೊಳಿಸುತ್ತಿದ್ದ ಶಾಲೆಗಳು, ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ತಾವಾಗಿಯೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಶಿಕ್ಷಣ ಇಲಾಖೆ ಅಲರ್ಟ್ ಆಗಿದ್ದು, ಪರೀಕ್ಷೆಯ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.

ಬೆಂಗಳೂರು, (ಜನವರಿ 19): ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ (sslc preparatory exam) ಪ್ರಶ್ನಿ ಪತ್ರಿಕೆ ಸೋರಿಕೆ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆ (Karnataka Education Department) ಎಚ್ಚೆತ್ತುಕೊಂಡಿದ್ದು, ಮುಖ್ಯ ಪರೀಕ್ಷೆಗೆ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧಿಸಲಾಗಿದೆ. ಇದೀಗ ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಲ್ಲದೇ 2 ಹಾಗೂ 3ನೇ ಪರೀಕ್ಷೆ ಆಯುಕ್ತರ ನೇತೃತ್ವದಲ್ಲಿ ನಡೆಯಲಿವೆ.
ಹೊಸ ಮಾರ್ಗಸೂಚಿಯಲ್ಲೇನಿದೆ?
ಈ ಹಿಂದಿನ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಮಂಡಳಿ ಮೌಲ್ಯ ನಿರ್ಣಯ ಮಂಡಳಿ ನೇತೃತ್ವದಲ್ಲಿ ನಡೆಸಲಾಗಿತ್ತು. ಆದ್ರೆ, ಇದೀಗ ಹೊಸ ಗೈಡ್ಲೈನ್ಸ್ ಪ್ರಕಾರ 2 ಹಾಗೂ 3ನೇ ಪರೀಕ್ಷೆ ಆಯುಕ್ತರ ನೇತೃತ್ವದಲ್ಲಿ ನಡೆಯಲಿದ್ದು, ಡಿಡಿಪಿಐ ಹಾಗೂ ಬಿಇಒಗಳಿಗೆ ಪರೀಕ್ಷೆಯ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ: SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್
ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮೊಬೈಲ್ ತರುವಂತಿಲ್ಲ. ಜೊತೆಗೆ ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ. ಇನ್ನು ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯಹಾರ ನಡೆಸದಂತೆ ಖಡಕ್ ಸೂಚನೆ ನೀಡಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಆಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಪ್ರಶ್ನೆಪತ್ರಿಕೆ ಮುಖ್ಯೋಪಾಧ್ಯಾಯರೇ ಡೌನ್ಲೋಡ್ ಮಾಡಬೇಕು. ಜೊತೆಗೆ ಪ್ರಶ್ನೆಪತ್ರಿಕೆ ಗೌಪ್ಯತೆ ಕಾಪಾಡಬೇಕು ಹಾಗೇ ಪ್ರಾಂಶುಪಾಲರು ಸಹ ಪರೀಕ್ಷಾ ಕೇಂದ್ರಗಳಿಗೆ ಭೇಟಿ ಪರಿಶೀಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಲ್ಲಿ ಖಡಕ್ ಆಗಿ ತಿಳಿಸಲಾಗಿದೆ.
ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಮಾಡಲಾಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಮಾಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯವನ್ನು ಹಲವು ಶಾಲೆಗಳು ಎಸಗಿವೆ. ಆದರೆ ಇದುವರೆಗೆ ಆರು ಶಿಕ್ಷಕರು ಮಾತ್ರ ಪತ್ತೆಯಾಗಿದ್ದಾರೆ. ಪರೀಕ್ಷೆಗೂ ಮೂರು ಗಂಟೆಗಳಿಗೂ ಮುನ್ನ ಪ್ರಶ್ನೆ ಪತ್ರಿಕೆಗಳ ಫೋಟೋ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು.
ಇದನ್ನೂ ಓದಿ: SSLC, 2nd PUC Exam 2026 TimeTable: ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಪ್ರಶ್ನೆ ಪತ್ರಿಕೆ ಮಾರಾಟಕ್ಕಾಗಿ ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್ 32’ ಹಾಗೂ ‘ಡೆಲ್ಟಾ ಹ್ಯಾಕರ್’ ಸೇರಿದಂತೆ 8ಕ್ಕೂ ಅಧಿಕ ಖಾತೆಗಳನ್ನು ತೆರೆದಿದ್ದರು. ಅಲ್ಲದೆ ಟೆಲಿಗ್ರಾಂ ಹಾಗೂ ವಾಟ್ಸಪ್‌ನಲ್ಲಿ ಗ್ರೂಪ್ ರಚಿಸಿಕೊಂಡು ಸಹ ಕೆಲವರು ಮಾರಾಟ ಮಾಡಿದ್ದರು. ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮಾಹಿತಿ ಆಧರಿಸಿ ರಾಮನಗರ, ಉಡುಪಿ, ಶಿವಮೊಗ್ಗ ಹಾಗೂ ತುಮಕೂರು ಸೇರಿದಂತೆ 10 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದರು.