‘ಅಖಂಡ 2’ ರಿಲೀಸ್ ರದ್ದಾಗಲು ನಿಜ ಕಾರಣವೇನು?
Nandamuri Balakrishna: ನಂದಮೂರಿ ಬಾಲಕೃಷ್ಣ ನಟಿಸಿದ್ದ ‘ಅಖಂಡ 2’ ಸಿನಿಮಾ ಇಂದು (ಡಿಸೆಂಬರ್ 05) ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾದ ಬಿಡುಗಡೆ ರದ್ದಾಗಿದೆ. ಈ ಸಿನಿಮಾವನ್ನು 14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸಿತ್ತು. ಸಿನಿಮಾ ಬಿಡುಗಡೆ ರದ್ದಾದ ಬಗ್ಗೆ ನಿಖರ ಕಾರಣವನ್ನು ನಿರ್ಮಾಣ ಸಂಸ್ಥೆ ತಿಳಿಸಿರಲಿಲ್ಲ. ಆದರೆ ಇಲ್ಲಿದೆ ನೋಡಿ ನಿಖರ ಕಾರಣ...

ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಅಖಂಡ 2’ ಇಂದು (ಡಿಸೆಂಬರ್ 05) ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಬಿಡುಗಡೆ ಆಗಲಿಲ್ಲ. ಬಾಲಕೃಷ್ಣ ಅಂಥಹಾ ಸೂಪರ್ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಇಂಥಹಾ ಪರಿಸ್ಥಿತಿ ಬಂದಿದ್ದು ಅವರ ವೈಯಕ್ತಿಕ ವರ್ಚಸ್ಸಿಗೆ ಪೆಟ್ಟು ಬಿದ್ದಂತಾಗಿದೆ. ಅದು ಮಾತ್ರವೇ ಅಲ್ಲದೆ, ಸಿನಿಮಾ ನೋಡಲು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗಿದೆ. ಸಿನಿಮಾ ನಿರ್ಮಾಣ ಸಂಸ್ಥೆ ‘ಅನಿವಾರ್ಯ’ ಕಾರಣದಿಂದ ಹೀಗಾಗಿದೆ ಎಂದಿದೆಯಾದರೂ ನಿಜವಾದ ಕಾರಣ ಬೇರೆಯೇ ಇದೆ.
‘ಅಖಂಡ 2’ ಸಿನಿಮಾವನ್ನು 14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್ ಹೆಸರಿನ ಸಂಸ್ಥೆ ನಿರ್ಮಾಣ ಮಾಡಿತ್ತು. ಪುನೀತ್ ರಾಜ್ಕುಮಾರ್ ನಟಿಸಿದ್ದ ಕನ್ನಡದ ಸಿನಿಮಾ ‘ಪವರ್’ ಸೇರಿದಂತೆ ಹಲವು ತೆಲುಗು ಸಿನಿಮಾಗಳನ್ನು ಈ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದೆ. ಈ ನಿರ್ಮಾಣ ಸಂಸ್ಥೆಯ ಕೆಲ ಸಿನಿಮಾಗಳು ಹಿಟ್ ಆದರೆ ಕೆಲವು ಫ್ಲಾಪ್ ಆಗಿವೆ. ಇದೀಗ ‘ಅಖಂಡ 2’ ಸಿನಿಮಾ ರದ್ದಾಗಲು ಈ ನಿರ್ಮಾಣ ಸಂಸ್ಥೆ ಉಳಿಸಿಕೊಂಡಿದ್ದ ಹಳೆಯ ಬಾಕಿ ಕಾರಣ ಎನ್ನಲಾಗುತ್ತಿದೆ.
14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್ ಸಂಸ್ಥೆ 10 ವರ್ಷಗಳ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದಿದ್ದರ ಪ್ರಭಾವ ಈಗ ‘ಅಖಂಡ 2’ ಮೇಲೆ ಆಗಿದೆ. 2014 ರಲ್ಲಿ ಬಿಡುಗಡೆ ಆಗಿದ್ದ ಮಹೇಶ್ ಬಾಬು ನಟನೆಯ ‘ನೇನೊಕ್ಕಡಿನೆ’ ಮತ್ತು ‘ಆಗಡು’ ಸಿನಿಮಾಗಳನ್ನು ಇದೇ 16 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡಿತ್ತು. ಆ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಫ್ಲಾಫ್ ಆಗಿದ್ದವು.
ಇದನ್ನೂ ಓದಿ:ಕೊನೆ ಕ್ಷಣದಲ್ಲಿ ರದ್ದಾಯ್ತು ಬಾಲಕೃಷ್ಣ ನಟನೆಯ ‘ಅಖಂಡ 2’ ರಿಲೀಸ್: ಕಾರಣ?
ಆ ಸಿನಿಮಾಗಳನ್ನು ಎರೋಸ್ ಎಂಟರ್ಟೈನ್ಮೆಂಟ್ ಸಂಸ್ಥೆ ವಿತರಣೆ ಮಾಡಿತ್ತು. ಆಗ ಎರಡೂ ಸಂಸ್ಥೆಗಳು ಸಿನಿಮಾ ವಿಷಯವಾಗಿ ಒಪ್ಪಂದ ಮಾಡಿಕೊಂಡಿದ್ದವು. ಸಿನಿಮಾ ಫ್ಲಾಫ್ ಆಗುತ್ತಲೆ 14 ರೀಲ್ಸ್ ಸಂಸ್ಥೆ ಒಪ್ಪಂದ ಮುರಿಯಿತು. ಬಳಿಕ ಎರೋಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತು. 2019ರಲ್ಲಿ ಪ್ರಕರಣದ ತೀರ್ಪು ಹೊರಬಿದ್ದು, 14 ರೀಲ್ಸ್ ಸಂಸ್ಥೆ ಬಡ್ಡಿ ಸಮೇತ 11 ಕೋಟಿ ರೂಪಾಯಿ ಹಣವನ್ನು ಎರೋಸ್ ಎಂಟರ್ಟೈನ್ಮೆಂಟ್ ಸಂಸ್ಥೆಗೆ ನೀಡಬೇಕು ಹಾಗೂ ‘ನೇನೊಕ್ಕಿಡಿನೆ’ ಮತ್ತು ‘ಆಗಡು’ ಸಿನಿಮಾದ ಎಲ್ಲ ಹಕ್ಕುಗಳನ್ನು ಎರೋಸ್ಗೆ ನೀಡಬೇಕು ಎಂದಿತು. ಬಳಿಕ ಮದ್ರಾಸ್ ಹೈಕೋರ್ಟ್ ಸಹ ಇದೇ ಆದೇಶವನ್ನು ಎತ್ತಿ ಹಿಡಿಯಿತು. ಬಳಿಕ 2021 ರಲ್ಲಿ ಸುಪ್ರೀಂಕೋರ್ಟ್ ಸಹ ಇದನ್ನೇ ಹೇಳಿತು. ಬಾಕಿ ತೀರುವ ವರೆಗೆ ಹೊಸ ಸಿನಿಮಾ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಎಂದು ಸಹ ಹೇಳಲಾಗಿತ್ತು.
ಆದರೆ 14 ರೀಲ್ಸ್ ಸಂಸ್ಥೆ ಬಾಕಿ ತೀರಿಸಲಿಲ್ಲ. ಈಗ ಬಡ್ಡಿ ಎಲ್ಲ ಬೆಳೆದು 28 ಕೋಟಿ ರೂಪಾಯಿಗಳಾಗಿದೆ. ಆದರೆ 14 ರೀಲ್ಸ್ ಸಂಸ್ಥೆ, 14 ರೀಲ್ಸ್ ಪಿಪಿಎಲ್ ಹೆಸರಿನ ಮತ್ತೊಂದು ಸಂಸ್ಥೆಯ ಅಡಿಯಲ್ಲಿ ‘ಅಖಂಡ 2’ ಸಿನಿಮಾ ನಿರ್ಮಿಸಿ ಬಿಡುಗಡೆಗೆ ಸಜ್ಜಾಗಿತ್ತು. ಇದನ್ನು ಮನಗಂಡ ಎರೋಸ್, ಆಗಸ್ಟ್ ತಿಂಗಳಲ್ಲಿಯೇ ನೋಟೀಸ್ ನೀಡಿತು. ಮದ್ರಾಸ್ ಹೈಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆದು ‘ಅಖಂಡ 2’ ಸಿನಿಮಾದ ಬಿಡುಗಡೆಗೆ ಅನುಮತಿಯನ್ನೂ ನೀಡಲಾಗಿತ್ತು. ಆದರೆ ಡಿವಿಷನ್ ಬೆಂಚ್, ಭಿನ್ನ ನಿಲುವು ತಳೆದು, ಈ ಪ್ರಕರಣವನ್ನು ಮತ್ತೆ ಪರಿಪೂರ್ಣವಾಗಿ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದಲ್ಲದೆ, ಆ ವರೆಗೆ ‘ಅಖಂಡ 2’ ಸಿನಿಮಾವನ್ನು ಬಿಡುಗಡೆ ಮಾಡದಂತೆ ತಡೆಯುವಂತೆ ಆದೇಶ ನೀಡಿತು. ಅದೇ ಕಾರಣಕ್ಕೆ ಈಗ ‘ಅಖಂಡ 2’ ಸಿನಿಮಾ ಬಿಡುಗಡೆ ರದ್ದಾಯ್ತು.
ಈಗ ಎರೋಸ್ ಮತ್ತು 14 ರೀಲ್ಸ್ ನಡುವಿನ ಹಣಕಾಸು ವಿವಾದ ಸಂಪೂರ್ಣವಾಗಿ ವಿಚಾರಣೆಗೆ ಒಳಪಡದ ಹೊರತು, ‘ಅಖಂಡ 2’ ಸಿನಿಮಾ ಬಿಡುಗಡೆ ಆಗುವುದು ಅನುಮಾನ. ಒಂದೊಮ್ಮೆ 14 ರೀಲ್ಸ್ ಸಂಸ್ಥೆ ಹಳೆಯ ಬಾಕಿಯನ್ನು ಚುಕ್ತಾ ಮಾಡಿದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




