IND vs ENG: 4ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪರ ಮೂವರು ವಿಕೆಟ್ ಕೀಪರ್ಸ್ ಕಣಕ್ಕೆ?
India vs England 4th Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ರಿಷಭ್ ಪಂತ್ ಅವರ ಗಾಯದ ಬಗ್ಗೆ ಆತಂಕವಿದೆ. ಲಾರ್ಡ್ಸ್‌ನಲ್ಲಿನ ಗಾಯದಿಂದ ಚೇತರಿಸಿಕೊಳ್ಳುವಲ್ಲಿ ಅವರು ವಿಫಲರಾದರೆ, ಭಾರತ ತಂಡವು ಮೂರು ವಿಕೆಟ್ ಕೀಪರ್‌ಗಳನ್ನು ಆಡಿಸಬೇಕಾಗಬಹುದು. ಕೋಚ್ ರಯಾನ್ ಟೆನ್ ಡೋಸ್ಚೇಟ್ ಅವರು ಪಂತ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಆದರೆ ಅವರ ವಿಕೆಟ್ ಕೀಪಿಂಗ್ ಲಭ್ಯತೆ ಅನಿಶ್ಚಿತವಾಗಿದೆ. ಪಂತ್ ಆಡದಿದ್ದರೆ, ಕೆ.ಎಲ್. ರಾಹುಲ್ ಅಥವಾ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಬಹುದು.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ ಆತಿಥ್ಯವಹಿಸಲಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಹಿಂದುಳಿದಿರುವ ಭಾರತ ತಂಡವು ಈ ಮೈದಾನದಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲ ಸಾಧಿಸುವ ಇರಾದೆಯಲ್ಲಿದೆ. ಈ ಮೈದಾನದಲ್ಲಿ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿರದ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಬೇಕೆಂದರೆ ಬಲಿಷ್ಠ ಪಡೆಯನ್ನೇ ಕಟ್ಟಿಕೊಂಡು ಕಣಕ್ಕಿಳಿಯಬೇಕಿದೆ. ಆದರೆ ಮೂರನೇ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಫಿಟ್ನೇಸ್ ಬಗ್ಗೆಯೂ ಆತಂಕ ಮನೆ ಮಾಡಿದೆ. ಒಂದು ವೇಳೆ ಟೆಸ್ಟ್ ಆರಂಭಕ್ಕೂ ಮುನ್ನ ಪಂತ್ ಚೇತರಿಸಿಕೊಳ್ಳದಿದ್ದರೆ, ಟೀಂ ಇಂಡಿಯಾ ಪರ ಮೂವರು 3 ವಿಕೆಟ್ ಕೀಪರ್‌ಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ವಿಕೆಟ್ ಕೀಪಿಂಗ್ ಮಾಡುವಾಗ ರಿಷಭ್ ಪಂತ್ ಗಾಯಗೊಂಡರು. ಅವರ ಎಡಗೈ ಬೆರಳಿಗೆ ಗಾಯವಾಗಿದ್ದು, ಇದರಿಂದಾಗಿ ಅವರು ಇಡೀ ಪಂದ್ಯದಲ್ಲಿ ಮತ್ತೆ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬಹುಬೇಗನೇ ಔಟಾದರು. ಆದರೆ ಈ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಅವರಿಗೆ ಬೆರಳಿನ ನೋವು ಮತ್ತಷ್ಟು ಹೆಚ್ಚಾಗಿ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಪಂತ್ ಫಿಟ್ನೆಸ್ ಬಗ್ಗೆ ಕೋಚ್ ಹೇಳಿದ್ದೇನು?
ಆದಾಗ್ಯೂ ಟೆಸ್ಟ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ನಾಯಕ ಶುಭ್ಮನ್ ಗಿಲ್ ಮ್ಯಾಂಚೆಸ್ಟರ್ ಟೆಸ್ಟ್ ವೇಳೆಗೆ ಪಂತ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದರು. ಆದರೀಗ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಅವರ ಹೇಳಿಕೆ ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಬೆಕೆನ್‌ಹ್ಯಾಮ್‌ನಲ್ಲಿ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಮಾತನಾಡಿದ ಕೋಚ್, ‘ನಾಲ್ಕನೇ ಟೆಸ್ಟ್ ಆರಂಭಕ್ಕೂ ಮುನ್ನ ಪಂತ್ ಮ್ಯಾಂಚೆಸ್ಟರ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಲಿದ್ದಾರೆ. ಯಾವುದೇ ಸಂದರ್ಭದಲ್ಲೂ ಪಂತ್ ಅವರನ್ನು ಟೆಸ್ಟ್ ಪಂದ್ಯದಿಂದ ಹೊರಗಿಡಲು ನಾವು ಬಯಸುವುದಿಲ್ಲ. ಹಾಗೆಯೇ ಪಂತ್ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾಗುತ್ತದೆಯೇ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಪಂದ್ಯದ ಮಧ್ಯದಲ್ಲಿ ನಾವು ಮತ್ತೆ ಕೀಪರ್ ಅನ್ನು ಬದಲಾಯಿಸಲು ಬಯಸುವುದಿಲ್ಲ’ ಎಂದಿದ್ದಾರೆ.
WTC ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ರಿಷಭ್ ಪಂತ್
3 ವಿಕೆಟ್ ಕೀಪರ್‌ಗಳು ಆಡುತ್ತಾರಾ?
ಮ್ಯಾಂಚೆಸ್ಟರ್ ಟೆಸ್ಟ್ ವೇಳೆಗೆ ರಿಷಭ್ ಪಂತ್ ಸಂಪೂರ್ಣವಾಗಿ ಫಿಟ್ ಆಗಲಿದ್ದು, ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಲಿದ್ದಾರೆ ಎಂಬ ಭರವಸೆ ಇದೆ ಎಂದು ಕೋಚ್ ಹೇಳಿದ್ದಾರೆ. ಆದರೆ ಆ ಹೊತ್ತಿಗೆ ಪಂತ್ ಫಿಟ್ ಆಗುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪಂತ್ ವಿಕೆಟ್ ಕೀಪಿಂಗ್ ಮಾಡಲು ಫಿಟ್ ಇಲ್ಲದಿದ್ದರೂ ಅವರನ್ನು ಬ್ಯಾಟ್ಸ್‌ಮನ್ ಆಗಿ ಆಡಿಸುವ ಸಾಧ್ಯತೆಗಳಿವೆ. ಏಕೆಂದರೆ ಬ್ಯಾಟ್ಸ್‌ಮನ್ ಆಗಿ ಮಧ್ಯಮ ಕ್ರಮಾಂಕದಲ್ಲಿ ಪಂತ್ ಅವರ ಉಪಸ್ಥಿತಿ ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಅವರು ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡಿದರೆ, ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿ ಬೇರೆ ಯಾರನ್ನಾದರೂ ಆಯ್ಕೆ ಮಾಡಬೇಕಾಗುತ್ತದೆ. ಭಾರತಕ್ಕೆ ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ರೂಪದಲ್ಲಿ 2 ಆಯ್ಕೆಗಳಿವೆ.
ರಾಹುಲ್ ಈ ಹಿಂದೆ ವಿಕೆಟ್ ಕೀಪಿಂಗ್ ಮಾಡಿದ್ದಾರೆ ಆದರೆ ಆರಂಭಿಕ ಆಟಗಾರನಾಗಿ ಅವರ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ, ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನೀಡುವ ನಿರೀಕ್ಷೆಯಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಧ್ರುವ್ ಜುರೆಲ್ ಅವರನ್ನು ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಬೇಕಾಗುತ್ತದೆ. ಇದರರ್ಥ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ, ಟೀಂ ಇಂಡಿಯಾ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಮೂವರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
