Poetry; ಅವಿತ ಕವಿತೆ: ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ

‘ಕವಿತೆಗಳಿಗೂ ನನಗೂ ಜನ್ಮಾಂತರದ ಸಂಬಂಧವಿರಬೇಕು. ಈ ಕವಿತೆಯ ಉಸಾಬರಿ ಬೇಡ ಎಂದು ಹದಿನಾರು ಹದಿನೇಳು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ವಿಚಿತ್ರ ಸನ್ನಿವೇಶದಲ್ಲಿ ವಿಮುಖಳಾಗಿ ಬಿಟ್ಟಿದ್ದೆ. ಬರೆಯುವುದಲ್ಲ, ಓದುವುದು ಬೇಡ ಈ ಕವಿತೆಯನ್ನು ಅಂತನ್ನಿಸಿತ್ತು. ಆದರೆ ಆ ಅಷ್ಟೂ ವರ್ಷಗಳು ನಾನು ನಿಜವಾಗಿಯೂ ಬದುಕಿರುವೇನಾ ಎಂಬ ಸಂಶಯ ಕಾಡತೊಡಗಿ, ಮತ್ತೆ ಜೀವಂತವಾಗಲು ಕವಿತೆಯ ಮೊರೆ ಹೊಕ್ಕು ಬಿಟ್ಟೆ.‘ ವೀಣಾ ನಿರಂಜನ

Poetry; ಅವಿತ ಕವಿತೆ: ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ
ಕವಿ ವೀಣಾ ನಿರಂಜನ
Follow us
| Updated By: Digi Tech Desk

Updated on:Feb 03, 2022 | 11:39 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ವೀಣಾ ನಿರಂಜನ ಅವರ ಕವಿತೆಗಳು ನಿಮ್ಮ ಓದಿಗೆ.

ವೀಣಾ ಅವರ ಕವಿತೆಗಳು ನೇರ, ಸರಳ. ಹಾಗೆಂದು ಈ ಕವಿತೆಗಳನ್ನು ಮುಟ್ಟಲು ಹೋದರೆ ಅವು ‘ಮುಟ್ಟಿದರೆ ಮುನಿ.’ ಇಲ್ಲಿ ಶಬ್ದಗಳು ಲಜ್ಜೆ ಕಳೆದುಕೊಂಡು ಮಾತಾದರೆ, ಅವುಗಳ ಅರ್ಥ ಕಣ್ಮರೆಯಾಗಿರುತ್ತದೆ; ಇಲ್ಲವೇ ಸತ್ಯ ಅರ್ಧಸತ್ಯವಾಗಿರುತ್ತದೆ. ಮಾತು, ಅರ್ಥ, ಶಬ್ದ, ಕವಿತೆ, ಪ್ರೀತಿ, ನಂಟು, ಬುದ್ಧ, ಅಲ್ಲಮ, ಅಕ್ಕ, ಮಲ್ಲಿಕಾರ್ಜುನ ಹೀಗೆ ಈ ಕವಿತೆ ಸುತ್ತಿಬರುವ ಹಲವು ಸಂಗತಿಗಳು ಒಂದರೊಳಗೊಂದು ಬೆರೆತು ಕಾವ್ಯದ ಅರ್ಥವನ್ನು ಅರಿಯಲು ನೋಡುತ್ತವೆ; ಹಾಗೆಯೇ ಕಾವ್ಯದ ಮಿತಿಯನ್ನೂ ಗುರುತಿಸಿಕೊಳ್ಳುತ್ತವೆ. ಕಾವ್ಯವನ್ನು ಮೀರಿದ ಪ್ರೀತಿಯನ್ನು ಮುಟ್ಟಲು, ಪ್ರೀತಿಯ ಎಳೆಗಳ ಮೂಲಕವೇ ಎರಡು ಜೀವಗಳ ನಡುವಿನ ನಂಟನ್ನು ರೂಪಿಸಲು, ಬದುಕಿನ ಸಾರ್ಥಕತೆಯನ್ನುಕಂಡುಕೊಳ್ಳಲು ಮಾಡುವ ಹವಣಿಕೆಯೇ ವೀಣಾ ಅವರ ಕ್ರಿಯಾಶೀಲತೆಯ ಮೂಲ ಸೆಲೆ. ಇದೇ ಇಲ್ಲಿನ ಪಯಣದ ಗುರಿಯಾಗಿರುವಂತೆಯೂ ತೋರುತ್ತದೆ.

ಅವನು ಕಟ್ಟಿದ ಫ್ರೇಮಿನೊಳಗೆ ಅವಳ ಕವಿತೆ ಕೂರುತ್ತಿಲ್ಲ; ಅದು ಹಂಗಿಲ್ಲದ ಕವಿತೆ. ಕವಿತೆಯ ಮಿತಿಯನ್ನು ದಾಟಿದ್ದು ಪ್ರೀತಿ. ತುಂತುರು ಮಳೆ, ಮೊರೆಯುವ ಕಡಲು, ಮಾತಿಲ್ಲದೆ ಹೊಮ್ಮುವ ರಾಗ ಎಲ್ಲವೂ ಹೆಣೆಯುವುದು ಪ್ರೀತಿಯ ಹಾಡು. ಕವಿತೆಯ ಶಬ್ದಗಳು ಒಣಗಿದ ಹೊತ್ತಲ್ಲಿ ಪ್ರೀತಿ ಮಾಯಕದ ಚಿಟ್ಟೆಯಾಗಿ ಬಂದು ನೆತ್ತಿಯ ಮೂಸುವುದು, ಕನಸು ನೆನಪುಗಳ ಉದ್ದೀಪಿಸುವುದು; ಹೊಸ ಹಾಡ ಹೊಮ್ಮಿಸುವುದು- ಇವೆಲ್ಲ ವೀಣಾ ಅವರ ಕಾವ್ಯದ ಮಾಯಕದ ಶಕ್ತಿ. ಶಬ್ದದ ಲಜ್ಜೆಯನ್ನು ಬಲ್ಲ ಇಲ್ಲಿಯ ನಾಯಕಿ ಮೌನವನ್ನು ತನ್ನೆದೆಗೆ ಕರೆಯುತ್ತಾಳೆ; ಅದು ಅವಳ ಸುಖ; ಅವಳ ಒಳಗಿನ ಜೀವಸೆಲೆ; ಒಳಗೇ ಸದ್ದಿಲ್ಲದೆ ಹುಟ್ಟುವ ಮತ್ತು ಹಬ್ಬಿಕೊಳ್ಳುವ ರಾಗ. ಈ ಮೌನವೆಂದರೆ ಅದು ಬೆಳಕಿನ ಕಣ್ಣು; ಬುದ್ಧನ ಮುಗುಳ್ನಗೆ; ಹಾಗೆಯೇ ಬಯಲ ಅಲ್ಲಮ ಕೂಡಾ. ಹೀಗೆ ಕವಿತೆ ವಿವಿಧ ಆಯಾಮಗಳಿಗೆ ಚಾಚಿಕೊಳ್ಳುತ್ತ, ಪ್ರೀತಿಯನ್ನು ಮೆರೆಸುತ್ತ ಎರಡು ಜೀವಗಳ ನಂಟನ್ನು ಆರಾಧಿಸುತ್ತದೆ. ಇದೇ ಬದುಕಿನ ರಾಗ ಎಂಬುದನ್ನೂ ತೋರಿಸುತ್ತದೆ.; ಬದುಕಿನ ಅರ್ಥವನ್ನು ಬಿಡಿಸಲು ನೋಡುತ್ತದೆ. ಕೋಮಲ ಶರೀರದ ಈ ಕಾವ್ಯ ತನ್ನ ದಿಟ್ಟತನವನ್ನು ತುಂಬಿಕೊಂಡು ಚಿಮ್ಮಿದರೆ ಅದರ ಸ್ವರೂಪವೇ ಬೇರೆಯಾಗುವುದರಲ್ಲಿ ಅನುಮಾನವಿಲ್ಲ. ಜಿ.ಪಿ.ಬಸವರಾಜು, ಹಿರಿಯ ಸಾಹಿತಿ, ಪತ್ರಕರ್ತ

*

ವೀಣಾ ನಿರಂಜನ ಸಮಕಾಲೀನ ಕಾವ್ಯಪ್ರತಿಭೆ. ಕೌಟಂಬಿಕ ನೆಲೆಯಲ್ಲೂ ಸಾಹಿತ್ಯಿಕ ಹಿನ್ನೆಲೆಯುಳ್ಳ ವೀಣಾ ಕವಿತೆಗಳು ವೈಯಕ್ತಿಕ ಅನುಭವಗಳ ಮೂಲಕವೇ ತೆರೆದುಕೊಂಡರೂ ಸಾರ್ವತ್ರಿಕ ಅನುಭವಗಳ ಸಾಂದ್ರತೆಯನ್ನು ಮೈಗೂಡಿಸಿಕೊಂಡಿವೆ. ಯಾಕೆಂದರೆ ಕವಿತೆ ಭಾವದ ಅಕ್ಷರ ರೂಪ. ಕವಿತೆಯಲ್ಲಿ ಕವಿಯನ್ನು ಕಾಣಬೇಕೋ ಕಾಣಬಾರದೋ ಎಂಬುದು ಚರ್ವಿತ ಚರ್ವಣವಾದ ಸಂಗತಿ. ಕವಿ ಕಾವ್ಯದ ಮೂಲಕ ತನ್ನ ವ್ಯಕ್ತಗೊಳಿಸಿಕೊಳ್ಳುವುದು ಒಂದು ಮುಖವಾದರೆ, ಜಗತ್ತನ್ನು ತೆರೆದಕಣ್ಣುಗಳ ಮೂಲಕ ಸವಿಯುವ, ಅಲ್ಲಿಯ ರೂಪವನ್ನು, ವಿರೂಪವನ್ನು ಕಟ್ಟಿಕೊಡುವುದು ಇನ್ನೊಂದು ಮುಖ. ಕವಿತೆ ಕಡಿಮೆ ಪದಗಳಲ್ಲಿ ಬಹಳ ಹೇಳುವುದು. ಆದರೆ ಕೆಲವು ಎಲ್ಲ ಹೇಳಿಯೂ ಕೊನೆಗೊಂದು ಮೌನವನ್ನೇ ಇಟ್ಟುಬಿಡುವುದು. ಬೋದಿಲೇರನ ಗದ್ಯಗಾಮಿ ಕವಿತೆಗಳನ್ನು ಓದಿದಾಗಲೆಲ್ಲ ನನಗನ್ನಿಸಿದ್ದು ಹಾಗೇ. ವೀಣಾ ನಿರಂಜನರ ‘ವಾರಸುದಾರರಿಲ್ಲದ ಪತ್ರ’, ‘ಯಾರ ಅಂಕೆಗೂ ಸಿಗದ ಸಮಯ’ ಇಂತಹ ಕವಿತೆಗಳು ಹೀಗೆ ಕೊನೆಗೊಂದು ಮೌನವನ್ನು ಇಟ್ಟು, ತೀವ್ರವಾದ ಒಳತುಡಿತಕ್ಕೆ, ಇನ್ನು ವಿಷಾದಕ್ಕೆ ಕಾರಣವಾಗುತ್ತವೆ.

ಕಾವ್ಯ ಕನ್ನಿಕೆಯ ಕಂಠ ಕೇವಲ ಮೋಹನ ರಾಗಗಳಿಗೆ ಸುಖ ದುಃಖಗಳ ಆಲಾಪಗಳಿಗೆ ಸೀಮಿತವಾಗಬಾರದು. ಅದು ಬಾಯಿಲ್ಲದವರಿಗೆ ದನಿಯಾಗಿ, ಜೀವ ವಿರೋಧಿ ನಿಲುವಿಗೆ ಪ್ರತಿಭಟನೆಯ ಸೊಲ್ಲಾಗಿ, ಅನ್ಯಾಯದ ವಿರುದ್ಧ ಎತ್ತಿದ ಕಂಠವನ್ನು ಹತ್ತಿಕ್ಕುವ ಕೈಗಳಿಗೆ ಬೇಡಿಯಾಗಿ, ದೌರ್ಜನ್ಯವನ್ನು ಕೇಳಿಯೂ ಕಿವುಡಾದ ಕಿವಿಗಳಿಗೆ ಕಾದಸೀಸವಾದಾಗ ಕವಿತೆ ಗೆಲ್ಲುತ್ತದೆ. ವೀಣಾ ನಿರಂಜನರ ಕವಿತೆಗಳನ್ನು ಈ ಹಿನ್ನೆಲೆಯಲ್ಲಿಯೂ ನೋಡಬಹುದು ಎನಿಸುತ್ತದೆ ನನಗೆ. ನಾಗರೇಖಾ ಗಾಂವಕರ, ಕವಿ, ಅನುವಾದಕರು

*

ನನ್ನ ದನಿ

‘ನಿನ್ನನ್ನು ಬಂಧಿಸಲು ಆಜ್ಞೆಯಾಗಿದೆ. ನೀನು ಯಾರು?’ ಕೇಳಿದರವರು

‘ನಾನು ಕವಿತೆ’ ಎಂದೆ.

ಅವರೆಂದರು – ‘ಹಾಗಾದರೆ ನಿನ್ನ ನಾಲಿಗೆ ಸೀಳಬೇಕು.’

ನಾನು ತಣ್ಣಗೆ ‘ಉಸಿರು’ ಎಂದೆ.

ಅವರು ಮತ್ತೆ ನಿನ್ನ ಕತ್ತು ಹಿಸುಕಬೇಕು’ ಎಂದರು ನನ್ನುಸಿರು ಗಾಳಿಯಲ್ಲಿ ಬೆರೆತು ಹೋಗಿದೆ’ ಎಂದೆ!

ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ!

*

ನಿವೇದನೆ

ನಿನ್ನ ಬೊಗಸೆಯಲ್ಲೊಮ್ಮೆ ನನ್ನ ಮುಖ ತುಂಬಿಕೊಂಡು ನಿಟ್ಟಿಸಿ ನೋಡು ನನ್ನ ಕಣ್ಣ ಕಿಂಡಿಯೊಳಗೆ ಎಷ್ಟು ಋತುಮಾನಗಳ ಕನಸುಗಳು ಸಂದು ಹೋದವು! ಇತ್ತೀಚೆಗಷ್ಟೇ ನಿನ್ನಿಂದ ದೂರ ನಿಂತು ನನ್ನ ನಾ ನಿರುಕಿಸುವುದ ಕಲಿಯುತ್ತಿರುವೆ.

ಎಷ್ಟು ಹದವಾದ ಮಳೆ ! ಚಿತ್ತದಲ್ಲಿ ತುಂಬಿಕೊಂಡ ಚಿಟ್ಟೆಯ ಚಿತ್ತಾರ… ನೀ ಮೀಟಿದ ರಾಗಗಳು ನಾ ಮುಡಿದ ಮಲ್ಲಿಗೆಯಷ್ಟೇ ನವಿರು ನಿನ್ನದೆ ಛಾಪು ನನ್ನೆದೆಯಲ್ಲಿ ಬರೆಯದೇ ಬೆಸೆಯದೆ ಹೇಗಿರಲಿ?

ಕ್ಷಮಿಸು ನೀ ಕಟ್ಟಿದ ಫ್ರೇಮಿನೊಳಗೆ ಕೂರುತ್ತಿಲ್ಲ ನನ್ನ ಕವಿತೆ ಇನ್ನೊಂಚೂರೇ ಚೂರು ಸ್ವಾತಂತ್ರ್ಯ ಕೊಡು ತೂರಿ ಬಿಡುವೆ ಅಂತರಾತ್ಮವನು ಫ್ರೇಮಿನ ಒಳಗೂ ಹೊರಗೂ ನಿನ್ನೆದೆಯೊಳಗೆ ಬಚ್ಚಿಟ್ಟುಕೊಳ್ಳಬೇಡ ನನ್ನ ಕಾಪಿಡುವ ಕೈಯಾಗುವುದೂ ಬೇಡ ಆತ್ಮಕ್ಕೆ ಯಾರ ಹಂಗೂ ಇಲ್ಲ

*

ಮಾಗಬೇಕು ಇನ್ನೂ

ಈಗಷ್ಟೇ ಹಾಕಿಟ್ಟ ಉಪ್ಪಿನ ಕಾಯಿಯನ್ನು ಗಾಜಿನ ಜಾಡಿಗೆ ತುಂಬಿಸಿದ ಅಮ್ಮ ಹೇಳಿದಳು ಮಾಗಬೇಕು ಇನ್ನೂ

ಹುಳಿಯೊಂದಿಗೆ ಉಪ್ಪು ಖಾರ ಸಿಹಿ ಹದವಾಗಿ ಬೆರೆಸಿ ಮೇಲೆ ಇಂಗು ಸಾಸಿವೆಯ ಒಗ್ಗರಣೆ ಕಳಿತು ಘಮ್ಮೆನ್ನಲು ಕಾಯಬೇಕು ಇನ್ನೂ

ಯಾವೆಂದರೆ ಆ ಕೈಯಿಂದ ಮುಟ್ಟ ಬೇಡ ಕೆಟ್ಟು ಹೋದೀತು ಅಮ್ಮನ ಎಚ್ಚರಿಕೆ ನನ್ನ ಮಗಳಿಗೆ ಉಪ್ಪಿನ ಕಾಯಿಗೂ ಇದೆಂಥ ಮಡಿ

ನನಗನ್ನಿಸುತ್ತದೆ ಈ ಬದುಕು ಈ ಕವಿತೆ ಎಲ್ಲ ಉಪ್ಪಿನಕಾಯಂತೆ ಮಾಗಿ ಕಳಿತಾಗಲೇ ಬಾಯಿ ಚಪ್ಪರಿಸುವಂತಾಗುವುದು

*

ಸುಖ ಸಾಂಗತ್ಯ

ನನ್ನರಿವಿನ ಪಾತಳಿಯನ್ನು ನೀನು ಹೊಕ್ಕಂತೆ ನನ್ನ ಇಡೀ ದಿನದ ಆಯಾಸ ಕೊನೆಗೊಳ್ಳುತ್ತದೆ ಎಲ್ಲ ನಿರಾಳವಾದಂತೆ ನಿನ್ನ ಒಲವೊಂದೆ ನನ್ನ ನೆಲೆಯಾಗುತ್ತದೆ

ಬವಳಿ ಬಂದ ನೆವದಲ್ಲಿ ನಿನ್ನಾತು ಕೊಳ್ಳುತ್ತೇನೆ ಪ್ರೇಮದ ಒರತೆಯೊಂದು ಅಲ್ಲೇ ಝಿಲ್ಲನೆ ಹುಟ್ಟಿ ಕೊಳ್ಳುತ್ತದೆ ಸಾವಿರದ ಹೂಗಳ ತೋಟಕ್ಕೆ ನೀರೆರೆಯುತ್ತದೆ ಚಿಲುಮೆ

ನನ್ನೆದೆಯು ಕದ ತೆರೆದುಕೊಂಡು ನಿಜದ ಬೆಳಕು ಒಳಗೆ ಬಿಟ್ಟುಕೊಳ್ಳುತ್ತದೆ ಬಯಲ ತೆಕ್ಕೆಗೆ ದಕ್ಕದ ಬರಿದೇ ನೀಲಿಯಾಗಸ ಎಲ್ಲೆಯುಂಟೇ ಪ್ರೀತಿಗೆ ನಿನ್ನ ಕಣ್ಣ ಬಾಂದಳದ ಅಡಿಗೆ ನೂರು ನಕ್ಷತ್ರಗಳು

ನಿನ್ನ ಕೊಳಲ ಧ್ಯಾನವೇ ಸುಖದ ದಿಟ ಸಾಂಗತ್ಯ ಇನ್ನೇನು ಬೇಕು ಈ ರಾಧೆಗೆ!

avitha kavithe

ವಿಳಾಸವಿಲ್ಲದ ಪತ್ರಗಳೊಂದಿಗೆ ವೀಣಾ

ವಾರಸುದಾರರಿಲ್ಲದ ಒಂದು ಪತ್ರ

ಅಸಂಖ್ಯ ಪತ್ರಗಳ ನಡುವೆ ವಿಳಾಸವಿಲ್ಲದ ಪತ್ರವೊಂದು ನನ್ನ ಗಮನ ಸೆಳೆಯುತ್ತದೆ ಥಟ್ಟನೆ ಯಾರದೀ ಪತ್ರ ಯಾರು ಯಾರಿಗೆ ಬರೆದಿರಬಹುದು ಏನಿರಬಹುದು ಇದರಲ್ಲಿ ಯೋಚಿಸುತ್ತೇನೆ ಮಂಕಾಗಿ ಕವಿಯೊಬ್ಬನ ಕವಿತೆ ಅಡಗಿ ಕುಳಿತಿರಬಹುದೇ ಇದರಲ್ಲಿ

ಇರಬಹುದೇ ಯಾರಿಗೊ ಸಂದರ್ಶನದ ಕರೆ ಅಥವಾ ಯಾರದೋ ಫಲಿತಾಂಶದ ಸುದ್ದಿ ದೂರದ ಹಾಸ್ಟೆಲ್ಲಿನಲ್ಲಿ ಓದುವ ಮಗಳ ಪತ್ರವಿರಬಹುದೆ ಅಪ್ಪನಿಗೆ ಸಾಲ ಮಂಜುರಾತಿಯೊ ಅಥವಾ ಸಾಲಪತ್ರದ ಗಡುವು ಮುಗಿಯಿತೋ ಒಂದು ಪತ್ರ ಏನೆಲ್ಲ ತಂದು ನಿಲ್ಲಿಸಬಹುದು ನಿಮ್ಮೆದುರು

ಹೀಗೆ ವಿಳಾಸವಿಲ್ಲದೆ ಅನಾಥವಾಗಿರುವ ಪತ್ರವೊಂದು ಬಿಕ್ಕುತ್ತಿರುವಂತನ್ನಿಸಿ ಕಳವಳಗೊಳ್ಳುತ್ತೇನೆ ಎಷ್ಟೊಂದು ಪತ್ರಗಳು ಡೋರ್ ಲಾಕ್ ಪಾರ್ಟಿ ಲೆಫ್ಟ್ ಪಾರ್ಟಿ ಡೆಡ್ ವಿಳಾಸ ಸರಿ ಇಲ್ಲ ಇತ್ಯಾದಿ ಮೊಹರು ಹೊತ್ತು ಪಯಣಿಸುತ್ತವೆ ಪ್ರತಿ ದಿನ ಈ ದಡದಿಂದ ಆ ದಡಕ್ಕೆ ಆ ದಡದಿಂದ ಈ ದಡಕ್ಕೆ

ಎಲ್ಲಿ ಕಳೆದು ಹೋಗುತ್ತಾರೆ ಈ ಜನ ಅದೇನು ಗಡಿಬಿಡಿಯೊ ಪತ್ರದೊಳಗೆ ಉಸಿರು ಕಟ್ಟಿರುವ ಮಾತುಗಳು ಕಾಯುತ್ತಿರಬಹುದೆ ಬಿಡುಗಡೆಗೆ

ವಾರಸುದಾರರಿಲ್ಲದ ಈ ಇಂಥ ಪತ್ರಗಳು ಹುಟ್ಟು ಹಾಕಿರುವ ನೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕಬಹುದೆ ನಿಮ್ಮ ಬಳಿ ಈ ಲೋಕವೆಂಬ ಪತ್ರದೊಳಗೆ ಅಡಗಿ ಕುಳಿತಿರುವ ರಹಸ್ಯಗಳಂತೆ ಇದು ಒಂದು ವಿಸ್ಮಯದ ಕತೆಯಾಗಿ ಬಿಡಬಹುದು ನಮ್ಮ ನಿಮ್ಮೊಳಗೆ

ಕವಿತೆ ಉಸಿರಲ್ಲಿ ಬೆರೆತು ಹೋಗಿದೆ. ಕವಿತೆಗಳಿಗೂ ನನಗೂ ಜನ್ಮಾಂತರದ ಸಂಬಂಧವಿರಬೇಕು. ಈ ಕವಿತೆಯ ಉಸಾಬರಿ ಬೇಡ ಎಂದು ಹದಿನಾರು ಹದಿನೇಳು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ವಿಚಿತ್ರ ಸನ್ನಿವೇಶದಲ್ಲಿ ವಿಮುಖಳಾಗಿ ಬಿಟ್ಟಿದ್ದೆ. ಬರೆಯುವುದಲ್ಲ, ಓದುವುದು ಬೇಡ ಈ ಕವಿತೆಯನ್ನು ಅಂತನ್ನಿಸಿತ್ತು. ಆದರೆ ಆ ಅಷ್ಟೂ ವರ್ಷಗಳು ನಾನು ನಿಜವಾಗಿಯೂ ಬದುಕಿರುವೇನಾ ಎಂಬ ಸಂಶಯ ಕಾಡತೊಡಗಿ, ಮತ್ತೆ ಜೀವಂತವಾಗಲು ಕವಿತೆಯ ಮೊರೆ ಹೊಕ್ಕು ಬಿಟ್ಟೆ. ಈಗ ಕವಿತೆ ಇಲ್ಲದ ಕ್ಷಣವನ್ನು ಊಹಿಸಿ ಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹಾಗಂತ ನಾನು ಯಾವಾಗಲೂ ಬರೆಯುತ್ತೇನೆ ಅಂತಲ್ಲ. ನನಗೆ ಬರವಣಿಗೆಗಿಂತ ಕವಿತೆಗಳನ್ನು ಓದುವುದು ಹೆಚ್ಚು ಇಷ್ಟ. ಕವಿತೆ ಯಾಕೆ ಇಷ್ಟ, ಯಾಕೆ ನೆಚ್ಚಿ ಕೊಂಡಿದ್ದೇನೆ ಎಂದು ಹೇಳುವುದು ಕಷ್ಟ. ಆದರೆ ಕವಿತೆ ಕೊಡುವ ಸುಖ ಮಾತ್ರ ನನ್ನದು. ಅದು ಹೇಗೆ ಎಂದು ಹೇಳುವುದು ಕೂಡ ಸಾಧ್ಯವಿಲ್ಲ. ಒಟ್ಟಿನಲ್ಲಿ ನನಗೆ ಕವಿತೆ ಜೀವನಪ್ರೀತಿ ಕಲಿಸಿದೆ. ಮನುಷ್ಯಳಾಗಲು ಸಹಾಯ ಮಾಡಿದೆ.

ಮಳೆಗಾಲವೆಂದರೆ

ಮಳೆಗಾಲವೆಂದರೆ ನನಗೆ ನೆನಪಾಗುವುದು ಅವ್ವನ ಆತಂಕ ಮತ್ತು ಕುಸಿದು ಬೀಳಲು ಸಿದ್ಧವಾಗಿ ನಿಂತ ಶತಮಾನದ ಮನೆ

ಮಣ್ಣಿನ ಮಾಳಿಗೆಯಲ್ಲಿ ಇಷ್ಟುದ್ದ ಬೆಳೆದು ನಿಂತ ಹುಲ್ಲು ಕೀಳಿಸಬೇಕು ಮಣ್ಣು- ಕಲ್ಲು- ಕಡಿ ತುಂಬಿಸಿ ನೆಲ ಸಮ ಮಾಡಬೇಕು ಒಳಗೆ ಮಣ್ಣು ಕುಸಿಯದಂತೆ ಗೋಣಿ ತಾಟನ್ನು ಬಿಗಿದು ಕಟ್ಟಬೇಕು ಸಣ್ಣ ಪುಟ್ಟ ರಿಪೇರಿಗಳೆಲ್ಲ ಆಗಬೇಕು ಅಲ್ಲಲ್ಲಿ

ಅವ್ವನ ತರಾತುರಿಯ ಓಡಾಟದಲ್ಲಿ ಮಳೆಗಾಲ ಅಡಿಯಿಟ್ಟದ್ದೇ ಗೊತ್ತಾಗುತ್ತಿರಲಿಲ್ಲ ಮಳೆ ನೀರಿನೊಂದಿಗೆ ಒಂದಾಗುತ್ತಿದ್ದ ಅವಳ ಕಣ್ಣೀರು ಕೂಡ ಕಾಣಿಸುತ್ತಿರಲಿಲ್ಲ ಎಲೆಗಳಿಂದ ತೊಟ್ಟಿಕ್ಕುತ್ತಿದ್ದ ನೀರು ಅವ್ವನ ಕಣ್ಣೀರಿನಂತೆ ಕಂಡು ಬೆಚ್ಚುತ್ತಿದ್ದ ನಾವು ದಿಗಿಲಿನಿಂದ ಮುಗಿಲನ್ನೇ ನೋಡುತ್ತಿದ್ದೇವು

ಅದೆಷ್ಟೋ ಮಳೆಗಾಲಗಳು ಸಂದವು ಅವ್ವನ ಶತಮಾನದ ಮನೆ ಕುಸಿದು ಮಣ್ಣು ಪಾಲಾಗಿದೆ ಇಂದು ನಿರೂಪಾಯಳಾಗಿ ಅವಳೀಗ ಸೇರಿದ್ದಾಳೆ ಗಟ್ಟಿಮುಟ್ಟಾದ ಬಾಡಿಗೆ ಮನೆಯನ್ನು

ಆಕಾಶವೇ ಒಂದು ಹರಿದ ಸೂರಾಗಿ ಬಿರು ಮಳೆಗೆ ಎಲ್ಲ ಕೊಚ್ಚಿಕೊಂಡು ಹೋಗುತ್ತಿರುವ ಈ ದಿನಗಳಲ್ಲಿ ನನ್ನ ಮನೆಯ ಮಾಳಿಗೆಯ ನೆನಪು ಒಂದು ಸಣ್ಣ ತರಗೆಲೆಯಾಗಿ ತೇಲುತ್ತಿರುವಂತನ್ನಿಸಿ ನಿಟ್ಟುಸಿರಿಡುತ್ತೇನೆ ಸೋರುತ್ತಿರುವ ಜಗದ ಮಾಳಿಗೆಯು ನನ್ನ ಲೋಕದ ಕಣ್ಣೀರನ್ನೇ ತುಂಬಿಕೊಂಡು ಹರಿಯುತ್ತಿರುವ ಈ ಗಳಿಗೆಯಲ್ಲಿ

ಭದ್ರವಾದ ಮನೆಯಲ್ಲಿ ಬೆಚ್ಚಗೆ ಮಲಗಿದ ನಾನು ಬೆಚ್ಚಿ ಎದ್ದು ಕುಳಿತು ಕೊಳ್ಳುತ್ತೇನೆ ಮಳೆಯ ರಾತ್ರಿಗಳಲ್ಲಿ ಎಲ್ಲೋ ದೂರದಲ್ಲಿ ಪುಟ್ಟ ಗುಡಿಸಲಿನಲ್ಲಿ ಮಳೆಯ ಸದ್ದಿಗೆ ಬೆದರಿದ ಬಾಲೆ ಅವ್ವನ ಮಡಿಲೊಳಗೆ ಮುದ್ದೆಯಾಗುತ್ತಿರುವಂತೆ ಭಾಸವಾಗಿ ಕಣ್ಣು ಮುಚ್ಚಿಕೊಳ್ಳುತ್ತೇನೆ ಪ್ರತಿ ತಲೆಗೂ ಗಟ್ಟಿ ಸೂರೊಂದರ ಕನಸು ಕಾಣುತ್ತ.

ಯಾರ ಅಂಕೆಗೂ ಸಿಗದ ಸಮಯ

ಹಕ್ಕಿ ಹಾಡೊಂದನ್ನು ಹಾಡುತ್ತಲೇ ಇದೆ ಯುಗ ಯುಗಾಂತರಗಳಿಂದ ಹಕ್ಕಿ ಬದಲಾದರೂ ಹಾಡು ಮುಗಿಯಲಾರದು

ಮೊರೆಯುತ್ತಲೇ ಇದೆ ಕಡಲು ನಿರಂತರ ಅನುದಿನದ ಸುಖ ಸಂಗೀತದಂತೆ ಅಲೆ ಅಲೆಗಳ ಮಿಲನ ರಾಗದಂತೆ ಕೇಳಲಾಗದ ಕಿವಿಯುಂಟೆ ಜಗದಲ್ಲಿ

ಸುರಿಯುತ್ತಲೇ ಇದೆ ಮಳೆ ತುಂತುರು ನಾದದ ಹೊಳೆ ಹರಿಸಿ ಮೇಘದಿಂದ ಮಲ್ಹಾರದವರೆಗೆ ಶತ ಶತಮಾನಗಳ ತೋಯಿಸಿ ಮಳೆಯ ಪುಳಕವಿಲ್ಲದ ಇಳೆಯುಂಟೇ

ಅವರೇಕೆ ಮೌನವನ್ನು ಆಲಿಸುವುದಿಲ್ಲ ಮೌನದೊಳಗಿನ ಸದ್ದುಗಳನ್ನು ಹಕ್ಕಿಯ ಹಾಡನ್ನು ಕಡಲಿನ ಮೊರೆತವನ್ನು ತುಂತುರು ಮಳೆಯ ಗಾನವನ್ನು ಸಾವಿರ ಸಾವಿರ ಲಕ್ಷ ಲಕ್ಷ ಇಂಪು ತಂಪುಗಳನ್ನು

ಅವರೆದೆಯೊಳಗೆ ತುಪಾಕಿ ಇಟ್ಟಿರಬೇಕು ಯಾರೋ ಅವರು ದಂಡಯಾತ್ರೆಗೆ ಹೊರಟಿದ್ದಾರೆ ದಂಡಿನೊಂದಿಗೆ ಪ್ರೀತಿ ತುಂಬಿದ ಎದೆಗಳೀಗ ಖಾಲಿ ಬಟ್ಟಲುಗಳನ್ನಿಟ್ಟು ಕೊಂಡು ಪರಿತಪಿಸುತ್ತಿವೆ ದೇಶ ದೇಶಗಳ ಗಡಿಗಳನ್ನು ಮೀರಿ ಹೊರಟವರ ಗುಂಡಿಗೆಗೆ ಗುಂಡು ಎದುರಾಗುತ್ತಿವೆ

ಏನೋ ಮಹಾ ಆಗಿ ಬಿಡಬಹುದೆಂಬ ಭ್ರಮೆಯಲ್ಲೆ ಕಳೆದುಹೋಗುತ್ತದೆ ಬದುಕು ಪ್ರತಿ ನೀರಸ ಗಳಿಗೆಯಲ್ಲೂ ಒಂದು ಹಕ್ಕಿಯ ಹಾಡು ಎದೆಯೊಳಗೆ ಹೊಕ್ಕು ಕಾಲಾತೀತ ಶಬ್ದಾತೀತವಾದ ಮಾತೊಂದನ್ನು ಹೆಣೆದು ಬದುಕಿಗೊಂದು ಪುರಾವೆ ಒದಗಿಸುತ್ತದೆ

ಯಾರ ಅಂಕೆಗೂ ಸಿಗದ ಸಮಯ ಸದಾ ಪಾಠ ಕಲಿಸುತ್ತಲೇ ಇದೆ ನಮಗೆ.

ಪರಿಚಯ : ವೀಣಾ ನಿರಂಜನ ಮೂಲತಃ ಉತ್ತರ ಕರ್ನಾಟಕದವರು. ಪ್ರಸ್ತುತ ಮೈಸೂರಿನಲ್ಲಿ ವಾಸ. ಅಂಚೆ ಇಲಾಖೆಯಲ್ಲಿ ಕೆಲಸ. ಸಾಹಿತ್ಯದಲ್ಲಿ ಆಸಕ್ತಿ. ಕಾವ್ಯವೆಂದರೆ ಪ್ರೀತಿ. ಆಗಾಗ ಲೇಖನ ಕವಿತೆಗಳನ್ನು ಬರೆಯುತ್ತಾರೆ.

ಇದನ್ನೂ ಓದಿ : Poetry ; ಅವಿತಕವಿತೆ : ನಿರ್ವಾಹವಿಲ್ಲದೇ ಹರಿವ ಹಾದರಕೆ ಮತ್ತೆಂದೂ ಮರಳುವ ಮನಸಿಲ್ಲ

avitha kavithe a poetry column by poet veena niranjan

Published On - 12:11 pm, Sun, 25 April 21