ಸೋನು ನಿಗಮ್ ಕನ್ನಡ ವಿರೋಧಿ ಹೇಳಿಕೆಗೆ ತೀವ್ರ ವಿರೋಧ, ಯಾರು ಏನು ಹೇಳಿದರು?
Sonu Nigam: ಸೋನು ನಿಗಮ್ ಅವರು ಕನ್ನಡ ಹಾಡು ಹಾಡಲು ಒತ್ತಾಯಿಸಿದ ಯುವಕನಿಗೆ ಪಹಲ್ಗಾಂ ದಾಳಿಯನ್ನು ಉಲ್ಲೇಖಿಸಿ ಅವಮಾನಕರ ಹೇಳಿಕೆ ನೀಡಿದ್ದಾರೆ. ಇದರಿಂದ ಕನ್ನಡಿಗರಲ್ಲಿ ಆಕ್ರೋಶ ಉಂಟಾಗಿದೆ. ಚಿತ್ರರಂಗ, ಕನ್ನಡಪರ ಸಂಘಟನೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸೋನು ನಿಗಮ್ ಕನ್ನಡದಿಂದ ಗಳಿಸಿದ ಹಣ, ಗೌರವವನ್ನು ಮರೆತು ಈ ರೀತಿ ವರ್ತಿಸಿರುವುದು ಖಂಡನೀಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಗಾಯಕ ಸೋನು ನಿಗಮ್ (Sonu Nigam), ನಿನ್ನೆ ಮೊನ್ನೆಯ ವರೆಗೂ ನಾನು ಕನ್ನಡದ ಕಂದ ಎಂದುಕೊಂಡಿದ್ದರು. ಇದೇ ಕಾರಣಕ್ಕೆ ಲಕ್ಷಾಂತರ ಅಭಿಮಾನಿಗಳನ್ನು ಸಹ ಕರ್ನಾಟಕದಲ್ಲಿ ಹೊಂದಿದ್ದರು. ಅವರ ಲೈ ಶೋ ಟಿಕೆಟ್ಗಳು ಬಿಸಿ ದೋಸೆಯಂತೆ ಕರ್ನಾಟಕದಲ್ಲಿ ಮಾರಾಟವಾಗುತ್ತಿದ್ದವು. ರಾಜ್ಯದ ಪ್ರತಿ ಗಾಯಕ, ಸಂಗೀತ ನಿರ್ದೇಶಕ ಹಿರಿಯಣ್ಣನ ರೀತಿ ಆದರ, ಗೌರವ ತೋರಿ ಅವರನ್ನು ಸಿನಿಮಾಗಳಿಗೆ ಹಾಡಲು ಕರೆಸುತ್ತಿದ್ದರು. ಕನ್ನಡದಿಂದ ಹಣ, ಗೌರವ ಎಲ್ಲವನ್ನೂ ಪಡೆಯುತ್ತಿದ್ದ ಸೋನು ನಿಗಮ್ ಈಗ ಹಠಾತ್ತನೆ ತಮ್ಮ ನಿಜ ಮುಖವನ್ನು ಕನ್ನಡಿಗರಿಗೆ ತೋರಿಸಿದ್ದಾರೆ. ಕನ್ನಡಿಗರನ್ನು ಭಯೋತ್ಪಾದಕ ನಡವಳಿಕೆಯವರು ಎಂದು ಪರೋಕ್ಷವಾಗಿ ಕರೆದಿದ್ದಾರೆ.
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಯಥಾವತ್ತು ತಮ್ಮ ಹಿಂದಿ ಹಾಡುಗಳನ್ನು ಸೋನು ನಿಗಮ್ ಹಾಡುತ್ತಿದ್ದರು. ಈ ವೇಳೆ ಒಬ್ಬ ಯುವಕ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ. ಕೂಡಲೇ ಅನವಶ್ಯಕವಾಗಿ ಸಿಟ್ಟಾದ ಸೋನು ನಿಗಮ್, ‘ಹೀಗೆ ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು’ ಎಂದಿದ್ದಾರೆ ಸೋನು ನಿಗಮ್.
ಸೋನು ನಿಗಮ್ ಅವರ ಈ ನೀಚ, ದಾರ್ಷ್ಯದ ಹೇಳಿಕೆಗೆ ಕನ್ನಡಿಗರು ಅತ್ಯಂತ ಕಠಿಣವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದವರು, ಕನ್ನಡಪರ ಸಂಘಟನೆಗಳವರು ಸೋನು ನಿಗಂ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಖ್ಯಾತ ಚಿತ್ರಕತೆಗಾರ ಹಾಗೂ ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ ಅವರು ಸೋನು ನಿಗಂ ಹೇಳಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, ‘ಇವತ್ತು ವೇದಿಕೆಯ ಮೇಲಿದ್ದ ಈತನನ್ನು ಕನ್ನಡ ಹಾಡು ಹಾಡೆಂದು ಕೇಳಿದಾಗ ‘ ಪೆಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದು ಇದೇ ಕಾರಣಕ್ಕೆ’ ಎಂಬ ಬಾಲಿಶ ಹೇಳಿಕೆ ನೀಡಿದ್ದಾನೆ. ವರುಷಗಳಿಂದ ಕನ್ನಡಿಗರು ಯಾವ ಕಂಠವನ್ನು ಕೊಂಡಾಡುತ್ತಿದ್ದರೋ ಇಂದು ಅದೇ ಕಂಠ ತುಚ್ಚವಾಗಿ ಅಪಮಾನಿಸಿದೆ. ಇಲ್ಲಿನ ಜನರು ತೋರೋ ಪ್ರೀತಿ, ನೀಡೋ ಗೌರವ ಕಂಡು ವಿಶ್ವವಿಖ್ಯಾತ ಗಾಯಕ ಮೇರುಪ್ರತಿಭೆ ಶ್ರೀ ಎಸ್ ಪಿ ಬಾಲ ಸುಬ್ರಮಣ್ಯಮ್ ರವರು ‘ ನನಗೆ ಮುಂದಿನ ಜನುಮ ಅಂತ ಇದ್ದರೆ ಅದು ಕನ್ನಡ ನೆಲದಲ್ಲಿಯೇ ಇರಲಿ ನಾನು ಕನ್ನಡಿಗನಾಗಿಯೇ ಹುಟ್ಟಬೇಕು ‘ ಎಂದು ನುಡಿದಿದ್ದರು. ಇದು ಈ ನೆಲದ ಶ್ರೇಷ್ಠತೆ ಮತ್ತು ಮಹಾನುಭಾವ ಎಸ್ ಪಿ ಬಾಲ ಸುಬ್ರಮಣ್ಯಮ್ ರವರ ಜೇಷ್ಠತೆ. ಇದೆಲ್ಲಾ ಈ ಬಾಡಿಗೆ ಗಾಯಕ ಸೋನು ನಿಗಮ್ಮನಿಗೆ ಹೇಗೆ ತಾನೇ ತಿಳಿಯಬೇಕು. ಧಿಕ್ಕಾರವಿರಲಿ ಈ ಅಪ್ರಭುದ್ದನ ಅರಿವಿಗೆ’ ಎಂದು ಬರೆದುಕೊಂಡಿದ್ದಾರೆ.
ಸೋನು ನಿಗಮ್ ಕನ್ನಡ ವಿರೋಧಿ ಹೇಳಿಕೆ ವಿಡಿಯೋ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಹ ಸೋನು ನಿಗಂ ಹೇಳಿಕೆಯನ್ನು ಖಂಡಿಸಿದ್ದು, ‘ಕನ್ನಡ ಭಾಷೆಗೂ ಪೆಹಲ್ಗಾಂ ಘಟನೆಗೂ ಸಂಬಂಧ ಕಲ್ಪಿಸಿದ ಗಾಯಕ ಸೋನು ನಿಗಂ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವೇ ಕರ್ನಾಟಕಕ್ಕೆ ಬರುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಸೋನು ನಿಗಮ್ ವಿರುದ್ಧ ಕಾಪಿ ರೈಟ್ ಕೇಸ್ ಹಾಕಲು ಮುಂದಾಗಿದ್ದ ಎಪಿಜೆ ಅಬ್ದುಲ್ ಕಲಾಂ
ಇನ್ನು ಕರವೇ ಅಧ್ಯಕ್ಷ ನಾರಾಯಣಗೌಡ ಸಹ ಸಾಮಾಜಿಕ ಜಾಲತಾಣದ ಮೂಲಕ ಸೋನು ನಿಗಂ ಅವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ‘ಕನ್ನಡಿಗರ ಅನ್ನ ತಿಂದು ಕೊಬ್ಬಿರುವ ಸೋನು ನಿಗಂ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾನೆ. ಇನ್ನು ಮುಂದೆ ಇಲ್ಲಿ ಹೇಗೆ ಶೋ ಮಾಡುತ್ತಾನೋ ನೋಡೋಣ. ಕನ್ನಡದ ನಿರ್ಮಾಪಕರು ಇನ್ನು ಮುಂದೆ ಈತನಿಂದ ಹಾಡು ಹಾಡಿಸಬಾರದು. ಒಂದು ವೇಳೆ ಯಾರಾದರೂ ಆ ದುಸ್ಸಾಹಸ ಮಾಡಿದರೆ ಅದರ ಫಲ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಸಮುದ್ರತಾ ಎಂಬುವರೊಬ್ಬರು ಮಾಡಿರುವ ಪೋಸ್ಟ್ನಲ್ಲಿ ‘ನಾರ್ತಿಗಳ ಹಣೆಬರಹನೇ ಇಷ್ಟು. ಇಲ್ಲಿಯವರು ತಲೆಮೇಲೆ ಹೊತ್ಕೊಂಡು ಮೆರೆಸೋದೇ ಬಂತು. ಮೊನ್ನೆ ಧ್ರುವ್ ರಾಠೀ, ಇವತ್ತು ಸೋನು ನಿಗಂ. ನಾಳೆ ಮತ್ತೊಬ್ಬ ಮಾತಾಡ್ತಾನೆ. ಪಹಲ್ಗಾಂ ನ ಘಟನೆಯ ಧಾರ್ಮಿಕ ಕೋದ ಪರ ವಿರೋಧ ಚರ್ಚೆಯಲ್ಲಿ ಅವನೊಬ್ಬ ಶೀಲಾದಿತ್ಯ ಏನಾದ ಅಂತನೂ ನೆನಪಿಲ್ಲ ಇಲ್ಲಿಯವರಿಗೆ. ಇದೇ ಮಾತನ್ನ ತಮಿಳು ನಾಡು ಅಥವಾ ಬೇರೆ ರಾಜ್ಯದಲ್ಲಿ ಹೇಳೋ ಧೈರ್ಯ ಮಾಡ್ತಿದ್ರಾ ಸೋನು ನಿಗಂ ಅಥವಾ ಬೇರೆ ಯಾರಾದ್ರೂ?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:47 am, Fri, 2 May 25




