New Book ; ಶೆಲ್ಫಿಗೇರುವ ಮುನ್ನ : ’ಅಮರ ಸುಳ್ಯದ ರೈತ ಹೋರಾಟ‘

‘ಈ ಪುಸ್ತಕವು ಸುಳ್ಯ ಮತ್ತು ಕೊಡಗಿನ ರೈತರು ಈಸ್ಟ್​  ಇಂಡಿಯಾ ಕಂಪೆನಿಯು ಜಾರಿಗೆ ತಂದ ಹೊಸ ಕಂದಾಯ ವ್ಯವಸ್ಥೆಯ ವಿರುದ್ಧ 1834ರಿಂದ 1837ರವರೆಗೆ ನಡೆಸಿದ ದಿಟ್ಟ ಹೋರಾಟವನ್ನು ವಿವರಿಸುತ್ತದೆ. ಕಂಪೆನಿ ಸರಕಾರದ ಪ್ರಬಲ ಸೈನಿಕ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಜನರು ಸಂಘಟಿತಗೊಂಡ ರೀತಿ, ವೈರಿಯನ್ನು ಮಣಿಸಲು ಅನುಸರಿಸಿದ ಗೆರಿಲ್ಲಾ ಮಾದರಿಯ ತಂತ್ರಗಳು, ಅನನ್ಯವಾದ ದೈವೀಕರಣ, ನಕಲೀಕರಣ ಪ್ರಕ್ರಿಯೆಗಳು ಪ್ರಾಂತೀಯ ರೈತ ಹೋರಾಟಗಳ ಇತಿಹಾಸದಲ್ಲಿ ದಾಖಲಾಗಬೇಕಾದ ಮಹತ್ವದ ಸಂಗತಿಗಳಾಗಿವೆ.’ ಡಾ. ಪುರುಷೋತ್ತಮ ಬಿಳಿಮಲೆ

New Book ; ಶೆಲ್ಫಿಗೇರುವ ಮುನ್ನ : ’ಅಮರ ಸುಳ್ಯದ ರೈತ ಹೋರಾಟ‘
ಡಾ. ಪುರುಷೋತ್ತಮ ಬಿಳಿಮಲೆ
Follow us
|

Updated on:Apr 17, 2021 | 11:15 AM

ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಹೊಸ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ.

ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್​ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com   

ಕೃತಿ : ಅಮರ ಸುಳ್ಯದ ರೈತ ಹೋರಾಟ ಲೇ : ಡಾ. ಪುರುಷೋತ್ತಮ ಬಿಳಿಮಲೆ ಮುಖಪುಟ ವಿನ್ಯಾಸ : ಮುರಳೀಧರ ಬೆಲೆ : 110 ರೂ. ಪ್ರಕಾಶನ : ಅಹರ್ನಿಶಿ, ಶಿವಮೊಗ್ಗ

‘ದೇಶದ ರಾಜಧಾನಿಯಲ್ಲಿ ಕೇಂದ್ರ ಸರಕಾರ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಮೂರು ತಿಂಗಳುಗಳಿಂದ ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಬೀಡುಬಿಟ್ಟು ಹೋರಾಡುತ್ತಿರುವ ಸಂದರ್ಭದಲ್ಲಿಇದಕ್ಕಿಂತ ಸುಮಾರು ಎರಡು ಶತಮಾನ ಮೊದಲು ನಡೆದ, ಅಮರ ಸುಳ್ಯದ ರೈತ ಹೋರಾಟವೆಂದು ಪರಿಚಿತವಾದ, ಟಿಪ್ಪು ಪತನಾ ನಂತರ ತಮ್ಮ ಅಧಿಕಾರ ವ್ಯಾಪ್ತಿಯಡಿ ಬಂದ ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ಬ್ರಿಟಿಷರು ಭೂಸ್ವಾಮ್ಯ ಮತ್ತು ಭೂಕಂದಾಯಕ್ಕೆ ಸಂಬಂಧಿಸಿ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟದ ಕುರಿತ ಡಾ. ಪುರುಷೋತ್ತಮ ಬಿಳಿಮಲೆಯವರ ಈ ಪುಸ್ತಕ ಪ್ರಕಟವಾಗುತ್ತಿದೆ. ತಮ್ಮಅಧ್ಯಯನ-ಅಧ್ಯಾಪನ ವಿಷಯಗಳ ಜೊತೆಗೇ ಇತಿಹಾಸದ ಕುರಿತ ತಮ್ಮಆಸಕ್ತಿಯನ್ನೂ ಘೋಷಿಸಿಕೊಂಡು ಬಂದಿರುವ ಇವರು ಬಿಳಿಮಲೆಯವರು 1980ರ ದಶಕದಲ್ಲಿ ತಮ್ಮದೊಂದು ಅಧ್ಯಯನದ ಕ್ಷೇತ್ರ ಕಾರ್ಯದ ಅವಧಿಯಲ್ಲಿ ಸುಳ್ಯ ದಂಗೆಯ ಕುರಿತು ತಮ್ಮ ಗಮನಕ್ಕೆ ಬಂದ ಸಂಗತಿಗಳು, ಮೌಖಿಕ ವಿವರಣೆಗಳ ಕುರಿತು ತಾವು ಮಾಡಿಕೊಂಡ ಟಿಪ್ಪಣಿಗಳನ್ನು ಇಲ್ಲಿ ಬಳಸಿಕೊಂಡಿದ್ದಾರೆ. ಅಂತಿಮವಾಗಿ ಸೈದ್ಧಾಂತಿಕ ಬುನಾದಿಯ ಮೇಲೆ ಸಂಘಟಿತವಾಗಿ ನಡೆದ ಭಾರತೀಯ ಸ್ವಾತಂತ್ರ್ಯ ಸಮರದಲ್ಲಿ ಜನಶಕ್ತಿ ತೊಡಗಿಕೊಳ್ಳಲು ಪೂರಕವಾಗಿ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಒಂದು ಪರಂರೆಯನ್ನು ಪೂರ್ವಭಾವಿಯಾಗಿ ನಡೆದ ಇಂಥ ದಂಗೆ- ಹೋರಾಟಗಳು ನಿರ್ಮಿಸಿದ ಮಹತ್ವವನ್ನುಗುರುತಿಸುತ್ತಲೇ ಅವುಗಳ ಮಿತಿಗಳನ್ನೂ ಅವರು ಗಮನಿಸಿರುವದು ಅವರ ಈ ಪ್ರಯತ್ನವನ್ನು ವಸ್ತುನಿಷ್ಠವಾಗಿಸಿದೆ’ ಪ್ರೊ. ಅಶೋಕ ಶೆಟ್ಟರ, ಧಾರವಾಡ

*

1834ರಲ್ಲಿ ತೆಳುವಾಗಿ ಆರಂಭಗೊಂಡು, 1837ರಲ್ಲಿ ಕೊನೆಗೊಂಡ ಅಮರ ಸುಳ್ಯದ ರೈತ ಹೋರಾಟದ ಕುರಿತಾದ ಈ ಪುಸ್ತಕವು ಮೊದಲ ಬಾರಿಗೆ ಮಹತ್ವದ ವಿಷಯಗಳನ್ನು ಒಳಗೊಂಡು ಬಿಡುಗಡೆಯಾಗುತ್ತಿದೆ. 1857ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ 20 ವರ್ಷಗಳ ಮೊದಲೇ ಈ ಚಳವಳಿಯು ಸುಳ್ಯ ಪರಿಸರದಲ್ಲಿ ಕಾಣಿಸಿಕೊಂಡಿತ್ತು ಎಂಬುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಹಾಸನ ಜಿಲ್ಲೆಯ ಐಗೂರು ಸೀಮೆ, ಕೊಡಗಿನ ಭಾಗಮಂಡಲ, ಅಮರ ಸುಳ್ಯ ಮತ್ತು ಕುಂಬಳೆ ಸೀಮೆಗಳಲ್ಲಿ ಜನಚಳವಳಿಯು ಪಸರಿಸಿಕೊಂಡಿತ್ತು. ಕಾಟನ್ ವರದಿಯ ಪ್ರಕಾರ ಮೈಸೂರು ರಾಜ್ಯದಿಂದ ಹೋರಾಟಕ್ಕೆ ಅಷ್ಟೇನೂ ಬೆಂಬಲ ದೊರಕಲಿಲ್ಲ. ಮಲಬಾರಿನಿಂದ ಅಲ್ಪ ಸ್ವಲ್ಪ ಬೆಂಬಲ ದೊರಕಿದೆ. ಈ ಎಲ್ಲಾ ಪ್ರದೇಶಗಳಿಗೆ ಭೌಗೋಳಿಕವಾಗಿ ಸುಳ್ಯವೇ ಕೇಂದ್ರವಾಗಿರುವುದರಿಂದ ಹೋರಾಟದ ಕೇಂದ್ರ ಸ್ಥಾನ ಸುಳ್ಯವೇ ಆಗಿತ್ತು.

ಪೂಮಲೆ ಬೆಟ್ಟವು ಹೋರಾಟಗಾರರಿಗೆ ಆಶ್ರಯ ನೀಡಿದೆ. ಗೌಡರು, ಲಿಂಗಾಯತರು, ಕೊಡವರು, ಜೈನರು, ಬಂಟರು, ಮಲೆಕುಡಿಯರು, ಬ್ರಾಹ್ಮಣರು ಮತ್ತು ಮುಸಲ್ಮಾನರು ಹೋರಾಟದಲ್ಲಿ ಪಾಲ್ಗೊಂಡ ಪ್ರಮುಖ ಸಮುದಾಯಗಳು. ಚಳುವಳಿಯ ಪ್ರಮುಖ ನೇತಾರನಾದ ಹುಲಿಕಡಿದ ನಂಜಯ್ಯನಿಗೆ ಮೈಸೂರು ಅರಸರು, ಹೈದರಾಬಾದಿನ ನಿಜಾಮ, ಮಾತ್ರವಲ್ಲದೆ, ತಿರುಚಿರಾಪಳ್ಳಿ, ದೆಹಲಿ, ಮತ್ತು ಲಾಹೋರಿನವರೆಗೆ ಸಂಪರ್ಕವಿತ್ತೆಂದು ಹೇಳಲು ಆಧಾರಗಳಿವೆ. ಸುಳ್ಯದಂಥಾ ಒಂದು ಮೂಲೆಯಲ್ಲಿ ನಡೆದ ಚಳುವಳಿಯ ಕುರಿತು ಲೆವಿನ್, ಕಾಟನ್ ಮತ್ತು ಕಬ್ಬನ್ ಬೇರೆ ಬೇರೆ ವರದಿಗಳನ್ನು ತಯಾರಿಸಬೇಕಾಯಿತು ಎಂಬ ಅಂಶವೇ ಈ ಹೋರಾಟದ ಮಹತ್ವವನ್ನು ಸಾರಿ ಹೇಳುತ್ತದೆ. ಲೆವಿನ್ ವರದಿಯ ಪ್ರಕಾರ, ‘ಇದು ನಿಜವಾಗಿಯೂ ಸರಕಾರದ ವಿರುದ್ಧಜನರ ಬಂಡಾಯ’. ಯಾಕೆಂದರೆ ಇದರಲ್ಲಿ ಸರಕಾರೀ ಅಧಿಕಾರಿಗಳು ಮತ್ತು ಮುಖ್ಯಸ್ಥರು ಭಾಗಿಗಳಾಗಿದ್ದರೆಂದು ನಂಬಲಾಗಿದೆ. ಬಂಡಾಯವು ಎಷ್ಟು ವಿಸ್ತಾರವಾಗಿತ್ತು ಮತ್ತು ಶಕ್ತಿಶಾಲಿಯಾಗಿತ್ತೆಂದರೆ, ಕೆನರಾಜಿಲ್ಲೆಯನ್ನು ವ್ಯಾಪಿಸಿ, ಹೊರಪ್ರಾಂತ್ಯಗಳಲ್ಲಿ ಹರಡಿಕೊಳ್ಳುವ ಭಯ ಹುಟ್ಟಿಸಿತ್ತು. ಇದನ್ನು ಹುಡಿಗೊಳಿಸಲು ಸುಮಾರು ಆರು ವಾರಗಳು ಬೇಕಾದುವು. ಕೊಡಗಿನ ಬೋಪು ದಿವಾನ ಮತ್ತು ಸಂಗಡಿಗರು ಸಲ್ಲಿಸಿದ ಸೇವೆ ಎಷ್ಟು ಅವಶ್ಯದ್ದು ಮತ್ತು ಬೆಲೆಯುಳ್ಳದ್ದಾಗಿತ್ತೆಂದರೆ, ಅದಕ್ಕೆ ಪ್ರತಿಫಲವಾಗಿ ಬಂಡಾಯಗಾರರಿಂದ ವಶಪಡಿಸಿಕೊಂಡ ಖಜಾನೆಯನ್ನುಅವರಿಗೆ ಬಹುಮಾನವಾಗಿ ಕೊಡಲಾಯಿತುಎಂದು ಹೇಳಲಾಗಿದೆ.

‘ಒಂದು ಪ್ರಬಲವಾದ ಹೊಸ ರಾಜವಂಶದ ಸ್ಥಾಪನೆ ಆತನ ಗುರಿಯಾಗಿತ್ತು. ಇದರ ಮೊದಲ ಹೆಜ್ಜೆಯಾಗಿ ಇಂಗ್ಲಿಷರನ್ನು ನಿರ್ನಾಮಗೊಳಿಸುವುದು. ಇದನ್ನು ಕಾರ್ಯಗತಗೊಳಿಸುವುದಕ್ಕೆ ಕಲ್ಯಾಣಸ್ವಾಮಿಯ ಹಿಂದೆ ಬಹಳ ದೊಡ್ಡಜನ ಬೆಂಬಲ ಇತ್ತು, ಮತ್ತು ಆತನನ್ನು ಮುಂದಿನ ದಿನಗಳಲ್ಲಿ ಈ ದ್ವೀಪದ ಹೆಚ್ಚು ಜನಕ್ಕೆ ನಾಯಕನಾಗಿ ಮಾಡಲಾಗುವುದೆಂದು ಹೇಳಲಾಗುತ್ತಿತ್ತು’ ಎಂದೂ ಲೆವಿನ್‍ ವರದಿ ಮಾಡುತ್ತಾನೆ. 1841ರಿಂದ ಕೆನರಾದ ಕಲೆಕ್ಟರನಾಗಿದ್ದ ಪಿ ಬ್ಲೇರನು 1842ರಲ್ಲಿ ತಯಾರಿಸಿದ ವರದಿಯೊಂದರಲ್ಲಿ ಬರೆದದ್ದು ಹೀಗೆ, ‘ಇಲ್ಲಿಯ ರೈತರು ಬ್ರಿಟಿಷ್‍ ಸರಕಾರಕ್ಕೆ ತಮ್ಮ ವಿಧೇಯತೆಯನ್ನು ತೊರೆಯಬೇಕಾಗಿಬಂದ ಕಾರಣಗಳೇನು? ಕೆಲವರು ಬೆದರಿಕೆಯ ಪ್ರಭಾವದಿಂದ ಆಗಿದ್ದಿರಲೂಬಹುದು. ಆದರೆ ಬಹುಸಂಖ್ಯಾತ ಜನರು ಸ್ವಇಚ್ಛೆಯಿಂದ ಬಂಡಾಯದ ನಾಯಕರನ್ನು ಸೇರಿಕೊಂಡಿದ್ದರು ಎನ್ನುವುದರಲ್ಲಿ ಸಂಶಯವಿಲ್ಲ. ಹೋರಾಟಗಾರರು ಧಾರಾಳವಾದ ಭರವಸೆಗಳ ಪ್ರಕಟಣೆಗಳಿಂದ ರೈತರನ್ನು ಆಕರ್ಷಿಸಿದ್ದಲ್ಲದೆ, ಬ್ರಿಟಿಷ್ ಪ್ರಭುತ್ವ ಈ ದೇಶದಿಂದ ತೊಲಗಲಿದೆ ಎಂಬ ನಂಬಿಕೆಯನ್ನೂ ಹುಟ್ಟಿಸಿದ್ದರು’. ಕಲ್ಯಾಣಪ್ಪನ ನೇತೃತ್ವದ ಈ ರೈತಚಳುವಳಿಯು ಕೊನೆಗೊಂಡ 20 ವರ್ಷಗಳ ಆನಂತರ ಕಾಣಿಸಿಕೊಂಡ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟದ ಆನಂತರವೂ ಬ್ರಿಟಷ್ ಅಧಿಕಾರಿಗಳು ಇದೇ ಬಗೆಯ ವರದಿ ಬರೆದಿದ್ದರು ಎಂಬುದು ಹೋರಾಟದ ಮಹತ್ವವನ್ನು ಸಾಬೀತು ಪಡಿಸುತ್ತದೆ.

ಅಮರ ಸುಳ್ಯದ ರೈತ ಹೋರಾಟವು ಸುಳ್ಯ ಪರಿಸರದ ಜನರ ಮೇಲೂ, ಬ್ರಿಟಿಷರ ಆಡಳಿತ ವಿಧಾನದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಮುಖ್ಯವಾಗಿ ಬ್ರಿಟಿಷರ ದ್ವೇಷ ಕಟ್ಟಿಕೊಂಡದ್ದರಿಂದ ಅವರ ಆಡಳಿತ ನೀಡುವ ಎಲ್ಲಾ ಬಗೆಯ ಅಭಿವೃದ್ದಿ ಕಾರ್ಯಕ್ರಮಗಳಿಂದ ಸುಳ್ಯವು ಮುಂದಿನ ಸುಮಾರು ನೂರು ವರುಷಗಳವರೆಗೆ ವಂಚಿತವಾಯಿತು. ಹೋರಾಟವನ್ನು ಅಡಗಿಸಲು ಬ್ರಿಟಿಷರಿಗೆ ಸಹಾಯ ಮಾಡಿದ ಬಂಟ್ವಾಳದ ರಂಗ ಬಾಳಿಗ ಎಂಬುವರಿಗೆ ಅವರ ಆನಂತರದ ಮೂರು ತಲೆಮಾರಿನವರೆಗೆ ಭೂಕಂದಾಯವನ್ನು ಮನ್ನಾ ಮಾಡಲಾಯಿತೆಂದು ಕಾಟನ್ ಹೇಳಿದ್ದಾನೆ. ಅನೇಕರಿಗೆ ಉಚಿತವಾಗಿ ಭೂಮಿ ದೊರಕಿತು. ಕೊಡವ ವೀರರಿಗೆ ಜೋಡು ಕೊಳವೆಯ ಕೋವಿ ಮತ್ತು ಬಂಗಾರದ ಪದಕಗಳನ್ನು ನೀಡಿ ಸತ್ಕರಿಸುವುದರ ಜೊತೆಗೆ, ಕೊಡಗಿನ ಶೂರಜನರಿಗೆ ಶಸ್ತ್ರ ನಿರ್ಬಂಧ ಕಾಯ್ದೆ ಅನ್ವಯವಾಗುದಿಲ್ಲವೆಂಬ ಅಭಯವೂ ದೊರೆತಿತು. ಹೋರಾಟವನ್ನುಅಡಗಿಸಲು ಕೆಲಸ ಮಾಡಿದ ವೀರರಿಗೆ ಸರಪಣಿ ಸಮೇತ 11.5 ತೊಲ ತೂಕದ ಬಂಗಾರದ ಪದಕಗಳನ್ನು ನೀಡಲಾಯಿತು. ಕ್ಯಾ. ಲೀಹಾರ್ಡಿಗೆ ಭಡ್ತಿದೊರೆಯಿತು.

ಬ್ರಿಟಿಷರ ಅವಕೃಪೆಗೆ ಒಳಗಾದ ಸುಳ್ಯ ಪರಿಸರವು ಮುಂದೆ ಬಹಳ ಕಾಲದವರೆಗೆ ಯಾವುದೇ ಅಭಿವೃದ್ಧಿಯನ್ನು ಕಾಣದಾಯಿತು. ಕ್ರಿಸ್ತ ಶಕ 1799ರಲ್ಲಿ ಟಿಪ್ಪುವಿನ ಮರಣಾಂತರ ವಸಾಹತು ಆಡಳಿತಕ್ಕೆ ಒಳಪಟ್ಟ ಕರಾವಳಿ ಪ್ರದೇಶದಲ್ಲಿ ಮಂಗಳೂರಿನಿಂದ ಪುತ್ತೂರುವರೆಗಣ ನಡುವಣ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳು ನಡೆದವು. ಆ ಕಡೆ ಮಡಿಕೇರಿಯೂ ಅಭಿವೃದ್ಧಿ ಹೊಂದಿತು. ಆದರೆ ಪುತ್ತೂರಿನಿಂದ ಮಡಿಕೇರಿವರೆಗಣ ನಡುವಿನ ಪ್ರದೇಶ ಸಾಕಷ್ಟು ಹಿಂದುಳಿಯಿತು. ಇಷ್ಟಿದ್ದರೂ ಜನಗಳ ಹೋರಾಟದಿಂದ ಬ್ರಿಟಿಷ್ ಅಧಿಕಾರಿಗಳೂ ಸ್ವಲ್ಪ ಪಾಠಕಲಿತಂತಿದೆ.

shelfigeruva munna

ಸೌಜನ್ಯ : ಅಂತರ್ಜಾಲ

ಹೋರಾಟ ಕೊನೆಗೊಂಡ ತಕ್ಷಣ ಅವರು ಜನರ ಅಸಮಾಧಾನಕ್ಕೆ ಕಾರಣವಾದ ಕಂದಾಯದ ಕ್ರಮಗಳನ್ನು ಬದಲಾಯಿಸಲು ಕ್ರಮ ಕೈಗೊಂಡಿದ್ದಾರೆ. ಲೆವಿನ್ ಬರೆಯುತ್ತಾನೆ, ‘ಬೇರೆ ಕಡೆಗಳಲ್ಲಿ ರೈತರನ್ನುಕರೆದು ಅವರು ವ್ಯವಸಾಯ ಮಾಡುತ್ತಿರುವ ಭೂಮಿಯ ಕಂದಾಯವನ್ನು ಪಾವತಿಸಲು ಹೇಳಿದರೆ ಅಯಿತು. ಅವರು ಪಾವತಿ ಮಾಡುತ್ತಾರೆ. ಆದರೆ ಕೆನರಾದಲ್ಲಿ ಕಂದಾಯ ವಿಧಿಸುವ ಮುನ್ನ ಋತುಮಾನವನ್ನು ಗಮನಿಸಬೇಕೆಂದು ತೋರುತ್ತದೆ. ಇಲ್ಲಿ ರೈತರು ಕೊಡುವ ಕಂದಾಯದ ಮೇಲೆ ಋತುಗಳ ಪ್ರಭಾವವಿದೆ. ಹಾಗಾಗಿ, ಭೂಮಿಯಿಂದ ಗಳಿಸಬಹುದಾದ ಸಾಮಾನ್ಯ ಉತ್ಪತ್ತಿಗೂ, ರೈತರ ಸಾಮರ್ಥ್ಯಕ್ಕೂ ಸಂಬಂಧ ಇರುವುದರಿಂದ ನಾವು ಆ ಕಡೆಗೆ ಗಮನ ಕೊಡಬೇಕಾಗಿದೆ. ಮುಂದೆ ಇದರ ಲಾಭವನ್ನು ಕೆನರಾದ ಎಲ್ಲ ರೈತರೂ ಪಡೆದುಕೊಂಡರು. ಇದರ ಜೊತೆಗೆ ಕೆನರಾದ ಅಧಿಕಾರಿಗಳು ರೈತರ ಒಲವನ್ನು ಗಳಿಸಿಕೊಳ್ಳಲು ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನೂ ಬಳಕೆಗೆ ತಂದರು. ‘ಜಿಲ್ಲೆಯ ಕಂದಾಯ ನಿರ್ವಹಣೆಯಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗಿದೆ. ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕೆಲವುವಿಚಾರಗಳು- ಹಬ್ಬಗಳಿಗೆ ಸಾಲ ಕೊಡುವುದು, ಗೋಪುರಗಳನ್ನು ದುರಸ್ತಿ ಮಾಡುವುದು ಮೊದಲಾದ ಸುಧಾರಣೆ ತರಬೇಕಾಗಿದೆ’ ಎಂದು ಲೆವಿನ್‍ ಸರಕಾರಕ್ಕೆ ಶಿಫಾರಸುಮಾಡುತ್ತಾನೆ.

ಅಮರಸುಳ್ಯದ ದಂಗೆಯ ಬಗ್ಗೆ ಇವತ್ತು ವಿವಿಧ ಜಾತಿಯ ಮತ್ತು ಸಮುದಾಯಗಳ ಜನರು ಭಿನ್ನ ಭಿನ್ನವಾಗಿಯೇ ಪ್ರತಿಕ್ರಿಯಿಸುತ್ತಿದ್ದಾರೆ. ಚರಿತ್ರೆಯು ಅನಾವರಣಗೊಳ್ಳುವ ಬಗೆ ಹೀಗೆಯೇ ಇರುತ್ತದೆ. ಅದೇನಿದ್ದರೂ, ಸುಳ್ಯ-ಬೆಳ್ಳಾರೆ ಕೇಂದ್ರಿತವಾಗಿ ನಡೆದ ಈ ಹೋರಾಟವು ಚಾರಿತ್ರಿಕವಾಗಿ ಬಹಳ ಮಹತ್ವದ್ದುಎಂಬುದರಲ್ಲಿಯಾವ ಸಂಶಯವೂ ಇಲ್ಲ. ಕೊಡಗು ಅರಸೊತ್ತಿಗೆಯನ್ನು ಮರು ಸ್ಥಾಪಿಸುವುದು ಹೋರಾಟದ ಒಂದು ಉದ್ದೇಶವಾಗಿದ್ದರೆ, ಕಂಪೆನಿ ಸರಕಾರದ ಹೊಸ ಆಡಳಿತ ವಿಧಾನವನ್ನು ವಿರೋಧಿಸುವುದು ಅದರ ಇನ್ನೊಂದು ಉದ್ದೇಶ. ಈ ಉದ್ದೇಶಗಳ ಈಡೇರಿಕೆಗಾಗಿ ಹೋರಾಟಗಾರರು ಬಹಳ ವಿನೂತನವಾದ ಕೆಲವು ತಂತ್ರಗಳನ್ನು ಅನುಸರಿಸಿದ್ದಾರೆ. ಅರಸೊತ್ತಿಗೆಯ ಕುಡಿಯೊಂದು ಜೀವಂತವಾಗಿದೆಯೆಂಬ ಸಂದೇಶವನ್ನುಅವರು ಜನರಿಗೆ ಸದಾ ಕೊಡುತ್ತಲೇ ಇರಬೇಕಾಗಿತ್ತು. ಅಷ್ಟೇನೂ ರಾಜಕೀಯ ಪ್ರಜ್ಞೆಯಿಲ್ಲದ ಜನರನ್ನು ಹೋರಾಟಕ್ಕೆ ಸಿದ್ಧಗೊಳಿಸಬೇಕಾಗಿತ್ತು. ಆದರೆ ಹೋರಾಟಗಾರರಿಗೆ ಕಂಪೆನಿ ಸರಕಾರದ ಜಾಗತಿಕ ವಿಸ್ತಾರ ಮತ್ತು ಸೈನ್ಯ ಬಲವನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವಾಗಿತ್ತು. ಈ ಮಿತಿಯಡಿಯಲ್ಲಿಯೂ ಹೋರಾಟಗಾರರು ತಾತ್ಕಾಲಿಕವಾಗಿಯಾದರೂ ಕಂಪೆನಿ ಸರಕಾರದ ಬಾವುಟವನ್ನು ಕೆಳಗಿಳಿಸಿದ್ದಾರೆ. ರೈತರ ಅಭಿವೃದ್ಧಿಗೆ ಕೆಲವು ಘೋಷಣೆಗಳನ್ನು ಹೊರಡಿಸಿದ್ದಾರೆ. ಪ್ರಾಣವನ್ನು ಪಣಕ್ಕಿಟ್ಟು ಗೆರಿಲ್ಲಾ ಮಾದರಿಯ ಹೋರಾಟವನ್ನು ರೂಪಿಸಿ ನೇಣುಗಂಬವನ್ನೇರಿದ್ದಾರೆ. ದೇಶದಾದ್ಯಂತ ಅಲ್ಲಲ್ಲಿ ನಡೆದ ಇಂಥ ಹೋರಾಟಗಳೇ ಮುಂದೆ ಬೃಹತ್ತಾಗಿ ಬೆಳೆದು ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ (1857) ಕಾರಣವಾಯಿತು.

*

ಪರಿಚಯ : ಸುಳ್ಯ ತಾಲೂಕಿನ ಪಂಜದಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರ ಜನನ. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ. ಬಂಡಾಯ-ದಲಿತ ಸಾಹಿತ್ಯ ಚಳವಳಿಯಲ್ಲಿ ನೇರ ಭಾಗವಹಿಸುವಿಕೆಯೊಂದಿಗೆ ಜನಪರ ಹೋರಾಟಗಳ ಸಂಘಟನೆ. ದಲಿತ ಜಗತ್ತು, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡುಕಟ್ಟು, ಬಹುರೂಪ ಇವರ ಕೆಲವು ಮುಖ್ಯ ಕೃತಿಗಳು. ಕಾಗೆ ಮುಟ್ಟಿದ ನೀರು- ಆತ್ಮಕಥನ. ಕರ್ನಾಟಕ ಜಾನಪದ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳಿಗೆ ಭಾಜನ.

ಮುಂದಿನ ವಾರದಿಂದ ಈ ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್​ಲೈನ್​ನಲ್ಲಿ ಲಭ್ಯ : store.ruthumana.com www.navakarnatakaonline.com

ಇದನ್ನೂ ಓದಿ : New Book; ಶೆಲ್ಫಿಗೇರುವ ಮುನ್ನ : ಎಷ್ಟೇ ನಷ್ಟ ಬಂದರೂ ಭರಿಸೋಣ ಯಾರೇ ವಿರೋಧಿಸಿದರೂ ಸರಿ ಪ್ರಜಾಧನ ಪೋಲಾಗಬಾರದು

Shelfigeruva Munna an excerpt from Amara Sullyadha Raitha Horata by Dr Purushotthama Bilimale

Published On - 10:55 am, Sat, 17 April 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ