Poetry ; ಅವಿತಕವಿತೆ : ನಿರ್ವಾಹವಿಲ್ಲದೇ ಹರಿವ ಹಾದರಕೆ ಮತ್ತೆಂದೂ ಮರಳುವ ಮನಸಿಲ್ಲ

‘ರೈಲಿನ ಹಳಿಯಲ್ಲಿ ಕಾಲು ಸಿಲುಕಿದಾಗ ಎಲ್ಲೋ ಮೈಲಿನಾಚೆ ಬರುತ್ತಿರುವ ರೈಲಿನ ಗಾಲಿಯ ಪ್ರತಿ ಉರುಳೂ ಒಳಗೆ ಜೀವನ್ಮರಣದ ಗರಗಸವನ್ನು ಮಸೆಯಲಾರಂಭಿಸುತ್ತದೆ. ರೈಲು ಹತ್ತಿರವಾಗುತ್ತಿರುವಂತೆ ಕಾಲನ್ನು ಕಡಿದೊಗೆದಾದರೂ ಎಗರಿ ಬದುಕಬೇಕೆಂಬುವ ಜೀವಪ್ರೀತಿಗೆ ಹೆಣ್ಣು ಗಂಡೆಂಬುದು ಇರುವುದೇ? ಸದಾ ಒಡನಿರುವ ನೋವು, ಎದೆ ಮೇಲೆಯೇ ಕುಂತ ಸಾವು ಮಾನ ಅವಮಾನಗಳನ್ನು ದಾಟಿ ಬದುಕನ್ನು ತೀವ್ರವಾಗಿ ಜೀವಿಸುವಂತೆ, ಪ್ರೀತಿಸುವಂತೆ ಮಾಡುತ್ತವೆ. ಇಂದ್ರಿಯವಾದವುಗಳೇ ಅತೀಂದ್ರಿಯವಾದವುಗಳಿಗೆ ಬೀಜ. ಇವೇ ಎಲ್ಲಾ ಕಲೆಗಳ ಮೂಲ ಹಾಗೂ ಜಗತ್ತಿನ ಎಲ್ಲಾ ದಮನಗಳ ಅಡಿಯಲ್ಲಿ ಬಹುರೂಪಿಯಾಗಿ ಮತ್ತೆ ಮತ್ತೆ ಹುಟ್ಟುತ್ತಾ ಹೋಗುವ ಪ್ರತಿರೋಧ.’ ಡಾ. ಶೋಭಾ ನಾಯಕ

  • ಶ್ರೀದೇವಿ ಕಳಸದ
  • Published On - 9:21 AM, 18 Apr 2021
Poetry ; ಅವಿತಕವಿತೆ : ನಿರ್ವಾಹವಿಲ್ಲದೇ ಹರಿವ ಹಾದರಕೆ ಮತ್ತೆಂದೂ ಮರಳುವ ಮನಸಿಲ್ಲ
ಡಾ. ಶೋಭಾ ನಾಯಕ

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಹತ್ತು ವರ್ಷಗಳ ನಂತರ ಕವಿ, ಲೇಖಕಿ ಡಾ. ಶೋಭಾ ನಾಯಕ ಅವರ ಹೊಸ ಸಂಕಲನ ‘ಶಯ್ಯಾಗೃಹದ ಸುದ್ದಿಗಳು’ ಪ್ರಕಟಗೊಳ್ಳುತ್ತಿದೆ. ಆಯ್ದ ಕವನಗಳು ನಿಮ್ಮ ಓದಿಗೆ.     

ಕೃತಿ : ಶಯ್ಯಾಗೃಹದ ಸುದ್ದಿಗಳು 
ಕವಿ : ಡಾ. ಶೋಭಾ ನಾಯಕ
ಮುಖಪುಟ ವಿನ್ಯಾಸ : ಸ್ಟೀವ್​ರಾಜ್
ಪುಟ : 105
ಬೆಲೆ : 100 ರೂ.
ಪ್ರಕಾಶನ : ಮನೋರಮಾ ಬುಕ್​ ಹೌಸ್ 

ಶೋಭಾ ನಾಯಕರ ಕವಿತೆಗಳು ಮೇಲುನೋಟಕ್ಕೆ ನವ್ಯದ ಲೈಂಗಿಕಕೇಂದ್ರಿತ ತುಮುಲಗಳನ್ನೂ ಈವರೆಗಿನ ಮಹಿಳಾ ಕಾವ್ಯದ ಪುರುಷ ಲೈಂಗಿಕತೆಯ ವಿಮರ್ಶೆಯನ್ನೂ ಮುಂದುವರಿಸುವ ಹಾಗೆ ಕಂಡರೂ ಈ ಎರಡೂ ಪೂರ್ವಧಾರೆಗಳಿಗೆ ಒಂದು ಅಪೂರ್ವ ತಿರುವನ್ನು, ತೆರಪನ್ನು ನೀಡುವುದರಿಂದ ಹೊಸಹೊಳಪಿನಿಂದ ಶೋಭಿಸುತ್ತವೆ. ಸ್ತ್ರೀ-ಪುರುಷರ ಸಂಬಂಧದ ಕಹಿಸಿಹಿ, ಹುಳಿ, ಒಗರುಗಳನ್ನು ಸಾಂಪ್ರಾದಾಯಿಕ, ಮಡಿವಂತ ದೃಷ್ಟಿವಿಪರ್ಯಾಸಗಳಿಂದ ಬಿಡಿಸಿ ನಿಜದ ನಿಕಷದ ಮೇಲೆ ಪರೀಕ್ಷಿಸುತ್ತವೆ. ಒಂದೇ ವಸ್ತುವನ್ನು ಅಚ್ಚರಿಗೊಳಿಸುವಷ್ಟು ಕಣ್ಣೋಟಗಳಿಂದ ತೋರಿ ಅನಾದಿ ವಸ್ತುವಿನ ಮಾಮೂಲಿತನವನ್ನು ತೊಡೆದುಹಾಕಿ ಹೊಸ ಕಣ್ಣುಗಳಿಂದ ಅದರ ಬಹುಕುಳತೆಯನ್ನು ತೋರುತ್ತವೆ. ದೃಷ್ಟಿಗಳ ವೈವಿಧ್ಯದಿಂದ ನಮ್ಮನ್ನು ಸೆಳೆಯುವ ಶೋಭಾ ಅವರ ಕಾವ್ಯ ಸೃಷ್ಟಿಯ ವೈವಿಧ್ಯತೆಯನ್ನೂ ಪಡೆದುಕೊಂಡಾಗ ಉಂಟಾಗುವ ಸೋಜಿಗವನ್ನು ನಾನು ಎದುರು ನೊಡುತ್ತಿದ್ದೇನೆ.
ಎಚ್. ಎಸ್. ಶಿವಪ್ರಕಾಶ, ಹಿರಿಯ ಕವಿ

ಶಯ್ಯಾಗೃಹದ ಸುದ್ದಿಗಳು ಎಂಬ ಸಂಕಲನದ ಕವಿತೆಗಳು ನನ್ನಿಂದ ಮರಳಿ ಮರಳಿ ಓದಿಸಿಕೊಂಡಿವೆ. ಕನ್ನಡದ ಮಹಿಳಾ ಸಂವೇದನೆಯ ಪರಂಪರೆಯನ್ನು ನನ್ನ ನೆನಪಿನಲ್ಲಿಟ್ಟುಕೊಂಡು ಓದಿದ್ದೇನೆ. ಖಾಸಗಿಯಾದುದೆಲ್ಲವೂ ರಾಜಕೀಯವಾದದ್ದು ಎಂಬ ತಾತ್ವಿಕತೆಯ ಸರಳೀಕರಣವಿಲ್ಲಿದೇಯೇ? ಎಂಬ ಎಚ್ಚರದಲ್ಲಿಯೂ ನೋಡಿದ್ದೇನೆ. ಯಾಕೆಂದರೆ, ನಾವೀಗ ಸ್ತ್ರೀವಾದಿ ತಾತ್ವಿಕತೆಯೂ ತಪ್ಪಾಗಿ ಮತ್ತು ಸರಳೀಕೃತವಾಗಿ ಬಳಕೆಯಾಗುತ್ತಿರುವ ಕಾಲಸ್ಥಿತಿಯಲ್ಲಿದೇವೆ. ಆದರೆ, ಈ ಕವಿತೆಗಳು ಬಲು ಧ್ಯಾನಸ್ಥವಾಗಿ ಮತ್ತು ಸುಡು ಎಚ್ಚರದಲ್ಲಿ ಹೆಣ್ಣಿನ ಇತಿಗೀತಿಕೆಯನ್ನು ಹಾಡಿಕೊಳ್ಳುತ್ತಿವೆ. ಹೆಣ್ಣು ಹಾಗಂದರೇನು? ನಿಜಕ್ಕೂ ಅವಳಿಗೆ ಬೇಕಿರುವುದೇನು? ಎಂಬ ಪ್ರಶ್ನೆಯನ್ನು ನಿಷ್ಠುರವಾಗಿ ಮಾತ್ರವಲ್ಲ ಮಾರ್ದವವಾಗಿ ಕೂಡ ಉತ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇಲ್ಲಿಯ ಕವಿತೆಗಳಿಗೆ ಗಂಡು-ಹೆಣ್ಣಿನ ಸಂಬಂಧ ಲೋಕದೆಲ್ಲ ಜಂಝಾವಾತಗಳನ್ನು ಅಳೆವ ಮಾನದಂಡ. ಅದರಲ್ಲಿ ದೂಸರಾ ಮಾತಿಲ್ಲ. ಹಾಗೆಯೇ ಪರಂಪರೆಯ ಸತುವನ್ನು ಹೀರಿ ಬೆಳೆದ ಉತ್ಕಂಠಿತತನವಿದೆ. ತುಂಬಿ ತೊನೆವ ಭತ್ತದ ಗದ್ದೆ, ಒಂದರಂತೆ ಇನ್ನೊಂದು ಅನ್ನಿಸಿದರೂ ಅವು ಪ್ರತ್ಯೇಕ ಮತ್ತು ಸ್ವಾಯತ್ತ. ಆ ಆಹ್ಲಾದ, ಆ ಗಮಲು…. ಮರೆಯಲಾಗದ್ದು. ಕನ್ನಡದ ಮಹಿಳಾ ಸಂವೇದನೆಗೆ ಖಂಡಿತವಾಗಿಯೂ ಇಂದೊಂದು ಮಹತ್ವದ ಸೇರ್ಪಡೆ.
ವಿನಯಾ ಒಕ್ಕುಂದ, ಹಿರಿಯ ಕವಿ

*

ರಾಕ್ಷಸನ ಹೆಂಡತಿ ಮಂಡೋದರಿ

ದೇಹ ಒಂದು ಮಾಯದ ವ್ರಣ
ನಿತ್ಯ ಅದೇ ಹುಣ್ಣಿನ
ಮುಖ ನೋಡಬೇಕಲ್ಲ..

ಪರ ಪತ್ನಿಯ
ಪಾದದ ಕಿರಿಬೆರಳ ಸ್ಪರ್ಶಕೆ
ಅಂತಃಪುರವ ತೊರೆದು ಹೋದ-ನಲ್ಲ

ಹೆಂಡತಿಗಾಗಿ ಸಾಗರವ ದಾಟಿಬಂದ
ರಾಮನೇ ಹೇಳು:

ದೇವರೇ ಆದರೂ
ರಾಕ್ಷಸನೇ ಆದರೂ
ಈ ಮಹಾ ರಾತ್ರಿಗಳ ಈಜಲು
ಈ ಕೈಯ್ಯಿಗಿನ್ನೊಂದು ಕೈ ಬೇಕಲ್ಲವೇ?

ಬರಿಯ ಪತಿಯಂದಿರ ಹೆಸರಿನ
ವ್ರತ ಮಾಡಲೆಂದು
ಪತಿವ್ರತೆಯಾದರೆ ಏನು ಬಂತು?

ರಾಕ್ಷಸನ ಹೆಂಡತಿಯ ಪ್ರಲಾಪ
ಕಾಮ ಯಾಚನೆಯಾಗಿ ಕಾಣುವ
ಈ ಲೋಕದಲಿ

ಈ ಜನುಮಕ್ಕಿದ್ದ ಹಾಸಿಗೆಯ ಪಾಲುದಾರ
ಇನ್ನಿಲ್ಲವಾದ ಮೇಲೆ
ನಿನ್ನಂತೆ ಸಲ್ಲಾಪಕೊಂದು
ಅವತಾರವೆತ್ತಲು ನನಗೆಲ್ಲಿ ಸಾಧ್ಯ ರಾಮ?

avitha kavithe

ಡಾ. ಶೋಭಾ ನಾಯಕ ಕೈಬರಹದೊಂದಿಗೆ

ತಾಯಿಯ ಬೆನ್ನುಗರಿಯ ಸೀಳಿ ಹೊರ ಹರಿದುಬರುವ ಚೇಳು ಮರಿಗಳಂತೆ ಯಾವುದೋ ಒಂದು ಏಕಾಂತವ ದಹಿಸಿ ಬಿರಿದು ಮೂಡುವ ಕವಿತೆ; ಹಾರುವಷ್ಟೂ, ದೂರ ಹಾರಿ ಹೋಗೇಬಿಡುವಷ್ಟು ಆಗಸವಿದ್ದೂ ಮತ್ತೇ ಅದೇ ಗೂಡಿಗೆ ಬಂದುಬಿಡುವ ಸಾಕಿದ ಪಾರಿವಾಳದಂಥ ಏಕಾಂತ. ಜೈಲುಖಾನೆಯ ಕತ್ತಲೆಯ ಮೂಲೆಯಲಿ ಬೆಳಕ ಕೋಲಿನೊಳಗೆ ಹಾರುವ ಧೂಳಿನ ಹೆಗಲಿಗೇರಿಸಿ ಗೋಳನ್ನು ಹೊರಗೆ ಕಳಿಸುವ ಖೈದಿಯಂತೆ ಸದಾ ಒಂದು ಮುಗಿಯದ ನಿರೀಕ್ಷೆಯಾಗಿ ಉಳಿದುಬಿಡುವ ಕವಿತೆಯ ಕಟ್ಟೋಣ. ಇದೇ ಕವಿತೆಯನ್ನು ಬರೆಯಿಸುವುದು. ಆಳದಿಂದ ಕತ್ತರಿಸುತ್ತಾ ಬರುವ ಇಬ್ಬಾಯಿಯ ಕತ್ತಿಯಂಥ ಇದರ ಒಂದು ಮೈ ರೂಪಕ ಭಾಷೆಯ ಹೊದ್ದ ಕವಿತೆ; ಮತ್ತೊಂದು ಲೋಕ ಎದುರುಗೊಳ್ಳಬೇಕಾದ ನನ್ನ ಪ್ರಶ್ನೆ.

ಹೇಳಬೇಕಾದುದನ್ನು ಹೇಳಬೇಕಾದ ಕಾಲದಲ್ಲಿ ಹೇಳಲು ಬಾರದಂತೆ ಮಾಡುವ ಲೋಕವೇ ಮುಂದೊಂದು ದಿನ ಎದುರು ನಿಲ್ಲುವ ಆ ದನಿಯನ್ನು ಅಲ್ಲಗಳೆಯುತ್ತದೆ ಇಲ್ಲವೇ ಹೀಗಳೆಯುತ್ತದೆ. ಹೆಣ್ಣು ಗಂಡಿನ ಲೋಕ ಬಲು ಸಣ್ಣದು ಮತ್ತು ಅತ್ಯಂತ ದೈಹಿಕವಾದುದು. ಅವೆರಡರ ಆಚೆಯ ಬಯಲು ನಿಸರ್ಗ ಸಹಜವಾದುದೇ ಆದರೂ ಹೆಣ್ಣಿಗೆ ಅದನ್ನು ನಿಷಿದ್ಧಗೊಳಿಸಲಾಗಿದೆ. ಇದನ್ನು ದಾಟುವುದು ಐಶಾರಾಮದಂತೆ ಅಥವಾ ಅಪರಾಧದಂತೆ ಅಥವಾ ಅಶ್ಲೀಲದಂತೆ ಜಗತ್ತಿಗೆ ಗೋಚರವಾಗುತ್ತದೆ. ಆದರೇನು ಮಾಡುವುದು, ಹೇಳದೇ ವಿಧಿಯಿಲ್ಲ! ರೈಲಿನ ಹಳಿಯಲ್ಲಿ ಕಾಲು ಸಿಲುಕಿದಾಗ ಎಲ್ಲೋ ಮೈಲಿನಾಚೆ ಬರುತ್ತಿರುವ ರೈಲಿನ ಗಾಲಿಯ ಪ್ರತಿ ಉರುಳೂ ಒಳಗೆ ಜೀವನ್ಮರಣದ ಗರಗಸವನ್ನು ಮಸೆಯಲಾರಂಭಿಸುತ್ತದೆ. ರೈಲು ಹತ್ತಿರವಾಗುತ್ತಿರುವಂತೆ ಕಾಲನ್ನು ಕಡಿದೊಗೆದಾದರೂ ಎಗರಿ ಬದುಕಬೇಕೆಂಬುವ ಜೀವಪ್ರೀತಿಗೆ ಹೆಣ್ಣು ಗಂಡೆಂಬುದು ಇರುವುದೇ? ಸದಾ ಒಡನಿರುವ ನೋವು, ಎದೆ ಮೇಲೆಯೇ ಕುಂತ ಸಾವು ಮಾನ ಅವಮಾನಗಳನ್ನು ದಾಟಿ ಬದುಕನ್ನು ತೀವ್ರವಾಗಿ ಜೀವಿಸುವಂತೆ, ಪ್ರೀತಿಸುವಂತೆ ಮಾಡುತ್ತವೆ. ಇಂದ್ರಿಯವಾದವುಗಳೇ ಅತೀಂದ್ರಿಯವಾದವುಗಳಿಗೆ ಬೀಜ. ಇವೇ ಎಲ್ಲಾ ಕಲೆಗಳ ಮೂಲ ಹಾಗೂ ಜಗತ್ತಿನ ಎಲ್ಲಾ ದಮನಗಳ ಅಡಿಯಲ್ಲಿ ಬಹುರೂಪಿಯಾಗಿ ಮತ್ತೆ ಮತ್ತೆ ಹುಟ್ಟುತ್ತಾ ಹೋಗುವ ಪ್ರತಿರೋಧ.

ಸವರಾತ್ರಿಯ ಸಂಲಗ್ನ

ಕಾಲು ಮುರಿದ ಮಂಚ
ಕೀಲು ಮುರಿದ ಹೃದಯ

ಈ ನಡುರಾತ್ರಿಯಲಿ

ಕ್ವಾರಂಟೈನ್ ಕೋಣೆಯಿಂದಲೇ
ಮುತ್ತು ಬೇಡುವ
ಕೊರೋನಾ ಶಂಕಿತ ಪ್ರೇಮಿ

ಏಕವಚನದಲಿ
ಸಂಬೋಧಿಸಲೇ ಹೆದರುವವ
ಸಂಭೋಗದ ಮಾತಾಡುತ್ತಿದ್ದಾನೆ!
ಇದೇ ಕೊನೆ ಎನ್ನುತ್ತಾ.

ಆದರೂ..
1,2,3,
ಒಟ್ಟು 183 ಮುತ್ತುಗಳೇ ಬೇಕಾದವು
ಮಲಗಿಸಲು
ಮದ್ದಿಲ್ಲದ ಈ ಹುಳುವನು!

ಫೋನಿನಲ್ಲಿ ಮುತ್ತಿಟ್ಟರೆ
ಕೊರೊನಾ ಬರುವುದಿಲ್ಲ ಎನ್ನುತ್ತಾನೆ
ನಗುತ್ತಾ.

ಅವನಿಗೇನು ಗೊತ್ತು
ಲೆಕ್ಕವಿಲ್ಲದಷ್ಟು ಹಗಲು ರಾತ್ರಿಗಳನು
ಮೂರು ಕಾಲಿನ ಈ ಮಂಚಕೆ ಕಟ್ಟಿ
ಯುಗಗಳಿಂದ ಎಳೆಯುತಿರುವೆ
ಕ್ವಾರಂಟೈನ್ ರಥವನೆಂಬುದು

ಘಳಿಗೆ ಘಳಿಗೆಗೂ ಎದೆಗೂಡನು
ಒಣಗಿಸುತಿರುವ
ಭಯಂಕರ ಮಹಾಮಾರನ ಜೊತೆಯ
ಮಾರಾ ಮಾರಿಯಲೇ
ಆಯಸ್ಸು ಕಣ ಕಣವಾಗಿ
ಕರಗಿ ಹೋಗುತಿದೆ ಎಂಬುದು

ಅಂತರ್ಜಾಲದಲಿ
ಬಂಧಿಯಾಗಿ ಬೀಳುವ
ಕತ್ತಲ ಕೋಣೆಯ ಮೃಗದ ರಾತ್ರಿಗಳಲಿ
ಹೀಗೆ
ಮುರಿದ ಕಾಲಿನ ಮಂಚದ ಮೇಲೇಯೇ
ಮಲಗುವುದಕ್ಕಿಂತ
ನೆಲದ ಮೇಲೆ ಮಲಗುವುದು ಒಳ್ಳೆಯದು

ತುಟಿ ಚಾಚುವ
ತುಟಿ ಬಾಚುವ
ನಮ್ಮಿಬ್ಬರ ನಡುವಿರುವ
ಈ ಫೋನಿನ ಪರದೆ
ಸೋಂಕಿನಿಂದ ಮಾತ್ರ ತಡೆಯಬಲ್ಲದು
ಸವರಾತ್ರಿಯ ಸಂಲಗ್ನಕೆ ವಿಘ್ನವಿಲ್ಲ!

ನನ್ನ ಹರೆಯ ಮೀರಿದೆ ಹುಡುಗಾ
ಸಾಕು ಮಲಗು

ಮುಸುಗು ಹೊದ್ದ ಹಗಲುಗಳ್ಳರಂತೆ
ಮಡಿ ಮೈಲಿಗೆಯನು ಮತ್ತೆ ಕಾನೂನಿನಡಿ
ಜಾರಿಗಿಳಿಸಿದ ದೇಶದಲಿ
ಸತ್ತ ಸೋಂಕಿತರ ಲೆಕ್ಕವೇ ಸಿಗದ ಮೇಲೆ
ನಿನ್ನೊಂದಿಗೆ ಮುತ್ತುಗಳ ಎಣಿಸುತ್ತ
ಕೂಡುವುದು ಒಂದು ಮರುಳು

ನೀನು ಕೊರೋನಾ ಗೆದ್ದು
ಬರಬಹುದು
ಆದರೆ,
ನನಗೆ ನಿರ್ವಾಹವಿಲ್ಲ
ಈ ನಿಯಂತ್ರಿತ ಹವೆಯ ಕೋಣೆಯಲಿ
ಆವಿಯಾಗುತಾ
ಘನಗೊಳ್ಳುತಾ ಇರುವುದು
ನಿತ್ಯ ನಿರಂತರ.

avitha kavithe

ಶೋಭಾ ಅವರ ಪುಸ್ತಕಗಳು

ಸಾಸಿವೆಯಷ್ಟಾದರೂ

ಸಾಗರದಷ್ಟಲ್ಲದಿದ್ದರೂ
ಸಾಸಿವೆಯಷ್ಟಾದರೂ
ಪ್ರೀತಿ
ಹೊರಲಾಗದಿದ್ದ ಮೇಲೆ
ಹೆಣ್ಣು
ಗಂಡಿನ
ಒಳಕೋಣೆಯ
ಎಲ್ಲ ಬಂಡಾಟಗಳ
ಈ ಸಾಬೂನು ಗುಳ್ಳೆಯ
ಠಪ್ಪೆನಿಸಿಬಿಡಲು
ಕೈ
ಬೆರಳು
ಸಾಕು

ಹರಲಿಯ ಮಿದ್ದು ಕಟ್ಟಿದ
ಹುಸಿ ಸಂಸಾರದ
ಈ ಕೆಸರ ಕೋಟೆಯ ಕೆಡವಲು

ವಿಳಾಸ ಕೇಳಬೇಡ ಮತ್ತೆ

ನಾನಿರುವ ವಿಳಾಸ ಕಳೆದುಕೊಂಡು
ನನ್ನನ್ನು ಹುಡುಕುವ
ನಿನ್ನ ಪ್ರಯತ್ನಕೆ
ಏನು ಹೇಳಲಿ?

ಸಣ್ಣ ಮಿಣುಕು ಹುಳುವಿಗೂ
ಅಂಜುತ್ತ
ಕತ್ತಲೆಯಲಿ ಅವಿತಿರುತ್ತದೆ
ಕನ್ನಡಿಯ ಆತ್ಮ

ಬತ್ತುವ ಭಯದಲಿ
ತೋಡು ಮಡುಗಳಲಿ
ಬಚ್ಚಿಕೊಂಡು
ಒಳಗೊಳಗೇ
ನನ್ನ ಪಾಡಿಗೆ ನಾನು
ಸುಮ್ಮನೇ ಹರಿಯುತ್ತಿರುತ್ತೇನೆ
ಗುಪ್ತಗಾಮಿನಿಯಾಗಿ

ನದಿಯ ಕನಸಿಗೆ ಸಮುದ್ರ ಎರಗಿದರೆ
ಕರ್ಪೂರದ ಕನಸಿಗೆ ಬೆಂಕಿ ಮುತ್ತಿದರೆ
ಏನಾಗಬೇಡ?

ಧುತ್ತನೆರಗುವ ಮರಣದ ಮುಖ
ಹೇಗಿರುವುದೋ ಗೊತ್ತಿಲ್ಲ
ಸ್ವರ್ಗ ಜಿನುಗುವ ನಿನ್ನಂತೆ ಇರಬಹುದೇ?
ನೀನೆದ್ದು ಖಾಲಿ ಮಾಡಿಹೋದ ಕನ್ನಡಿಯ ನರಕದ
ಬಾಗಿಲನಂತಿರಬಹುದೇ?

ಬೆಳಕು
ಸನಿಹವಾದಷ್ಟೂ
ನಮ್ಮ ನೆರಳೇ ನಮ್ಮಿಂದ
ದೂರ ಓಡುವ ಈ ಶೂನ್ಯದಲಿ
ಗೋಳಿಡುವ ನನ್ನಾತ್ಮವೇ ಕಾಣುತಿದೆ

ನಿನ್ನ ಸ್ವರ್ಗ ಬಯಕೆಯಲಿ
ಒಮ್ಮೆ ಕೆರಳಿದ್ದಕ್ಕೆ
ಇಂದು
ಸಿಕ್ಕಸಿಕ್ಕವರೆಲ್ಲಾ ನನ್ನ ವಿಳಾಸ
ಕೇಳುವಂತಾಯಿತು

ಸೂರ್ಯನ ಕಾವಲಿಯಲಿ
ಹನಿ ಹನಿ ಆವಿಯಾಗಿ
ಭಟ್ಟಿಯಿಳಿಸಿದ ಸಿಹಿ ನೀರ ನದಿಯಾಗಿ
ಹಳೆಯ ಕೊಳೆಯ ಕಳೆದು ಬಂದಿದ್ದೇನೆ

ನಿರ್ವಾಹವಿಲ್ಲದೇ ಹರಿವ ಹಾದರಕೆ
ಮತ್ತೆಂದೂ ಮರಳುವ
ಮನಸಿಲ್ಲ
ಕಳೆದುಕೊಳ್ಳಲೆಂದೇ
ದೊರಕಿಕೊಳ್ಳುವ
ಈ ಆಟದಲಿ
ಸುಮ್ಮನೇ ಹುಡುಕಬೇಡ

ಬೇಡ,
ಮತ್ತೆ
ವಿಳಾಸವನೆಂದೂ ಕೇಳಬೇಡ

avitha kavithe

ಶೋಭಾ ಅವರ ಪುಸ್ತಕಗಳು

ಪರಿಚಯ : ಕಾವ್ಯ ಮತ್ತು ಚಿತ್ರಕಲೆಯನ್ನು ಮುಖ್ಯ ಆಸಕ್ತಿಯಾಗಿಸಿಕೊಂಡಿರುವ ಡಾ. ಶೋಭಾ ನಾಯಕ ಅವರು ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈವರೆಗೆ ಖ್ವಾಬೀದ್ ಹಸೀನಾ ಮತ್ತು ಮೌನಚರಿತೆ ಎಂಬ ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಸ್ಪಾನಿಷ್ ಕವಿ ಆಕ್ಟಿವಿಯೊ ಪಾಝ್‍ನ ಆಯ್ದ ಕವಿತೆಗಳ ಸಂಕಲನವನ್ನು ಕನ್ನಡಕ್ಕೆ ತಂದಿದ್ದಾರೆ. ಶಯ್ಯಾಗೃಹದ ಸುದ್ದಿಗಳು ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ನೀಡುವ 2020ರ ಕಾವ್ಯ ಪ್ರಶಸ್ತಿಯೂ ಸಂದಿದೆ. ಕಾವ್ಯದ ಹೊಸ ಹಾದಿಯ ಇವರ ಕವಿತೆಗಳು ಇಂಗ್ಲೀಷ್, ಹಿಂದಿ ಮತ್ತು ಮಲಯಾಳ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.

(‘ಶಯ್ಯಾಗ್ರಹದ ಸುದ್ದಿಗಳು’ ಮುಂದಿನವಾರದಿಂದ ಲಭ್ಯ. ಸಂಪರ್ಕಿಸಿ ಮನೋರಮಾ ಬುಕ್ ಹೌಸ್ : 80883 80327)

ಇದನ್ನೂ ಓದಿ : Poetry ; ಅವಿತಕವಿತೆ : ಆವಿಯಾಗದ ಹೊರತು ತುಂಬಿಕೊಳ್ಳುವುದಾದರೂ ಹೇಗೆ?

Avitha Kavithe Poetry column by Shobha Nayak