ಪಾಕ್ ಕ್ರಿಕೆಟ್ ಮಂಡಳಿಯಲ್ಲಿ 595 ಕೋಟಿ ರೂ. ಹಗರಣ..! ಅಧ್ಯಕ್ಷರ ವಿರುದ್ಧ ವಂಚನೆಯ ಆರೋಪ
Pakistan Cricket Board Scandal: ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಭಾರಿ ಹಣಕಾಸಿನ ಅವ್ಯವಹಾರ ನಡೆದಿರುವುದು ಆಡಿಟರ್ ಜನರಲ್ ವರದಿಯಿಂದ ಬಹಿರಂಗವಾಗಿದೆ. ಕಳೆದ ಎರಡು ವರ್ಷಗಳಲ್ಲಿ 595 ಕೋಟಿ ರೂಪಾಯಿಗಳ ಅಕ್ರಮ ನಡೆದಿದ್ದು, ಅಧ್ಯಕ್ಷ ಮೊಹ್ಸಿನ್ ನಖ್ವಿ ಮೇಲೆ ಭಾರಿ ಆರೋಪಗಳಿವೆ. ಪೆಟ್ರೋಲ್, ಬಿಲ್‌ಗಳು, ಮನೆ ಬಾಡಿಗೆಯಲ್ಲಿ ಅಕ್ರಮ ಹಣ ವ್ಯವಹಾರ ನಡೆದಿದೆ ಎಂದು ವರದಿ ತಿಳಿಸಿದೆ. ಭದ್ರತೆಗಾಗಿ ಖರ್ಚು ಮಾಡಿದ ಹಣದಲ್ಲೂ ಅಕ್ರಮಗಳಿವೆ ಎಂದು ವರದಿ ಹೇಳಿದೆ.

ಈ ಮೊದಲು ಬಿಸಿಸಿಐ (BCCI) ಜೊತೆಗೆ ಕಾಲ್ಕೆರೆದು ಜಗಳಕ್ಕೆ ಬಂದು ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೀಗ ತಾನು ಮಾಡಿರುವ ಅವ್ಯವಹಾರದಿಂದ ಸುದ್ದಿಯಲ್ಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಮತ್ತು ಇಡೀ ಮಂಡಳಿಯ ಭಾರಿ ಹಗರಣ ಬೆಳಕಿಗೆ ಬಂದಿದೆ. ಪಾಕ್ ಕ್ರಿಕೆಟ್ ಮಂಡಳಿಯ ಹಣದ ವಹಿವಾಟಿನಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪಾಕಿಸ್ತಾನದ ಆಡಿಟರ್ ಜನರಲ್ ವರದಿಯಲ್ಲಿ ತಿಳಿದುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಪಿಸಿಬಿ 595 ಕೋಟಿ ಪಾಕಿಸ್ತಾನಿ ರೂಪಾಯಿಗಳ ಹಗರಣವನ್ನು ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ಮಾತ್ರವಲ್ಲದೆ, ಪೆಟ್ರೋಲ್, ಬಿಲ್‌ಗಳು ಮತ್ತು ಮನೆ ಬಾಡಿಗೆಯ ವಿಚಾರದಲ್ಲಿ ಮೊಹ್ಸಿನ್ ನಖ್ವಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಾಕ್ ಕ್ರಿಕೆಟ್ ಮಂಡಳಿಯ ಹಗರಣ ಬಯಲು
ಪಾಕಿಸ್ತಾನದ ಆಡಿಟರ್ ಜನರಲ್ ವರದಿಯ ಪ್ರಕಾರ, ಪಾಕ್ ಕ್ರಿಕೆಟ್ನ ಪ್ರಾಯೋಜಕತ್ವ ಶುಲ್ಕದಲ್ಲಿ ಅತಿದೊಡ್ಡ ಹಗರಣ ನಡೆದಿದೆ. ಪಿಸಿಬಿ ಬರೋಬ್ಬರಿ 532 ಕೋಟಿ ರೂ ಹಣವನ್ನು ಪ್ರಾಯೋಜಕರಿಂದ ವಸೂಲಿ ಮಾಡಿಲ್ಲ ಎಂದು ಹೇಳಲಾಗಿದೆ. ಇದು ಮಾತ್ರವಲ್ಲದೆ ಸರ್ಕಾರದಲ್ಲಿ ಸಚಿವರೂ ಆಗಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಮೇಲೂ ದೊಡ್ಡ ಹಗರಣದ ಆರೋಪವಿದೆ. ಫೆಬ್ರವರಿ 2023 ಮತ್ತು ಜೂನ್ 2025 ರ ನಡುವೆ ಯುಟಿಲಿಟಿ ಬಿಲ್‌ಗಳು, ಪೆಟ್ರೋಲ್ ಮತ್ತು ಮನೆ ಬಾಡಿಗೆಯಾಗಿ ಅಧ್ಯಕ್ಷರಿಗೆ ಅಕ್ರಮದ ರೂಪದಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಆಡಿಟ್ ವರದಿ ಹೇಳುತ್ತದೆ. ಏಕೆಂದರೆ ನಖ್ವಿ ಈಗಾಗಲೇ ಸರ್ಕಾರದಿಂದ ಈ ಎಲ್ಲಾ ಸೌಲಭ್ಯಗಳಿಗೆ ಪಾವತಿಯನ್ನು ಪಡೆಯುತ್ತಿದ್ದಾರಾದರೂ, ಮಂಡಳಿಯಿಂದಲೂ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬೆದರಿಕೆ; 2 ದಿನ ಹೋಟೆಲ್ನಲ್ಲೇ ಲಾಕ್..!
ಭದ್ರತೆಗಾಗಿ 6.3 ಕೋಟಿ ರೂ. ಖರ್ಚು
ಅಂತರರಾಷ್ಟ್ರೀಯ ಪಂದ್ಯಗಳ ಸಮಯದಲ್ಲಿ ವಿದೇಶಿ ತಂಡಗಳ ಭದ್ರತೆಗಾಗಿ ಪಿಸಿಬಿ, ಪೊಲೀಸ್ ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ 2.2 ಲಕ್ಷ ಡಾಲರ್ ಖರ್ಚು ಮಾಡಿದೆ ಎಂಬ ಪ್ರಶ್ನೆಯನ್ನು ವರದಿಯು ಹುಟ್ಟುಹಾಕುತ್ತದೆ. ಲೆಕ್ಕಪರಿಶೋಧಕರ ಪ್ರಕಾರ, ಭದ್ರತಾ ವ್ಯವಸ್ಥೆಗಳು ಸರ್ಕಾರದ ಜವಾಬ್ದಾರಿಯಾಗಿದ್ದು, ಸರ್ಕಾರವೇ ಇದಕ್ಕೆ ಹಣ ಬರಿಸಬೇಕೇ ವಿನಃ ಪಿಸಿಬಿ ಇದಕ್ಕೆ ಹಣ ಪಾವತಿಸುವ ಅಗತ್ಯವಿಲ್ಲ. ಆದ್ದರಿಂದ, ಪಿಸಿಬಿ ಭದ್ರತೆಗಾಗಿ ಖರ್ಚು ಮಾಡಿರುವುದಾಗಿ ತಪ್ಪು ಲೆಕ್ಕ ನೀಡಿದೆ. ಅಲ್ಲದೆ ಮೂವರು ಜೂನಿಯರ್ ತರಬೇತುದಾರರು ಮತ್ತು ಮಾಧ್ಯಮ ನಿರ್ದೇಶಕರ ನೇಮಕಾತಿ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂದು ಆಡಿಟರ್ ವರದಿ ಬಹಿರಂಗಪಡಿಸಿದೆ. ಆದಾಗ್ಯೂ, ಈ ಆರೋಪಗಳಿಗೆ ಪಿಸಿಬಿ ಇನ್ನೂ ಯಾವುದೇ ಅಧಿಕೃತ ಉತ್ತರವನ್ನು ನೀಡಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Wed, 16 July 25
