ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬೆದರಿಕೆ; 2 ದಿನ ಹೋಟೆಲ್ನಲ್ಲೇ ಲಾಕ್..!
India vs Pakistan T20 World Cup 2024: ಭಾರತ-ಪಾಕಿಸ್ತಾನ ನಡುವಿನ 2024 ರ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ, ಭಾರತ ತಂಡಕ್ಕೆ ಬೆದರಿಕೆಗಳು ಎದುರಾಗಿದ್ದವು. ಇದರಿಂದಾಗಿ ತಂಡದ ಆಟಗಾರರನ್ನು ಎರಡು ದಿನಗಳ ಕಾಲ ಹೋಟೆಲ್‌ನಲ್ಲಿಯೇ ಲಾಕ್ ಮಾಡಲಾಗಿತ್ತು. ನಾವೆಲ್ಲೂ ಹೊರಗೆ ಹೋಗುವಂತಿರಲಿಲ್ಲ. ಊಟವನ್ನು ಸಹ ರೂಮ್ನಿಂದಲೇ ಬುಕ್ ಮಾಡಬೇಕಾಗಿತ್ತು ಎಂದು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.

2024 ರ ಜೂನ್ 29 ರಂದು ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ (T20 World Cup Final 2024) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಟೀಂ ಇಂಡಿಯಾ 2ನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಇದೇ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ (India vs Pakistan) ನಡುವೆ ಹೈವೋಲ್ಟೇಜ್ ಕದನ ಕೂಡ ನಡೆದಿತ್ತು. ಆ ಕದನವನ್ನು ರೋಚಕ ರೀತಿಯಲ್ಲಿ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಆದರೆ ಈ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಬೆದರಿಕೆ ಹಾಕಾಲಾಗಿತ್ತು. ಇದರಿಂದಾಗಿ ಇಡೀ ತಂಡವನ್ನು 2 ದಿನ ಹೋಟೆಲ್ ರೂಮ್ನಿಂದ ಹೊರಗೆ ಹೋಗಲು ಅವಕಾಶ ನೀಡಿರಲಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಆಘಾತಕ್ಕಾರಿ ಮಾಹಿತಿಯನ್ನು ಸ್ವತಃ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರೇ ಬಹಿರಂಗಪಡಿಸಿದ್ದಾರೆ.
ಹೋಟೆಲ್ನಲ್ಲೇ ನಾವು ಲಾಕ್- ರೋಹಿತ್ ಶರ್ಮಾ
ಜಿಯೋ ಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, ‘ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೂ ಮೊದಲು, ನಮಗೆ ಬೆದರಿಕೆಗಳು ಬಂದಿವೆ ಎಂದು ನಮಗೆ ತಿಳಿಸಲಾಯಿತು. ಆದ್ದರಿಂದ ಪಂದ್ಯಕ್ಕೆ ಎರಡು ದಿನಗಳ ಮೊದಲು, ನಾವು ಹೋಟೆಲ್‌ನಿಂದ ಹೊರಗೆ ಹೋಗುವುದನ್ನು ನಿಷೇಧಿಸಲಾಯಿತು. ಇದರಿಂದ ತಂಡದ ಯಾವುದೇ ಆಟಗಾರ ಹೋಟೆಲ್‌ನಿಂದ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ರೂಮ್ನಲ್ಲೇ ಕುಳಿತು ಆಹಾರವನ್ನು ಆರ್ಡರ್ ಮಾಡುತ್ತಿದ್ದೆವು ಮತ್ತು ಇಡೀ ಹೋಟೆಲ್ ತುಂಬಿ ಹೋಗಿತ್ತು. ನಡೆಯಲು ಸಹ ಸ್ಥಳವಿರಲಿಲ್ಲ. ಅಭಿಮಾನಿಗಳು, ಮಾಧ್ಯಮ, ಎಲ್ಲರೂ ಅಲ್ಲಿದ್ದರು. ಆದರೆ ನಾವು ಕ್ರೀಡಾಂಗಣದ ಬಳಿ ತಲುಪಿದ ತಕ್ಷಣ, ಭಾರತೀಯ ಅಭಿಮಾನಿಗಳು ಮತ್ತು ಪಾಕಿಸ್ತಾನಿ ಅಭಿಮಾನಿಗಳು ನಮ್ಮನ್ನು ನೋಡಿ ಕುಣಿಯಲಾರಂಭಿಸಿದರು ಮತ್ತು ಎಲ್ಲರೂ ತುಂಬಾ ಸಂತೋಷಪಟ್ಟರು ಎಂದು ಹೇಳಿಕೊಂಡಿದ್ದಾರೆ.
ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡಿರುವ ರೋಹಿತ್, ನಾನು ಭಾರತ ಮತ್ತು ಪಾಕಿಸ್ತಾನ ನಡುವಿನ ಹಲವು ಪಂದ್ಯಗಳಲ್ಲಿ ಭಾಗವಹಿಸಿದ್ದೇನೆ. ಎಷ್ಟು ಪಂದ್ಯಗಳನ್ನು ಆಡಿದ್ದೇನೆ ಎಂಬುದು ನೆನಪಿಲ್ಲ, ಆದರೆ ಪಂದ್ಯದ ಮೊದಲು ಇದ್ದ ಶಕ್ತಿ ಮತ್ತು ಭಾವನೆ ನಿಜವಾಗಿಯೂ ವಿಭಿನ್ನವಾಗಿದೆ. ಅದನ್ನು ಹೋಲಿಸಲಾಗುವುದಿಲ್ಲ’ ಎಂದಿದ್ದಾರೆ. ಇದೇ ವೇಳೆ ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು 42 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದ ರಿಷಭ್ ಪಂತ್ ಅವರ ಬ್ಯಾಟಿಂಗ್ ಅನ್ನು ಸಹ ರೋಹಿತ್ ಶ್ಲಾಘಿಸಿದ್ದಾರೆ.
IND vs AUS: ಕೊಹ್ಲಿ- ರೋಹಿತ್ ಆಡುವ ಪಂದ್ಯದ ಟಿಕೆಟ್ 4 ತಿಂಗಳಿಗೂ ಮುನ್ನವೇ ಸೋಲ್ಡ್ ಔಟ್..!
ಭಾರತ- ಪಾಕ್ ಪಂದ್ಯ ಹೀಗಿತ್ತು
ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ರಿಷಭ್ ಪಂತ್ ಹೊರತುಪಡಿಸಿ, ಅಕ್ಷರ್ ಪಟೇಲ್ 20 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 13 ರನ್ ಗಳಿಸಿದರು. ಈ ಮೂವರು ಆಟಗಾರರನ್ನು ಹೊರತುಪಡಿಸಿ, ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ 10 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಟೀಂ ಇಂಡಿಯಾ ಕೇವಲ 119 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕೆ ಉತ್ತರವಾಗಿ, ಪಾಕಿಸ್ತಾನ ತಂಡವು 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 113 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಭಾರತದ ಪರ, ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ 14 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರೆ, ಹಾರ್ದಿಕ್ ಪಾಂಡ್ಯ ಎರಡು ವಿಕೆಟ್‌ಗಳನ್ನು ಪಡೆದರು. ಅರ್ಶ್ದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
