ಸೋನು ನಿಗಂಗೆ ವಿವಾದಗಳು ಹೊಸದಲ್ಲ, ಇಲ್ಲಿದೆ ಪಟ್ಟಿ
Sonu Nigam: ಗಾಯಕ ಸೋನು ನಿಗಂ ಕನ್ನಡದ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ‘ಕನ್ನಡ, ಕನ್ನಡ ಇದರಿಂದಲೇ ಪಹಲ್ಗಾಮ್ ದಾಳಿ ಆಗಿದ್ದು’ ಎಂದಿದ್ದಾರೆ. ಆ ಮೂಲಕ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಸೋನು ನಿಗಂ ಅವರ ಈ ಹೇಳಿಕೆಗೆ ಕನ್ನಡಿಗರ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಗೆಂದು ಸೋನು ನಿಗಂಗೆ ಈ ರೀತಿಯ ವಿವಾದ ಇದು ಮೊದಲೇನೂ ಅಲ್ಲ. ಇಲ್ಲಿದೆ ಪಟ್ಟಿ...

ಸೋನು ನಿಗಂ (Sonu Nigam) ಭಾರತ ಚಿತ್ರರಂಗದ ಅದ್ಭುತ ಹಿನ್ನೆಲೆ ಗಾಯಕ. ಅವರಂತೆ ಮಧುರವಾಗಿ ಹಾಡಬಲ್ಲ ಹಾಡುಗಾರರು ಭಾರತದಲ್ಲಿ ಬೆರಳೆಣಿಕೆಯಷ್ಟೆ. ಇದೇ ಕಾರಣಕ್ಕೆ ಈ ವರೆಗೆ ಅವರು ಹಿಂದಿ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ದಶಕಗಳ ಬಳಿಕ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಕನ್ನಡದಲ್ಲಿಯಂತೂ ಅವರು ಹಲವು ಅದ್ಭುತವಾದ ಹಾಡುಗಳನ್ನು ಹಾಡಿದ್ದಾರೆ. ಆದರೆ ಈಗ ಸೋನು ನಿಗಂ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹಾಗೆಂದು ಸೋನು ನಿಗಂಗೆ ವಿವಾದಗಳು ಹೊಸದೇನೂ ಅಲ್ಲ. ಈ ಹಿಂದೆ ಸಹ ಅವರು ಕೆಲವು ವಿವಾದಗಳಿಗೆ ಕಾರಣವಾಗಿದ್ದಾರೆ. ಇಲ್ಲಿವೆ ಅವುಗಳ ಪಟ್ಟಿ…
ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಕೊಟ್ಟ ಕಾರಣಕ್ಕೆ ಭಾರತದ ಕಾನ್ಸುಲೇಟ್ ಜನರಲ್ ಕಡೆಯಿಂದ ಬ್ಲಾಕ್ ಲಿಸ್ಟ್ ಆದ ಕಲಾವಿದರೊಟ್ಟಿಗೆ ಸಂಬಂಧ ಇಟ್ಟುಕೊಂಡ, ಅವರೊಟ್ಟಿಗೆ ಕೆಲಸ ಮಾಡಿದ ಆರೋಪ ಸೋನು ನಿಗಂ ಮೇಲೆ 2022 ರಲ್ಲಿ ಬಂದಿತ್ತು. ಜನಪ್ರಿಯ ಇವೆಂಟ್ ಆರ್ಗನೈಸರ್ ರಾಜೇಂದ್ರ ಸಿಂಗ್ ಎಂಬುವರಿಗೆ ಸೋನು ನಿಗಂ ಒತ್ತಾಯ ಹೇರಿ ಭಯೋತ್ಪಾದಕ ಸಂಘಟನೆಗಳೊಟ್ಟಿಗೆ ನಂಟು ಹೊಂದಿರುವ ರಾಕಿ ಮತ್ತು ರೆಹಾನ್ ಸಿದ್ಧಿಖಿ ಜೊತೆ ಕೆಲಸ ಮಾಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದರು. ಇಡಿ ಮತ್ತು ಐಟಿ ಇಲಾಖೆ ಸೋನು ನಿಗಂ ಅವರ ಮೇಲೆ ದಾಳಿ ಮಾಡಿ, ದೇಶವಿರೋಧಿ ಚಟುವಟಿಕೆಯಲ್ಲಿ ನಿರತರಾಗಿರು ಜೊತೆಗೆ ಸೋನು ನಿಗಂ ಹಣಕಾಸು ವ್ಯವಹಾರ ನಡೆಸುತ್ತಿರುವ ಕುರಿತು ತನಿಖೆ ನಡೆಸಬೇಕು ಎಂದು ರಾಜೇಂದ್ರ ಸಿಂಗ್ ಒತ್ತಾಯಿಸಿದ್ದರು.
2017 ರಲ್ಲಿ ಸೋನು ನಿಗಂ ‘ಆಜಾನ್’ ಬಗ್ಗೆ ಮಾಡಿದ್ದ ಟ್ವೀಟ್ ವಿವಾದ ಹುಟ್ಟುಹಾಕಿತ್ತು. ಬೆಳಿಗಿನ ಜಾವ ಮಸೀದಿಗಳು ಮೈಕ್ನಲ್ಲಿ ಹಾಕುವ ‘ಆಜಾನ್’ ಅನ್ನು ಬ್ಯಾನ್ ಮಾಡಬೇಕು ಎಂದು ಸೋನು ನಿಗಂ ಹೇಳಿದ್ದರು. ಅಲ್ಲದೆ, ‘ಆಜಾನ್’ ಹಾಕುವುದನ್ನು ಗುಂಡಾಗಿರಿ ಎಂದು ಕರೆದಿದ್ದರು. ಇದು ವಿವಾದ ಎಬ್ಬಿಸಿತ್ತು. ಆ ಸಮಯದಲ್ಲಿ ಹಿಂದೂಪರ ಸಂಘಟನೆಗಳಿಂದ ಸೋನು ನಿಗಂಗೆ ಬೆಂಬಲ ಸಹ ದೊರೆತಿತ್ತು. ಸೋನು ನಿಗಂ ತಲೆ ಬೋಳಿಸಿದವರಿಗೆ 10 ಲಕ್ಷ ಬಹುಮಾನವನ್ನು ಮುಸ್ಲಿಂ ಸಂಘಟನೆಯೊಂದು ಘೋಷಿಸಿತ್ತು, ಆಗ ಸೋನು ನಿಗಂ ಖುದ್ದಾಗಿ ಹೋಗಿ ಮುಸ್ಲಿಂ ವ್ಯಕ್ತಿಯೊಬ್ಬರಿಂದ ತಲೆ ಬೋಳಿಸಿಕೊಂಡು ಬಂದು ಹಣ ನೀಡುವಂತೆ ಹೇಳಿದ್ದರು.
ಇದನ್ನೂ ಓದಿ:ಸೋನು ನಿಗಮ್ ಕನ್ನಡ ವಿರೋಧಿ ಹೇಳಿಕೆಗೆ ತೀವ್ರ ವಿರೋಧ, ಯಾರು ಏನು ಹೇಳಿದರು?
ಸೋನು ನಿಗಂ ತಮ್ಮ ಮಗ ಗಾಯಕ ಆಗುವುದು ತಮಗೆ ಇಷ್ಟ ಇಲ್ಲ ಎಂದಿದ್ದರು. ಒಂದೊಮ್ಮೆ ಆತ ಗಾಯಕ ಆದರೂ ಸಹ ಭಾರತದಲ್ಲಿ ಗಾಯಕ ಆಗುವುದು ಬೇಡ ಎಂದು ದೇಶದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದರು. ಆಗಲೂ ಸಹ ಸೋನು ನಿಗಂ ಹೇಳಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
2020ರಲ್ಲಿ ಸುಶಾಂತ್ ಸಿಂಗ್ ನಿಧನದ ಬಳಿಕ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದ ಸೋನು ನಿಗಂ, ಸಂಗೀತ ಕ್ಷೇತ್ರದಲ್ಲಿಯೂ ಸಹ ಇದೇ ರೀತಿಯ ನೆಪೊಟಿಸಮ್, ಫೇವರಿಸಮ್ ಇದೆಯೆಂದಿದ್ದರು. ತಮಗೂ ಸಹ ಕೆಲ ಮ್ಯೂಸಿಕ್ ಸಂಸ್ಥೆಗಳು ಸಾಕಷ್ಟು ಕಾಟ ಕೊಟ್ಟಿವೆ ಎಂದಿದ್ದರು. ಎರಡು ಮ್ಯೂಸಿಕ್ ಕಂಪೆನಿಗಳ ಕೈಯಲ್ಲಿ ಇಡೀ ಸಂಗೀತ ಉದ್ಯಮ ಇದೆ ಎಂದಿದ್ದರು. ಟಿ-ಸೀರೀಸ್ನ ಭೂಷಣ್ ಕುಮಾರ್ ವಿರುದ್ಧ ಕೆಲ ಆರೋಪಗಳನ್ನು ಸಹ ಮಾಡಿದ್ದರು. ಬಳಿಕ ಭೂಷಣ್ ಕುಮಾರ್ ಪತ್ನಿ ಸಹ ಸೋನು ನಿಗಂ ಅವರ ಹಳೆಯ ವಿಡಿಯೋ ಹಾಕಿ ಟಾಂಗ್ ಕೊಟ್ಟಿದ್ದರು.
ಸೋನು ನಿಗಮ್ ಕನ್ನಡ ವಿರೋಧಿ ಹೇಳಿಕೆ ವಿಡಿಯೋ
2023 ರ ಡಿಸೆಂಬರ್ನಲ್ಲಿ ಪಾಕಿಸ್ತಾನಿ ಗಾಯಕ ಒಮೆರ್ ನದೀಮ್, ಸೋನು ನಿಗಂ ಮೇಲೆ ಕೃತಿಚೌರ್ಯದ ಆರೋಪ ಮಾಡಿದ್ದರು. ಒಮೆರ್ ನದೀಮ್ ಅವರ ‘ಏ ಖುದಾ’ ಹಾಡನ್ನು ಕದ್ದು ಸೋನು ನಿಗಂ ‘ಸುನ್ ಝರಾ’ ಹಾಡು ಮಾಡಿದ್ದಾರೆ ಎಂದು ಒಮೆರ್ ನದೀಮ್ ಆರೋಪಿಸಿದ್ದರು. ಬಳಿಕ ಸೋನು ನಿಗಂ ಕ್ಷಮೆ ಸಹ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಒಮೆರ್, ನಾನು ನಿಮ್ಮ ಅಭಿಮಾನಿ, ಚಿಕ್ಕಂದಿನಿಂದ ನಿಮ್ಮ ಹಾಡು ಕೇಳಿ ಬೆಳೆದಿದ್ದೀನಿ, ನಿಮ್ಮ ಕ್ಷಮೆಗೆ ಧನ್ಯವಾದ ಎಂದು ವಿವಾದ ಅಂತ್ಯಗೊಳಿಸಿದ್ದರು.
ಈಗ ಬೆಂಗಳೂರಿನ ಕಾಲೇಜೊಂದರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಸೋನು ನಿಗಂ, ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಕೇಳಿದಾಗ ಉದ್ದಟತನದಿಂದ ಮಾತನಾಡಿರುವುದಲ್ಲದೆ, ಕನ್ನಡ, ಕನ್ನಡ ಇದರಿಂದಲೇ ಪಹಲ್ಗಾಮ್ ದಾಳಿ ಆಗಿದ್ದು’ ಎಂದಿದ್ದಾರೆ. ಇದು ಕನ್ನಡಿಗರಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Fri, 2 May 25




