IND vs ENG: ಜಡೇಜಾರನ್ನು ಟೀಕಿಸಿದವರಿಗೆ ಸರಿಯಾದ ಉತ್ತರ ನೀಡಿದ ಗೌತಮ್ ಗಂಭೀರ್
Ravindra Jadeja Heroics at Lords: ಭಾರತ ತಂಡದ ಆಟಗಾರ ರವೀಂದ್ರ ಜಡೇಜಾ ಅವರನ್ನು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ತಂಡದ ಕೋಚ್ ಗೌತಮ್ ಗಂಭೀರ್, ಮೊಹಮ್ಮದ್ ಸಿರಾಜ್ ಮತ್ತು ಇತರರು ಶ್ಲಾಘಿಸಿದ್ದಾರೆ. ಜಡೇಜಾ ಅವರ 61 ರನ್‌ಗಳ ಅಜೇಯ ಇನ್ನಿಂಗ್ಸ್ ಮತ್ತು ಕೊನೆಯ ವಿಕೆಟ್ ಜೊತೆಯಾಟವನ್ನು ಮೆಚ್ಚಿಕೊಂಡಿದ್ದು, ಅವರ ಅಮೂಲ್ಯ ಕೊಡುಗೆಯನ್ನು ಎತ್ತಿ ತೋರಿಸಿದೆ. ಕಷ್ಟದ ಸಮಯದಲ್ಲಿ ತಂಡಕ್ಕಾಗಿ ಅವರು ನೀಡುವ ಕೊಡುಗೆ ಅಮೂಲ್ಯ ಎಂದು ಹೊಗಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವ ಇರಾದೆಯೊಂದಿಗೆ ಟೀಂ ಇಂಡಿಯಾ (Team India) ಕಣಕ್ಕಿಳಿಯಲಿದೆ. ಇದಕ್ಕಾಗಿ ಆಟಗಾರರು ಕೂಡ ಮೈದಾನದಲ್ಲಿ ಬೆವರು ಸುರಿಸುತ್ತಿದ್ದಾರೆ. ಏತನ್ಮಧ್ಯೆ ಬಿಸಿಸಿಐ (BCCI), ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ಡ್ರೆಸ್ಸಿಂಗ್ ರೂಮ್ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅವರು ರವೀಂದ್ರ ಜಡೇಜಾ (Ravindra Jadeja) ಅವರನ್ನು ಹೊಗಳಿ ಮಾತನಾಡಿದ್ದಾರೆ. ಈ ಮೂಲಕ ಜಡೇಜಾರನ್ನು ಟೀಕಿಸಿದವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.
ಗೌತಮ್ ಗಂಭೀರ್ ಹೇಳಿದ್ದೇನು?
ಲಾರ್ಡ್ಸ್ ಟೆಸ್ಟ್ ಪಂದ್ಯದ ಸೋಲಿನ ನಂತರ, ಬಿಸಿಸಿಐ ಡ್ರೆಸ್ಸಿಂಗ್ ರೂಮ್‌ನ ವೀಡಿಯೊವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ, ಇದರಲ್ಲಿ ಜಡೇಜಾರನ್ನು ಹೊಗಳಿರುವ ಗಂಭೀರ್, ‘ಜಡೇಜಾ ಅದ್ಭುತ ಹೋರಾಟ ನಡೆಸಿದರು, ಜಡ್ಡು ನೀಡಿದ ಹೋರಾಟ ನಿಜವಾಗಿಯೂ ಉತ್ತಮ ಇನ್ನಿಂಗ್ಸ್ ಆಗಿತ್ತು’ ಎಂದಿದ್ದಾರೆ. ವಾಸ್ತವವಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 61 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಬಾಲಂಗೋಚಿಗಳೊಂದಿಗೆ ಜೊತೆಯಾಟ ಕಟ್ಟಿ ಗೆಲುವು ಸಾಧಿಸಲು ಹೊರಾಡಿದರಾದರೂ, ಅದರಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 170 ರನ್‌ಗಳಿಗೆ ಆಲೌಟ್ ಆಗುವ ಮೂಲಕ 22 ರನ್ಗಳಿಂದ ಪಂದ್ಯವನ್ನು ಸೋತಿತ್ತಾದರೂ, ಏಕಾಂಗಿ ಹೋರಾಟ ನೀಡಿದ ಜಡೇಜಾ ಅಜೇಯರಾಗಿ ಉಳಿದರು.
ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋ
View this post on Instagram
ಜಡೇಜಾ ತಂಡದಲ್ಲಿರುವುದು ನಮ್ಮ ಅದೃಷ್ಟ
ಗಂಭೀರ್ ಮಾತ್ರವಲ್ಲದೆ ಮೊಹಮ್ಮದ್ ಸಿರಾಜ್ ಕೂಡ ರವೀಂದ್ರ ಜಡೇಜಾ ಅವರನ್ನು ಶ್ಲಾಘಿಸಿದ್ದಾರೆ. ‘ಜಡ್ಡು ಭಯ್ಯಾ ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ಎಲ್ಲದರಲ್ಲೂ ತಮ್ಮನ್ನು ತಾವು ಸುಧಾರಿಸಿಕೊಂಡಿದ್ದಾರೆ. ಅವರು ಕಠಿಣ ಸಂದರ್ಭಗಳಲ್ಲಿ ತಂಡಕ್ಕಾಗಿ ರನ್ ಗಳಿಸುತ್ತಾರೆ. ಅವರಂತಹ ಆಟಗಾರ ನಮ್ಮಲ್ಲಿರುವುದು ನಮ್ಮ ಅದೃಷ್ಟ’ ಎಂದಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಕೊನೆಯ ವಿಕೆಟ್‌ಗೆ 13.2 ಓವರ್‌ಗಳಲ್ಲಿ 23 ರನ್‌ಗಳ ಜೊತೆಯಾಟ ನಡೆಸಿದ್ದರು. ಆದರೆ ಶೋಯೆಬ್ ಬಶೀರ್ ಸಿರಾಜ್ ಅವರನ್ನು ಔಟ್ ಮಾಡಿ ಇಂಗ್ಲೆಂಡ್‌ಗೆ 22 ರನ್‌ಗಳ ಗೆಲುವು ತಂದುಕೊಟ್ಟರು.
IND vs ENG: ಟೀಂ ಇಂಡಿಯಾ ಸೋಲಿಗೆ ಜಡೇಜಾ ಕಾರಣ? ಪೂಜಾರ ನೀಡಿದ ವಿವರಣೆ ಏನು?
ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ
ರವೀಂದ್ರ ಜಡೇಜಾ ಅವರನ್ನು ಶ್ಲಾಘಿಸಿರುವ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್, ‘ಜಡೇಜಾ ಅವರ ಬ್ಯಾಟಿಂಗ್ ವಿಭಿನ್ನ ಮಟ್ಟವನ್ನು ತಲುಪಿದೆ. ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಚೆಂಡನ್ನು ಎದುರಿಸುವ ವಿಚಾರದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ಈಗ ಅವರು ಪರಿಪೂರ್ಣ ಬ್ಯಾಟ್ಸ್‌ಮನ್‌ನಂತೆ ಕಾಣುತ್ತಿದ್ದಾರೆ’ ಎಂದಿದ್ದಾರೆ.
ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮಾತನಾಡಿ, ‘ಜಡೇಜಾ ಒತ್ತಡವನ್ನು ನಿಭಾಯಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದಾರೆಂದು ನಾನು ಯಾವಾಗಲೂ ಭಾವಿಸಿದ್ದೇನೆ. ಇಷ್ಟೊಂದು ಅನುಭವವನ್ನು ಪಡೆದ ನಂತರ, ಅವರು ಇನ್ನೂ ಉತ್ತಮರಾಗಿದ್ದಾರೆ. ಜಡ್ಡು ಕಷ್ಟಕರ ಸಂದರ್ಭಗಳಲ್ಲಿ ತಂಡಕ್ಕೆ ಬೇಕಾದುದನ್ನು ಆಗಾಗ್ಗೆ ಮಾಡುತ್ತಾರೆ. ಅವರು ತಂಡಕ್ಕೆ ತುಂಬಾ ವಿಶೇಷರು ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Fri, 18 July 25
