ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗೋದು ಖಚಿತವೇ? ತೀವ್ರ ಕುತೂಹಲ ಹುಟ್ಟು ಹಾಕಿದ ನಡೆ
ಕರ್ನಾಟಕ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಚರ್ಚೆ ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಮಾಲೂರು ಮುಖಂಡರ ಪಕ್ಷ ಸೇರ್ಪಡೆ ಈಗ ಗಮನ ಸೆಳೆದಿದೆ. ಈಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರು, ಡಿಸೆಂಬರ್ 5: ಕರ್ನಾಟಕ ಕಾಂಗ್ರೆಸ್ (Congress) ರಾಜಕೀಯ ಮೇಲಾಟದಲ್ಲಿ ರೋಚಕ ತಿರುವು ಸಿಗುವ ಸಾಧ್ಯತೆ ಗೋಚರಿಸಿದೆ. ನಾಯಕತ್ವ ಬದಲಾವಣೆ ಚರ್ಚೆ ಒಂದೆಡೆಯಾದರೆ, ಕೆಪಿಸಿಸಿ ಅಧ್ಯಕ್ಷ ಪಟ್ಟವೂ ಬದಲಾಗುತ್ತದೆಯಾ ಎಂಬ ಚರ್ಚೆ ತೆರಮರೆಯಲ್ಲಿ ನಡೆಯುತ್ತಿದೆ. ಕೆಪಿಸಿಸಿ ಸಾರಥಿ ರೇಸ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇದ್ದಾರೆ. ಹೀಗಾಗಿ ಅಧ್ಯಕ್ಷ ಪಟ್ಟಕ್ಕಾಗಿ ಬೇಕಾದ ಎಲ್ಲಾ ತಯಾರಿಯನ್ನು ಅವರು ಮಾಡುತ್ತಿದ್ದಾರಾ? ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವುದು ಖಚಿತವಾಯಿತೇ ಎಂಬ ಅನುಮಾನಗಳಿಗೆ ಪುಷ್ಟಿ ನೀಡುವಂತಹ ಬೆಳವಣಿಗೆಗಳು ನಡೆದಿವೆ.
ಸತೀಶ್ ನೇತೃತ್ವದಲ್ಲಿ ‘ಕೈ’ ಹಿಡಿದ ಮಾಲೂರು ಮುಖಂಡರು!
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಲ್ಲ. ಕೋಲಾರ ಉಸ್ತುವಾರಿಯೂ ಅಲ್ಲ. ಆದರೂ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೋಲಾರದ ಮಾಲೂರು ತಾಲೂಕು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಗುರುವಾರವಷ್ಟೇ ಮಾಲೂರು ಮುಖಂಡ ಎನ್.ವೆಂಕಟರಾಮ್ ಎಂಬುವವರು ಸತೀಶ್ ಅವರ ಬೆಂಗಳೂರಿನ ಗೃಹ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ನಮ್ಮ ಜೊತೆ ಇದ್ದವರೇ ಅವರು ವಾಪಸ್ ಬಂದಿದ್ದಾರೆ ಅಷ್ಟೇ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್
ಕುರ್ಚಿ ಕಾಳಗದ ಮಧ್ಯೆ ಸತೀಶ್ ಜಾರಕಿಹೊಳಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಆ ಭೇಟಿ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಸತೀಶ್ ಬಳಿ ಕೊಟ್ಟ ಮಾತಿನ ಬಗ್ಗೆ ಡಿಕೆಶಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿತ್ತು. ಸದ್ಯ ಎಲ್ಲವೂ ಕೂಲ್ ಕೂಲ್ ಆಗಿರುವಾಗಲೇ ಮತ್ತೊಮ್ಮೆ ಸಚಿವ ಸತೀಶ್ ಜಾರಕಿಹೊಳಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಖಾಸಗಿ ಸ್ಥಳದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಏನಾದರೂ ಚರ್ಚೆ ಆಯಿತೇ ಎಂಬ ಪ್ರಶ್ನೆಗೆ ಸತೀಶ್ ಬೇರೆಯೇ ರೀತಿಯಲ್ಲಿ ಉತ್ತರಿಸಿದ್ದಾರೆ. ಮದುವೆಯಲ್ಲಿ ಇಬ್ಬರು ಭೇಟಿಯಾಗಿದ್ದೆವು ಅಷ್ಟೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ನಡುವೆ ಶುಕ್ರವಾರ ಬೆಳಗ್ಗೆ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಸುಮಾರು 1 ಗಂಟೆ ಚರ್ಚೆ ನಡೆಸಿದ್ದಾರೆ. ಡಿಕೆ ಸುರೇಶ್ ಕೂಡಾ ಸಹೋದರ ಡಿ ಕೆ ಶಿವಕುಮಾರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಡಿಕೆಶಿ ಬರುವ ಮೊದಲೇ ಸಿಎಂರಿಂದ KIADB ಕಟ್ಟಡ ಉದ್ಘಾಟನೆ
ಬೆಂಗಳೂರಿನ ಫ್ರೀಡಂಪಾರ್ಕ್ ಬಳಿ ಇರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಚೇರಿ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದರು. ಆದರೆ, ಡಿಕೆ ಶಿವಕುಮಾರ್ ಬರುವ ಮುನ್ನವೇ ಕಟ್ಟಡ ಉದ್ಘಾಟಿಸಿದ ಸಿಎಂ ಮಂಡ್ಯಕ್ಕೆ ತೆರಳಿದ್ದಾರೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆಯೇ ಸಿಎಂ ಎಲ್ಲಿ ಎಂದು ಎಂಬಿ ಪಾಟೀಲ್ ಬಳಿ ಡಿಸಿಎಂ ಕೇಳಿದ್ದಾರೆ. ಮಂಡ್ಯಕ್ಕೆ ಹೋಗಬೇಕಿತ್ತು ಹೋದರು ಎಂದು ಎಂ.ಬಿ ಪಾಟೀಲ್ ಉತ್ತರಿಸಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಈ ಎಲ್ಲ ಬೆಳವಣಿಗೆಗಳು ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ, ಅದರಲ್ಲೂ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಗುಸುಗುಸು ಹರಡಲು ಕಾರಣವಾಗಿದೆ.




