IND vs ENG: ಟೀಂ ಇಂಡಿಯಾ ಸೋಲಿಗೆ ಜಡೇಜಾ ಕಾರಣ? ಪೂಜಾರ ನೀಡಿದ ವಿವರಣೆ ಏನು?
Cheteshwar Pujara Explains Ravindra Jadeja's Lords Test Struggle: ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲಿನ ಬಳಿಕ, ರವೀಂದ್ರ ಜಡೇಜಾ ಅವರ ಆಟದ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಮಾತನಾಡಿರುವ ಚೇತೇಶ್ವರ್ ಪೂಜಾರ, ಮೃದುವಾದ ಚೆಂಡು ಮತ್ತು ನಿಧಾನವಾದ ಪಿಚ್‌ನಲ್ಲಿ ಜಡೇಜಾಗೆ ಹೆಚ್ಚು ಆಕ್ರಮಣಕಾರಿಯಾಗಿ ಆಡಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದಾರೆ. ಅಲ್ಲದೆ, ಪೂಜಾರ ಅವರು ಜಡೇಜಾ ಅವರ ಬ್ಯಾಟಿಂಗ್ ಸುಧಾರಣೆಯನ್ನು ಶ್ಲಾಘಿಸಿದ್ದಾರೆ

ಲಾರ್ಡ್ಸ್ ಟೆಸ್ಟ್ (Lords Test) ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ (Team India) ಇದೀಗ ನಾಲ್ಕನೇ ಟೆಸ್ಟ್ನತ್ತ ಗಮನ ಹರಿಸಿದೆ. ಆದಾಗ್ಯೂ ಮಳೆ ನಿಂತರೂ ಮರದ ಹನಿ ನಿಂತಿಲ್ಲ ಅನ್ನೋ ರೀತಿ ತಂಡದ ಸೋಲಿನ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಕೊನೆಯವರೆಗೆ ಅಜೇಯರಾಗಿ ಉಳಿದು ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾದ ರವೀಂದ್ರ ಜಡೇಜಾರನ್ನು (Ravindra Jadeja) ಈ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅನುಭವಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಜಡೇಜಾ, ಬಾಲಂಗೋಚಿಗಳ ಜೊತೆಗೆ ಜೊತೆಯಾಟ ನಿರ್ಮಿಸುವುದರೊಂದಿಗೆ ಆಗಾಗ್ಗೆ ದೊಡ್ಡ ಹೊಡೆತಗಳಿಗೆ ಕೈಹಾಕಬೇಕಿತ್ತು ಮತ್ತು ಪಂದ್ಯವನ್ನು ಗೆಲ್ಲಿಸಬೇಕಿತ್ತು ಎನ್ನುತ್ತಿದ್ದಾರೆ. ಅವರ ಈ ಹೇಳಿಕೆಯಲ್ಲೂ ಸತ್ಯಾಂಶವಿದೆಯಾದರೂ, ಇದೀಗ ತಂಡದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ್ (Cheteshwar Pujara), ಲಾರ್ಡ್ಸ್‌ನಲ್ಲಿ ಜಡೇಜಾ ಏಕೆ ಮುಕ್ತವಾಗಿ ಆಡಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ವೇಗವಾಗಿ ಆಡಲು ಸಾಧ್ಯವಾಗಲಿಲ್ಲ
ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಈ ಬಗ್ಗೆ ಮಾತನಾಡಿರುವ ಪೂಜಾರ, ‘ಚೆಂಡು ಮೃದುವಾಗಿದ್ದರಿಂದ ಮತ್ತು ಪಿಚ್ ಕೂಡ ತುಂಬಾ ನಿಧಾನವಾಗಿದ್ದರಿಂದ ರವೀಂದ್ರ ಜಡೇಜಾಗೆ ಆ ಪಿಚ್‌ನಲ್ಲಿ ವೇಗವಾಗಿ ಆಡಲು ಸಾಧ್ಯವಾಗಲಿಲ್ಲ ಎಂದು ನನಗೆ ಅನಿಸಿದೆ. ಅಲ್ಲದೆ ಟೇಲರೆಂಡರ್‌ಗಳು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರಿಂದ ಗುರಿಗೆ ಹತ್ತಿರ ಬಂದಾಗ ವೇಗವಾಗಿ ಆಡಲು ಜಡೇಜಾ ಯೋಚಿಸಿರಬೇಕು. ನನ್ನ ಪ್ರಕಾರ, ಜಡೇಜಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಆ ಪಿಚ್‌ನಲ್ಲಿ ರನ್ ಗಳಿಸುವುದು ತುಂಬ ಕಷ್ಟಕರವಾಗಿತ್ತು.
ಆದಾಗ್ಯೂ ಜಡೇಜಾ ಒಂದು ಕೆಲಸ ಏನು ಮಾಡಬಹುದಾಗಿತ್ತೆಂದರೆ, ಆ ಪಿಚ್‌ನಲ್ಲಿ ಅವರು ಚೆಂಡನ್ನು ಮುಂದೆ ಮುಂದೆ ಆಡಬಹುದಿತ್ತು. ಏಕೆಂದರೆ ಮಿಡ್-ಆಫ್ ಮತ್ತು ಕವರ್ಸ್ ನಡುವೆ ಸಾಕಷ್ಟು ಅಂತರವಿತ್ತು. ಆದಾಗ್ಯೂ, ಇಂಗ್ಲೆಂಡ್ ಬೌಲರ್‌ಗಳು ಆ ಲೆಂಥ್ನಲ್ಲಿ ಬೌಲಿಂಗ್ ಮಾಡಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಪ್ರತಿ ಓವರ್ ಮುಗಿದಂತೆ ಚೆಂಡು ಕೂಡ ತುಂಬ ಸಾಫ್ಟ್ ಆಗುತ್ತಿತ್ತು. ಇದರಿಂದ ಕೆಳಗೆ ಆಡಿ ಬೌಂಡರಿ ಕಲೆಹಾಕುವುದು ಜಡೇಜಾಗೆ ಕಷ್ಟಕರವಾಗಿತ್ತು. ಅಲ್ಲದೆ ಬುಮ್ರಾ ಅಥವಾ ಸಿರಾಜ್ ಹೆಚ್ಚು ಚೆಂಡುಗಳನ್ನು ಎದುರಿಸದಂತೆ ತಡೆಯಲು ಓವರ್‌ನ 5 ಅಥವಾ 6 ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವುದು ಜಡೇಜಾ ಅವರ ವಿಧಾನವಾಗಿತ್ತು. ಆದಾಗ್ಯೂ ಜಡೇಜಾ ತಮ್ಮ ಬ್ಯಾಟಿಂಗ್‌ನಲ್ಲಿ ವಿಶೇಷವಾಗಿ ವಿದೇಶಗಳಲ್ಲಿ ಗಮನಾರ್ಹ ಸುಧಾರಣೆ ತೋರಿಸಿದ್ದಾರೆ. ಹೀಗಾಗಿ ಇದನ್ನು ನಾವು ಪ್ರಶಂಸಿಸಬೇಕು.
ವೇಗದ ಬೌಲರ್ಗಳನ್ನು ಎದುರಿಸುವುದರಲ್ಲಿ ಸುಧಾರಣೆ
ಕಳೆದ ಐದು ವರ್ಷಗಳಿಂದ ಜಡೇಜಾ, ವಿಶೇಷವಾಗಿ ವಿದೇಶಗಳಲ್ಲಿ ಸುಧಾರಿಸಿದ್ದಾರೆ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನೀವು ಗಮನಿಸಿದರೆ, ಪಂದ್ಯದ ದಿನದಂದು ಸಹ ಅವರು ನೆಟ್ ಪ್ರಾಕ್ಟೀಸ್ ಮಾಡುತ್ತಾರೆ. ಅಲ್ಲದೆ ಅವರು ವೇಗದ ಬೌಲರ್ಗಳನ್ನು ಎದುರಿಸುವುದರಲ್ಲಿ ಸಾಕಷ್ಟು ಸುಧಾರಣೆ ತೋರಿಸಿದ್ದಾರೆ. ಈ ಹಿಂದೆ, ಅವರು ತಮ್ಮ ಉತ್ತಮ ಆರಂಭವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸುವಲ್ಲಿ ಎಡವುತ್ತಿದ್ದರು. ನೋಡಿ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕೌಶಲ್ಯವಿಲ್ಲದೆ ಒಬ್ಬರು 300 ರನ್ ಗಳಿಸಲು ಸಾಧ್ಯವಿಲ್ಲ. ಹಾಗೆಯೇ ನೀವು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾಡಿದನ್ನು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲೂ ಪುನರಾವರ್ತಿಸಬೇಕು.
IND vs ENG: ಜಡೇಜಾ ಏಕಾಂಗಿ ಹೋರಾಟ ವ್ಯರ್ಥ; ಲಾರ್ಡ್ಸ್ ಟೆಸ್ಟ್ ಸೋತ ಟೀಂ ಇಂಡಿಯಾ
ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಜಡೇಜಾ ಸೀಮರ್‌ಗಳನ್ನು ಎಷ್ಟು ಚೆನ್ನಾಗಿ ಎದುರಿಸಿದರು ಎಂಬುದನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಈ ಮೊದಲು ಜಡೇಜಾ ಸ್ಪಿನ್ ಎದುರು ಉತ್ತಮವಾಗಿ ಆಡುತ್ತಿದ್ದರು. ಆದರೆ ಸೀಮರ್‌ಗಳ ವಿರುದ್ಧ ಸ್ವಲ್ಪ ತೊಂದರೆ ಅನುಭವಿಸುತ್ತಿದ್ದರು. ಆದರೆ ಈಗ ಸೀಮರ್‌ಗಳು ಮತ್ತು ಸ್ಪಿನ್ನರ್‌ಗಳನ್ನು ಸಮಾನವಾಗಿ ಎದುರಿಸಲು ಜಡೇಜಾ ಸಮರ್ಥರಾಗಿದ್ದಾರೆ ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Wed, 16 July 25
